Site icon Vistara News

Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

Raja Marga Column Pranjal pateel

Raja Marga Column : ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ‌ (UPSC Exam) ಪ್ರತೀ ವರ್ಷ 7ರಿಂದ 8 ಲಕ್ಷ ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಪರೀಕ್ಷೆಯಲ್ಲಿ ಪೂರ್ಣ ಕುರುಡುತನ ಇರುವ ಪ್ರಾಂಜಲ್‌ ಪಾಟೀಲ್‌ (Pranjal Patil) ಎಂಬ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು (IAS officer) ಅಂದರೆ ನಂಬೋದು ಹೇಗೆ? ಇಲ್ಲಿದೆ ಅವರ ಕತೆ,

Raja Marga Column: ಆಕೆ ಮಹಾರಾಷ್ಟ್ರದವರು

ಪ್ರಾಂಜಲ್‌ ಪಾಟೀಲ್ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

ತಂದೆ ಮತ್ತು ತಾಯಿ ಜತೆ ಪ್ರಾಂಜಲ್‌ ಪಾಟೀಲ್‌

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲ್ ನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾನೇ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

Raja Marga Column: ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಹೊರಟದ್ದು ದೆಹಲಿಗೆ. ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಅದೇ ಹೊತ್ತಿಗೆ ವಿದುಷಿ ಎಂಬ ಗೆಳತಿಯ ಮಾತಿನಿಂದ ಆಕೆ ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ.

ಆಗ ಆಕೆಗೆ JAWS (Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟ್‌ವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ದಿನಕ್ಕೆ 10-12 ಗಂಟೆ ಪುಸ್ತಕಗಳನ್ನು ಓದುತ್ತಾರೆ. ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸುತ್ತದೆ

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

ಸೀರೆ ಉಟ್ಟಾಗ ಹೀಗಿದ್ದಾರೆ ನೋಡಿ ಪ್ರಾಂಜಲ್‌ ಪಾಟೀಲ್

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರ‍್ಯಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರ‍್ಯಾಂಕಿಂಗ್ 124 ಬಂದಿತ್ತು!

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಆಕೆ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆ ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಆಕೆ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ನಿಜವಾದ ಕ್ರೆಡಿಟ್. ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಮುಂದೆ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

ಕೋಮಲ್‌ ಸಿಂಗ್‌ ಪಾಟೀಲ್‌ ಜತೆ ಮದುವೆಯಾದ ಕ್ಷಣ

ಯಾರ ಸಹಾಯ ಇಲ್ಲದೆ ತನ್ನ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತ ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION. ಹೌದು ತಾನೇ?

ಇದನ್ನೂ ಓದಿ : Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Exit mobile version