Site icon Vistara News

Raja Marga Column : ಊರ ಕೆಸರು ಕ್ಲೀನ್‌ ಮಾಡೋದು ಸಾಧ್ಯವಿಲ್ಲ, ಕಾಲಿಗೆ ಚಪ್ಪಲಿ ಹಾಕೋಬೇಕು ಅಷ್ಟೆ!

Chappl and muddy puddle

ಒಂದೂರಿನಲ್ಲಿ ಒಬ್ಬ ಅರಸ ಇದ್ದನು (There was a king). ಅವನು ದಿನವೂ ಸಂಜೆ ಕತ್ತಲಾದ ನಂತರ ವೇಷವನ್ನು ಬದಲಾಯಿಸಿ ಕಾಲ್ನಡಿಗೆಯಲ್ಲಿ ಸಂಚಾರ ಹೋಗುತ್ತಿದ್ದನು. ಜನರು ನನ್ನ ಆಡಳಿತದ ಬಗ್ಗೆ ಏನು ಹೇಳುತ್ತಾರೆ ಎಂದು ಅವನಿಗೆ ತಿಳಿದುಕೊಳ್ಳುವ ಕುತೂಹಲ ಇತ್ತು (Raja Marga Column).

ಒಂದು ದಿನ ಸಂಜೆ ಹಾಗೆ ಸಂಚಾರ ಹೊರಟಾಗ ಒಂದು ಕಡೆ ನೆಲದ ಮೇಲೆ ತುಂಬಾ ಕೆಸರು (Muddy puddle) ಇತ್ತು. ಕತ್ತಲಾದ ಕಾರಣ ಅವನಿಗೆ ಸರಿಯಾಗಿ ಕಾಣದೆ ಕೆಸರನ್ನು ತುಳಿದುಬಿಟ್ಟನು. ಕಾಲು ತೊಳೆಯಲು ಸುತ್ತ ಮುತ್ತ ನೀರು ಹುಡುಕಿದರೂ ನೀರು ಸಿಗಲಿಲ್ಲ. ಅವನ ಪರದಾಟ ನೋಡಿ ಜನರು ಗಟ್ಟಿಯಾಗಿ ನೆಗಾಡಿದರು. ಅವನಿಗೆ ಭಾರೀ ಅಪಮಾನ ಆಯಿತು.

ಮರುದಿನವೇ ಹೊರಟಿತು ರಾಜಾಜ್ಞೆ!

ಮರುದಿನವೇ ಸಭೆಯನ್ನು ಕರೆದು ಅರಸನು ಒಂದು ಆಜ್ಞೆಯನ್ನು ಮಾಡಿಯೇ ಬಿಟ್ಟ. ನನ್ನ ಇಡೀ ರಾಜ್ಯದಲ್ಲಿ ಎಲ್ಲಿಯೂ ಕೆಸರು ಇರಬಾರದು. ಅದನ್ನು ಸ್ವಚ್ಛ ಮಾಡಬೇಕಾದದ್ದು ಅಧಿಕಾರಿಗಳ ಕರ್ತವ್ಯ. ಯಾವ ರಸ್ತೆಯಲ್ಲಿ ಕೆಸರು ಕಂಡು ಬಂದರೆ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗೆ ಅಥವಾ ಸಾರ್ವಜನಿಕರಿಗೆ ಕಠಿಣ ಶಿಕ್ಷೆ ಎಂದು ಬಿಟ್ಟ. ಇದರಿಂದ ಅಧಿಕಾರಿಗಳು ದಿಗಿಲು ಬಿದ್ದರು. ಸಾರ್ವಜನಿಕರು ಕಂಗಾಲಾದರು. ಅವರು ಎಷ್ಟು ಪ್ರಯತ್ನಪಟ್ಟರೂ ಕೆಸರು ತೊಳೆಯುವುದು ಸಾಧ್ಯವೇ ಆಗಲಿಲ್ಲ. ಹಲವರಿಗೆ ಶಿಕ್ಷೆ ಆದಾಗ ಜನರು ಇನ್ನಷ್ಟು ಹೆದರಿದರು.

ಆದರೆ ಒಬ್ಬ ಚಮ್ಮಾರ ಭಿನ್ನವಾಗಿ ಯೋಚನೆ ಮಾಡಿದ!

ಅದೇ ರಾಜ್ಯದ ಮೂಲೆಯಲ್ಲಿ ಇದ್ದ ಹಳ್ಳಿಯ ಒಬ್ಬ ಚಮ್ಮಾರನು ಆಗ ವಿಭಿನ್ನವಾಗಿ ಯೋಚನೆ ಮಾಡಿದ. ಅವನು ಅರಸನ ಕಾಲಿನ ಅಳತೆಯನ್ನು ತಿಳಿದುಕೊಂಡು ಅದೇ ಅಳತೆಯ ಒಂದು ಜೊತೆ ಚರ್ಮದ ಚಪ್ಪಲಿ ಹೊಲಿದನು. ಅದನ್ನು ತೆಗೆದುಕೊಂಡು ಅರಸನ ಮುಂದೆ ಬಂದು ನಿಂತನು.

Wear the chappal instead of blaming mud

ಅವನು ಅರಸನಿಗೆ ಹೇಳಿದ್ದು ಎರಡೇ ಎರಡು ಮಾತುಗಳು –
‘ಮಹಾರಾಜ. ನೀವು ಅಧಿಕಾರಿಗಳು, ಸಾರ್ವಜನಿಕರು ಇಡೀ ಆಯಸ್ಸು ದುಡಿದರೂ ನಿಮ್ಮ ನಗರದ ಕೊಳೆಯನ್ನು ಸ್ವಚ್ಛ ಮಾಡಲು ಸಾಧ್ಯ ಆಗುವುದಿಲ್ಲ. ಆದರೆ ನಾನು ನಿಮ್ಮ ಪಾದಗಳ ಅಳತೆಯ ಒಂದು ಜೊತೆ ಚರ್ಮದ ಚಪ್ಪಲಿ ಹೊಲಿದಿದ್ದೇನೆ. ಇದನ್ನು ಹಾಕಿಕೊಂಡು ಓಡಾಡಿದರೆ ಒಂದಿಷ್ಟೂ ಕೆಸರು ನಿಮ್ಮ ಕಾಲುಗಳಿಗೆ ತಾಗುವುದಿಲ್ಲ’.

ಅರಸನಿಗೆ ಆ ಚಮ್ಮಾರನ ಮಾತಿನ ಅರ್ಥ ತಿಳಿದು ತುಂಬಾ ಸಂತೋಷ ಆಯ್ತು. ಅವನಿಗೆ ಉಡುಗೊರೆ ಕೊಟ್ಟು ಸನ್ಮಾನ ಮಾಡಿ ಅರಸನು ಬೀಳ್ಕೊಟ್ಟನು.

ನಮ್ಮ ಜೀವನದಲ್ಲಿ ಕೂಡ ಕೆಲವು ಬಾರಿ ಹೀಗೇ ಆಗುತ್ತದೆ ಅಲ್ಲವೇ?

Wear the chappal instead of blaming mud

ಒಬ್ಬರು ನನ್ನ ಅಭಿಮಾನಿ ಚಿತ್ರದುರ್ಗ ಜಿಲ್ಲೆಯಿಂದ ಕಾಲ್ ಮಾಡಿ ತಮ್ಮ ನೋವನ್ನು ಶೇರ್ ಮಾಡಿಕೊಂಡರು. ಅವರಿಗೆ ಬಾಲ್ಯದಿಂದಲೂ ಕಣ್ಣು ಒಂದಿಷ್ಟೂ ಕಾಣುವುದಿಲ್ಲ. ಯಾವುದಾದರೂ ಸೂಕ್ಷ್ಮ ಸೌಂಡ್ ಕೇಳಿದಾಗ ಅವರ ಫೋಕಸ್ ಆ ಕಡೆಗೆ ಹೋಗುತ್ತದೆ. ಅದಕ್ಕಾಗಿ ಅವರ ಸುತ್ತ ಇರುವ ಜನರು ಸಣ್ಣ ಸಣ್ಣ ಸೌಂಡ್ ಕ್ರಿಯೇಟ್ ಮಾಡಿ ಅವರನ್ನು ಡಿಸ್ಟರ್ಬ್ ಮಾಡುತ್ತಾರೆ. ಅವರಿಗೆ ದಿನವೂ ಅಪಮಾನ ಆಗ್ತಾ ಇದೆ. ನನಗೆ ಸಾಯೋವಷ್ಟು ದುಃಖ ಆಗ್ತಾ ಇದೆ ಅಂದರು. ಅವರ ಧ್ವನಿಯಲ್ಲಿ ತುಂಬಾ ನೋವು ಇತ್ತು.

ಅವರು ಒಂದು ಸರಕಾರಿ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡ್ತಾ ಇದ್ದಾರೆ. ಕನ್ನಡದ ಕೀ ಬೋರ್ಡ್‌ನಲ್ಲಿ ಸರಾಗವಾಗಿ ಟೈಪ್ ಮಾಡುತ್ತಾರೆ. ಲೇಖನಗಳನ್ನು ಬ್ರೈಲ್ ಲಿಪಿಯಲ್ಲಿ ಓದುತ್ತಾರೆ. ನೂರಾರು ಆಡಿಯೋಗಳನ್ನು ಕೇಳಿ ಅಷ್ಟೇ ವೇಗವಾಗಿ ಟೈಪ್ ಮಾಡುತ್ತಾರೆ. ಅವರಿಗೆ ಒಬ್ಬ ಒಳ್ಳೆಯ ಸ್ಪೀಕರ್ ಆಗಿ ಬೆಳೆಯಬೇಕು ಎಂದು ಆಸೆ ಇದೆ.

ಇದನ್ನೂ ಓದಿ : Raja Marga Column: ಹದಿಹರೆಯದವರ ಭಾವನಾ ಸ್ಫೋಟ ಹ್ಯಾಂಡಲ್ ಮಾಡೋದು ಹೇಗೆ?

ನಾನು ಅವರಿಗೆ ಕೆಲವು ಎಫೆಕ್ಟಿವ್ ಸಲಹೆ ಕೊಡುತ್ತಾ ಹೋದೆ. ಅವುಗಳ ಸಾರಾಂಶ ಹೀಗಿದೆ.

ಅವರಿಗೆ ಇದೇ ಚಮ್ಮಾರನ ಕಥೆ ಮೊದಲು ಹೇಳಿದೆ. ಬೇರೆಯವರ ಕಾಮೆಂಟ್ಸ್ ಕೇಳುತ್ತ ನಿಮ್ಮ ಪಾಸಿಟಿವ್ ಎನರ್ಜಿ ಖಾಲಿ ಮಾಡಬೇಡಿ. ನೀವು ಹಿಂದೆ ಬದುಕಿದ್ದು, ಈಗ ಬದುಕುತ್ತಿರುವುದು ಮುಂದೆ ಬದುಕಲಿರುವುದು ಎಲ್ಲವೂ ನಿಮಗಾಗಿ ಅಲ್ಲವೇ?

ಅದಕ್ಕೆ ಅವರು ಹೌದು ಸರ್ ಅಂದರು.

ನಿಮ್ಮ ಬಗ್ಗೆ ನಿಮ್ಮಲ್ಲಿ ಎರಡು ವಿಧವಾದ ವ್ಯಕ್ತಿತ್ವಗಳು ಇವೆ. ಒಂದು ನಿಮ್ಮ ಬಗ್ಗೆ ಆತ್ಮ ವಿವೇಚನೆ ಮಾಡಿಕೊಂಡು ನೀವು ಬೆಳೆಸಿಕೊಂಡಿರುವ ವ್ಯಕ್ತಿತ್ವ. ಇನ್ನೊಂದು ಎಲ್ಲರ ಮಾತುಗಳಿಗೆ ಕಿವಿ ಕೊಡುತ್ತ ಕೂತು ಅವುಗಳನ್ನು ಅಳವಡಿಸಿಕೊಂಡು ಬೆಳೆಸಿಕೊಂಡ ನಿಮ್ಮ ವ್ಯಕ್ತಿತ್ವ. ನಿಮ್ಮ ಆಯ್ಕೆ ಯಾವುದು ಎಂದೆ.

ನನ್ನ ಆಯ್ಕೆ ಮೊದಲನೆಯದ್ದು ಎಂದರು.

‘ಹಾಗಾದರೆ ಇನ್ನು ಮುಂದೆ ನಿಮಗಾಗಿ ಬದುಕಿ. ಬೇರೆಯವರಿಗಾಗಿ ಅಲ್ಲ. ಇನ್ನು ಬೇರೆಯವರ ಕಾರಣಕ್ಕೆ ಡಿಪ್ರೆಸ್ ಆಗಬೇಡಿ. ಇವತ್ತು ನೆಮ್ಮದಿಯಿಂದ ಮಲಗಿ’ ಎಂದು ಫೋನ್ ಇಟ್ಟೆ.

ಬೆಳಗ್ಗೆ ಅವರೇ ಮೆಸೇಜ್ ಹಾಕಿದರು – ಸುಮಾರು ವರ್ಷಗಳ ನಂತರ ನೆಮ್ಮದಿಯಿಂದ ಮಲಗಿದ್ದೇನೆ ಸರ್. ನಿಮಗೆ ಥ್ಯಾಂಕ್ಸ್.

Exit mobile version