Raja Marga Column : 393 ವಿಮಾನ ಯಾನಿಗಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಬಲಿ ಕೊಟ್ಟ ಆಕೆಯ ಬದುಕೇ ಒಂದು ಅದ್ಭುತ ಯಶೋಗಾಥೆ. ಆಕೆ ಬದುಕಿದ್ದು ಕೇವಲ 23 ವರ್ಷ. ಆದರೆ, ಒಂದು ಇತಿಹಾಸವನ್ನೇ ಬರೆದಿಟ್ಟು ಹೋದಳು. ಆಕೆಯ ಹೆಸರು ನೀರಜಾ ಭಾನೊಟ್ (Neerja Bhanot). ವಿಮಾನಯಾನ ಸಹಚಾರಿಣಿ (Indian flight purser). ದಿಟ್ಟತನದಲ್ಲಿ ಆಕೆಗೆ ಆಕೆಯೇ ಸಮ. ಆಕೆ ಹುಟ್ಟಿದ್ದು ಚಂಡೀಗಢದಲ್ಲಿ. ಮುಂದೆ ಮುಂಬೈಯ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆದವರು. ಓದುತ್ತಿರುವಾಗಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ. ಅಪ್ರತಿಮ ಸೌಂದರ್ಯವತಿ ಆಗಿದ್ದರು ನೀರಜಾ. ಅಷ್ಟೇ ಧೈರ್ಯಶಾಲಿ.
Raja Marga Column : ಗಗನಸಖಿ ಆಗುವ ಕನಸು
1985ರಲ್ಲಿ ಗಗನಸಖಿ ಆಗುವ ಕನಸಿನೊಂದಿಗೆ ಆರಿಸಿಕೊಂಡದ್ದು ಪಾನ್ ಆಮ್ ವೈಮಾನಿಕ ಸಂಸ್ಥೆಯನ್ನು. ಈ ಮಧ್ಯೆ ಪ್ರೀತಿಸಿ ಮದುವೆಯಾದ ಹುಡುಗ ಡೈವೋರ್ಸ್ ಕೊಟ್ಟು ನಡೆದಾಗ ನೀರಜಾ ಕಣ್ಣೀರು ಸುರಿಸಲಿಲ್ಲ. ಅವರು ಮುಂದೆ ಗಗನಸಖಿ ಮತ್ತು ಮಾಡೆಲಿಂಗ್ ಲೋಕದಲ್ಲಿ ಮುಳುಗಿಬಿಟ್ಟರು. ಪ್ರಯಾಣಿಕರ ಸೇವೆಯಲ್ಲಿ ಸ್ವಂತದ ನೋವು ಮರೆತರು.
ಅಂತಹ ನೀರಜಾ ಬದುಕಿನಲ್ಲಿ ಆ ಕರಾಳ ದಿನ ಬಂದೇ ಬಿಟ್ಟಿತು!
1986 ಸೆಪ್ಟೆಂಬರ್ 5ರಂದು ಪಾನ್ ಆಮ್ 73 ವಿಮಾನವು ಮುಂಬೈನಿಂದ ಅಮೆರಿಕಕ್ಕೆ ಹೊರಟಿತು. 380 ಪ್ರಯಾಣಿಕರು, 13 ಸಿಬ್ಬಂದಿಗಳು ಇದ್ದ ವೈಭವೋಪೇತವಾದ ವಿಮಾನ ಅದು. ಮುಖ್ಯ ಗಗನಸಖಿ ಆಗಿದ್ದ ನೀರಜಾ ಪ್ರಯಾಣಿಕರ ಜೊತೆ ಮಾತನಾಡುತ್ತ, ನಗು ತುಳುಕಿಸುತ್ತ ಇದ್ದಾಗ ವಿಮಾನದಲ್ಲಿ ನಾಲ್ಕು ಸಂಶಯಾಸ್ಪದ ವ್ಯಕ್ತಿಗಳನ್ನು ಗಮನಿಸುತ್ತಾರೆ.
ಅವರು ANO ಭಯೋತ್ಪಾದಕ ಸಂಘಟನೆಗೆ (Terrorist Organization) ಸಂಬಂಧಪಟ್ಟವರು ಮತ್ತು ವಿಮಾನವನ್ನು ಹೈಜಾಕ್ (Flight Hijack) ಮಾಡಲು ಬಂದವರೆಂದು ಆಕೆಗೆ ಕೂಡಲೇ ಗೊತ್ತಾಯಿತು. ಶಸ್ತ್ರಧಾರಿಗಳಾಗಿದ್ದ ಅವರು ಅಮೇರಿಕನ್ ಪ್ರಯಾಣಿಕರನ್ನು ತನಗೆ ಒಪ್ಪಿಸುವಂತೆ ಬೆದರಿಕೆ ಹಾಕಿದರು.
ಒಬ್ಬ ಅಮೆರಿಕನ್ ಪ್ರಯಾಣಿಕನನ್ನು ಕೊಂದು ವಿಮಾನದಿಂದ ಎಸೆದುಬಿಟ್ಟರು. ಇಡೀ ವಿಮಾನದಲ್ಲಿ ಭಯ, ಹಾಹಾಕಾರ ತುಂಬಿ ಹೋಯಿತು. ಕಾಕ್‌ಪಿಟ್ ಒಳಗಿದ್ದ 3 ಪೈಲಟ್‌ಗಳು ಹತಾಶರಾಗಿ ಕುಳಿತುಬಿಟ್ಟರು. ಹೈಜಾಕರ್ಸ್ ವಿಮಾನವನ್ನು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣಕ್ಕೆ ಬಲವಂತವಾಗಿ ಎಳೆದುಕೊಂಡುಹೋದರು. ಅಮೆರಿಕಾದ ನಾಗರಿಕರನ್ನು ಒಪ್ಪಿಸುವಂತೆ ಬಲವಂತ ಮಾಡಿದರು. ಆ 17 ಗಂಟೆ ಉಸಿರುಗಟ್ಟುವ ಸಂದರ್ಭದಲ್ಲಿ ನೀರಜಾ ತೋರಿಸಿದ ತಾಳ್ಮೆ ಮತ್ತು ಪ್ರಸಂಗಾವಧಾನತೆಗಳು ಅದ್ಭುತವಾಗಿತ್ತು. ಹೈಜಾಕರ್ಸ್ ಆಕೆಯನ್ನು ಶೌಚಾಲಯಕ್ಕೆ ಹೋಗಲು ಕೂಡ ಬಿಡಲಿಲ್ಲ. ಪ್ರಯಾಣಿಕರ ಅಳು, ಸಿಟ್ಟು, ಆಕ್ರಂದನ ಮುಗಿಲು ಮುಟ್ಟಿತ್ತು.
ಕೊನೆಗೆ ಆಕ್ರೋಶಗೊಂಡ ಭಯೋತ್ಪಾದಕರು ವಿಮಾನದ ಒಳಗೆ ಗುಂಡಿನ ಮಳೆ ಸುರಿಸಿದರು. ಆಗ ಆಕೆಯು ಜನರಲ್ಲಿ ಧೈರ್ಯ ತುಂಬಿಸುತ್ತ ತುರ್ತು ನಿರ್ಗಮನ ದ್ವಾರವನ್ನು ತೆರೆದು ಎಲ್ಲ ಪ್ರಯಾಣಿಕರು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟರು. ಸಿಟ್ಟಿನಿಂದ ಬೆಂಕಿ ಆದ ಕ್ರೂರಿಗಳು ಆಕೆಯ ಜಡೆ ಎಳೆದು, ಹಿಂಸಿಸಿ ಗುಂಡು ಸಿಡಿಸಿ ಆಕೆಯ ಪ್ರಾಣ ತೆಗೆದೇಬಿಟ್ಟರು. 393 ಜನರ ಪ್ರಾಣ ಉಳಿಸಿದ ಧನ್ಯತೆಯಿಂದ ನೀರಜಾ ಅಂದು ಅಸುನೀಗಿದರು. ಆಕೆಯ ಕಣ್ಣೀರ ಹನಿಯೊಂದು ಗಲ್ಲದ ಮೇಲಿಂದ ಇಳಿದು ಬಂದು ಆಕೆಯ ಗಲ್ಲವನ್ನು ತೋಯಿಸಿತ್ತು.
Raja Marga Column : ದೇಶವು ಆಕೆಯನ್ನು ಮರೆಯಲಿಲ್ಲ
ಮುಂದೆ ಆಕೆಯ ಧೈರ್ಯ ಮತ್ತು ಸಾಹಸಕ್ಕೆ ಪ್ರತಿಯಾಗಿ ಮಹೋನ್ನತವಾದ ಅಶೋಕ ಚಕ್ರ ಪ್ರಶಸ್ತಿಯನ್ನು ಆಕೆಗೆ ಭಾರತ ಸರಕಾರವು ಮರಣೋತ್ತರವಾಗಿ ನೀಡಿ ಗೌರವಿಸಿತು. ಆ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವಯಸ್ಸಿನವರು ಮತ್ತು ಮೊದಲ ಮಹಿಳೆ ನೀರಜಾ ಭಾನೋಟ್. ಆಕೆಯ ಹೆಸರಿನಲ್ಲಿ ಭಾರತ ಸರಕಾರ ಅಂಚೆ ಚೀಟಿ ಹೊರತಂದಿತು.
ಇದನ್ನೂ ಓದಿ : Raja Marga Column : ಆ ಮುಸ್ಲಿಂ ಸೋದರರು 20000 ಕಪ್ಪುಹದ್ದುಗಳಿಗೆ ಪುನರ್ಜನ್ಮ ನೀಡಿದ್ದಾರೆ!
2016ರಲ್ಲಿ ಅವರ ಹೆಸರಿನಲ್ಲಿ ‘ನೀರಜಾ ‘ಎಂಬ ಹಿಂದೀ ಸಿನೆಮಾ ನಿರ್ಮಾಣವಾಗಿ ಬಹು ಜನಪ್ರಿಯವಾಯಿತು. ನೀರಜಾ ಭಾನೋಟ್ ಅಂದು ತೋರಿದ ಧೈರ್ಯ ಮತ್ತು ಸಾಹಸಗಳು ನಮಗೆಲ್ಲರಿಗೂ ಖಂಡಿತವಾಗಿ ಸ್ಫೂರ್ತಿ ನೀಡಬಲ್ಲದು.
Tribute to #Neerja_Bhanot on her martyrdom day,who saved 360 lives frm hijackers of Pan AM flight.India honoured her with Ashok Chakra . #Neeraja pic.twitter.com/JtqgRudpmU
— Harshabardhan Kumar (@HarshabardhanKu) September 5, 2018