Site icon Vistara News

ರಾಜ ಮಾರ್ಗ ಅಂಕಣ : ಪ್ರಜ್ಞಾನಂದ ವಿಶ್ವವಿಜಯಕ್ಕೆ ಇನ್ನೊಂದೇ ಮೆಟ್ಟಿಲು; ಅಮ್ಮನೇ ಅವನ ಪಾಲಿಗೆ ದೇವರು

chess praggnanandhaa and mother

ಭಾರತವು ಈ ವಿಶ್ವಮಟ್ಟದ ಚೆಸ್ ಪ್ರಶಸ್ತಿಗಾಗಿ (World Chess Championship) 21 ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕೂತಿತ್ತು. 2002ರಲ್ಲಿ ಚೆಸ್ ಐಕಾನ್ ವಿಶ್ವನಾಥನ್ ಆನಂದ್ (Grand Master Vishwanathan Anand) ವಿಶ್ವ ಮಟ್ಟದ ಪ್ರಶಸ್ತಿಯನ್ನು ಗೆದ್ದ ನಂತರ ಬೇರೆ ಯಾವ ಚೆಸ್ ಆಟಗಾರನೂ ಇಷ್ಟೊಂದು ಎತ್ತರವನ್ನು ತಲುಪಿರಲಿಲ್ಲ. ಕೇವಲ 18 ವರ್ಷದ ರಮೇಶ್‌ ಬಾಬು ಪ್ರಜ್ಞಾನಂದ (R Praggnanandhaa) 12 ವರ್ಷಗಳಿಂದ ವಿಶ್ವದ ನಂಬರ್ ಒನ್ ಆಟಗಾರ ಎಂದು ಎಲ್ಲೆಡೆ ಕರೆಸಿಕೊಂಡಿರುವ ನಾರ್ವೆ ದೇಶದ 34 ವರ್ಷ ಪ್ರಾಯದ ಮ್ಯಾಗ್ನಸ್ ಕಾರ್ಲಸೆನ್ (Magnus Carlsen) ಅವರಿಗೆ ಫೈನಲ್ ಪಂದ್ಯದಲ್ಲಿ ಸೆಡ್ಡು ಹೊಡೆದು ನಿಂತಿದ್ದಾರೆ. ತಮಿಳುನಾಡು ಮೂಲದ ಮುಗ್ಧ ನಗುವಿನ ಪ್ರಜ್ಞಾನಂದ ಮತ್ತೆ ಇತಿಹಾಸ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ. 130 ಕೋಟಿ ಭಾರತೀಯರ ಕಣ್ಣುಗಳು ಬಾಕು ನಗರದ ಚೆಸ್ ಅಂಗಣದ ಮೇಲೆ ಇದೆ (ರಾಜ ಮಾರ್ಗ ಅಂಕಣ)!

ಯಾರೀ ಹುಡುಗ ಪ್ರಜ್ಞಾನಂದ?

ಚೆನ್ನೈಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ರಮೇಶ್ ಬಾಬು ಮತ್ತು ಹೋಮ್ ಮೇಕರ್ ನಾಗಲಕ್ಷ್ಮಿ ಅವರ ಮಗ ಈತ. ಹುಟ್ಟಿದ್ದು 10 ಆಗಸ್ಟ್, 2005ರಂದು. ಮಧ್ಯಮ ವರ್ಗದ ತಮಿಳು ಕುಟುಂಬ ಅದು. ಆತನಿಗಿಂತ ಮೂರು ವರ್ಷ ದೊಡ್ಡವಳು ಅವನ ಅಕ್ಕ ಆರ್ ವೈಶಾಲಿ. ಆಕೆಯೂ ಚೆಸ್‌ನಲ್ಲಿ ಇಂಟರ್ ನ್ಯಾಷನಲ್ ಮಾಸ್ಟರ್ ಪದವಿ ಪಡೆದವಳು. ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು ಚಿನ್ನದ ಪದಕವನ್ನು ಗೆದ್ದಾಗ ಆ ತಂಡದ ಸದಸ್ಯೆ ಆಗಿದ್ದವಳು ಇದೇ ವೈಶಾಲಿ. ಇದೀಗ ತಮ್ಮನಾದ ಪ್ರಜ್ಞಾನಂದ ತನ್ನ ಅಕ್ಕನನ್ನು ಹಿಂದೆ ಹಾಕಿ ನೂರು ಹೆಜ್ಜೆ ಮುಂದೆ ಹೋಗಿ ಆಗಿದೆ. ಆತನ ಕೋಚ್ ಆರ್ ಬಿ ರಮೇಶ್ ಅವರು ತನ್ನ ಶಿಷ್ಯನ ಸಾಧನೆಗಳ ಬಗ್ಗೆ ವಿವರಿಸಲು ಶಬ್ದಗಳೇ ಇಲ್ಲ ಎಂದಿದ್ದಾರೆ. ಅಕ್ಕ ಮತ್ತು ತಮ್ಮ ಚೆಸ್ ಆಡಲು ಕೂತರೆ ರಾತ್ರಿ ಹಗಲಾದರೂ ಅದು ಮುಗಿಯುವುದೇ ಇಲ್ಲ ಅನ್ನುತ್ತಾರೆ ಅವರ ಓರಗೆಯವರು.

ಪ್ರಜ್ಞಾನಂದನ ಕುಟುಂಬ

ಪ್ರಜ್ಞಾನಂದ ಚೈಲ್ಡ್ ಪ್ರಾಡಿಜಿ ಹೌದು

ಅವರ ಕುಟುಂಬದಲ್ಲಿ ಹಿಂದೆ ಯಾರೂ ಚೆಸ್ ಆಡಿರುವ ಉದಾಹರಣೆಯು ಸಿಗುವುದಿಲ್ಲ. ಅಪ್ಪನಿಗೆ ಚೆಸ್ ಬಗ್ಗೆ ಏನೂ ಗೊತ್ತಿಲ್ಲ. ಮಗ ಮತ್ತು ಮಗಳ ಬಗ್ಗೆ ತೀವ್ರ ಕಾಳಜಿ ಮತ್ತು ಪ್ರೀತಿಯನ್ನು ಹೊಂದಿರುವ ಅಮ್ಮ ನಾಗಲಕ್ಷ್ಮಿ ಇಬ್ಬರಿಗೂ ಭಾರೀ ಬೆಂಬಲ ನೀಡುತ್ತಿರುವುದು ನಿಜಕ್ಕೂ ಗ್ರೇಟ್.

ಪ್ರಜ್ಞಾನಂದ ಚೆಸ್ ಬೋರ್ಡ್ ಮುಂದೆ ಮೊದಲು ಕೂತದ್ದು ಮೂರು ವರ್ಷ ಪ್ರಾಯದಲ್ಲಿ! ಏಳು ವರ್ಷ ಪ್ರಾಯದಲ್ಲಿ ಫಿಡೆ ಮಾಸ್ಟರ್ ಅಂತಾರಾಷ್ಟ್ರೀಯ ಪ್ರಶಸ್ತಿ! ಹತ್ತು ವರ್ಷ ಪ್ರಾಯದಲ್ಲಿ ಇಂಟರ್ ನ್ಯಾಷನಲ್ ಮಾಸ್ಟರ್ ಪದವಿ! ಹನ್ನೆರಡು ವರ್ಷ ಪ್ರಾಯದಲ್ಲಿ ಚೆಸ್ ಅತ್ಯುನ್ನತ ಪದವಿ ಆದ ಗ್ರಾನ್ ಮಾಸ್ಟರ್ ಆತನು ತಲುಪಿ ಆಗಿತ್ತು! ಭಾರತದಲ್ಲಿ ಈಗ 72 ಗ್ರಾನ್ ಮಾಸ್ಟರ್ ಚೆಸ್ ಆಟಗಾರರು ಇದ್ದು ಅದರಲ್ಲಿ ಪ್ರಜ್ಞಾನಂದ ಎರಡನೇ ಅತೀ ಕಿರಿಯ ಆಟಗಾರ ಅನ್ನುವುದೇ ಒಂದು ರೋಮಾಂಚಕ ಸಂಗತಿ. ಅದರ ಜೊತೆಗೆ ಆತ ಅಂಡರ್ 8, ಅಂಡರ್ 10, ಅಂಡರ್ 18 ವಿಶ್ವ ಚೆಸ್ ಚಾಂಪಿಯನ್‌ಷಿಪ್‌ ಗೆದ್ದಾಗಿದೆ ಎಂದರೆ ಆತ ಇನ್ನೂ ಗ್ರೇಟ್.

praggnanandhaa

ದಾಖಲೆ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಅದೇ
ತಮಿಳುನಾಡಿನವರು. ಅವರೇ ನಮ್ಮ ಪ್ರಜ್ಞಾನಂದನಿಗೆ ಲೆಜೆಂಡ್ ಮತ್ತು ಐಕಾನ್. ವಿಶ್ವ ಚಾಂಪಿಯನ್ ಆಗಿದ್ದ ರಷಿಯಾದ ಗ್ಯಾರಿ ಕ್ಯಾಸ್ಪರೊವ್ ಅವರ ಆಟವನ್ನು ಅನುಕರಣೆ ಮಾಡುವ ಆತ ಈವರೆಗೆ ಗೆದ್ದಿರುವ ಚೆಸ್
ಟೂರ್ನಿಗಳ ಸಂಖ್ಯೆ 200ಕ್ಕಿಂತ ಹೆಚ್ಚು ಅಂದರೆ ನಮಗೆ, ನಿಮಗೆ ನಂಬುವುದು ಕಷ್ಟ ಆಗಬಹುದು!

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಅವರನ್ನು ಮೊತ್ತ ಮೊದಲ ಬಾರಿಗೆ ಪ್ರಜ್ಞಾನಂದ ಸೋಲಿಸಿದ್ದು ವಿಶ್ವ ಮಟ್ಟದಲ್ಲಿ ಭಾರೀ ದೊಡ್ಡ ಸುದ್ದಿ ಆಗಿತ್ತು. ಏಕೆಂದರೆ ಆಗ ಪ್ರಜ್ಞಾನಂದನ ವಯಸ್ಸು ಕೇವಲ 10 ಆಗಿತ್ತು! ವಿಶ್ವ ಚಾಂಪಿಯನ್ ಆಟಗಾರನನ್ನು ಸೋಲಿಸಿದ ವಿಶ್ವದ ಅತೀ ಕಿರಿಯ ಚೆಸ್ ಆಟಗಾರ ಎಂಬ ಕೀರ್ತಿಯು ಪ್ರಜ್ಞಾನಂದನಿಗೆ ದೊರೆತಾಗಿತ್ತು! ವಿಶ್ವಮಟ್ಟದ ಮಾಧ್ಯಮಗಳು ಆತನ ಬಗ್ಗೆ ಹೆಡ್ ಲೈನ್ ನ್ಯೂಸ್ ಹಾಕಲು ಶುರು ಮಾಡಿದ್ದವು. ಕಳೆದ ವರ್ಷ ಮತ್ತೆ ಅದೇ ವಿಶ್ವ ಚಾಂಪಿಯನ್ ಆಟಗಾರ ಮಾಗ್ನಸ್ ಅವರನ್ನು ಪ್ರಗ್ನಾನಂದ ಎರಡನೇ ಬಾರಿಗೆ ಸೋಲಿಸಿದ್ದರು. ಈ ಹುಡುಗ ಮ್ಯಾಗ್ನಸ್ ಎಂಬ ದೈತ್ಯ ಆಟಗಾರನನ್ನು ಈಗಾಗಲೇ ಮೂರು ಬಾರಿ ಸೋಲಿಸಿ ಆಗಿದೆ!

ಚೆಸ್‌ ವರ್ಲ್ಡ್‌ ಚಾಂಪಿಯನ್‌ ಮ್ಯಾಗ್ನಸ್‌ ಈ ರೀತಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆಂದರೆ….

ಅದೇ ಮ್ಯಾಗ್ನಸ್ ಹನ್ನೆರಡು ವರ್ಷಗಳಿಂದ ವರ್ಲ್ಡ್ ನಂಬರ್ ಒನ್ ಆಟಗಾರ ಎಂದರೆ ನಮ್ಮ
ಪ್ರಜ್ಞಾನಂದನ ಪ್ರತಿಭೆಯು ನಮಗೆ ಅರಿವಾಗುತ್ತದೆ. ಗೆದ್ದಾಗ ಸಚಿನ್ ತೆಂಡುಲ್ಕರ್, ವಿಶ್ವನಾಥನ್ ಆನಂದ್, ಪ್ರಧಾನಿ ಮೋದಿ, ಲೆಜೆಂಡ್ ಆಟಗಾರ ಗ್ಯಾರಿ ಕಾಸ್ಪರೋವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವರೆಲ್ಲರೂ ಈ ಹುಡುಗನಿಗೆ ಟ್ವೀಟ್ ಮಾಡಿ ಅಭಿನಂದನೆ ಹೇಳಿದ್ದರು. ಪ್ರಧಾನಿ ಮೋದಿ ಅವರು ಸ್ವತಃ ಕಾಲ್ ಮಾಡಿ ಮಾತಾಡಿದ್ದು ಆತನಿಗೆ ಭಾರೀ ಪ್ರೇರಣೆ ಕೊಟ್ಟಿತ್ತು. ರಶಿಯಾ ದೇಶವು ಹಲವು ಚೆಸ್ ಲೆಜೆಂಡ್ ಆಟಗಾರರಿಗೆ ಕೀರ್ತಿ ಪಡೆದಿದೆ. ಅವರಲ್ಲಿ ಹೆಚ್ಚಿನವರನ್ನು ಈ ಹುಡುಗ ಈಗಾಗಲೇ ಮಣಿಸಿ ಆಗಿದೆ!

ಅಮ್ಮ ಮತ್ತು ಅಕ್ಕನ ಜತೆ ಪ್ರಜ್ಞಾನಂದ

ಎಲ್ಲ ಸಾಧನೆಗೂ ಅಮ್ಮನೇ ಸ್ಫೂರ್ತಿ!

ತನ್ನ ವಿಶ್ವಮಟ್ಟದ ಎಲ್ಲ ಸಾಧನೆಗೂ ತನ್ನ ಅಮ್ಮ ನಾಗಲಕ್ಷ್ಮಿ ಅವರೇ ಸ್ಫೂರ್ತಿ ಎಂದು ಹೇಳುವಾಗ ಹುಡುಗನ ಕಣ್ಣಲ್ಲಿ ಝಗ್ ಎಂಬ ಬೆಳಕು ಮೂಡುತ್ತದೆ. ಆಗ ಅಮ್ಮನ ಕಣ್ಣಲ್ಲಿ ನೀರಿನ ಕಾರಂಜಿಯೇ ಚಿಮ್ಮುತ್ತದೆ. ಚಿಕ್ಕಂದಿನಿಂದ ಮಗನ ಪ್ರತೀ ಒಂದು ಪಂದ್ಯಕ್ಕೂ ಜೊತೆಗೆ ನಿಂತವರು ಇದೇ ಮಹಾತಾಯಿ. ಹೆಚ್ಚಿನ ಎಲ್ಲ ವಿದೇಶದ ಪಂದ್ಯಗಳಲ್ಲಿ ಕೂಡ ಇದೇ ಅಮ್ಮ ಮಗನಿಗೆ ಸಾಥ್ ಕೊಟ್ಟಿದ್ದಾರೆ. ಆತನ ಆಹಾರ, ಡ್ರೆಸ್, ತರಬೇತು, ವೀಸಾ, ಪ್ರಾಯೋಜಕರು, ಪ್ರಯಾಣ, ಪ್ರಚಾರ ಎಲ್ಲದರ ವ್ಯವಸ್ಥೆಗಳನ್ನು ಅವರೇ ಮಾಡುತ್ತಿದ್ದಾರೆ. ಮಗ ಚೆಸ್ ಆಡುವಾಗ ಕೋಣೆಯ ಮೂಲೆಯಲ್ಲಿ ನಿಂತು ಆಕೆ ಮಗನ ಮೂಡ್ ಗಮನಿಸುತ್ತಾರೆ. ಗೆದ್ದಾಗ ಮಗನನ್ನು ಅಪ್ಪಿ ಹಿಡಿದು ಮುದ್ದಿಸುತ್ತಾರೆ. ಸೋತಾಗ ಸಾಂತ್ವನ ಹೇಳುತ್ತಾರೆ.

ಮಗನ ಗೆದ್ದಾಗ ಅಮ್ಮನ ಖುಷಿ ನೋಡಿ

‘ಇಂತಹ ಅಮ್ಮ ಜೊತೆಗೆ ಇರುವಾಗ ಬೇರೆ ಯಾವ ದೇವರ ಆಶೀರ್ವಾದ ಬೇಕಾಗಿಲ್ಲ’ ಎಂದು ಚೆಸ್ ಐಕಾನ್ ಗ್ಯಾರಿ ಕ್ಯಾಸ್ಪರೊವ್ ಹೇಳಿದ್ದು ನೂರಕ್ಕೆ ನೂರರಷ್ಟು ನಿಜವಾದ ಮಾತು.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅಬ್ಬಾ ಎಂಥಾ ಹೋರಾಟವಿದು?; ನಾಡಿಯಾ ಮುರಾದ್‌ ಎಂಬ ಹೆಣ್ಣಿನ ಕಣ್ಣು ತೋಯಿಸುವ ಕಥೆ

ಫೈನಲ್ ಪಂದ್ಯದಲ್ಲಿ ಏನೂ ಆಗಬಹುದು!

ನಾನು ಈಗಾಗಲೇ ಹೇಳಿದ ಹಾಗೆ ಮ್ಯಾಗ್ನಸ್ ವಿಶ್ವ ನಂಬರ್ ಒನ್ ಆಟಗಾರ. ಹನ್ನೆರಡು ವರ್ಷಗಳಿಂದ ಆತ ವರ್ಲ್ಡ್ ನಂಬರ್ ಒನ್ ಆಟಗಾರ. ಆತನ ವಯಸ್ಸು 34! ಆತ ಚೆಸ್ ಆಡಲು ಆರಂಭ ಮಾಡಿ 20 ವರ್ಷ ಆಗಿದೆ.

praggnanandhaa

ಈ ಕಡೆಯಿಂದ ಪ್ರಗ್ನಾನಂದನ ವಯಸ್ಸು ಕೇವಲ 18! ಆತ ಈಗಾಗಲೇ ತನ್ನ ಎದುರಾಳಿಯನ್ನು ಮೂರು ಬಾರಿ ಸೋಲಿಸಿದ ದಾಖಲೆ ಹೊಂದಿದ್ದಾನೆ. ಗೆದ್ದರೆ ಇತಿಹಾಸ! ಸೋತರೆ ಅದು ಸೋಲು ಅಲ್ಲವೇ ಅಲ್ಲ! ಆದರೆ ನಮ್ಮ ಹುಡುಗ ಗೆಲ್ಲಬೇಕು ಎಂದು ಭಾರತೀಯರು ಪ್ರಾರ್ಥನೆ ಮಾಡಿಯೇ ಮಾಡುತ್ತಾರೆ.

ನನ್ನ ಲೇಖನ ಬರೆದು ಮುಗಿಯುವ ಹೊತ್ತಿನಲ್ಲಿ ಅವರಿಬ್ಬರ ಫೈನಲ್ ಪಂದ್ಯ ಆರಂಭ ಆಗಿದೆ. ಮೊದಲ ಪಂದ್ಯ ಡ್ರಾ ಆಗಿದೆ. ಓವರ್ ಟು ಬಾಕೂ..!

Exit mobile version