Site icon Vistara News

Raja Marga Column : ಮರ್ಯಾದಾ ಪುರುಷೋತ್ತಮ ಶ್ರೀರಾಮ; ಸಹಸ್ರಮಾನ ವ್ಯಾಪಿಸಿದ ಮೇರು ವ್ಯಕ್ತಿತ್ವ

Shrirama Chandra Ayodhye

ಭಾರತದ ನರನಾಡಿಗಳಲ್ಲಿ ಸಾವಿರ ಸಾವಿರ ವರ್ಷಗಳಿಂದ ವ್ಯಾಪಿಸಿರುವ ಒಂದು ವ್ಯಕ್ತಿತ್ವ ಇದ್ದರೆ ಅದು ಪ್ರಭು ಶ್ರೀರಾಮ (Shri Rama). ರಾಜಾರಾಮನಾಗಿ ರಾಮರಾಜ್ಯದ (Rama Rajya) ಕಲ್ಪನೆಯನ್ನು ಸಾಕಾರಗೊಳಿಸಿದ, ಸೀತಾರಾಮನಾಗಿ ತನ್ನ ಕರ್ತವ್ಯಪರತೆ ಮೆರೆದ, ಕೌಸಲ್ಯ ಸುಪ್ರಜಾರಾಮನಾಗಿ ಆದರ್ಶಗಳ ಬದುಕನ್ನು ಬದುಕಿದ ರಾಮನು ತಾನು ದೇವರೆಂದು ಎಲ್ಲೂ ಹೇಳಿ ಕೊಂಡದ್ದು ಇಲ್ಲ. ಜಾತಿ ಮತ ಪಂಥಗಳ ಸೀಮೆಯನ್ನು ಮೀರಿ ನಿಂತ ಅನ್ಯಾದೃಶ ವ್ಯಕ್ತಿತ್ವ ಅದು ಶ್ರೀರಾಮಚಂದ್ರ (Raja Marga Column).

ರಾಮನ ಹಾಗೆ ಬದುಕುವುದು ಕಷ್ಟ, ಕೃಷ್ಣನ ಹಾಗೆ ಯೋಚನೆ ಮಾಡುವುದು ಕಷ್ಟ ಎಂಬ ಮಾತಿದೆ. ಶ್ರೀಕೃಷ್ಣ (Shri Krishna) ಮೈಂಡ್ ಗೇಮ್‌ನಲ್ಲಿ ಚತುರನಾದರೆ ರಾಮನು ಮೌಲ್ಯಗಳನ್ನೇ ಬದುಕಿ ತೋರಿದವನು. ಕೃಷ್ಣನ ಬದುಕಿನಲ್ಲಿ ಉಪದೇಶಗಳು ಹೆಚ್ಚು. ರಾಮನ ಬದುಕಿನಲ್ಲಿ ಸಂದೇಶಗಳು ಇವೆ. ರಾಮನು ಇನ್ನೊಬ್ಬರಿಗೆ ಹೇಳಿದ್ದಕ್ಕಿಂತ ತಾನು ಬದುಕಿ ತೋರಿದವನು. ‘My life itself is a message’ ಎಂಬಂತೆ!

ರಾಮರಾಜ್ಯ ಅಂದರೆ ಕೊರತೆ ಇಲ್ಲದ ದೇವರ ರಾಜ್ಯ

ಶ್ರೀರಾಮ ಕಟ್ಟಿದ ರಾಮರಾಜ್ಯದಲ್ಲಿ ಯಾರಿಗೂ, ಯಾವುದಕ್ಕೂ ಕೊರತೆಯೇ ಇರಲಿಲ್ಲ. ಎಲ್ಲರಿಗೂ ಎಟುಕುವ ನ್ಯಾಯದಾನ, ನಿರಂತರ ಸಮೃದ್ಧಿ, ಧ್ವನಿ ಇರುವ ಪ್ರಜಾಪ್ರಭುತ್ವ, ಸಮಾನತೆ ಮತ್ತು ಸಾಮರಸ್ಯಗಳ ಆವಾಸ… ಹೀಗೆ ಎಲ್ಲರಿಗೂ ಮಾದರಿ ರಾಜ್ಯ ಆಗಿತ್ತು. ಒಬ್ಬ ಅಗಸನ ಮಾತು ಕೂಡ ಅಲ್ಲಿ ಧ್ವನಿ ಪಡೆದಿತ್ತು. ಅರಸ ಮತ್ತು ಪ್ರಜೆಗಳ ನೇರವಾದ ಸಂವಾದ ಸಾಧ್ಯ ಇತ್ತು. ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಮಧ್ಯರಾತ್ರಿ ಕೂಡ ಎದ್ದು ಬಂದು ಮಹಾರಾಜನ ಅರಮನೆಯ ಬಾಗಿಲು ತಟ್ಟಬಹುದಿತ್ತು ಮತ್ತು ನ್ಯಾಯವನ್ನು ಪಡೆಯಬಹುದಿತ್ತು. ರೈತ, ಕಾರ್ಮಿಕ, ಶ್ರಮಿಕ ಎಲ್ಲರಿಗೂ ಸಮೃದ್ಧಿಯ ಲಾಭ ದೊರೆಯುತ್ತಿತ್ತು. ಪ್ರಜೆಗಳಲ್ಲಿ ಪ್ರಾಮಾಣಿಕತೆ ನೆಲೆಸಿತ್ತು. ಜನರು ಸ್ವಂತ ಇಚ್ಛೆಯಿಂದ ತೆರಿಗೆ ಕಟ್ಟುತ್ತಿದ್ದರು. ಸಂಪತ್ತಿನ ಸಮಾನವಾದ ಹಂಚಿಕೆ ಅಯೋಧ್ಯೆಯಲ್ಲಿ ಆಗಿತ್ತು. ಯಾರಿಗೂ ಯಾವುದಕ್ಕೂ ಕೊರತೆ ಇರಲಿಲ್ಲ.

ರಾಮದೇವರ ವಿಶ್ವ ಮಾನವತ್ವ

ವಾಲ್ಮೀಕಿ ವಿರಚಿತ ರಾಮಾಯಣದ ಪ್ರತೀ ಸನ್ನಿವೇಶ, ಪ್ರತೀ ಪಾತ್ರವೂ ಆದರ್ಶವೇ ಹೌದು! ಕೈಕೇಯಿಗೆ ದಶರಥ ಕೊಟ್ಟ ವಚನವನ್ನು ಪೂರೈಸುವ ದರ್ದು ರಾಮನಿಗೆ ಇರಲಿಲ್ಲ. ದಶರಥ ಕಾಡಿಗೆ ಹೋಗಲು ರಾಮನಿಗೆ ಹೇಳಿದ್ದೂ ಇಲ್ಲ. ಆದರೆ ತಾನಾಗಿ ಪಿತೃವಾಕ್ಯದ ಪರಿಪಾಲನೆಯ ವೃತವನ್ನು ಹೆಗಲಿಗೆ ಏರಿಸಿಕೊಂಡು ಕಾಡಿಗೆ ಹೊರಟವನು ರಾಮ. ಕಾಡಿಗೆ ಹೋಗುವಾಗ ರಾಮನನ್ನು ನದಿ ದಾಟಿಸಿದ ಗುಹ ಒಬ್ಬ ಅಂಬಿಗ. ಆತ ಹಿಂದುಳಿದ ಜಾತಿಗೆ ಸೇರಿದವನು. ಎಂಜಲು ಮಾಡಿ ಕಚ್ಚಿ ಹಣ್ಣು ಕೊಟ್ಟವಳು ಬುಡಕಟ್ಟು ಜನಾಂಗದ ಶಬರಿ. ಅದೇ ರಾಮಾಯಣದಲ್ಲಿ ಬರುವ ಶ್ರವಣ ಕುಮಾರ ತನ್ನ ಹೆತ್ತವರನ್ನು ಕಾವಡಿಯಲ್ಲಿ ಹೊತ್ತು ತೀರ್ಥ ಯಾತ್ರೆ ಮಾಡಿದವನು. ರಾಮಾಯಣವನ್ನು ಬರೆದ ವಾಲ್ಮೀಕಿ ಸ್ವತಃ ಬುಡಕಟ್ಟು ಜನಾಂಗಕ್ಕೆ ಸೇರಿದ ಬೇಡ ಆಗಿದ್ದವನು. ಒಬ್ಬ ಸಾಮಾನ್ಯ ಅಗಸನ ಮಾತು ಕೂಡ ಅರಸನಿಗೆ ಶಿರೋಧಾರ್ಯ ಆಗಿತ್ತು. ರಾವಣನನ್ನು ಮಣಿಸಲು ರಾಮ ಬಳಸಿಕೊಂಡದ್ದು ವಾನರ ಸೇನೆಯನ್ನು. ಒಂದು ಅಳಿಲಿನಲ್ಲಿ ಕೂಡ ಪ್ರೀತಿಯನ್ನು ಕಂಡವನು ರಾಮ. ಆದ್ದರಿಂದ ಇಡೀ ರಾಮಾಯಣವು ಜಾತ್ಯತೀತ, ಮತಾತೀತ ಮತ್ತು ಭಾಷಾತೀತ ಕೃತಿ. ಶ್ರೀರಾಮಚಂದ್ರ ದೇವರು ಎಲ್ಲವನ್ನೂ ಮೀರಿನಿಂತ ವಿಶ್ವ ಮಾನವ ಹೌದು.

ರಾಷ್ಟ್ರಾಭಿಮಾನದ ಸಂಕೇತವೇ ಶ್ರೀರಾಮ

ಲಂಕೆಯಲ್ಲಿ ರಾವಣನ ಹತ್ಯೆ ಆದ ನಂತರ ರಾಮನು ಸ್ವತಃ ಮುಂದೆ ನಿಂತು ರಾವಣನ ಅಂತಿಮ ಸಂಸ್ಕಾರ ಪೂರ್ತಿ ಮಾಡುತ್ತಾನೆ. ಆಗ ಅವನೇ ಅಯೋಧ್ಯೆಯ ಅರಸನಾಗಿ ಆಳ್ವಿಕೆ ಮಾಡಲು ಎಲ್ಲರೂ ಒತ್ತಾಯ ಮಾಡುತ್ತಾರೆ. ಸ್ವತಃ ಲಕ್ಷ್ಮಣ ‘ಈ ಲಂಕೆಯು ಶ್ರೀಮಂತವಾಗಿದೆ. ಸ್ವರ್ಣಮಯ ಆಗಿದೆ. ನಾವು ಇಲ್ಲಿಯೇ ಇದ್ದು ಬಿಡೋಣ. ಅಯೋಧ್ಯೆಯನ್ನು ಭರತನೆ ಆಳಿಕೊಂಡು ಇರಲಿ ‘ ಎಂದು ಹೇಳಿದಾಗ ಶ್ರೀರಾಮ ಹೇಳಿದ್ದು – ಇಲ್ಲ, ಲಂಕೆ ಎಷ್ಟು ಶ್ರೀಮಂತವಾಗಿ ಇದ್ದರೂ ಜನನೀ ಜನ್ಮಭೂಮಿ ಎರಡೂ ಸ್ವರ್ಗಕ್ಕೆ ಸಮಾನ. ನಾನು ಅಯೋಧ್ಯೆಗೆ ಹೋಗಲೇ ಬೇಕು ಎಂದು! ನಂತರ ಆತ ವಿಭೀಷಣನಿಗೆ ಪಟ್ಟಕಟ್ಟಿ ಅಯೋಧ್ಯೆಗೆ ಹೊರಡುತ್ತಾನೆ.

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲವೇ ಅಲ್ಲ. ಅವನ ಒಳಗಿನ ರಾವಣತ್ವವನ್ನು. ಮರಣದ ನಂತರ ಯಾವ ದ್ವೇಷವೂ ಇಲ್ಲ’ ಎಂದು ರಾಮ ಹೇಳಿದ್ದು ಎಂತಹ ಅದ್ಭುತವಾದ ಮೌಲ್ಯ.

ಭಾರತದಲ್ಲಿ ರಾಮನ ಪ್ರಭಾವ

ಇಡೀ ಭಾರತವನ್ನು ರಾಮದೇವರಷ್ಟು ವ್ಯಾಪಿಸಿದ ಬೇರೆ ದೇವರೇ ಇಲ್ಲ! ತುಲಸಿದಾಸರಿಂದ ಸೂರದಾಸರವರೆಗೆ, ಕಬೀರ್ ದಾಸರಿಂದ ತುಕಾರಾಮರ ತನಕ, ಅಸ್ಸಾಂನ ಶಂಕರದೇವರಿಂದ ತಮಿಳುನಾಡಿನ ಕಂಬರತನಕ, ಕನ್ನಡದ ಕುವೆಂಪು ಅವರಿಂದ ಆರಂಭಿಸಿ ಕೇರಳದಲ್ಲಿ ಜನಿಸಿದ ಶಂಕರಾಚಾರ್ಯರ ತನಕ, ದ್ವೈತ, ಅದ್ವೈತ ಎಲ್ಲವನ್ನೂ ಒಳಗೊಂಡ ಒಂದು ಶಿಖರ ವ್ಯಕ್ತಿತ್ವ ಇದ್ದರೆ ಅದು ಶ್ರೀರಾಮಚಂದ್ರ.

ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬದಲ್ಲಿ 2500 ಬಾರಿ ರಾಮನ ಹೆಸರು ಉಲ್ಲೇಖವಾಗಿದೆ. ಹಲವು ಪರ್ಷಿಯನ್ ಮತ್ತು ಉರ್ದು ಕವಿಗಳು ರಾಮನನ್ನು ಆದರ್ಶ ಆಡಳಿತಗಾರ ಎಂದು ಉಲ್ಲೇಖ ಮಾಡಿದ್ದಾರೆ. ಖ್ಯಾತ ಪಾರ್ಸಿ ಮತ್ತು ಉರ್ದು ಕವಿಯಾದ ಅಲ್ಲಾಮಾ ಇಕ್ಬಾಲ್ ನಮ್ಮ ರಾಮನನ್ನು ‘ಇಮಾಮ್ ಎ ಹಿಂದ್’ (ಹಿಂದೂಸ್ಥಾನದ ಧಾರ್ಮಿಕ ನಾಯಕ) ಎಂದು ಕರೆದಿದ್ದಾನೆ. ಆತನ ಕವಿತೆಗಳಲ್ಲಿ ರಾಮನ ವರ್ಣನೆ ಹೀಗಿದೆ.

ಇದನ್ನೂ ಓದಿ: Raja Marga Column : ನಿಮಗೂ ನೆನಪಿದೆಯಾ? ರಾಮಾಯಣ ಧಾರಾವಾಹಿಯ ರೋಮಾಂಚನ!

ಆದರಿಲ್ಲಿ ಸಾಟಿ ಯಾರು ಆ ರಾಮನಿಗೆ?

ರಾಮ ಭಾರತದ ಪರಮ ಆತ್ಮ.
ಆತನ ತೇಜಸ್ಸು, ಜಗದಾತ್ಮದ ಓಜಸ್ಸು.
ಶೂರರಲ್ಲಿ ಶೂರ, ಧೀರ.
ರಾಮ ಬಡಬಗ್ಗರಿಗೆ ತೋರಿದ ಕಾಳಜಿ ಅನನ್ಯ.
ಪ್ರೀತಿ ವಾತ್ಸಲ್ಯದ ಪ್ರತಿ ಮೂರ್ತಿ.

ಭರತ ವಾಕ್ಯ

ಅಂತಹ ರಾಮದೇವರ ಅಯೋಧ್ಯೆಯ ಮಂದಿರದ ಉದ್ಘಾಟನೆಗೆ ಇಡೀ ಭಾರತವೇ ಕಾದು ನಿಂತಿದೆ. ಇದು ಸಮಸ್ತ ಹಿಂದೂಗಳಿಗೆ ಜೀವಮಾನದ ಸುವರ್ಣ ಕ್ಷಣವೇ ಹೌದು.

Exit mobile version