ಕನ್ನಡ ಸಾಹಿತ್ಯದ ಆಲದ ಮರ
ಶಿವರಾಮ ಕಾರಂತರಿಗೆ ನುಡಿನಮನ- ಭಾಗ 2
ಅಕ್ಟೋಬರ್ 10ರ ಲೇಖನದಲ್ಲಿ ಕನ್ನಡದ ಖ್ಯಾತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ (Kota Shivarama Karanta) ಹುಟ್ಟುಹಬ್ಬ. ನಿನ್ನೆ ಅವರ ಸೃಜನಶೀಲ ಕೃತಿಗಳ ಬಗ್ಗೆ ಬರೆದಿದ್ದೆ. ಇಂದು ಅವರ ಪರಿಸರ ಸಂಬಂಧಿ ಹೋರಾಟಗಳ (Fight for Environment) ಬಗ್ಗೆ ನಾನು ವಿಸ್ತಾರವಾಗಿ ಬರೆಯಬೇಕು. ಅದು ಕೂಡ ಒಂದು ಸುದೀರ್ಘವಾದ ಅಧ್ಯಾಯವೆ ಆಗಿದೆ! ಕಾರಂತರು ‘ನಿಸರ್ಗವೇ ದೇವರು’ ಎಂದು ಹೇಳಿದವರು. ಅದರಂತೆ ನಡೆದವರು. ಪರಿಸರ ಸಂಬಂಧಿತ 15 ಶ್ರೇಷ್ಠ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರ ಸಾವಿರಾರು ಬಿಡಿ ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ (Raja marga Column) ಪ್ರಕಟವಾಗಿವೆ.
ಪದ್ಮಭೂಷಣ ಪ್ರಶಸ್ತಿ ಸರ್ಕಾರಕ್ಕೆ ವಾಪಸ್!
1975ರಲ್ಲಿ ಭಾರತ ಸರಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಯಾವ ಮುಲಾಜಿಗೂ ಒಳಗಾಗದೆ ಸರಕಾರವು ತನಗೆ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು (Karanta returned Padmabhushana Award) ಸರಕಾರಕ್ಕೆ ಹಿಂದಿರುಗಿಸಿದವರು ಅವರು! 1966ರಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಕಾರಂತರು ಖಾರವಾಗಿ ಭಾಷಣ ಮಾಡಲು ಆರಂಭ ಮಾಡಿದ್ದು ಬೆಳೆಗಳ ಮೇಲೆ ವಿಷ ಪ್ರಯೋಗವನ್ನು ಮಾಡುತ್ತಿದ್ದ ನೂರಾರು ಕಂಪೆನಿಗಳ ವಿರುದ್ಧ! ಕಾರಂತರು ಯಾವುದೇ ಪ್ರತಿಭಟನೆ ಕೈಗೆ ಎತ್ತಿಕೊಂಡರೂ ಅಂದರೆ ಅದನ್ನು ಗುರಿ ಮುಟ್ಟಿಸದೆ ಮಲಗುವವವರೆ ಅಲ್ಲ!
ಬೆಳ್ತಂಗಡಿಯ ಮಂಗನ ಕಾಯಿಲೆ ಬಗ್ಗೆ ಕಾರಂತರ ಜನ ಜಾಗೃತಿ!
1982ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿ ನೂರಕ್ಕಿಂತ ಹೆಚ್ಚು ಜನ ಪ್ರಾಣವನ್ನು ಕಳೆದುಕೊಂಡಿದ್ದರು. ಆಗ ನಮ್ಮ ಕಾರಂತರು ಸರಕಾರಕ್ಕಿಂತ ಮೊದಲು ಎಚ್ಚೆತ್ತುಕೊಂಡು ಬೆಳ್ತಂಗಡಿಗೆ ಧಾವಿಸಿದರು. ಆ ಕಾಯಿಲೆಯ ಬಗ್ಗೆ ಆಳವಾದ ಸಂಶೋಧನೆ ಮಾಡಿ ಒಂದು ಪುಸ್ತಕವನ್ನು ಬರೆದರು. ಸ್ವಂತ ಖರ್ಚಿನಿಂದ ಕಾಯಿಲೆಯ ಬಗ್ಗೆ 10,000 ಪುಸ್ತಕಗಳನ್ನು ಅಚ್ಚು ಹಾಕಿ ಉಚಿತವಾಗಿ ಹಂಚಿದವರು ಕಾರಂತರು. ಕಾಯಿಲೆಯು ನಿಯಂತ್ರಣಕ್ಕೆ ಬಂದ ನಂತರವೇ ಅವರು ಬೆಳ್ತಂಗಡಿಯಿಂದ ಹಿಂದೆ ಬಂದರು!
ಅದೇ ಹೊತ್ತಿಗೆ ಬೃಹತ್ ಆಣೆಕಟ್ಟುಗಳಿಂದ ಪರಿಸರ ನಾಶ ಆಗುತ್ತಾ ಇದೆ ಎಂದು ಘರ್ಜನೆ ಅವರು ಮಾಡಿದ್ದರು. ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣವಾದಾಗ ಜಲಾವೃತ ಆದ ಹತ್ತಾರು ಗ್ರಾಮಗಳ ಸಂತ್ರಸ್ತರ ಪರವಾಗಿ ಅವರ ಹೋರಾಟವು ಉಗ್ರರೂಪವನ್ನು ತಾಳಿತ್ತು! ಅದೇ ರೀತಿ ಸರಕಾರವು ಗೇರುಸೊಪ್ಪೆಯಲ್ಲಿ ಸ್ಥಾಪನೆ ಮಾಡಿದ ಶರಾವತಿ ಟೇಲ್ ರೆಸ್ ಎಂಬ ಭಾರಿ ಪರಿಸರ ಮಾಲಿನ್ಯದ ಕಂಪೆನಿಯ ವಿರುದ್ಧ ಕಾರಂತರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು!
ಕೈಗಾ ವಿರುದ್ಧ ಕಾರಂತರ ರಣಕಹಳೆ!
ಸರಕಾರವು 1987ರಲ್ಲಿ ಉತ್ತರ ಕನ್ನಡದ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರದ ನಿರ್ಮಾಣಕ್ಕೆ ಅನುವಾದಾಗ ನಮ್ಮ ಕಾರಂತರು ದೂರ್ವಾಸ ಮುನಿಯ ರೂಪವನ್ನು ತಾಳಿದರು! ರಷ್ಯಾದಲ್ಲಿ ಅದೇ ಹೊತ್ತಿಗೆ ಚರ್ನೋಬಿಲ್ ಎಂಬಲ್ಲಿ ಅಣುವಿದ್ಯುತ್ ಸ್ಥಾವರವು ಸೋರಿಕೆಯಾಗಿ ವ್ಯಾಪಕವಾದ ಪ್ರಾಣಹಾನಿ ಮಾಡಿತ್ತು!
ಅದನ್ನು ಆಧಾರವಾಗಿ ಇಟ್ಟುಕೊಂಡು ಕಾರಂತರು ಈ ಬಾರಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಉತ್ತರಕನ್ನಡ ಜಿಲ್ಲೆಯಾದ್ಯಂತ ಅವರು ಪ್ರವಾಸ ಮಾಡಿ ಜನಜಾಗೃತಿ ಮಾಡಿದರು. ಈ ಹೋರಾಟಕ್ಕೆ ಬೆಂಬಲವಾಗಿ ಕಾರಂತರು ಕೆನರಾ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ 1989ರಲ್ಲಿ ಚುನಾವಣೆಗೆ ಸ್ಪರ್ಧೆಯನ್ನು ಕೂಡ ಮಾಡಿದ್ದರು! ಸೋತರೂ ಕಾರಂತರಿಗೆ 60,000 ಮತಗಳು ಬಿದ್ದಿದ್ದವು!
‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಕಾರಂತರೇ ಮುಂದೆ!
1987-88ರ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ‘ಪಶ್ಚಿಮ ಘಟ್ಟವನ್ನು ಉಳಿಸಿ’ ಅಭಿಯಾನವೂ ಕಾರಂತರ ಸ್ಫೂರ್ತಿಯಿಂದಲೆ ಮುನ್ನಡೆಯಿತು. ಕೇರಳದಿಂದ ಗೋವಾದವರೆಗೆ ನಡೆದ ಕಾಲ್ನಡಿಗೆಯ ಜಾಥಾವೂ ಭಾರೀ ಜನಬೆಂಬಲವನ್ನು ಪಡೆಯಿತು. ಕಾರಂತರು ಹಸಿರು ಧ್ವಜ ಹಿಡಿದು ಜಾಥಾದ ಮುಂದೆ ನಡೆದ ಹೆಜ್ಜೆಗಳೇ ಸರಕಾರವನ್ನು ನಡುಗಿಸಿದ್ದವು! ಅದೇ ಹೊತ್ತಿಗೆ ಗುಜರಾತನಲ್ಲಿ ನಡೆದ ‘ನರ್ಮದಾ ಬಚಾವೋ ‘ ಆಂದೋಲನಕ್ಕೆ ಕೂಡ ಕಾರಂತರು ಹೋಗಿ ಭಾಗವಹಿಸಿದ್ದರು.
ನಂದಿಕೂರು ಉಷ್ಣವಿದ್ಯುತ್ ಸ್ಥಾವರದ ವಿರುದ್ಧ ಗುಡುಗು!
ರಾಜ್ಯ ಸರಕಾರವು ಖಾಸಗಿಯ ಕಂಪೆನಿ ಒಂದಕ್ಕೆ ಅನುಮತಿ ಕೊಟ್ಟು ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರದ ನಿರ್ಮಾಣಕ್ಕೆ ಹೊರಟಾಗ ಜನರನ್ನು ಎಚ್ಚರಿಸುವ ಕೆಲಸ ಆರಂಭ ಮಾಡಿದ್ದೆ ಕಾರಂತರು! ಆಗ ಅವರ ಉರಿ ಚೆಂಡಿನ ಭಾಷಣಗಳನ್ನು ನಾನು ಕೇಳಿ ದಂಗಾಗಿದ್ದೆ! ಮಾತಿಗೆ ನಿಂತರೆ ಅವರು ಕೊಡುತ್ತಿದ್ದ ಅಂಕಿ ಅಂಶಗಳು, ವೈಜ್ಞಾನಿಕ ಮಾಹಿತಿಗಳು ಅತ್ಯಂತ ನಿಖರವಾಗಿ ಇರುತ್ತಿದ್ದವು. ಗಮನಿಸಿ, ಕಾರಂತರು ವಿಜ್ಞಾನದ ವಿದ್ಯಾರ್ಥಿ ಆಗಿರಲಿಲ್ಲ!
ಆದರೆ ಅವರ ಕನ್ವಿನ್ಸಿಂಗ್ ಪವರ್ ಅದ್ಭುತವೇ ಆಗಿತ್ತು! ಆಗ ಪಡುಬಿದ್ರೆ ಪೇಟೆಯಲ್ಲಿ ಟೆಂಟ್ ಹಾಕಿ ನಮ್ಮ ಕಾರಂತರು ಹಲವಾರು ದಿನ ಧರಣಿ ಕೂತ ದೃಶ್ಯವು ಈಗಲೂ ನನ್ನ ಕಣ್ಣ ಮುಂದೆ ಇದೆ! ಆ ಕಂಪನಿ ಮತ್ತು ರಾಜ್ಯ ಸರಕಾರದ ವಿರುದ್ಧ ಕಾರಂತರು ಮತ್ತೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು!
ಅದೇ ರೀತಿಯಲ್ಲಿ ಹರಿಹರದ ಪಾಲಿ ಫೈಬರ್ ಎಂಬ ಪರಿಸರ ಮಾಲಿನ್ಯದ ಕಂಪೆನಿಯ ವಿರುದ್ಧ, ಕಾರವಾರದ ಸೀ ಬರ್ಡ್ ನೌಕಾನೆಲೆಯ ವಿರುದ್ದ ಶಿವರಾಮ ಕಾರಂತರು ನಡೆಸಿದ ಪರಿಸರ ಹೋರಾಟಗಳು ಬಹಳ ಪ್ರಸಿದ್ಧವಾಗಿವೆ!
ನಮ್ಮ ಶಿವರಾಮ ಕಾರಂತರು ಆಗ ಕೈಗೆ ಎತ್ತಿಕೊಂಡ ಅಷ್ಟೂ ಪರಿಸರ ಹೋರಾಟಗಳಲ್ಲಿ 90% ಯಶಸ್ವೀ ಆಗಿವೆ! ಈ ಎಲ್ಲ ಹೋರಾಟಗಳಲ್ಲಿ ಕಾರಂತರು ಮುಂದೆ ನಿಂತು ಹೋರಾಟ ಮಾಡಿದವರು. ಎಲ್ಲ ಕಡೆಗಳಲ್ಲಿಯೂ ಜನ ಜಾಗೃತಿ ಮತ್ತು ನ್ಯಾಯಾಂಗ ಹೋರಾಟ ಇವೆರಡು ನಮ್ಮ ಕಾರಂತರು ಆಯ್ದುಕೊಂಡ ಪ್ರಬಲ ಅಸ್ತ್ರಗಳೆ ಆಗಿದ್ದವು!
ಇದನ್ನೂ ಓದಿ: Raja Marga Column: ಬೆಲೆ ಕಟ್ಟಲಾಗದ ಬೆಟ್ಟದ ಜೀವ; ಡಾ. ಕಾರಂತರ ಜನ್ಮ ದಿನ ಇಂದು
ಇತ್ತೀಚೆಗೆ ರಾಜ್ಯದಲ್ಲಿ ತೀವ್ರವಾಗಿ ಸೋಲುತ್ತಿರುವ ಪರಿಸರ ಸಂಬಂಧಿತ ಹೋರಾಟಗಳನ್ನು ನೋಡಿದಾಗ ಕಾರಂತರು ಇಂದಿಗೂ ನಮ್ಮ ಜೊತೆ ಇರಬೇಕಿತ್ತು ಎಂದು ನನಗೆ ಇಂದು ಅನಿಸುತ್ತಿದೆ. ಇಡೀ ಭಾರತದಲ್ಲಿ ಮಹಾನ್ ಸಾಹಿತಿ ಒಬ್ಬರು ಇಷ್ಟೊಂದು ಪರಿಸರ ಹೋರಾಟಗಳನ್ನು ಮಾಡಿದ ಉದಾಹರಣೆ ನಮಗೆ ಸಿಗುವುದಿಲ್ಲ!
(ನಾಳೆ ಮುಂದುವರಿಯುತ್ತದೆ)