Site icon Vistara News

Raja Marga Column : ಸಾಯಲು ಹೊರಟ ಸಾಧು ಕೋಕಿಲಾರನ್ನು ಬದುಕಿಸಿದ್ದು ಒಂದು ಸಿನಿಮಾ!

Raja Marga column Sadhu Kokila front

Raja Marga Column : ಸಾಧು ಕೋಕಿಲಾ (Sadhu Kokila) ಎಂಬ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಕಲಾವಿದ ಕನ್ನಡದ ಹೆಮ್ಮೆ! ಈ ವ್ಯಕ್ತಿಯ ಬಹು ಆಯಾಮದ ಪ್ರತಿಭೆಗಳ ಬಗ್ಗೆ ನನಗೆ ಭಾರಿ ಅಚ್ಚರಿ ಮತ್ತು ಅಭಿಮಾನ! ಭಾರತದ ಅತ್ಯಂತ ವೇಗದ ಕೀಬೋರ್ಡ್ ಪ್ಲೇಯರ್‌ಗಳಲ್ಲಿ ಅವರು ಕೂಡ ಒಬ್ಬರು! ಕರ್ನಾಟಕದ ಅತ್ಯಂತ ಹೆಚ್ಚು ಬೇಡಿಕೆಯ ಹಾಸ್ಯನಟ (Comedy Actor), ಅತಿ ಶ್ರೇಷ್ಠ ಸಂಗೀತ ನಿರ್ದೇಶಕ (Music Director), ಒಳ್ಳೆಯ ಗಾಯಕ, ಯಶಸ್ವೀ ಸಿನಿಮಾ ನಿರ್ದೇಶಕ, ಹಲವು ರಿಯಾಲಿಟಿ ಶೋಗಳ ಸೆಲೆಬ್ರಿಟಿ ತೀರ್ಪುಗಾರ, ಸಮಾಜ ಸೇವಕ, ರಾಜಕಾರಣಿ. ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು.. (President of Film Academy) ಹೀಗೆ ಅವರ ಪ್ರೊಫೈಲ್ ವಿಸ್ತಾರ ಆಗುತ್ತ ಹೋಗುತ್ತದೆ!

Raja Marga Column: ಆ ಪ್ರತಿಭೆಗಳ ಹಿಂದೆ ತೀವ್ರ ಹಸಿವು ಇತ್ತು!

ಸಾಧು ಕೋಕಿಲಾ ಅವರ ಈ ಪ್ರತಿಭೆಗಳ ಹಿಂದೆ ತೀವ್ರ ಹಸಿವು, ಬಡತನ, ಹೋರಾಟ ಮತ್ತು ಅಪಮಾನಗಳ ಹಿನ್ನೆಲೆ ಇದೆ. ಸಹಾಯ ಶೀಲನ್ ಸಾಧ್ರಕ್ ಇದು ಅವರ ಬಾಲ್ಯದ ಹೆಸರು. ಹುಟ್ಟಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಪೊಲೀಸ್ ಆಗಿದ್ದರು ಮತ್ತು ಮುರುಗನ್ ದೇವಳದಲ್ಲಿ ಪಿಟೀಲು ವಾದಕ ಕೂಡ. ತಾಯಿ ಆರ್ಕೆಸ್ಟ್ರಾ ಸಿಂಗರ್ ಆಗಿದ್ದವರು. ಕಲಿಕೆಯಲ್ಲಿ ಕೂಡ ಮುಂದಿದ್ದ ಹುಡುಗ. ಕ್ರೀಡೆಯಲ್ಲಿ ಕೂಡ ಶ್ರೇಷ್ಠ ಸಾಧಕ. ಫುಟ್ಬಾಲಿನಲ್ಲಿ ರಾಜ್ಯ ತಂಡದ ಕ್ಯಾಪ್ಟನ್! ಆದರೆ ಬಾಲ್ಯದಿಂದ ಅಂಟಿಕೊಂಡು ಬಂದ ಬಡತನವು ಅವರ ಈ ಎಲ್ಲ ಪ್ರತಿಭೆಗಳನ್ನು ಖಾಲಿ ಮಾಡಿತು. ಆರ್ಥಿಕ ನಿರ್ವಹಣೆಯಲ್ಲಿ ಎಡವಿದ ಕಾರಣಕ್ಕೆ ಅವರ ಕುಟುಂಬವು ತುಂಬಾನೇ ಸಂತ್ರಸ್ತ ಆಗಿತ್ತು.

ಎಂಟನೇ ತರಗತಿಗೆ ಹುಡುಗನ ಶಿಕ್ಷಣವು ನಿಂತುಹೋಯಿತು. ಅವರು ಮತ್ತು ಅಣ್ಣ ಲಯೇಂದ್ರ ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ಆಹಾರ ಹುಡುಕಿದ ದಿನಗಳೂ ಇದ್ದವು ಎಂದು ಸಾಧು ಕೋಕಿಲ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಆ ಹಸಿವಿನ ನಡುವೆ ಕೂಡ ಅವರು ಇಳಯರಾಜಾ ಅವರ ಸಂಗೀತ ಕೇಳುವ, ಮ್ಯೂಸಿಕ್ ನೋಟ್ ಬರೆದುಕೊಳ್ಳುವ ಅಭ್ಯಾಸವನ್ನು ಮಾತ್ರ ಬಿಡಲಿಲ್ಲ.

Raja Marga Column : ಒಂದು ಇಂಗ್ಲಿಷ್ ಸಿನಿಮಾ ಅವರ ಬದುಕನ್ನು ಬದಲಾಯಿಸಿತು!

ಒಮ್ಮೆ 14ನೆಯ ವಯಸ್ಸಿನಲ್ಲಿ ತುಂಬಾ ಅವಮಾನ ಸಹಿಸಲು ಆಗದೇ ನೊಂದುಕೊಂಡು ಆತ್ಮಹತ್ಯೆಯನ್ನು ಮಾಡಲು ಸಾಧು ಕೋಕಿಲ ನಿರ್ಧಾರ ಮಾಡಿದ್ದರು. ಹಲಸೂರು ಕೆರೆಯ ಬಳಿ ಹೋಗಿ ಮಾನಸಿಕವಾಗಿ ಸಾಯಲು ಸಿದ್ಧರಾಗುತ್ತಿದ್ದರಂತೆ. ಆದರೆ ಸಾಯುವ ಮೊದಲು ಬ್ಲೂಮೂನ್ ಥೇಟರಿನಲ್ಲಿ STICH IN TIME ಎಂಬ ಇಂಗ್ಲಿಷ್ ಕಾಮಿಡಿ ಸಿನಿಮಾ ನೋಡಲು ಮನಸ್ಸಾಯಿತು. ಆ ಸಿನಿಮಾ ನೋಡಿ ಸಾಧು ಕೋಕಿಲ ಹೊಟ್ಟೆ ತುಂಬಾ ನಕ್ಕರು. ಮತ್ತೆ ಮತ್ತೆ ಆ ಸಿನಿಮಾ ನೋಡಿದರು. ಆ ಸಿನಿಮಾ ಅವರ ಸಾಯುವ ನಿರ್ಧಾರವನ್ನು ಬದಲಾಯಿಸಿತು. ಸಾಧನೆಯ ಹಸಿವು ತೀವ್ರವಾಯಿತು.

ಸಿ. ಅಶ್ವಥ್ ಅವರ ಸಂಗೀತ ಸಂಜೆಗಳಲ್ಲಿ ಕೀ ಬೋರ್ಡ್ ಪ್ಲೇಯರ್!

ಮುಂದೆ ಸಿ. ಅಶ್ವತ್ಥ್ ಅವರ ನೂರಾರು ಸಂಗೀತ ಸಂಜೆಯ ಕಾರ್ಯಕ್ರಮಗಳಲ್ಲಿ ಕೀ ಬೋರ್ಡ್ ನುಡಿಸುತ್ತ ಸಂಗೀತ ಲೋಕದ ಪ್ರವೇಶ ಮಾಡಿದರು. ಗಾಡ್ ಫಾದರ್ ಇಲ್ಲದೇ ಕನ್ನಡ ಸಿನಿಮಾ ರಂಗದಲ್ಲಿ ನೆಲೆ ನಿಲ್ಲುವುದು ಕಷ್ಟ. ಅದಕ್ಕಾಗಿ ಸಾಧು ಕೋಕಿಲ ತೀವ್ರವಾದ ಹೋರಾಟವನ್ನು ಮಾಡಬೇಕಾಯಿತು. ಸ್ವಭಾವತಃ ಗಂಭೀರ ವ್ಯಕ್ತಿತ್ವದ ಸಾಧು ಕೋಕಿಲ ಅನಿವಾರ್ಯ ಸಂದರ್ಭದಲ್ಲಿ ಹಾಸ್ಯ ನಟರಾಗಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಪಡೆದರು. ಭಾರೀ ಬೇಡಿಕೆ ಗಳಿಸಿದರು. ಅದೇ ರೀತಿ ಮುಂದೆ ಉಪೇಂದ್ರ ಅವರ ಶ್! (1993) ಸಿನೆಮಾದ ಮೂಲಕ ಮೊದಲ ಬಾರಿಗೆ ಮ್ಯೂಸಿಕ್ ಕಂಪೋಸರ್ ಆದರು.

ಇದನ್ನೂ ಓದಿ : Prithviraj Sukumaran: ಹೀಗಿದೆ ನೋಡಿ ʼಆಡು ಜೀವಿತಂʼ ಟ್ರೈಲರ್‌: ಮಾ. 28ಕ್ಕೆ ತೆರೆಗೆ

ಭಾರೀ ಜನಪ್ರಿಯ ಹಾಸ್ಯ ನಟ ಮತ್ತು ಸಂಗೀತ ನಿರ್ದೇಶಕ

ಈವರೆಗೆ ಅವರು 450ಕ್ಕೂ ಮಿಕ್ಕಿ ಸಿನಿಮಾಗಳಲ್ಲಿ ಹಾಸ್ಯನಟರಾಗಿ ಮಿಂಚಿದ್ದಾರೆ. ಪರದೆಯಲ್ಲಿ ಸಾಧು ಕೋಕಿಲ ಮೂಡಿ ಬಂದ ಕೂಡಲೇ ಜನ ಸುರಿಸುವ ಚಪ್ಪಾಳೆ ಮತ್ತು ಶಿಳ್ಳೆ ಅದು ಅದ್ಭುತ! ಆ ಚಪ್ಪಾಳೆಯೇ ತನಗೆ ಆಶೀರ್ವಾದ ಅನ್ನುತ್ತಾರೆ ಅವರು.

ಅಷ್ಟೇ ಅಲ್ಲದೆ ಅನಾಥರು, ರಕ್ತ ಕಣ್ಣೀರು ಮೊದಲಾದ ಏಳು ಕನ್ನಡದ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಮೂರು ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ, ಒಮ್ಮೆ ಅತ್ತ್ಯುತ್ತಮ ಗಾಯಕ ರಾಜ್ಯ ಪ್ರಶಸ್ತಿ ಮತ್ತು ಮೂರು ಬಾರಿ ಅತ್ಯುತ್ತಮ ಹಾಸ್ಯ ನಟ ರಾಜ್ಯ ಪ್ರಶಸ್ತಿ ಇಷ್ಟೆಲ್ಲಾ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಏಕೈಕ ಕನ್ನಡದ ಚಿತ್ರ ಕಲಾವಿದ ಎಂದರೆ ಅದು ಸಾಧು ಕೋಕಿಲ ಮತ್ತು ಸಾಧು ಕೋಕಿಲ ಮಾತ್ರ!

ಹೀಗೆ ಮೂರು ಮೂರು ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ಇನ್ನೊಬ್ಬ ಸಿನಿಮಾ ಕಲಾವಿದ ಭಾರತದಲ್ಲಿಯೇ ಇಲ್ಲ ಅನ್ನುವುದು ಸಾಧು ಕೋಕಿಲ ಅವರ ಪ್ರತಿಭೆಗೆ ಸಾಕ್ಷಿ! ರಾಕ್ಷಸ ಮತ್ತು ಇಂತೀ ನಿನ್ನ ಪ್ರೀತಿಯ ಸಿನಿಮಾಗಳ ಸಂಗೀತ ನಿರ್ದೇಶನಕ್ಕೆ ಅವರಿಗೆ ರಾಜ್ಯ ಪ್ರಶಸ್ತಿಗಳು ಬಂದಿವೆ. ಹೆಚ್ಚು ಕಡಿಮೆ ಎಲ್ಲ ಸಂಗೀತ ವಾದ್ಯಗಳನ್ನು ನುಡಿಸುವ ಸಾಮರ್ಥ್ಯ ಸಾಧು ಕೋಕಿಲ ಅವರಿಗೆ ಇದೆ!

ಇದನ್ನೂ ಓದಿ : Raja Marga Column : ಪದೇಪದೆ ಡಿಪ್ರೆಸ್‌ ಆಗ್ತಾ ಇದ್ದೀರಾ? ಹುಷಾರು ಆತಂಕ ಒಂದು ನಿಧಾನ ವಿಷ!

ಸಂಗೀತವೇ ನನ್ನ ಉಸಿರು ಎಂದವರು ಸಾಧು ಕೋಕಿಲ

ಹತ್ತಾರು ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿದರೂ ಸಂಗೀತವೇ ನನ್ನ ಉಸಿರು, ಅದು ನನ್ನ ಮೊದಲ ಮತ್ತು ಕೊನೆಯ ಆಯ್ಕೆ ಎಂದು ನುಡಿಯುವ ಸಾಧು ಕೋಕಿಲ ಮೊನ್ನೆ ಮೊನ್ನೆ ಮಾರ್ಚ್ 24ರಂದು ತನ್ನ 58ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಅವರಿಗೆ Advanced ಶುಭಾಶಯ ಹೇಳೋಣ.

Exit mobile version