ಕನ್ನಡದ ಶ್ರೇಷ್ಠ ಕಾದಂಬರಿಕಾರ ಎಸ್ಎಲ್ ಭೈರಪ್ಪ (S.L. Bhyrappa) ಅವರು ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಬರೆದದ್ದು ಹತ್ತಿರ ಹತ್ತಿರ 25 ಕಾದಂಬರಿಗಳನ್ನು (More than 25 Best Novels). ಆದರೆ ಆ ಎಲ್ಲ ಕಾದಂಬರಿಗಳು ಕನ್ನಡದ ಗಡಿಗಳನ್ನು ದಾಟಿ ಇಡೀ ಭಾರತದ ಭಾಷೆಗಳನ್ನು ಮತ್ತು ವಿದೇಶದ ಭಾಷೆಗಳನ್ನು ತಲುಪಿದ್ದು ಸಣ್ಣ ಸಾಧನೆ ಅಲ್ಲ. ಎಸ್.ಎಲ್. ಭೈರಪ್ಪ ಅವರು ಇಂದು ಭಾರತದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರು (Indian novelist and philosopher) ಎಂದು ಸಾರಸ್ವತ ಲೋಕ ಒಪ್ಪಿಕೊಂಡಿದೆ. ಭೈರಪ್ಪ ಅವರಿಗೆ ಈಗ 92 ವರ್ಷ ಅಂದರೆ ನಂಬೋದು ಕಷ್ಟ ಆಗ್ತದೆ. ಈಗಲೂ ಕ್ರಿಯಾಶೀಲ ಆಗಿರುವ ಅವರು ಸಾಹಿತ್ಯದ ವೇದಿಕೆಗಳಲ್ಲಿ, ಸಂವಾದಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ (Raja Marga Column).
ಭೈರಪ್ಪ ಅವರ ಜನಪ್ರಿಯ ಆದ ಕಾದಂಬರಿಗಳು
1950ರ ದಶಕದಲ್ಲಿ ಬರೆಯಲು ಆರಂಭ ಮಾಡಿದ ಭೈರಪ್ಪ ಮುಂದೆ ವಂಶ ವೃಕ್ಷ, ತಬ್ಬಲಿಯು ನೀನಾದೆ ಮಗನೆ, ದಾಟು, ತಂತು, ಆವರಣ, ಮಂದ್ರ, ಸಾರ್ಥ, ಮತದಾನ, ಧರ್ಮಶ್ರೀ, ನಾಯಿ ನೆರಳು ಮೊದಲಾದ ಕಾದಂಬರಿ ಬರೆದರು. ಇವೆಲ್ಲವೂ ಭೈರಪ್ಪ ಅವರ ಕಥನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಕಾದಂಬರಿಗಳು. ಅವುಗಳೆಲ್ಲವೂ ಭಾರತದ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ನನ್ನ ಕಾಲೇಜು ಜೀವನದಲ್ಲಿ ನಾನು ಅತೀ ಹೆಚ್ಚು ಓದಿದ್ದು ಭೈರಪ್ಪನವರ ಕಾದಂಬರಿಗಳನ್ನೇ. ಪ್ರತೀ ಕಾದಂಬರಿಯನ್ನು ತಾನು ಆಳವಾಗಿ ಓದಿದ ತತ್ವಶಾಸ್ತ್ರ, ಇತಿಹಾಸ, ಭಾರತೀಯ ಸಂಸ್ಕೃತಿಗಳ ಬೆಳಕಿನಲ್ಲಿ ಬರೆಯುತ್ತ ಹೋಗುವ ಭೈರಪ್ಪನವರು ಒಂದೇ ಥೀಮಿಗೆ ಅಂಟಿಕೊಂಡವರಲ್ಲ. ಕಳೆದ 25 ವರ್ಷಗಳಲ್ಲಿ ಭೈರಪ್ಪ ಅವರು ಬರೆದ ಎಲ್ಲ ಕಾದಂಬರಿಗಳು ಪ್ರಕಾಶನಕ್ಕೆ ಮೊದಲೇ ಮಾರಾಟವಾಗಿವೆ ಮತ್ತು ಹತ್ತಾರು ಬಾರಿ ಮರುಮುದ್ರಣ ಆಗಿವೆ ಅಂದರೆ ಅತಿಶಯೋಕ್ತಿ ಅಲ್ಲ. ಭಿತ್ತಿ ಅವರ ಆತ್ಮ ಚರಿತ್ರೆಯ ಪುಸ್ತಕವಾಗಿದೆ.
ಪರ್ವ ಎಂಬ ಕಾಲಾತೀತವಾದ ಕಾದಂಬರಿ
ಭೈರಪ್ಪನವರು 1979ರಲ್ಲಿ ಬರೆದು ಮುಗಿಸಿದ ಪರ್ವ (Parva Novel) ಒಂದು ಅದ್ಭುತವಾದ ಪೌರಾಣಿಕ ಕಾದಂಬರಿ. ಮಹಾಭಾರತವನ್ನು ವರ್ತಮಾನದ ಸಾಮಾಜಿಕ ಹಿನ್ನೆಲೆಯಲ್ಲಿ ಹೇಳುವ, ಭಾರತದ ಶ್ರೇಷ್ಠ ಪೌರಾಣಿಕ ಕಾವ್ಯವನ್ನು ವೈಜ್ಞಾನಿಕವಾಗಿ ಪರಿಶೋಧಿಸುವ ಕಾದಂಬರಿ ಎಂದರೆ ಅದು ಪರ್ವ. ಈ ಕಾದಂಬರಿಯು ಭಾರತದ ಏಳು ಭಾಷೆಗಳಿಗೆ, ಮೂರು ವಿದೇಶದ ಭಾಷೆಗಳಿಗೆ ಅನುವಾದ ಆಗಿ ಎಲ್ಲ ಕಡೆಯೂ ಬೆಸ್ಟ್ ಸೆಲ್ಲರ್ ಆಗಿತ್ತು! ಆ ಕಾದಂಬರಿಯ ಮೂಲಕ ಭೈರಪ್ಪ ಅವರ ಕೀರ್ತಿಯು ಇಡೀ ವಿಶ್ವದ ಗಮನ ಸೆಳೆದಿತ್ತು.
ಏನಿದೆ ಆ ಪರ್ವದಲ್ಲಿ?
ಪರ್ವ ಒಂದು ಕಾಲಾತೀತವಾದ ಕಾದಂಬರಿ. ಮಹಾಭಾರತದ ಕತೆಯನ್ನು ಕುಂತಿಯ ಮೂಲಕ ಹಿನ್ನೋಟವಾಗಿ ಹೇಳುವ ಕೃತಿ. ಆ ಕಾದಂಬರಿಯನ್ನು ಓದುತ್ತ ಹೋದಂತೆ ಅದರಲ್ಲಿ ಬರುವ ದ್ರೌಪದಿ, ಕೃಷ್ಣ, ಕರ್ಣ, ಭೀಮ, ಕುಂತಿ, ಕೌರವ ಮೊದಲಾದ ಪಾತ್ರಗಳು ನಮ್ಮೊಳಗೆ ಇಳಿಯುತ್ತ ಹೋಗುತ್ತವೆ.
ಅಲ್ಲಿ ಕೃಷ್ಣನನ್ನು ದೇವರಾಗಿ ತೋರಿಸದೆ ನಮ್ಮೊಳಗಿನ ಒಬ್ಬ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. ಅದರಲ್ಲಿ ದ್ರೌಪದಿ ವಸ್ತ್ರಾಪಹರಣ ,ಕುರುಕ್ಷೇತ್ರದ ಯುದ್ಧ, ಗೀತೋಪದೇಶ ಎಲ್ಲವೂ ನಮ್ಮ ಸುತ್ತ ನಡೆಯುವ ಘಟನೆಗಳಂತೆ ಭಾಸವಾಗುತ್ತದೆ. ಕುಂತಿಯ ಪಾತ್ರವು ಹಸ್ತಿನಾವತಿಯ ಅಷ್ಟೂ ಅಪಸವ್ಯಗಳ ಉತ್ತರವಾಗಿ ಮೂಡಿಬಂದಿದೆ. ಇಡೀ ಪರ್ವದಲ್ಲಿ ಕಲ್ಪನೆ, ಉತ್ಪ್ರೇಕ್ಷೆಗಳು ಇಲ್ಲದೇ ವಾಸ್ತವದ ನೆಲೆಗಟ್ಟಿನ ಮೇಲೆ ಕಟ್ಟಿದ ಒಂದು ಅದ್ಭುತ ರೂಪಕವಾಗಿ ತೋರಿಸಲಾಗಿದೆ. ಎಲ್ಲವೂ ವೈಜ್ಞಾನಿಕ ಆಗಿದೆ. ಮೂಲ ಮಹಾಭಾರತದಲ್ಲಿ ತೋರಿಸಿದ ಪವಾಡಗಳು ಇಲ್ಲಿ ಇಲ್ಲ.
ಪರ್ವ ಕಾದಂಬರಿಯು ಭೂತ, ವರ್ತಮಾನ ಮತ್ತು ಭವಿಷ್ಯತ್ ಎಲ್ಲ ಸವಾಲುಗಳಿಗೂ ಉತ್ತರ ನೀಡುವ ಒಂದು ಶ್ರೇಷ್ಠ ಕಾದಂಬರಿ ಆಗಿ ಮೂಡಿಬಂದಿದೆ.
ಪರ್ವ – ನಾಟಕದ ರೂಪದಲ್ಲಿ
ಇಡೀ ಜಗತ್ತು ಕೊರೊನಾ ಸಂಕಷ್ಟದಲ್ಲಿ ಮುಳುಗಿದ್ದಾಗ ಮೈಸೂರಿನ ಹೆಸರಾಂತ ರಂಗಾಯಣ ಸಂಸ್ಥೆಯು ಇದೇ ಪರ್ವ ಕಾದಂಬರಿಯನ್ನು ನಾಟಕದ ರೂಪದಲ್ಲಿ ತರಲು ಹೊರಟಿತು. ಖ್ಯಾತ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಈ ಸಾಹಸಕ್ಕೆ ಕೈ ಹಾಕಿದರು. ಭೈರಪ್ಪನವರ ಅನುಮತಿ ಪಡೆಯುವುದೇ ಬಹಳ ದೊಡ್ಡ ಸವಾಲಾಗಿತ್ತು.
ನಂತರ ರಂಗಾಯಣದ ಹಿರಿಯ ಕಿರಿಯ ಕಲಾವಿದರು ಅಂದಾಜು ಮೂರು ತಿಂಗಳ ನಿರಂತರ ರಿಹರ್ಸಲ್ ನಂತರ ಪರ್ವ ನಾಟಕ ಸಿದ್ಧವಾಯಿತು. ಅದು ಏಳೂವರೆ ಘಂಟೆಗಳ ದೀರ್ಘ ನಾಟಕ ಆಗಿತ್ತು. ಬೆಳಗ್ಗೆ ಹತ್ತೂವರೆ ಹೊತ್ತಿಗೆ ಆರಂಭವಾದ ನಾಟಕ ರಾತ್ರಿ ಎಂಟು ಗಂಟೆಗೆ ಮುಗಿಯಿತು! ಮಧ್ಯೆ ನಾಲ್ಕು ಬ್ರೇಕ್ ಇದ್ದವು! ಸ್ವತಃ ಭೈರಪ್ಪನವರು ಬಂದು ನಾಟಕ ಉದ್ಘಾಟನೆ ಮಾಡಿ ಪೂರ್ತಿ ಹೊತ್ತು ಕೂತು ನಾಟಕ ನೋಡಿದರು. ಪ್ರತೀ ಬಾರಿ ತಿದ್ದುಪಡಿ ಹೇಳಿದರು. ನಾಟಕ ಸೂಪರ್ ಹಿಟ್ ಆಯಿತು. ತುಂಬಿದ ಸಭಾಂಗಣದಲ್ಲಿ ಜನರು ಮೈ ಮರೆತು ನಾಟಕ ನೋಡಿದರು. ರಂಗಾಯಣದ ಶ್ರೇಷ್ಠ ಕಲಾವಿದರು ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಹಿನ್ನೆಲೆ ಸಂಗೀತ, ವೇಷಭೂಷಣ, ಧ್ವನಿ, ಬೆಳಕು, ನಿರೂಪಣೆ ಎಲ್ಲವೂ ಅದ್ಭುತವಾಗಿದ್ದು ಪರ್ವ ರಾಜ್ಯದಾದ್ಯಂತ ಮತ್ತು ರಾಜ್ಯದ ಹೊರಗೂ ಹತ್ತಾರು ಪ್ರಯೋಗ ಕಂಡಿತು. ನಾನು 2021ರಲ್ಲಿ ಮೈಸೂರು ರಂಗಾಯಣದಲ್ಲಿ ಭೈರಪ್ಪ ಅವರ ಜೊತೆ ಕೂತು ಇಡೀ ನಾಟಕವನ್ನು ನೋಡಿ ತುಂಬಾ ಥ್ರಿಲ್ ಆಗಿದ್ದೆ. ಅದು ನನ್ನ ಜೀವಮಾನದ ಮೆಮೊರಿ ಆಗಿತ್ತು!
ಪರ್ವ – ಇಂಗ್ಲಿಷ್ ನಾಟಕ
ಮುಂದೆ ಅದೇ ಪ್ರಕಾಶ್ ಬೆಳವಾಡಿ ಅವರ ನಿರ್ದೇಶನದಲ್ಲಿ ಪರ್ವ ಇಂಗ್ಲಿಷ್ ನಾಟಕವಾಗಿ ವೇದಿಕೆ ಏರಿತು. ಅದೂ ಸೂಪರ್ ಹಿಟ್ ಆಯ್ತು. ಪ್ರಬುದ್ಧ ಕಲಾವಿದರು ಆ ನಾಟಕವನ್ನು ಗೆಲ್ಲಿಸಿದರು. ಈಗ ಪರ್ವ ನಾಟಕಕ್ಕೆ ಇಡೀ ಭಾರತದ ರಂಗಮಂಚದಲ್ಲಿ ಭಾರಿ ಬೇಡಿಕೆ ಕ್ರಿಯೇಟ್ ಆಗಿದೆ. ಪರ್ವ ನಾಟಕ ಭಾರತವನ್ನು ದೃಶ್ಯ ರೂಪದಲ್ಲಿ ತಲುಪಿದೆ.
ಇದನ್ನೂ ಓದಿ: Raja Marga Column : ಅವನಿಗೆ ಎರಡೂ ಕಾಲಿಲ್ಲ; ಆದರೆ, ಮೌಂಟ್ ಎವರೆಸ್ಟೇ ಅವನ ಪಾದದ ಕೆಳಗಿತ್ತು!
ಇದೀಗ ಪರ್ವ – ಸಿನೆಮಾ ರೂಪದಲ್ಲಿ!
ಕಾದಂಬರಿಯಾಗಿ, ಕನ್ನಡ ನಾಟಕವಾಗಿ, ಇಂಗ್ಲಿಷ್ ನಾಟಕವಾಗಿ ಜನರನ್ನು ಈಗಾಗಲೇ ತಲುಪಿರುವ ಪರ್ವ ಇದೀಗ ಸಿನಿಮಾ ರೂಪದಲ್ಲಿ ಬರುತ್ತಿದೆ ಅನ್ನುವುದೇ ರೋಮಾಂಚಕ ಸುದ್ದಿ!
ಹಿಂದಿಯ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (ಕಾಶ್ಮೀರ್ ಫೈಲ್ ಖ್ಯಾತಿಯ) ಮೈಸೂರಿಗೆ ಬಂದು ಭೈರಪ್ಪನವರ ಅನುಮತಿ ಪಡೆದಿದ್ದಾರೆ. ಇದೀಗ ಚಿತ್ರಕತೆಯ ಕೆಲಸ ಆಗ್ತಾ ಇದೆ. ಪ್ರಕಾಶ್ ಬೆಳವಾಡಿ ಈ ಸಿನಿಮಾದ ಕೆಲಸದಲ್ಲಿ ಈಗಾಗಲೇ ಮುಳುಗಿದ್ದಾರೆ. ಸದ್ಯಕ್ಕೆ ಹಿಂದಿ ಮತ್ತು ಕನ್ನಡದಲ್ಲಿ ಪರ್ವ ಸಿನಿಮಾ ತೆರೆಗೆ ಬರಲಿದೆ. ಇಂಗ್ಲಿಷ್ ಭಾಷೆಯಲ್ಲಿಯೂ ಸಿನೆಮಾ ಬರಬೇಕು ಎಂಬ ಅಭಿಪ್ರಾಯ ಬಂದಿದೆ. ಅದು ಕೂಡ ಏಳೂವರೆ ಘಂಟೆಯ ಸಿನೆಮಾ ಆಗಿರುತ್ತದೆ ಎಂಬ ಅಪ್ಡೇಟ್ ಬಂದಿದೆ. ಹಾಗೆ ಆದರೆ ಇಡೀ ಜಗತ್ತು ಪರ್ವ ಸಿನೆಮಾವನ್ನು ಕಣ್ಣರಳಿಸಿ ನೋಡಲಿದೆ ಅನ್ನೋದೇ ನಮಗೆ ಸಾವಿರ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಾನಂತೂ ಆ ಕ್ಷಣಕ್ಕಾಗಿ ಕಾಯುತ್ತಾ ನಿಂತಿದ್ದೇನೆ.