ರಜನೀಕಾಂತ್ ಬಂದರು-ದಾರಿ ಬಿಡಿ!- 2
ರಜನೀಕಾಂತ್ (Actor Rajinikanth) ಬಗ್ಗೆ ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ. ಒಬ್ಬ ಮಹಾನ್ ನಟ, ಅಭಿಮಾನಿಗಳ ಹೃದಯ ಸಾಮ್ರಾಟ, ಭಾರತದ ಅತೀ ದೊಡ್ಡ ಸೂಪರ್ ಸ್ಟಾರ್ (Superstar Rajinikanth), ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿ ರುವ ನಟ, ಏಷಿಯಾದಲ್ಲಿ 2ನೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ, ವಿದೇಶದಲ್ಲಿ ಕೋಟಿ ಕೋಟಿ ಬಿಸಿನೆಸ್ ಮಾಡುವ ಸಿನಿಮಾಗಳ ಹೀರೋ, ಜಪಾನೀಸ್, ಚೈನೀಸ್ ಮೊದಲಾದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಜನಪ್ರಿಯತೆ ಪಡೆದ ಭಾರತದ ಏಕೈಕ ಸ್ಟಾರ್……ಇನ್ನೂ ನೂರಾರು ವಿಶೇಷಣಗಳು ರಜನಿಗೆ ಇವೆ. ಅವರು ಈ ಎಲ್ಲಾ ವಿಶೇಷಣಗಳನ್ನು ಮೀರಿ ನಿಂತವರು ಅನ್ನುವುದು ನನ್ನ ಅಭಿಪ್ರಾಯ. (ರಾಜ ಮಾರ್ಗ ಅಂಕಣ)
ಸ್ಟಾರ್ ಪಟ್ಟ ನನಗೆ ಶಾಪ! ಎಲ್ಲೆಂದರಲ್ಲಿ ತಿರುಗಾಡಕ್ಕಾಗಲ್ಲ!
ಈ ಸ್ಟಾರ್ ಪಟ್ಟವು ನನಗೆ ಸೆರೆಮನೆ ಆಗಿದೆ. ನಾನು ರಸ್ತೆಗೆ ಬಂದರೆ ಸಾಕು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನನ್ನಲ್ಲಿ ದೇವರನ್ನು ಹುಡುಕುತ್ತಾರೆ. ಅದು ನನಗೆ ಮುಜುಗರ ತರುವ ಸಂಗತಿ. ರಸ್ತೆ ಬದಿಯ ಸಣ್ಣ ಅಂಗಡಿಯಲ್ಲಿ ಪಾನಿ ಪುರಿ ತಿನ್ನಬೇಕು ಎಂದು ಎಷ್ಟೋ ಬಾರಿ ಆಸೆ ಆಗ್ತದೆ. ಆದರೆ ಆಗ್ತಾ ಇಲ್ಲ. ಎಷ್ಟೋ ಬಾರಿ ನಾನು ಮತ್ತು ನನ್ನ ಗೆಳೆಯ ರಾಜ ಬಹಾದ್ದೂರ್ ಸೇರಿ ವೇಷ ಮರೆಸಿಕೊಂಡು ಸುತ್ತಾಡುತ್ತೇವೆ. ಎಲ್ಲೆಂದರಲ್ಲಿ ತಿರುಗಾಡುತ್ತೇವೆ. ಸಿಕ್ಕಿದ್ದನ್ನು ತಿಂದು ಖುಷಿ ಪಡುತ್ತೇವೆ. ಎಲ್ಲೆಲ್ಲೋ ಮೈ ಚಾಚಿ ಮಲಗುತ್ತೇವೆ. ನನಗೆ ಅಂತಹ ಬದುಕೇ ಇಷ್ಟ. ಆದರೆ ಈ ಸ್ಟಾರ್ ಪಟ್ಟದಿಂದ ಹೊರಬರಲು ಆಗದೇ ಒದ್ದಾಡುತ್ತಿದ್ದೇನೆ.
ನನ್ನ ಕಣ್ಣುಗಳೇ ನನ್ನ ಆಸ್ತಿ! ಬಾಲಚಂದರ್ ಹೇಳಿದ್ದು ನಿಜ!
ನನಗೆ ಗೊತ್ತಿಲ್ಲ. ನನ್ನ ಗುರು ಕೆ. ಬಾಲಚಂದರ್ ಅವರು ಹೇಳುತ್ತಿದ್ದರು – ನಿನ್ನ ಕಣ್ಣುಗಳೇ ನಿನ್ನ ಆಸ್ತಿ ಎಂದು. ನನ್ನ ಭಾವನೆಗಳನ್ನು ನಾನು ಕಣ್ಣುಗಳ ಮೂಲಕ ಸರಿಯಾಗಿ ಅಭಿವ್ಯಕ್ತ ಮಾಡುತ್ತೇನೆ ಎನ್ನುವುದು ನನ್ನ ನಂಬಿಕೆ. ಜೈಲರ್ ಸಿನೆಮಾದಲ್ಲಿ ನೆಲ್ಸನ್ ಅದನ್ನೇ ಚೆನ್ನಾಗಿ ಉಪಯೋಗ ಮಾಡಿದ್ದಾರೆ. ಅಲ್ವಾ?
ನಾನು ನಿರ್ದೇಶಕರ ನಟ, ಅವರಾಡಿಸೋ ಆಟದ ಗೊಂಬೆ, ಸ್ಟಾರ್ ಅಲ್ಲ
ನನ್ನ ಗುರುಗಳಾದ ಬಾಲಚಂದರ್ ನನ್ನನ್ನು ಬೆಳೆಸಿದವರು. ಅವರಿಗೆ ನಾನು ಮತ್ತು ಕಮಲಹಾಸನ್ ಸೇರಿ ಪಾದ ಪೂಜೆ ಮಾಡಿ ಸುವರ್ಣ ಅಭಿಷೇಕ ಮಾಡಿದ್ದೇವೆ. ಹಾಗೆಯೇ ಪುಟ್ಟಣ್ಣ ಕಣಗಾಲ್, ಭಾರತೀರಾಜ, ಶಂಕರ್, ರಾಮನಾಥನ್ ಮೊದಲಾದವರು ನನ್ನನ್ನು ಬೆಳೆಸಿದವರು. ಅವರು ಹೇಳಿದ್ದನ್ನು ಮಾಡುವುದು ಮಾತ್ರ ನನ್ನ ಕೆಲಸ. ನನ್ನ ಪಾತ್ರವನ್ನು ವಿಜೃಂಭಿಸುವುದು ಬೇಡ ಎಂದು ಎಲ್ಲರಿಗೂ ನಾನು ಹೇಳುತ್ತೇನೆ. ಆದರೆ ಅಭಿಮಾನಿಗಳು ಬಿಡಬೇಕಲ್ಲ? 73 ವರ್ಷ ಆಗಿದೆ. ಮನಸ್ಸು ಹೇಳಿದ್ದನ್ನು ದೇಹವು ಕೇಳುವುದಿಲ್ಲ. ನಾನು ಈ ವಯಸ್ಸಿನಲ್ಲಿ ಕೂಡ ಡ್ಯಾನ್ಸ್, ಫೈಟ್ ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಅದು ಆಗ್ತದಾ?
ಸಿನಿಮಾ ಲಾಸ್ ಆದಾಗ ನಿರ್ಮಾಪಕರಿಗೆ ನಷ್ಟ ತುಂಬಿ ಕೊಟ್ಟಿದ್ದೇನೆ
2002ರಲ್ಲಿ ನಾನೇ ಸ್ಕ್ರಿಪ್ಟ್ ಬರೆದು ‘ಬಾಬಾ’ ಎಂಬ ಸಿನಿಮಾ ಮಾಡಿದ್ದೆ. ನಾನು ಹಿಮಾಲಯದಲ್ಲಿ ಕುಳಿತು ಬರೆದ ಸ್ಕ್ರಿಪ್ಟ್ ಅದು. ಸಿನಿಮಾ ಚೆನ್ನಾಗಿತ್ತು. ಆದರೆ ಜನರಿಗೆ ಇಷ್ಟ ಆಗಲಿಲ್ಲ. ಸಿನಿಮಾ ದೊಡ್ಡ ಫ್ಲಾಪ್ ಆಯ್ತು. ಆಗ ನಿರ್ಮಾಪಕರಿಗೆ, ವಿತರಕರಿಗೆ ಆದ ನಷ್ಟ ತುಂಬಿಸಿ ಕೊಟ್ಟಿದ್ದೇನೆ. ಹೀಗೆ ಹಲವು ನಿರ್ಮಾಪಕರಿಗೆ ಸಹಾಯ ಮಾಡಿದ್ದೇನೆ. ಗೆಳೆತನದ ಕಾರಣಕ್ಕೆ ನಾನು ಹಲವು ಸಿನಿಮಾಗಳಲ್ಲಿ ಅತಿಥಿ ಕಲಾವಿದನಾಗಿ ಅಭಿನಯ ಮಾಡಿದ್ದು ಇದೆ. ವಿಶೇಷವಾಗಿ ಹೊಸ ನಟರ ಸಿನಿಮಾಗಳಿಗೆ ಬೆಂಬಲ ಕೊಡುವುದು ನನ್ನ ಉದ್ದೇಶ. ಆಗೆಲ್ಲ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ಅಭಿನಯ ಮಾಡಿದ್ದೇನೆ. ದುಡ್ಡು ನನಗೆ ಮುಖ್ಯ ಎಂದು ನನಗೆ ಯಾವತ್ತೂ ಅನ್ನಿಸಿಲ್ಲ. ನನ್ನ ಹೆಂಡತಿ ಲತಾ ಬಡ ಮಕ್ಕಳಿಗಾಗಿ ಒಂದು ಶಾಲೆಯನ್ನೇ ನಡೆಸುತ್ತಿದ್ದಾರೆ.
ಮನಶ್ಯಾಂತಿ ಹುಡುಕಿಕೊಂಡು ಹಿಮಾಲಯಕ್ಕೆ
ನನಗೆ ಚಿಕ್ಕಂದಿನಿಂದ ಆಧ್ಯಾತ್ಮದ ಸೆಳೆತ ಹೆಚ್ಚು. ರಾಮಕೃಷ್ಣ ಪರಮಹಂಸ, ರಾಘವೇಂದ್ರ ಸ್ವಾಮಿ ನನ್ನ ಮೇಲೆ ದಟ್ಟವಾದ ಪ್ರಭಾವ ಬೀರಿದ್ದಾರೆ. ನಾನು ರಾಘವೇಂದ್ರ ಸ್ವಾಮಿ ಅವರ ಪಾತ್ರವನ್ನು ಒಮ್ಮೆ ಮಾಡಿದ್ದು ನನಗೆ ಲೈಫ್ ಟೈಮ್ ಮೆಮೊರಿ. ಎಷ್ಟೋ ಬಾರಿ ನಾನು ಒತ್ತಡ ಆದಾಗ ಮನಶ್ಯಾಂತಿ ಹುಡುಕಿಕೊಂಡು ಹಿಮಾಲಯಕ್ಕೆ ಹೋಗ್ತೇನೆ. ಅಲ್ಲಿ ಹೃಷಿಕೇಶದಲ್ಲಿ ಇರುವ ಆಶ್ರಮಗಳಲ್ಲಿ ಸಂತರ, ಮಹಂತರ ಸೇವೆ ಮಾಡುತ್ತಾ ಕಾಲ ಕಳೆಯುತ್ತೇನೆ. ಧ್ಯಾನ ಮಾಡುತ್ತೇನೆ. ಒತ್ತಡ ಆದಾಗಲೆಲ್ಲ ವೇಷ ಮರೆಸಿಕೊಂಡು ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುತ್ತೇನೆ. ನಾನು ಇಷ್ಟೆಲ್ಲ ಸಾಧನೆ ಮಾಡಲು ಕಾರಣ ಆದದ್ದೇ ದೇವರ ಆಶೀರ್ವಾದ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಅಪೂರ್ವ ರಾಗಂಗಳ್ ಟು ಜೈಲರ್; ರಜನಿಕಾಂತ್ ಬಂದರು ದಾರಿಬಿಡಿ!
ಸ್ಮೋಕಿಂಗ್ ಮತ್ತು ಆಲ್ಕೋಹಾಲ್ ನನ್ನನ್ನು ಖಾಲಿ ಮಾಡಿತು
ಬಾಲ್ಯದಲ್ಲಿ ಅಮ್ಮನ ಪ್ರೀತಿ ಕಳೆದುಕೊಂಡೆ. ಆ ಕೊರತೆ ನನ್ನನ್ನು ಭಾವಜೀವಿ ಆಗಿ ಮಾಡಿತು. ಯೌವನದಲ್ಲಿ ಕುಡಿತ ಮತ್ತು ಸ್ಮೋಕಿಂಗ್ ನನ್ನನ್ನು ಖಾಲಿ ಮಾಡಿತು. ಸ್ಕ್ರೀನ್ ಮೇಲೆ ಸುರುಳಿ ಸುರುಳಿ ಆಗಿ ಹೊಗೆ ಬಿಡುವಾಗ ಥ್ರಿಲ್ ಆಗುತ್ತಿತ್ತು. ನನ್ನ ಅಭಿಮಾನಿಗಳಿಗೂ ಅದೇ ಬೇಕಾದದ್ದು. ಆದರೆ ಅವೆರಡೂ ನನ್ನನ್ನು ಆರೋಗ್ಯವನ್ನು ಖಾಲಿ ಮಾಡಿದವು. ಹಲವು ಬಾರಿ ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆಗೆ ಸೇರಿದ್ದೇನೆ. ನನಗೆ ಒಂದು ಕೆಮ್ಮು ಬಂದರೂ ಅಭಿಮಾನಿಗಳು ಮನೆಯ ಮುಂದೆ ಬಂದು ಸೇರುತ್ತಾರೆ. ಅದು ನನ್ನ ಆತಂಕಕ್ಕೆ ಕಾರಣ. ನಾನು ನನ್ನ ಎಲ್ಲ ಯುವ ಸ್ನೇಹಿತರಿಗೆ ಹೇಳುವ ಪ್ರೀತಿಯ ಎಚ್ಚರಿಕೆ ಏನೆಂದರೆ ಕುಡಿತ, ಜೂಜು ಬೇಡವೇ ಬೇಡ. ಅದು ನಿಮ್ಮನ್ನೂ, ನಿಮ್ಮ ಸಂಸಾರವನ್ನೂ ನಾಶ ಮಾಡುತ್ತದೆ.
CBSE ಟೆಕ್ಸ್ಟ್ ಬುಕ್ಕಿನಲ್ಲಿ ನನ್ನ ಕತೆ ಇದೆ!
ಹಾಗೆಂದು ನನ್ನ ಬದುಕು ಯಾರಿಗೂ ಮಾದರಿ ಆಗೋದು ಬೇಡ. ಬಸ್ ಕಂಡಕ್ಟರ್ ಆಗಿದ್ದವನು ಸೂಪರ್ ಸ್ಟಾರ್ ಆದ ಅನ್ನೋದು ಯಶಸ್ಸು ಅಲ್ಲ. ನಾನು ಎಷ್ಟೊಂದು ಜನರ ಬದುಕಿನಲ್ಲಿ ಬೆಳಕು ತುಂಬಿದ್ದೇನೆ ಅನ್ನೋದು ಯಶಸ್ಸು!
ಸರಳವಾಗಿ ಬದುಕುವುದು ನನಗೆ ಇಷ್ಟ. ತೆರೆಯ ಮೇಲೆ ನನ್ನ ಅಭಿಮಾನಿಗಳಿಗೆ ಹೇಗೆ ಬೇಕೋ ಹಾಗೆ ನಾನು ಇರಬೇಕು. ಆದರೆ ನಿಜ ಜೀವನದಲ್ಲಿ ನನಗೆ ಹೇಗಿರಬೇಕು ಅನ್ನಿಸುತ್ತದೆಯೋ ಹಾಗೆ ನಾನಿರಬೇಕು. ತುಂಬಾ ಸರಳವಾದ ಊಟ, ಡ್ರೆಸ್, ನಡೆ, ನುಡಿ ನನ್ನನ್ನು ಖುಷಿ ಆಗಿ ಇಡುತ್ತದೆ. ನನ್ನ ಇಮೇಜಿಗೆ ಹೊರತಾಗಿ ಕೆಲವು ಸಿನಿಮಾ ಮಾಡಬೇಕು ಎಂದು ಆಸೆ ಇದೆ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂದು ಆಸೆ ಇದೆ. ದೇವರು ಆಯಸ್ಸು ಕೊಟ್ಟರೆ ಎಲ್ಲವನ್ನೂ ಮಾಡುತ್ತೇನೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ರವಿ ಬೆಳಗೆರೆಗೆ ಈಜಿಪ್ಟ್ ಸುಂದರಿ ಕೊಟ್ಟ ಆ ಉಡುಗೊರೆ ಯಾವುದು?
ಯಾವುದೇ ಸಿನಿಮಾದಲ್ಲಿ ರಜನಿ ಸಾಯುವುದಿಲ್ಲ!
ತುಂಬಾ ವರ್ಷಗಳ ಹಿಂದೆ ಯಾವುದೋ ಒಂದು ಸಿನಿಮಾದಲ್ಲಿ ನಾನು ಸಾಯುವ ದೃಶ್ಯ ಇತ್ತು. ಅದು ನನ್ನ ಅಭಿಮಾನಿಗಳಿಗೆ ಸಿಟ್ಟು ತಂದಿತು. ಅವರು ಥಿಯೇಟರಿಗೆ ಬೆಂಕಿ ಹಚ್ಚಿದ್ದರು. ನಂತರ ನಾನು ಯಾವುದೇ ಸಿನಿಮಾದಲ್ಲಿ ಸಾಯುವ ದೃಶ್ಯ ಇರುವುದಿಲ್ಲ. ಶಿವಾಜಿ ಸಿನಿಮಾದಲ್ಲಿ ನಾನು ಒಮ್ಮೆ ಸಾಯುತ್ತೇನೆ. ಮತ್ತೆ ಎದ್ದು ಬರುತ್ತೇನೆ. ಅದು ವಿದೇಶದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಕೀರ್ತಿ ಪಡೆಯಿತು. ಎಂದಿರನ್ (ರೋಬೋಟ್) ಹತ್ತಾರು ವಿದೇಶದ ಭಾಷೆಗಳಿಗೆ ಡಬ್ ಆಗಿತ್ತು. ಅದು ನನಗೆ ನಿಜವಾಗಿ ಸವಾಲಿನ ಪಾತ್ರವೇ ಆಗಿತ್ತು. ಗೆಲ್ಲಿಸಿದ್ದು ದೇವರೇ ಹೊರತು ನಾನಲ್ಲ!
ಹಾಗೆಯೇ ನಾನು ಯಾವುದೇ ಸಿನಿಮಾದಲ್ಲಿ ಅರೆಸ್ಟ್ ಆಗುವುದನ್ನು ಕೂಡ ಜನರು ಇಷ್ಟ ಪಡುವುದಿಲ್ಲ.
(ಜೈಲರ್ ಸಿನಿಮಾದಲ್ಲಿ ಸಾಲು ಸಾಲು ಕ್ರಿಮಿನಲ್‌ಗಳ ಕೊಲೆ ಮಾಡುವ ರಜನೀಕಾಂತ್ ಕೊನೆಗೂ ಅರೆಸ್ಟ್ ಆಗುವುದಿಲ್ಲ. ಪೊಲೀಸರಿಗೆ ಸರೆಂಡರ್ ಕೂಡ ಆಗುವುದಿಲ್ಲ. ಅದು ಅವರ ಅಭಿಮಾನಿಗಳಿಗೆ ಇಷ್ಟ ಆಗುವುದಿಲ್ಲ)
ಅಭಿಮಾನಿಗಳಿಗಾಗಿ ತನ್ನ ಬದುಕು ಮತ್ತು ತನಗಾಗಿ ತನ್ನ ಬದುಕನ್ನು ಪ್ರತ್ಯೇಕವಾಗಿ ನೋಡಿ ಸರಿಯಾಗಿ ನಿರ್ವಹಣೆ ಮಾಡಲು ಕಲಿತಿರುವ ರಜನೀಕಾಂತ್ ನಿಜಕ್ಕೂ ಗ್ರೇಟ್ ಅಲ್ಲವಾ?