Raja Marga Column : ಯಾವುದೇ ಒಂದು ದಾಖಲೆ ಅಂತಿಟ್ಟುಕೊಳ್ಳಿ. ಅದನ್ನು ನಿರ್ಮಾಣ ಮಾಡುವುದು ತುಂಬ ಸುಲಭ. ಏಕದಿನ ಕ್ರಿಕೆಟ್‌ನಲ್ಲಿ 400 ರನ್‌ಗಳ ಗಡಿ ದಾಟುವುದು ಸಾಧ್ಯವೇ ಇಲ್ಲ (Creating a Record) ಎಂಬ ಪರಿಸ್ಥಿತಿ ಇತ್ತು. ಆದರೆ ಇತಿಹಾಸದಲ್ಲೇ ಮೊದಲ ಬಾರಿ 2006ರಲ್ಲಿ ಆಸ್ಟ್ರೇಲಿಯಾ ಆ ಸಾಧನೆ ಮಾಡಿತು (434/50 ಓವರ್). ಆದರೆ, ಕೆಲವೇ ಗಂಟೆಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಆ ದಾಖಲೆಯನ್ನು ಮೀರಿಸಿ ಗೆಲುವು ಸಾಧಿಸಿತು (438/50 ಓವರ್). ಮುಂದೆ ಸುಮಾರು 27 ಬಾರಿ ತಂಡಗಳು 400ರ ಗಡಿ ದಾಟಿವೆ. ಇಂಗ್ಲೆಂಡ್ ತಂಡ ಒಮ್ಮೆಯಂತೂ 498 ರನ್ ಗಳಿಸಿದೆ. ಈಗ ಯಾರಾದರೂ ಒಮ್ಮೆ 500 ಗಡಿ ದಾಟಿಬಿಟ್ಟರೆ ಉಳಿದ ತಂಡಗಳು ಪೈಪೋಟಿಗೆ ಬಿದ್ದು ಗೆರೆ ದಾಟುತ್ತವೆ. ಅಂದರೆ ಈ ದಾಖಲೆಗಳನ್ನು ಮೊದಲ ಬಾರಿ ನಿರ್ಮಾಣ ಮಾಡುವುದು ಸ್ಪಲ್ಪ ಕಷ್ಟ. ಈ ಟ್ರೆಂಡ್‌ಗಳನ್ನು ನಿರ್ಮಾಣ ಮಾಡುವುದು ಕೂಡಾ ಹಾಗೆಯೇ. ಒಮ್ಮೆ ಟ್ರೆಂಡ್ ಸೆಟ್ (Setting Trend) ಆಯಿತೆಂದರೆ ಎಲ್ಲರೂ ಬಂದು ಸೇರಿಕೊಳ್ಳುತ್ತಾರೆ. ಇದು ಎಷ್ಟು ನಿಜ ಎನ್ನುವುದಕ್ಕೆ ಕೆಲವೊಂದು ಸಾರ್ವಕಾಲಿಕ ಉದಾಹರಣೆಗಳು ಇಲ್ಲಿವೆ.
Raja Marga Column: 1. ಒಂದು ಡಬಲ್ ಸೆಂಚುರಿಗೆ ಎಷ್ಟೊಂದು ಕಾಯುವಿಕೆ ಇತ್ತು ಗೊತ್ತಾ?
ಏಕದಿನದ ಪಂದ್ಯಗಳು ಅಂತಾರಾಷ್ಟ್ರೀಯ ಮಾನ್ಯತೆ ಪಡೆದದ್ದು 1970ರ ದಶಕದಲ್ಲಿ. ಅಂತಹ ಪಂದ್ಯಗಳಲ್ಲಿ ಶತಕ ಬಾರಿಸುವುದೇ ಕಷ್ಟ ಎಂಬ ಮಾತಿತ್ತು. ಆದರೆ 2010ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮೊದಲ ಡಬಲ್ ಸೆಂಚುರಿ ಹೊಡೆದಾಗ ಇಡೀ ಜಗತ್ತು ಅದನ್ನು ನಿಬ್ಬೆರಗಾಗಿ ನೋಡಿತ್ತು. ಆ ದಾಖಲೆ ಮುಂದೆ ಯಾರೂ ಮುರಿಯಲು ಸಾಧ್ಯವೇ ಇಲ್ಲ ಎಂಬ ಮಾತು ಬಂದಿತು. ಆದರೆ ಮುಂದೆ 14 ವರ್ಷಗಳಲ್ಲಿ 10 ಜನ ಡಬಲ್ ಸೆಂಚುರಿ ಹೊಡೆದರು. ರೋಹಿತ್ ಶರ್ಮಾ ಮೂರು ಬಾರಿ ಈ ವಿಕ್ರಮ ಸಾಧಿಸಿದರು. ಒಂದು ಟ್ರೆಂಡ್ ಸೆಟ್ಟಿಂಗ್ ಇನ್ನಿಂಗ್ಸ್ ಆ ರೀತಿಯ ಅಸಂಖ್ಯ ಸಾಧಕರಿಗೆ ದಾರಿ ತೋರಿಸಿತ್ತು!
#OnThisDay in 2010, @sachin_rt created history by becoming the 1st batsman to score a 200 in ODIs. 🇮🇳👏
— BCCI (@BCCI) February 24, 2020
Relive the knock 👉 https://t.co/yFPy4Q1lQB pic.twitter.com/F1DtPmo2Gm
Raja Marga Column: 2. ಹತ್ತಕ್ಕೆ ಹತ್ತೂ ವಿಕೆಟ್‌ಗಳ ಮಿರಾಕಲ್ ಈಗ ಏನೂ ಅಲ್ಲ!
ಟೆಸ್ಟ್ ಕ್ರಿಕೆಟಿನ ಒಂದು ಇನಿಂಗ್ಸ್‌ನಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಪಡೆಯೋದು ಅಂದ್ರೆ ಅಬ್ಬಬ್ಬಾ ಅದು ಸಾಧ್ಯನಾ? ಎಂದು ಕೇಳುವ ಕಾಲವೇ ಇತ್ತು. ಆದರೆ 1956ರಲ್ಲಿ ಇಂಗ್ಲೆಂಡಿನ ಸ್ಪಿನ್ ಬೌಲರ್ ಜಿಮ್ ಲೇಕರ್ (Bowler Jim Laker) ಹತ್ತಕ್ಕೆ ಹತ್ತು ವಿಕೆಟ್ ಪಡೆದಾಗ ಜನ ಅದ್ಭುತ ಅದ್ಭುತ ಅಂದರು. ಇನ್ನು ಯಾರೂ ಪಡೆಯಲು ಸಾಧ್ಯ ಇಲ್ಲ ಅಂದರು. ಆದರೆ ಮುಂದೆ ಭಾರತದ ಅನಿಲ್ ಕುಂಬ್ಳೆ ಪಾಕ್ ವಿರುದ್ಧ ಹತ್ತಕ್ಕೆ ಹತ್ತು ವಿಕೆಟ್ ಪಡೆದರು. ಅದೇ ರೀತಿ ಮುಂದೆ ನ್ಯೂಜಿಲ್ಯಾಂಡ್ ದೇಶದ ಯುವ ಬೌಲರ್ ಏಜಾಸ್ ಪಟೇಲ್ ಅದೇ ಸಾಧನೆ ರಿಪೀಟ್ ಮಾಡಿದಾಗ ಜನರು ಅದನ್ನು ಮಿರಾಕಲ್ ಅನ್ನಲಿಲ್ಲ. ಅದು ಸಾಧ್ಯ ಅಂದರು.
3.ನೂರಾರು ಸಾಧಕರಿಗೆ ಸ್ಫೂರ್ತಿಯಾದ ಎವರೆಸ್ಟ್ ಆರೋಹಣ
ಜಗತ್ತಿನ ಅತೀ ಎತ್ತರದ ಶಿಖರಗಳಲ್ಲಿ ಒಂದಾದ ಮೌಂಟ್ ಎವರೆಸ್ಟನ್ನು (Mount Everest) 1953ರಲ್ಲಿ ತೆನ್ಸಿಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ ಏರಿ ಮುಗಿಸಿದಾಗ ಜನ ಅದನ್ನು ಲ್ಯಾಂಡ್ ಮಾರ್ಕ್ ಸಾಧನೆ ಎಂದರು. ಆದರೆ ಮುಂದೆ ನೂರಾರು ಜನರು ಆ ಸಾಧನೆಯನ್ನು ಪೂರ್ತಿ ಮಾಡಿದರು. ತೆನ್ಸಿಂಗ್ ಸಾಧನೆಯು ಮುಂದೆ ನೂರಾರು ಅಂತಹ ಸಾಧಕರಿಗೆ ದಾರಿ ತೋರಿಸಿತು.
4. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625/625 ಅಂಕ ಪಡೆಯೋದು ಈಗ ಸಾಮಾನ್ಯ!
ಎಸೆಸೆಲ್ಸಿ ಪರೀಕ್ಷೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕಗಳನ್ನು ಪಡೆದು (625/625 Marks in SSLC) ದಾಖಲೆ ಬರೆದವನು ಭದ್ರಾವತಿಯ ರಂಜನ್ (2016). ಆತನು ರಾತ್ರಿ ಹಗಲು ಆಗುವುದರ ಒಳಗೆ ಲೆಜೆಂಡ್ ಆಗಿದ್ದನು. ಮುಂದೆ ಅದನ್ನು ಯಾರೂ ಸಾಧನೆ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಬಂದಿತ್ತು. ಆದರೆ ದಾಖಲೆಗಳು ಹೇಳುವ ಹಾಗೆ ಮುಂದೆ ಪ್ರತೀ ವರ್ಷವೂ ಹತ್ತಾರು ಸಾಧಕರು ಆ ಸಾಧನೆಯನ್ನು ರಿಪೀಟ್ ಮಾಡಿದರು. ಈಗ ಆ ಸಾಧನೆ ಮಾಡಿದ ನೂರಾರು ಸಾಧಕರು ಕರ್ನಾಟಕದಲ್ಲಿ ಇದ್ದಾರೆ. ಈಗಲೂ ಗೆಲ್ಲುತ್ತಿದ್ದಾರೆ.
5.ನೂರು ಮೀಟರ್ ಓಟಕ್ಕೆ ಹೊಸ ಬೆಂಚ್ ಮಾರ್ಕ್ ಸೃಷ್ಟಿ ಮಾಡಿದ ಹೈನ್ಸ್
ಆರುವತ್ತರ ದಶಕದವರೆಗೂ ನೂರು ಮೀಟರ್ ಓಟವನ್ನು ಹತ್ತು ಸೆಕೆಂಡ್ ಒಳಗೆ ಓಡಿ ಮುಗಿಸುವುದು ಸಾಧ್ಯವೇ ಇಲ್ಲ ಅನ್ನುತ್ತಿದ್ದರು. ಆದರೆ 1968ರಲ್ಲಿ ಜಿಮ್ ಹೈನ್ಸ್ ಎಂಬ ಕ್ರೀಡಾಪಟು ಆ ದೂರವನ್ನು 9.98 ಸೆಕೆಂಡ್ಸ್ ಸಮಯದಲ್ಲಿ ಓಡಿ ಮುಗಿಸಿದಾಗ ಜನ ಅದು ಸಾಧ್ಯ ಎಂದು ನಂಬಲು ಆರಂಭ ಮಾಡಿದರು. ಮುಂದೆ ನೂರಾರು ಓಟಗಾರರು ಆ ದಾಖಲೆಯನ್ನು ಮುರಿದು ಮುಂದೆ ಹೋಗಿದ್ದಾರೆ!
6. ಜಿಮ್ನಾಸ್ಟಿಕ್‌ನಲ್ಲಿ ಪರ್ಫೆಕ್ಟ್ ಟೆನ್ ಸಾಧ್ಯವೇ ಇಲ್ಲ ಎಂದಿದ್ದರು!
ಯಾವುದೇ ವಿಶ್ವಮಟ್ಟದ ಕೂಟದಲ್ಲಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಹತ್ತಕ್ಕೆ ಹತ್ತು ಅಂಕ ಪಡೆಯುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆ ಇತ್ತು. ಆದರೆ 1976ರ ಒಲಿಂಪಿಕ್ಸ್ ಕೂಟದಲ್ಲಿ ರೊಮೇನಿಯಾದ ನಾಡಿಯಾ ಕೊಮೇನಿಸಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಮೊದಲ ಬಾರಿಗೆ ‘ಪರ್ಫೆಕ್ಟ್ ಟೆನ್ ‘ ಸ್ಕೋರ್ ಮಾಡಿ ಚಿನ್ನದ ಪದಕ ಗೆದ್ದರು! ಆಗ ಆಕೆಗೆ ಕೇವಲ 14 ವರ್ಷ ಅನ್ನೋದು ಕೂಡ ಅದ್ಭುತವೇ ಆಗಿತ್ತು! ಮುಂದೆ ಅದೇ ನಾಡಿಯಾ ಎರಡು ಬಾರಿ ಒಲಿಂಪಿಕ್ಸ್ ಕೂಟದಲ್ಲಿ ಪರ್ಫೆಕ್ಟ್ ಟೆನ್ ಸಾಧನೆ ಮಾಡಿದರು. ಅದರ ನಂತರ ಹತ್ತಾರು ಜಿಮ್ನಾಸ್ಟ್‌ಗಳು ಆ ದಾಖಲೆಯನ್ನು ಬರೆದು ಪದಕ ಗೆದ್ದಿದ್ದಾರೆ. ಇನ್ನೂ ಗೆಲ್ಲುತ್ತಾ ಇದ್ದಾರೆ.
7. ಸ್ವಿಮ್ಮರ್ ಪೆಲ್ಫ್ಸ್ ಎಂಬ ಚಿನ್ನದ ಮೀನಿನ ಸಾಧನೆ ಒಂದು ಬೆಂಚ್ ಮಾರ್ಕ್
ಅಮೆರಿಕಾದ ಸೆಲೆಬ್ರಿಟಿ ಸ್ವಿಮ್ಮರ್ ಮೈಕೆಲ್ ಪೆಲ್ಫ್ಸ್ ವಿವಿಧ ಒಲಿಂಪಿಕ್ ಕೂಟಗಳಲ್ಲಿ ಗೆದ್ದ ಪದಕಗಳ ಸಂಖ್ಯೆಯೇ 29! ಅದರಲ್ಲಿ ಚಿನ್ನದ ಪದಕಗಳ ಸಂಖ್ಯೆ 23! ಒಂದೇ ಒಲಿಂಪಿಕ್ ಕೂಟದಲ್ಲಿ ಆ ಚಿನ್ನದ ಮೀನು ಗೆದ್ದ ಪದಕಗಳ ಸಂಖ್ಯೆ ಎಂಟು ಅಂದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ! ಆದರೆ ಆತನೇ ಮಹಾನ್ ಎಂದು ನಾವು ಹೇಳುವಂತೆ ಇಲ್ಲ. ಯಾಕೆಂದರೆ ಆತನನ್ನು ಮೀರಿಸುವ ಇನ್ನೊಬ್ಬ ಸಾಧಕರು ಮುಂದೆ ಬರಬಹುದು.
ಇದನ್ನೂ ಓದಿ : Raja Marga Column : ತಲೆಗೆ ಹುಳ ಬಿಟ್ಕೊಬೇಡಿ, ಕ್ಲಿಯರ್ ಮೈಂಡ್ ಇದ್ರೆ ಮಾತ್ರ ಗೆಲ್ತೀರಿ!
ಭರತವಾಕ್ಯ
ಜಗತ್ತಿನ ಮಹಾ ಮಹಾ ಸಾಧಕರು ತಾವು ಸಾಧನೆ ಮಾಡುವುದು ಮಾತ್ರವಲ್ಲ ಮುಂದೆ ನೂರಾರು ಸಾಧಕರಿಗೆ ದಾರಿ ತೊಡಿಸುತ್ತಾರೆ. ಒಬ್ಬ ಕ್ರೀಡಾಪಟು ಇನ್ನೊಬ್ಬ ಕ್ರೀಡಾಪಟುವಿಗೆ ಬ್ಯಾಟನ್ ಕೊಟ್ಟು ಓಡಿಸಿದ ಹಾಗೆ ಇದು. ವಿಶ್ವ ಕೀರ್ತಿಯ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ 2023ರಲ್ಲಿ ನಿವೃತ್ತನಾದಾಗ ಯುವ ಆಟಗಾರ ಎಂಬಪ್ಪೆಯ ಹೆಗಲ ಮೇಲೆ ಕೈ ಇಟ್ಟು ತನ್ನ ಲೆಗೆಸಿಯನ್ನು ಹಸ್ತಾಂತರ ಮಾಡಿದ ಹಾಗೆ ಅದು! ಸಾಧಕರ ಸಾಧನೆಯ ದಾಹವು ಮುಗಿಯುವುದಿಲ್ಲ. ಹಾಗೆಯೇ ಲೆಜೆಂಡ್ಸ್ ಹುಟ್ಟುವುದು ನಿಲ್ಲುವುದಿಲ್ಲ!