Site icon Vistara News

Raja Marga Column : ಯೋಧರ ಕುಟುಂಬದ ವೀರಗಾಥೆಗಳು; ‌ಬೇಕಿರುವುದು ಸಾಂತ್ವನ ಅಲ್ಲ, ಸೆಲ್ಯೂಟ್!

Shakunta Bhandarkar

(ನಿನ್ನೆಯ ಸಂಚಿಕೆಯಿಂದ ಮುಂದುವರಿದಿದೆ)
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ (Rajouri Encounter) ವೇಳೆ ನಡೆದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ (Captain MV Pranjal) ಅವರ ಬಲಿದಾನವು ಇಡೀ ಕನ್ನಡ ನಾಡಿನಲ್ಲಿ ಉಂಟುಮಾಡಿದ ದುಃಖದ ಅಲೆಗಳು ಯುವ ಸಮುದಾಯವನ್ನು ಬಡಿದೆಬ್ಬಿಸಿರುವುದು ಖಂಡಿತ. ಅಲ್ಲಲ್ಲಿ ಯೋಧರ ಸಂಸ್ಮರಣೆ ಕಾರ್ಯಕ್ರಮಗಳು (Stories of Soldiers) ಈಗ ನಡೆಯುತ್ತಿವೆ. ಕಾರ್ಕಳ ತಾಲೂಕಿನ ಹಾಳೆಕಟ್ಟೆ ಶಾಲೆಯ ಶತಮಾನೋತ್ಸವ ಸಮಿತಿಯು ನಿರ್ಮಿಸಲು ಉದ್ದೇಶಿಸಿರುವ ಪ್ರಾಂಜಲ್ ಸ್ಮಾರಕದ ಭೂಮಿ ಪೂಜೆಯ (Pranjal Memorial) ಕಾರ್ಯಕ್ರಮವು ತುಂಬ ಭಾವುಕ ಆಗಿತ್ತು. ಇಡೀ ಊರಿಗೆ ಊರೇ ಸೇರಿ ಕಂಬನಿ ಮಿಡಿದದ್ದು ಒಂದು ಅನೂಹ್ಯ ಸಂವೇದನೆ (Raja Marga Column).

ಇನ್ನಷ್ಟು ಸೈನಿಕರ ಕುಟುಂಬದ ಕಥೆಗಳು

1. ಮೇಜರ್ ವಿವೇಕ್ ಗುಪ್ತ ಅವರು ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡುತ್ತಿದ್ದಾಗ ಆತನ ಪತ್ನಿ ಡಾಕ್ಟರ್ ರಾಜಶ್ರೀ ಗುಪ್ತ ಸೇನಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಅನೇಕ ಸೈನಿಕರ ಶವಗಳನ್ನು ವ್ಯವಸ್ಥಿತವಾಗಿ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಆಕೆ ಮಾಡುತ್ತಿದ್ದರು. ಮುಂದೊಂದು ದಿನ ಬಂದೇ ಬಿಟ್ಟಿತ್ತು. ಆಕೆಯ ಗಂಡ ಮೇಜರ್ ವಿವೇಕ್ ಗುಪ್ತ ಶವವಾಗಿ ಅದೇ ಆಸ್ಪತ್ರೆಗೆ ಬಂದಾಗ ಆಕೆಯ ನೋವು ಹೇಗಿರಬಹುದು? ಆಕೆ ನಿಧಾನವಾಗಿ ನಡೆದುಕೊಂಡು ಬಂದು ತನ್ನ ಪತಿಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಹೊಡೆದು ನಿಂತ ವಿಡಿಯೊ ನೋಡಿ ನಾನು ಕಣ್ಣೀರು ಮಿಡಿದಿದ್ದೇನೆ. ಆದರೆ ಆಕೆ ಕಣ್ಣೀರು ಹಾಕಿರಲಿಲ್ಲ!

Shakuntala Bhandarkar

2. ಮೇಜರ್ ಪದ್ಮಪಾಣಿ ಆಚಾರ್ಯ ಅವರ ಇಡೀ ಕುಟುಂಬಕ್ಕೆ ಕುಟುಂಬವೇ ಸೈನ್ಯಕ್ಕೆ ಮುಡಿಪಾಗಿತ್ತು. ಅವರ ತಂದೆ ಜಗನ್ನಾಥ ಆಚಾರ್ಯ ಅವರು ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದರು.
ಪದ್ಮಪಾಣಿಯವರ ತಮ್ಮ ಈಗ ಸೇನೆಯಲ್ಲಿ ಕರ್ನಲ್ ಆಗಿದ್ದಾರೆ.

ಮೇಜರ್ ಪದ್ಮಪಾಣಿ ಆಚಾರ್ಯ ಅವರು ತಾನು ಹುತಾತ್ಮ ಆದರೆ ಅಳಬಾರದು ಎಂದು ತನ್ನ ಅಮ್ಮನ ಹತ್ತಿರ ಪ್ರಮಾಣ ತೆಗೆದುಕೊಂಡಿದ್ದರು. ತನ್ನ ತಂದೆಗೆ ‘ನನ್ನ ಮಗಳಿಗೆ ದಿನವೂ ಮಹಾಭಾರತದ ಕಥೆ ಹೇಳಬೇಕು. ಅವಳೂ ನನ್ನ ಹಾಗೆ ಸೇನೆಗೆ ಸೇರಬೇಕು’ ಎಂದು ಹೇಳಿದ್ದರು. ಮೇಜರ್ ಪದ್ಮಪಾಣಿ ಆಚಾರ್ಯ ಅವರು ಯುದ್ಧದಲ್ಲಿ ಹುತಾತ್ಮರಾದರು. ಈಗ ಅವರ ಮಗಳು ಚಾರೂ ಬೆಳೆದು ದೊಡ್ಡವಳಾಗಿ ಸೇನಾ ಶಾಲೆಗೆ ಸೇರಿದ್ದಾರೆ!

ಮೇಜರ್‌ ಪದ್ಮಪಾಣಿ ಆಚಾರ್ಯ ಅವರ ಪತ್ನಿ ಚಾರುಲತಾ ಮತ್ತು ಮಗಳು ಅಪರಾಜಿತಾ

3. ಬಿಹಾರ್ ರೆಜಿಮೆಂಟ್ ಸೈನಿಕ ನಾಯಕ್ ಗಣೇಶ್ ಯಾದವ್ ರಜೆಯಲ್ಲಿ ಊರಿಗೆ ಬಂದಿದ್ದಾಗ ಅವರ ದ್ವಿತೀಯ ಪಿಯುಸಿ ಓದುತ್ತಿದ್ದ ಮಗನ ಆರೋಗ್ಯವು ಪೂರ್ತಿ ಹಾಳಾಗಿತ್ತು. ವೈದ್ಯಕೀಯ ಪರೀಕ್ಷೆಯನ್ನು ಮಾಡಿದಾಗ ಬ್ಲಡ್ ಕ್ಯಾನ್ಸರ್ ಪತ್ತೆ ಆಯಿತು. ಆಸ್ಪತ್ರೆಯಿಂದ ಆಸ್ಪತೆಗೆ ಅಲೆದಾಡುತ್ತಾ, ದುಡ್ಡು ಹೊಂದಿಸುತ್ತ ಇದ್ದ ಮೇಜರ್ ಗಣೇಶ್ ಯಾದವ್ ಅವರಿಗೆ ತಕ್ಷಣ ಯುದ್ಧಕ್ಕೆ ಹೊರಟು ಬರಬೇಕು ಎಂದು ಸೇನೆಯ ಕರೆ ಬಂದಿತ್ತು!

ಆದರೆ ಒಂದಿಷ್ಟೂ ವಿಚಲಿತನಾಗದ ಆ ಸೈನಿಕ ತನ್ನ ಮಗನನ್ನು ಹೆಂಡತಿಯ ಮಡಿಲಲ್ಲಿ ಮಲಗಿಸಿ ಯುದ್ಧಕ್ಕೆ ಹೊರಟೇ ಹೋದನು! ಹೆಂಡತಿಗದು ಅಗ್ನಿಪರೀಕ್ಷೆ. ಬೀದಿಯುದ್ದಕ್ಕೂ ಕಣ್ಣು ಹಾಯಿಸಿ ತನ್ನ ಗಂಡ ಇಂದು ಬಂದಾನು, ನಾಳೆ ಬಂದಾನು ಎಂದು ಅವರು ಕಾದು ಕೂತಿದ್ದರು. ಮುಂದೇನಾಯಿತು ಎಂದು ನನಗೆ ಗೊತ್ತಿಲ್ಲ.

4. ಕಾರ್ಗಿಲ್ ಯೋಧ ಮನೋಜ್ ಕುಮಾರ್ ಪಾಂಡೆ ಹುತಾತ್ಮ ಆದಾಗ ಆತನ ತಾಯಿ ಕಣ್ಣೀರು ಸುರಿಸದೆ ಎದೆ ಉಬ್ಬಿಸಿ ‘ಮನೋಜ್ ನನ್ನ ಮಗ ಅಲ್ಲ. ಆತನು ದೇಶದ ಮಗ. ಹಾಗಿರುವಾಗ ನಾನೇಕೆ ಅಳಲಿ?’ ಎಂದಿದ್ದರು.

5. ಜಾಟ್ ರೆಜಿಮೆಂಟ್ ಸೈನಿಕ ವಿಜಯ್ ಪಾಲ್ ಸಿಂಗ್ ಅವರಿಗೆ ತನ್ನ ತಮ್ಮನೂ ಸೇನೆಗೆ ಸೇರಬೇಕು ಎಂದು ಆಸೆ ಇತ್ತು. ‘ನಿನಗೆ ಸೇನಾ ಅರ್ಹತಾ ಪರೀಕ್ಷೆಯ ತರಬೇತು ಕೊಡಲು ಊರಿಗೆ ಬರುತ್ತೇನೆ’ ಎಂದವರು ಹೇಳಿದ್ದರು. ಆದರೆ ವಿಧಿಲಿಖಿತ ಬೇರೆ ಇತ್ತು. ಕಾರ್ಗಿಲ್ ಯುದ್ಧದಲ್ಲಿ ವಿಜಯ್ ಪಾಲ್ ಸಿಂಗ್ ಹುತಾತ್ಮ ಆಗುತ್ತಾರೆ. ಆತನ ಅಪ್ಪ ತನ್ನ ಕಿರಿಯ ಮಗನಿಗೆ ‘ನೋಡು, ನೀನೂ ನಿನ್ನ ಅಣ್ಣನ ಹಾಗೆ ಸೇನೆಗೆ ಸೇರಬೇಕು ‘ಎಂದು ನಂತರ ಹೇಳುತ್ತಿದ್ದರು.

6. ಕಾರ್ಗಿಲ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಸೂರಜ್ ಭಾನ್ ಎಂಬ ಸೈನಿಕನ ಕಥೆ ಇನ್ನೂ ರೋಮಾಂಚಕ. ಆತನು ಸಾಯುವ ಮೊದಲು ಮೂರು ವೈರಿಗಳನ್ನು ಕೊಂದಿದ್ದ.

ಸೂರಜ್ ಭಾನ್ ತರಬೇತಿಯ ಅವಧಿಯಲ್ಲಿ ತೋರಿದ ಭಾರೀ ಧೈರ್ಯ ಮತ್ತು ಸಾಹಸಗಳ ಕಾರಣಕ್ಕೆ ವಿಶೇಷ ಕಾರ್ಯಾಚರಣೆ ಕಡೆಗೆ ಆಯ್ಕೆ ಆಗಿದ್ದ. ಮನೆಯವರು ಹೆದರಬಹುದು ಎಂದು ಅವರಿಗೆ ಅದನ್ನು ಹೇಳಿರಲಿಲ್ಲ! ಅಂತಹ ಸೈನಿಕ ಹುತಾತ್ಮನಾಗಿ ಆತನ ಶವವು ಅಂಗಳಕ್ಕೆ ಬಂದಾಗ ಮನೆಯವರ ನೋವು ಹೇಗಿರಬಹುದು? ಆತನ ತಂದೆ ಹೃದಯ ತುಂಬಾ ನೋವು ತುಂಬಿಕೊಂಡು ‘ನನ್ನ ಮಗ ಇಂತಹ ಕಾರ್ಯಾಚರಣೆಗೆ ಸೇರಿದ್ದು ನನಗೆ ಗೊತ್ತೇ ಇರಲಿಲ್ಲ. ನನಗೆ ಒಂದೇ ನೋವು. ಬದುಕಿದ್ದಾಗ ನನ್ನ ಮಗನಿಗೆ ಸೆಲ್ಯೂಟ್ ಹೊಡೆಯಲು ಆಗಲಿಲ್ಲ ಎಂದು!’

ಮಗನ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಹೊಡೆದಾಗ ಅವರ ಕೈ ನಡುಗುತ್ತಿತ್ತು. ಎದೆಯ ತುಂಬ ನೋವಿತ್ತು. ಆದರೆ ಅವರು, ಅವರ ಮನೆಯವರು ಯಾರೂ ಅಳಲಿಲ್ಲ!

7. ಸೇನೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಯ್ಕ್ ಗುರು ನಾಗ್ ಎಂಬ ಸೈನಿಕನ ಸೋದರ ಕೂಡ ಸೈನ್ಯದಲ್ಲಿ ಇದ್ದ. ಆತನ ಸೋದರ ಯುದ್ಧಭೂಮಿಯಲ್ಲಿ ಹುತಾತ್ಮ ಆಗಿದ್ದ. ತಮ್ಮನ ಅಂತಿಮ ಕಾರ್ಯದಲ್ಲಿ ಭಾಗವಹಿಸಲು ರಜೆ ಕೊಡಲು ಸೇನೆ ಸಿದ್ಧವಾಗಿತ್ತು. ಆದರೆ ಯುದ್ಧ ಮುಗಿದಿರಲಿಲ್ಲ. ಅದನ್ನು ಮನಗಂಡ ಅಣ್ಣ ಗುರು ನಾಗ್ ರಜೆಯನ್ನು ನಿರಾಕರಿಸಿ ಯುದ್ಧಭೂಮಿಯಲ್ಲಿಯೇ ಉಳಿದ.

8. ಸೈನಿಕ ದೇವಿಂದರ್ ಸಿಂಘ್ ಅವರ ತಾಯಿ ಮಗನಿಗೆ ಒಂದು ಪತ್ರ ಬರೆದಿದ್ದರು. ಅದರ ಸಾರಾಂಶ ಈ ರೀತಿ ಇದೆ – ಮಗನೇ, ನನ್ನಿಬ್ಬರು ಮಕ್ಕಳೂ ಸೇನೆಯಲ್ಲಿ ಇರುವುದು ನನ್ನ ಹೆಮ್ಮೆ. ಯುದ್ಧವನ್ನು ಗೆದ್ದು ಬಾ. ಅದರ ಜೊತೆಗೆ ನಿನ್ನ ಕಿರಿಯ ಸೋದರ ದ್ರಾಸ್ ಕದನ ಭೂಮಿಯಲ್ಲಿ ಹೋರಾಡುತ್ತಿದ್ದಾನೆ. ನೀನು ಹಿರಿಯನಾದ ಕಾರಣ ಅವನ ಬಗ್ಗೆ ಕೂಡ ಕಾಳಜಿ ಮಾಡು!

ಶಕುಂತಲಾ ಭಂಡಾರ್ಕರ್‌ ತಮ್ಮ ಯೋಧ ಮಕ್ಕಳೊಂದಿಗೆ

9. ಬೆಂಗಳೂರಿನಲ್ಲಿ ಶಿಕ್ಷಕಿ ಆಗಿರುವ ಶಕುಂತಲಾ ಭಂಡಾರ್ಕರ್ ಅವರ ರೋಮಾಂಚಕ ಆದ ಕಥೆ ಹಿಂದೊಮ್ಮೆ ಬರೆದಿದ್ದೆ. ಆಕೆಯ ಗಂಡ ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದರು. ಆಗ ಅವರ ಇಬ್ಬರು ಮಕ್ಕಳು ತುಂಬಾ ಚಿಕ್ಕವರು. ಮುಂದೆ ಆ ಮಕ್ಕಳು ಬೆಳೆದು ಎಂಜಿನಿಯರಿಂಗ್ ಓದಿದ ನಂತರ ಸೈನ್ಯಕ್ಕೆ ಸೇರಬೇಕು ಎಂದು ಇಚ್ಛೆ ವ್ಯಕ್ತಪಡಿಸಿದಾಗ ಆ ಮಹಾತಾಯಿ ತಡೆಯಲಿಲ್ಲ. ಅವರಿಬ್ಬರನ್ನೂ ಆಶೀರ್ವಾದ ಮಾಡಿ ಸೇನೆಗೆ ಕಳುಹಿಸಿಕೊಟ್ಟು ಅಭಿಮಾನದಿಂದ ಬದುಕುತ್ತಿದ್ದಾರೆ.

ಇದನ್ನೂ ಓದಿ : Raja Marga Column : ಕ್ಯಾ. ಪ್ರಾಂಜಲ್‌ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!

ಭರತವಾಕ್ಯ

ಇಂತಹ ನೂರಾರು ಕಥೆಗಳು ನನ್ನ ಅಧ್ಯಯನದಲ್ಲಿ ದೊರೆತಿವೆ. ಸೈನಿಕರು ಮತ್ತು ಅವರ ಕುಟುಂಬ ಎರಡೂ ದೇಶದ ದೊಡ್ಡ ಆಸ್ತಿ. ಯೋಧರು ದೇಶಕ್ಕಾಗಿ ವೀರಾವೇಶದಿಂದ ಹೋರಾಡಬೇಕಾದರೆ ಅವರ ಕುಟುಂಬದ ನೈತಿಕ ಬೆಂಬಲ ಬೇಕು. ಒಂದು ರೀತಿಯಲ್ಲಿ ಅವರ ಕುಟುಂಬವೂ ವೈರಿಗಳ ಜೊತೆಗೆ ಹೋರಾಡುತ್ತಿರುತ್ತದೆ. ಅಂತಹ ಕುಟುಂಬಗಳ ಜೊತೆ ಇಡೀ ದೇಶದ ಜನತೆ ನಿಲ್ಲಬೇಕಾದ ಅಗತ್ಯ ಇದೆ. ಏನಂತೀರಿ?

ಇನ್ನಷ್ಟು ಸೈನಿಕರ ಕಥೆಗಳನ್ನು ಮುಂದೆ ಬರೆಯುತ್ತೇನೆ.

Exit mobile version