ಮೊನ್ನೆ ಸೆಪ್ಟೆಂಬರ್ 8ಕ್ಕೆ ಆಶಾ ಭೋಸ್ಲೆ (Asha Bhosle) ಅವರಿಗೆ 90 ತುಂಬಿತು. ಈಗಲೂ ಸಂಗೀತದ ವೇದಿಕೆ ಹತ್ತಿದರೆ ಅದೇ ಉತ್ಸಾಹದಲ್ಲಿ ಹಾಡುವ ಆಕೆಯ ಧ್ವನಿಯ ಶಕ್ತಿಯು ನಿಜಕ್ಕೂ ಅದ್ಭುತವಾದದ್ದು. ಆಕೆಯ ಅಕ್ಕ ಲತಾ ಮಂಗೇಷ್ಕರ್ (Lata Mangeshkar) ಭಾರತದ ಕೋಗಿಲೆ ಎಂದು ಕರೆಸಿಕೊಂಡದ್ದು, ಮಾಧುರ್ಯದ ಮೂಲಕ ಜಗತ್ತನ್ನು ಗೆದ್ದದ್ದು ನಮಗೆಲ್ಲ ಗೊತ್ತಿದೆ. ಆದರೆ ಈ ತಂಗಿ ಆಶಾ ತನ್ನ ವೈವಿಧ್ಯದ ಮೂಲಕ ಮತ್ತು ಧ್ವನಿಯ
ಏರಿಳಿತಗಳ ಮೂಲಕ ಕೀರ್ತಿಯನ್ನು ಪಡೆದರು.
ವಿಶ್ವದಲ್ಲಿಯೇ ಅತೀ ಹೆಚ್ಚು ಹಾಡುಗಳನ್ನು ಹಾಡಿದ ಗಿನ್ನೆಸ್ ದಾಖಲೆ (Guinness world record) ಆಕೆಯ ಹೆಸರಲ್ಲಿ ಇದೆ. ಭಾರತದ 20 ಭಾಷೆಗಳಲ್ಲಿ ಆಕೆ 12,000ಕ್ಕಿಂತ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಹಲವು ಲಿಪಿ ಇಲ್ಲದ ಭಾಷೆಗಳಲ್ಲಿ ಕೂಡ ಆಕೆ ಹಾಡಿದ್ದಾರೆ (Raja Marga Column).
ವೈವಿಧ್ಯದಲ್ಲಿ ಆಕೆಗೆ ಆಕೆಯೇ ಉಪಮೆ
ಸಣ್ಣ ಹುಡುಗಿಯ ಧ್ವನಿಯಿಂದ ಆರಂಭ ಮಾಡಿ ಪ್ರಬುದ್ಧ ಪಾತ್ರದವರೆಗೆ ಧ್ವನಿ ಹೊಂದಿಸಿ ಹಾಡುವ ವೈವಿಧ್ಯತೆಯು ಆಕೆಯ ಶಕ್ತಿ. ಗಝಲ್, ಮೀರಾ ಭಜನ್, ಭಕ್ತಿ ಸಂಗೀತ, ಮುಜ್ರಾ, ಶಾಸ್ತ್ರೀಯ, ಡಿಸ್ಕೋ, ಪಾಪ್, ದೇಶಭಕ್ತಿ, ಜಾನಪದ, ಲಾವಣಿ, ಕವ್ವಾಲಿ…… ಹೀಗೆ ಯಾವ ಹಾಡನ್ನು ಕೊಟ್ಟರೂ ತನ್ನ ಸಿಗ್ನೇಚರ್ ಧ್ವನಿಯಲ್ಲಿ ಹಾಡಿ ಮುಗಿಸುತ್ತಾರೆ. ಆಕೆಯ ಹಾಡುಗಳನ್ನು ಬೇರೆ ಯಾರೂ ಹಾಡಲು ಪ್ರಯತ್ನಪಟ್ಟರೂ ಅದು ಅವರ ಎತ್ತರಕ್ಕೆ ಏರಲು ಸಾಧ್ಯವೇ ಇಲ್ಲ ಅನ್ನೋದು ನಿಜವಾದ ಮಾತು.
ಹಿಂದಿನ ಮಧುಬಾಲಾ, ನರ್ಗೀಸ್, ವಹೀದಾ ರೆಹಮಾನ್ ಅವರಿಂದ ಆರಂಭ ಮಾಡಿ ಇತ್ತೀಚಿನ ಊರ್ಮಿಳಾ ಮಾತೋಂಡ್ಕರ್, ಮಾಧುರಿ ದೀಕ್ಷಿತ್ ಅಂತವರಿಗೂ ಹಿನ್ನೆಲೆ ಹಾಡನ್ನು ಹಾಡಿ ಆಕೆ ಭಾರೀ ಯಶಸ್ವೀ ಆಗಿದ್ದಾರೆ. ಯುಗಳ ಗೀತೆಗಳನ್ನು ಹಾಡುವುದರಲ್ಲಿ ಆಕೆಗೆ ಯಾರೂ ಸಮ ಆಗಲು ಸಾಧ್ಯವಿಲ್ಲ. ಕಿಶೋರ್ ಕುಮಾರ್ ಮತ್ತು ಮೊಹಮ್ಮದ್ ರಫಿ ಅವರ ಜೊತೆ ಅತೀ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ ದಾಖಲೆ ಕೂಡ ಆಕೆಯ ಹೆಸರಲ್ಲಿದೆ. ರಂಗೀಲಾ ಸಿನಿಮಾದಲ್ಲಿ ಆಕೆ ‘ತನಹಾ ತನಹಾ’ ಹಾಡನ್ನು ಹಾಡಿದ್ದು ಊರ್ಮಿಳಾ ಮಾತೋಂಡ್ಕರ್ ಅವರಿಗೆ. ಆಗ ಊರ್ಮಿಳಾ ವಯಸ್ಸು 21 ಆದರೆ ಆಶಾ ವಯಸ್ಸು 62 ಆಗಿತ್ತು!
ಆಕೆಯ ಹೋರಾಟದ ದಿನಗಳು
ಸಾಂಪ್ರದಾಯಕ ಕುಟುಂಬದಿಂದ ಬಂದ ಆಶಾ ತನಗಿಂತ 15 ವರ್ಷ ಹಿರಿಯರಾಗಿದ್ದ ಗಣಪತ್ ರಾವ್ ಭೋಸ್ಲೆ ಅವರನ್ನು ಪ್ರೀತಿಸಿ ಮದುವೆ ಆದರು. ಮನೆಯವರು ವಿರೋಧ ಮಾಡಿದಾಗ ಮನೆ ಬಿಟ್ಟು ಓಡಿ ಹೋದ ಅಪಕೀರ್ತಿಯು ಅವರದ್ದಾಯಿತು. ಪರಿಣಾಮವಾಗಿ ತವರು ಮನೆಯ ಸಂಪರ್ಕ ಕಡಿದು ಹೋಯಿತು. ಹಣಕಾಸಿನ ಮುಗ್ಗಟ್ಟು ಎದುರಾಯಿತು. ಗಂಡನ ಮನೆಯವರ ಹಿಂಸೆ ಆಕೆಯನ್ನು ಅರ್ಧ ಜೀವ ಮಾಡಿತು.
ಆಗ ಆಕೆಯು ಹಾಡುವುದು ಅನಿವಾರ್ಯವಾಯಿತು. ಆಗೆಲ್ಲ ಅಕ್ಕ ಲತಾ, ಗೀತಾ ದತ್ತ ಮತ್ತು ಸಂಶಾದ್ ಬೇಗಂ ಈ ಮೂವರು ಇದ್ದ ಎಲ್ಲಾ ಸಂಗೀತದ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದ ಕಾಲ. ಅವರು ಹಾಡಿ ಬಿಟ್ಟ ಹಾಡುಗಳನ್ನು ಆಶಾ ಹಾಡಬೇಕಾಯಿತು. ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಅವರು ಮನೆಯಲ್ಲಿ ಬಿಟ್ಟು ಬಂದು ಹಾಡಬೇಕಾದ ಅನಿವಾರ್ಯತೆ. ರಾತ್ರಿ ಮನೆಗೆ ಹೋಗುವಾಗ ಎಷ್ಟು ತಡವಾದರೂ ಅವರೇ ಅಡುಗೆ ಮಾಡಿ ಊಟ ಮಾಡಬೇಕಾದ ಅನಿವಾರ್ಯತೆ.
ಅಕ್ಕನ ನೆರಳಿನಿಂದ ಹೊರಬರುವುದು ಅನಿವಾರ್ಯ
ಆಗ ಸಹಾಯಕ್ಕೆ ನಿಲ್ಲಬೇಕಾದ ಅಕ್ಕ ಲತಾ ನೆರವಿಗೆ ಬರಲಿಲ್ಲ. ಅದರ ಜೊತೆಗೆ ಆಕೆಯ ಧ್ವನಿಯಲ್ಲಿ ಲತಾ ಛಾಯೆ ಇದೆ ಎಂಬ ಕಾರಣಕ್ಕೆ ಆಕೆಗೆ ಅವಕಾಶಗಳು ಕಡಿಮೆ ಆದವು. ಆಗ ಸಂಗೀತ ಕ್ಷೇತ್ರದಲ್ಲಿ ಉಳಿಯಬೇಕಾದರೆ ಅಕ್ಕನ ನೆರಳಿನಿಂದ ಹೊರಬರುವುದು ಅನಿವಾರ್ಯ ಆಯಿತು. ಅದಕ್ಕಾಗಿ ಆಕೆ ಇಂಗ್ಲೀಷ್ ಗಾಯಕರ ಹಾಡುಗಳನ್ನು ಆಲಿಸಲು ಆರಂಭ ಮಾಡಿದರು. ಒಂದೊಂದು ಹಾಡಿಗೂ ಗಂಟೆಗಟ್ಟಲೆ ರಿಯಾಝ್ ಮಾಡಿ ಹಾಡಿದರು. ಎಲ್ಲ ಸಂಗೀತ ನಿರ್ದೇಶಕರೂ ಲತಾ ಸೆರಗು ಹಿಡಿದು ಜೈ ಎನ್ನುತ್ತಿದ್ದ ಕಾಲದಲ್ಲಿ ಓ.ಪಿ ನಯ್ಯರ್, ಮದನ್ ಮೋಹನ್ ಮತ್ತು ಜೈದೇವ್ ಮೊದಲಾದ ಸಂಗೀತ ನಿರ್ದೇಶಕರು ಆಶಾ ಮೇಲೆ ಭರವಸೆ ಇಟ್ಟು ಆಕೆಯಿಂದ ಹಾಡಿಸಿದರು.
ಮುಂದೆ ಆರ್ ಡಿ ಬರ್ಮನ್ ಜೊತೆಗೆ ಆಶಾ ಎರಡನೇ ಮದುವೆ ಆದರು
ಮೊದಲ ಮದುವೆಯಿಂದ ಸುಖ ಕಾಣದ ಆಶಾ ಅಲ್ಲಿಂದ ಹೊರಬರಲು ಪಡಬಾರದ ಕಷ್ಟಪಟ್ಟರು. ಆಶಾ ಬದುಕಿನಲ್ಲಿ ಭಾರಿ ತಿರುವಿಗೆ ಕಾರಣರಾದವರು ಇಬ್ಬರು. ಒಬ್ಬರು ‘ಪಂಚಮ ದಾ’ ಎಂದು ಎಲ್ಲರಿಂದ ಕರೆಸಿಕೊಂಡಿದ್ದ ಸಂಗೀತ ನಿರ್ದೇಶಕರು ಆರ್.ಡಿ ಬರ್ಮನ್. ಇನ್ನೊಬ್ಬರು ಎ.ಆರ್ ರೆಹಮಾನ್.
ತನಗಿಂತ ಐದು ವರ್ಷ ಕಿರಿಯರಾದ ಆರ್.ಡಿ ಬರ್ಮನ್ ಅವರನ್ನು ಆಶಾ ಎರಡನೇ ಮದುವೆ ಆಗುತ್ತಾರೆ. ಅವರ ಜೋಡಿ ಹಿಂದಿ ಸಿನಿಮಾ ರಂಗದಲ್ಲಿ ಮೋಡಿ ಮಾಡುವಷ್ಟು ಅದ್ಭುತವಾದ ಹಾಡುಗಳನ್ನು ಸಂಗೀತ ಜಗತ್ತಿಗೆ ನೀಡಿತು. ಆಶಾ ತುಂಬಾ ಖುಷಿ ಪಟ್ಟ ವರ್ಷಗಳು ಅವು. ಆರ್.ಡಿ ಬರ್ಮನ್ ಅವರ ಸಂಗೀತ ಸಂಯೋಜನೆಯಲ್ಲಿ ಆಶಾ ಮನಸು ಬಿಚ್ಚಿ ಹಾಡಿದ ಅಷ್ಟೂ ಹಾಡುಗಳು ಹಿಟ್ ಆದವು.
ಮುಂದೆ ಆಶಾ 90ರ ದಶಕದಲ್ಲಿ ಅವಕಾಶಗಳ ಬರ ಎದುರಿಸಿದಾಗ ಆಕೆಯ ನೆರವಿಗೆ ಮತ್ತೆ ಬಂದವರು ಎ.ಆರ್ ರೆಹಮಾನ್. ಅವರು ಸಂಗೀತ ನಿರ್ದೇಶನ ಮಾಡಿದ ಪ್ರತಿ ಸಿನಿಮಾದಲ್ಲಿ ಒಂದೆರಡು ಹಾಡುಗಳನ್ನಾದರೂ ಆಶಾ ಧ್ವನಿಯಲ್ಲಿ ಹಾಡಿಸಿ ರೆಹಮಾನ್ ಅವೆಲ್ಲವೂ ಹಾಡುಗಳಿಗೆ ಅಮರತ್ವ ದೊರೆಯುವಂತೆ ಮಾಡಿದರು. ರೋಜಾ, ರಂಗೀಲಾ, ತಮಿಳಿನ ಇರುವರ್, ಅಲೈ ಪಾಯುದೆ , ಹಿಂದಿಯ ಧೌಡ್, ತಾಲ್, ಲಗಾನ್, ಸಾಥಿಯಾ, ತಕ್ಷಕ್ ಸಿನಿಮಾದ ಹಾಡುಗಳು ರೆಹಮಾನ್, ಆಶಾ ಕಾಂಬಿನೇಶನ್‌ನಲ್ಲಿ ಭಾರಿ ಜನಪ್ರಿಯತೆ ಪಡೆದವು. ರೆಹಮಾನ್ ಹಾಡುಗಳು ಆಶಾ ಅವರಿಗೆ ಪುನರ್ಜನ್ಮ ನೀಡಿದವು ಎಂದು ಖಚಿತವಾಗಿ ಹೇಳಬಹುದು.
ಸಾಲು ಸಾಲು ದುರಂತಗಳು
ಆಶಾ ಬದುಕಿನಲ್ಲಿ ನೂರಾರು ದುರಂತಗಳು ಸಾಲು ಸಾಲಾಗಿ ಬಂದು ಅವರನ್ನು ಅಲ್ಲಾಡಿಸಿ ಬಿಟ್ಟವು. ಬಾಲ್ಯದಲ್ಲಿ ತಂದೆಯ ಸಾವು, ಗಂಡನ ಮನೆಯವರ ಹಿಂಸೆ, ಮುರಿದು ಬಿದ್ದ ಮೊದಲ ಮದುವೆ, ದುಡಿಯಬೇಕಾದ ಅನಿವಾರ್ಯತೆ, ಎರಡನೇ ಗಂಡ ಆರ್.ಡಿ ಬರ್ಮನ್ ಬೇಗನೆ ಪ್ರಾಣ ಕಳೆದುಕೊಂಡದ್ದು, ಮೊದಲ ಮಗ ಹೇಮಂತ್ ಕುಮಾರ್ ಕ್ಯಾನ್ಸರಿಗೆ ಬಲಿಯಾದದ್ದು, ಮುದ್ದಿನ ಮಗಳು ಆತ್ಮಹತ್ಯೆ ಮಾಡಿಕೊಂಡದ್ದು, ಒಬ್ಬಂಟಿತನ, ಖಿನ್ನತೆ ಆವರಿಸಿದ ಬದುಕಿನ ಸಂಧ್ಯಾ ಕಾಲ ಇವುಗಳೆಲ್ಲವೂ ಆಕೆಯ ಬದುಕನ್ನು ಖಾಲಿ ಮಾಡುತ್ತಾ ಹೋದವು. ಆದರೆ ಹಾಡಲು ಬಂದು ನಿಂತರೆ ಎಲ್ಲ ನೋವುಗಳನ್ನು ಮರೆತು ಆರ್ದ್ರ ಧ್ವನಿಯಲ್ಲಿ ಹಾಡುವುದನ್ನು ನೋಡುವುದೇ, ಆಕೆಯ ಹಾಡುಗಳನ್ನು ಕೇಳುವುದೇ ಒಂದು ಆನಂದದ ಪರಾಕಾಷ್ಠೆ. ಅದು ಆಶಾ ಭೋಂಸ್ಲೆ ಅವರ ತಾಕತ್ತು.
ಪ್ರಶಸ್ತಿಗಳ ಸುರಿಮಳೆ ಆಶಾ ಬದುಕಿನಲ್ಲಿ
‘ಭಾರತ ರತ್ನ’ ಒಂದು ಬಿಟ್ಟು ಭಾರತದ ನೂರಾರು ಪ್ರಶಸ್ತಿಗಳು ಆಶಾ ಅವರಿಗೆ ಲಭಿಸಿಯಾಗಿದೆ. ಪದ್ಮ ವಿಭೂಷಣ, ಪದ್ಮಶ್ರೀ, ದಾದಾ ಸಾಹೇಬ್ ಫಾಲ್ಕೆ, ಎರಡು ರಾಷ್ಟ್ರ ಪ್ರಶಸ್ತಿಗಳು, ಹದಿನೆಂಟು ಬಾರಿ ಮಹಾರಾಷ್ಟ್ರ ರಾಜ್ಯದ ಹಿನ್ನೆಲೆ ಗಾಯನ ಪ್ರಶಸ್ತಿ, ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಒಂದು ಬಾರಿ ಫಿಲಂ ಫೇರ್ ಜೀವಮಾನದ ಪ್ರಶಸ್ತಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರಕಾರಗಳು ನೀಡುವ ಲತಾ ಮಂಗೇಷ್ಕರ್ ಸಮ್ಮಾನ ಪ್ರಶಸ್ತಿ, ಮಿಲೇನಿಯಂ ಗಾಯಕಿ, ನೈಟಿಂಗೇಲ್ ಆಫ್ ಏಷಿಯಾ ಪ್ರಶಸ್ತಿ……… ಹೀಗೆ ಪಟ್ಟಿ ಮಾಡುತ್ತ ಹೋದರೆ ಆ ಪಟ್ಟಿಯು ಮುಗಿಯುವುದೇ ಇಲ್ಲ.
ಇದನ್ನೂ ಓದಿ: Raja Marga Column : ನಿಮ್ಮ ಮಕ್ಕಳು ಪ್ರೀತಿಯ ಬಲೆಗೆ ಬಿದ್ದಿದ್ದಾರಾ? Handle with Care
ಗ್ರ್ಯಾಮಿ ಪ್ರಶಸ್ತಿಗೆ ಎರಡು ಬಾರಿ ನಾಮಕರಣ ಆದ ಮೊದಲ ಭಾರತೀಯ ಮಹಿಳೆ ಎಂದರೆ ಅದು ಆಶಾ ಭೋಂಸ್ಲೆ! ಆಕೆ ಹಾಡಿ ರೆಕಾರ್ಡ್ ಮಾಡಿರುವ ಹಾಡುಗಳ ಸಂಖ್ಯೆಯೇ 12,000 ದಾಟಿದೆ ಎನ್ನುತ್ತದೆ ಗಿನ್ನೆಸ್ ದಾಖಲೆ! ಐವತ್ತರ ದಶಕದಲ್ಲಿ ಹಾಡಲು ಆರಂಭ ಮಾಡಿದ ಆಶಾ ಇಂದಿಗೂ ಅದೇ ಸ್ಫೂರ್ತಿಯಿಂದ ಹಾಡುತ್ತಾರೆ. ಮೊನ್ನೆ ರಷ್ಯಾದಲ್ಲಿ ಸಂಗೀತ ರಸಮಂಜರಿ ಸಮರ್ಪಣೆ ಮಾಡಿ ಹಿಂದೆ ಬಂದಿರುವ ಆಕೆಯು ಕ್ರಿಕೆಟ್ ವಿಶ್ವಕಪ್ ಕೂಟದ ಫೈನಲ್ ಪಂದ್ಯದ ಮೊದಲು ನಡೆಯಲಿರುವ ರಸಮಂಜರಿ ಕಾರ್ಯಕ್ರಮದಲ್ಲಿ ಕೂಡ ಹಾಡಲಿದ್ದಾರೆ ಅನ್ನುವುದು ಖುಷಿ ಕೊಡುವ ಅಪ್ಡೇಟ್. ಆಕೆಯ ವಯಸ್ಸು 90 ಎನ್ನುವುದನ್ನು ಮತ್ತೆ ನಿಮಗೆ ನೆನಪು ಮಾಡುತ್ತೇನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ