Site icon Vistara News

Raja Marga Column : ಭವ್ಯ ರಾಮ ಮಂದಿರದ ಅದ್ಭುತ ವಿನ್ಯಾಸಗಾರ ಚಂದ್ರಕಾಂತ ಸೋಮಪುರ

Chandrakanth Sompura Rama Mandir Designer

ಜನವರಿ 22ರ ಸುಮೂಹರ್ತದಲ್ಲಿ ಅಯೋಧ್ಯೆಯಲ್ಲಿ ದಿವ್ಯವಾದ ಮತ್ತು ಭವ್ಯವಾದ ಶ್ರೀ ರಾಮ ಮಂದಿರವು (Ayodhya Shri Rama Mandir) ಲೋಕಾರ್ಪಣೆ ಆಗುತ್ತಿದೆ ಅನ್ನೋದೇ ಭುವನದ ಭಾಗ್ಯ. ಜಗತ್ತಿನಾದ್ಯಂತ ಇರುವ ಶತಕೋಟಿ ಹಿಂದೂಗಳು ಆ ಅಸದೃಶ ಮಂದಿರವನ್ನು ಕಣ್ಣ ತುಂಬಿಸಿಕೊಳ್ಳಲು ಈಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಹಿಂದೂಗಳ 500 ವರ್ಷಗಳ ದೀರ್ಘ ನಿರೀಕ್ಷೆಯ ಬಳಿಕ ಆ ಅಮೃತ ಘಳಿಗೆಯು ಈಗ ಬಂದೇ ಬಿಟ್ಟಿದೆ! ಆ ಮಂದಿರವು ‘ನ ಭೂತೋ ನ ಭವಿಷ್ಯತಿ’ ಆಗಿರಬೇಕೆಂದು ಪ್ರತಿಯೊಬ್ಬ ಹಿಂದೂವಿನ ಕನಸು. ಆ ರಾಮ ಮಂದಿರದ ನೀಲಿನಕ್ಷೆ ಮತ್ತು ವಿನ್ಯಾಸವನ್ನು (Design of Rama Mandir) ಸಿದ್ಧಮಾಡಿದವರು ಗುಜರಾತ್ ಮೂಲದ ಓರ್ವ ಯಶಸ್ವಿ ದೇಗುಲ ವಿನ್ಯಾಸಕರು (Temple Designer). ಅವರ ಹೆಸರು ಚಂದ್ರಕಾಂತ್ ಸೋಮಪುರ (Chandrakanth Somapura). ಆ ವಿನ್ಯಾಸವು ಸಿದ್ಧವಾಗಿದ್ದು ಬರೋಬ್ಬರಿ ಮೂವತ್ತ ಮೂರು ವರ್ಷಗಳ ಹಿಂದೆ!

15 ತಲೆಮಾರುಗಳಿಂದ ಆ ಕುಟುಂಬವು ದೇಗುಲಗಳ ವಿನ್ಯಾಸವನ್ನು ಮಾಡುತ್ತಿದೆ

ಹಿಂದೂ ದೇಗುಲಗಳ ವಿನ್ಯಾಸ ಮಾಡುವುದು ಸುಲಭದ ಕೆಲಸ ಅಲ್ಲವೇ ಅಲ್ಲ. ಅದಕ್ಕೆ ಧರ್ಮ ಶಾಸ್ತ್ರ, ಸಂಪ್ರದಾಯ, ವಾಸ್ತು, ದಿಕ್ಕುಗಳು, ಪುರಾಣದ ಜ್ಞಾನ, ವಿಜ್ಞಾನದ ತತ್ವಗಳು ಇವುಗಳು ಚೆನ್ನಾಗಿ ಅರಿವಿದ್ದರೆ ಮಾತ್ರ ಸಾಧ್ಯವಿದೆ.

ಅವರ ಕುಟುಂಬವು ಕಳೆದ ಹದಿನೈದು ತಲೆಮಾರುಗಳಿಂದ ದೇಗುಲಗಳ ವಿನ್ಯಾಸದಲ್ಲಿ ಭಾರೀ ಹೆಸರು ಮಾಡಿದೆ. ಚಂದ್ರಕಾಂತ್ ಅವರ ಅಜ್ಜ ಪ್ರಭುಶಂಕರ ಸೋಮಪುರ ಅವರು ಗುಜರಾತಿನ ಅತೀ ಪ್ರಸಿದ್ಧವಾದ ಸೋಮನಾಥ್ ಮಂದಿರದ (ಆಧುನಿಕ) ವಿನ್ಯಾಸವನ್ನು ಮಾಡಿದ್ದರು. ಇದೇ ಮನೆತನವು ಗುಜರಾತಿನ ಸ್ವಾಮಿ ನಾರಾಯಣ ಮಂದಿರ, ಪಾಲನ್ ಪುರದ ಅಂಬಾಜಿ ದೇವಸ್ಥಾನ, ಜಗತ್ಪ್ರಸಿದ್ಧ ಹವಾ ಮಹಲ್, ವಾಧ್ವ ಅರಮನೆ ಮೊದಲಾದವುಗಳನ್ನು ವಿನ್ಯಾಸ ಮಾಡಿದ ಕೀರ್ತಿ ಕೂಡ ಹೊಂದಿದೆ. ಅದರಲ್ಲಿಯೂ ಸ್ವಾಮಿ ನಾರಾಯಣ ಮಂದಿರವು ತನ್ನ ವಾಸ್ತು ವೈಭವದಿಂದ ಜಗತ್ತಿನ ಗಮನ ಸೆಳೆದಿತ್ತು.

ಅಜ್ಜನಿಂದ ಮೊಮ್ಮಗನಿಗೆ ವಿನ್ಯಾಸದ ತರಬೇತಿ.

ಚಂದ್ರಕಾಂತ್ ಸೋಮಪುರ ಅವರ ಅಜ್ಜ ಪ್ರಭಾಶಂಕರ್ ಅವರು ಸ್ವಾತಂತ್ರ್ಯದ ನಂತರ ಜೀರ್ಣೋದ್ಧಾರ ಆದ ಗುಜರಾತಿನ ಆಧುನಿಕ ಸೋಮನಾಥ್ ಮಂದಿರದ ವಿನ್ಯಾಸ ಮಾಡಿ ಭಾರೀ ಕೀರ್ತಿಗೆ ಭಾಜನರಾಗಿದ್ದರು. ಅವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆ ದೇಗುಲದ ವಿನ್ಯಾಸವು ಕೂಡ ಜಗತ್ತಿನಾದ್ಯಂತ ಇರುವ ಹಿಂದೂಗಳನ್ನು ತನ್ನ ಕಡೆಗೆ ಸೂಜಿಗಲ್ಲಿನಂತೆ ಸೆಳೆದಿತ್ತು.

ಆ ಕುಟುಂಬವು ವಿನ್ಯಾಸ ಮಾಡಿದ್ದು ಬರೋಬ್ಬರಿ 500 ದೇಗುಲಗಳನ್ನು!

ನಂತರದ ವರ್ಷಗಳಲ್ಲಿ ಈ ಕುಟುಂಬವು ದೇಶ ಮತ್ತು ವಿದೇಶಗಳಲ್ಲಿ 500ಕ್ಕಿಂತ ಅಧಿಕ ಬೃಹತ್ ಮಂದಿರಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವುಗಳಲ್ಲಿ ಜೈನ ಮಂದಿರಗಳು, ಬೌದ್ಧ ಮಂದಿರಗಳು ಕೂಡಾ ಇವೆ. ಸ್ವಾಮಿ ನಾರಾಯಣ ಮಂದಿರ, ಅಕ್ಷರ ಧಾಮ ಮಂದಿರ, ಅಮೆರಿಕಾದ ಟೆಕ್ಸಾಸಿನ ಭವ್ಯ ತಪೋಭೂಮಿ ಮಂದಿರ, ಲಂಡನ್‌ನ ಶ್ರೀ ರಾಮ ಮಂದಿರ……..ಇವುಗಳು ಅತೀ ಪ್ರಸಿದ್ಧಿ ಪಡೆದ ಮಂದಿರಗಳು. ಅವರು ಕಟ್ಟಿದ ಮಂದಿರಗಳೆಲ್ಲಾ ಲೋಕಪ್ರಸಿದ್ಧಿ ಪಡೆದಿವೆ.

ಚಂದ್ರಕಾಂತ್ ಅವರು ಅತೀ ಸಣ್ಣ ಪ್ರಾಯದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. ನಂತರ ತಮ್ಮ ಅಜ್ಜನಿಂದ ಮಂದಿರಗಳ ವಿನ್ಯಾಸಗಳನ್ನು ತುಂಬಾ ಚೆನ್ನಾಗಿ ಅಧ್ಯಯನ ಮಾಡಿದರು. ಭಾರತವನ್ನು ಸುತ್ತಿ ಎಲ್ಲ ದೇಗುಲಗಳ ವಾಸ್ತು ಅಧ್ಯಯನ ಮಾಡಿದರು. ಅವರ ಇಬ್ಬರು ಮಕ್ಕಳು ಕೂಡಾ ಸಿವಿಲ್ ಇಂಜಿನಿಯರಿಂಗ್ ಕಲಿತಿದ್ದು ಅಪ್ಪ ವಿನ್ಯಾಸ ಮಾಡಿದ ದೇಗುಲಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ.

ಅಶೋಕ್ ಸಿಂಘಾಲ್ ಅವರು ಮೊದಲು ಕರೆ ಮಾಡಿದ್ದು ಇದೇ ಚಂದ್ರಕಾಂತ್ ಅವರಿಗೆ.

1990ರ ಹೊತ್ತಿಗೆ ಅಯೋಧ್ಯೆಯ ರಾಮ ಮಂದಿರದ ಸುದೀರ್ಘ ಅವಧಿಯ ಹೋರಾಟ ಅಂದಾಜು ಐನೂರು ವರ್ಷ ನಡೆದು ಒಂದು ಪ್ರಾಮುಖ್ಯ ಹಂತಕ್ಕೆ ಬಂದಿತ್ತು. ರಾಮಮಂದಿರದ ನಿರ್ಮಾಣವು ಆಗಲೇಬೇಕು, ಅದು ರಾಮದೇವರು ಹುಟ್ಟಿದ್ದ ಅಯೋಧ್ಯಾ ನಗರದಲ್ಲಿಯೇ ಇರಬೇಕು ಎನ್ನುವುದು ಹಿಂದೂಗಳ ಶತಮಾನಗಳ ಕನಸಾಗಿತ್ತು.

ಆ ಕನಸು ಪೂರ್ತಿ ಮಾಡಲು ವಿಶ್ವ ಹಿಂದೂ ಪರಿಷತ್ತು ಹೊರಟಾಗ ಮೊದಲು ಆಯ್ಕೆ ಮಾಡಿದ್ದು ಚಂದ್ರಕಾಂತ್ ಸೋಮಪುರ ಅವರನ್ನು. 1989ರ ಸುಮಾರಿಗೆ ಆಗಿನ ವಿಶ್ವಹಿಂದೂ ಪರಿಷತ್ತಿನ ಮುಖಂಡರಾದ ಅಶೋಕ್ ಸಿಂಘಾಲ್ ಅವರು ಚಂದ್ರಕಾಂತ್ ಅವರನ್ನು ಸಂಪರ್ಕ ಮಾಡಿ ಅಯೋಧ್ಯೆಯ ಆ ಸ್ಥಳದ ಬಳಿಗೆ ಕರೆದುಕೊಂಡು ಹೋಗಿದ್ದರು. ಆಗಿನ್ನೂ ವಿವಾದಿತ ಕಟ್ಟಡ ಹಾಗೆ ಇತ್ತು ಮತ್ತು ವ್ಯಾಜ್ಯವು ಕೋರ್ಟಲ್ಲಿ ಇತ್ತು.

ಆದರೆ ಸಿಂಘಾಲ್ ಹೇಳಿದ ಮಾತು ‘ಚಂದ್ರಕಾಂತ್ ಜಿ, ಇದೇ ಜಾಗದಲ್ಲಿ ಭವ್ಯವಾದ, ದಿವ್ಯವಾದ ಮತ್ತು ಜಗತ್ತಿನಲ್ಲಿ ಅನ್ಯತ್ರ ಅಲಭ್ಯವಾದ ರಾಮಮಂದಿರದ ನಿರ್ಮಾಣವು ಆಗುವುದು ಖಂಡಿತ. ನೀವು ವಿನ್ಯಾಸ ಮಾಡಿಕೊಡಬೇಕು!’ ಎಂದು.

ಆಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಜಾಗವನ್ನು ಮೀಟರ್ ಟೇಪ್ ಹಿಡಿದು ಅಳತೆ ಮಾಡಲು ಅವಕಾಶ ಇರಲಿಲ್ಲ. ಆಗ ಚಂದ್ರಕಾಂತ್ ಅವರು ತಮ್ಮ ಪಾದದ ಸಹಾಯದಿಂದ ಅಳತೆ ಮಾಡಿ ಬರೆದು ಇಟ್ಟರು. ಅಶೋಕ್ ಸಿಂಘಾಲ್ ಮತ್ತೆ ಹೇಳಿದರು. ‘ಚಂದ್ರಕಾಂತ್ ಜಿ, ನೀವು ಕೋರ್ಟ್, ವ್ಯಾಜ್ಯ ಇವುಗಳ ಬಗ್ಗೆ ಚಿಂತೆಯನ್ನು ಮಾಡಬೇಡಿ. ದೇಗುಲದ ವಿನ್ಯಾಸ ಮಾಡಿಕೊಡಿ. ದೇಗುಲ ಆಗುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ!’ ಈ ಮಾತು ಹೇಳುವಾಗ ಅಶೋಕ್ ಸಿಂಘಾಲ್ ಅವರ ಕಣ್ಣಲ್ಲಿ ಆತ್ಮವಿಶ್ವಾಸ ಇತ್ತು ಮತ್ತು ಚಂದ್ರಕಾಂತ್ ಅವರ ಕಣ್ಣಲ್ಲಿ ನಂಬಿಕೆ ಇತ್ತು.

ಮುಂದಿನ ಮೂರು ತಿಂಗಳಿನಲ್ಲಿ ದೇಗುಲದ ಮೂರು ವಿನ್ಯಾಸಗಳು ಸಿದ್ಧವಾದವು

ಮುಂದಿನ ಮೂರು ತಿಂಗಳು ಚಂದ್ರಕಾಂತ್ ಅವರಿಗೆ ಊಟ, ಹಸಿವು, ನಿದ್ರೆ ಎಲ್ಲವೂ ಮರೆತುಹೋಗಿತ್ತು. ಶ್ರೀರಾಮನ ಪರಮ ಭಕ್ತರಾದ ಅವರಿಗೆ ಕನಸಲ್ಲಿ ರಾಮ ದೇವರು ಬಂದು ಮಾರ್ಗ ತೋರಿಸುತ್ತಾ ಇದ್ದರು.

ಕೇವಲ ಮೂರು ತಿಂಗಳ ಒಳಗೆ ದೇಗುಲದ ಮೂರು ವಿನ್ಯಾಸಗಳು ಸಿದ್ಧವಾದವು. ಅದನ್ನು ಸಂತರ ಮಂಡಳಿ ವೀಕ್ಷಣೆ ಮಾಡಿ ಒಂದು ವಿನ್ಯಾಸವನ್ನು ಆರಿಸಿತು.

National Holiday On Jan 22 For Ram Mandir Pran Pratishtha? Letter Sent For President’s Consideration

ಎಲ್ಲವೂ ದೇವರ ಸಂಕಲ್ಪ ಎಂದರು ಚಂದ್ರಕಾಂತ್

ದಯವಿಟ್ಟು ಗಮನಿಸಿ. ಆಗ ಅಯೋಧ್ಯೆಯ ರಾಮ ಮಂದಿರದ ಹೋರಾಟವು ಶಿಖರಕ್ಕೆ ಮುಟ್ಟಿತ್ತು. ಉತ್ತರಪ್ರದೇಶದ ಮುಲಾಯಂ ಸರಕಾರವು ಮಂದಿರದ ನಿರ್ಮಾಣಕ್ಕೆ ವಿರುದ್ಧ ಇತ್ತು. ಕೋರ್ಟು ತೀರ್ಪು ಯಾವಾಗ ಬರಬಹುದು ಎಂಬ ಸ್ಪಷ್ಟನೆ ಯಾರಿಗೂ ಇರಲಿಲ್ಲ.

ನಂತರ ನಡೆದ ಅಷ್ಟೂ ಘಟನೆಗಳು ನಮ್ಮ ಮುಂದಿವೆ. ಆಡ್ವಾಣಿ ಅವರು ಮಾಡಿದ ಅಯೋಧ್ಯಾ ರಥಯಾತ್ರೆ, ಗ್ರಾಮ ಗ್ರಾಮಗಳಲ್ಲಿ ಶಿಲಾ ಪೂಜನ, ವಿವಾದಿತ ಕಟ್ಟಡದ ಪತನ, ಸರಕಾರಗಳ ಪತನ, ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟಿನ ತೀರ್ಪು, ಶ್ರೀ ರಾಮಮಂದಿರ ಟ್ರಸ್ಟ್ ರಚನೆ…..ಎಲ್ಲವೂ ಒಂದೇ ಸರಳ ರೇಖೆಯಲ್ಲಿ ಪೋಣಿಸಿದ ಹಾಗೆ ಭಾಸವಾಗುತ್ತದೆ! ಅಶೋಕ್ ಸಿಂಘಾಲ್ ಅವರ ಗಟ್ಟಿ ಸಂಕಲ್ಪ ಶಕ್ತಿ, ವಿಷನ್, ಕೋಟಿ ಕೋಟಿ ಹಿಂದೂಗಳ ನಮ್ರ ಪ್ರಾರ್ಥನೆ ಎಲ್ಲವೂ ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿದ್ದವು.

ಸಂತರನ್ನು ಒಳಗೊಂಡ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಟ್ರಸ್ಟ್ ಚಂದ್ರಕಾಂತ್ ಅವರು ಮಾಡಿದ ಮೂರು ವಿನ್ಯಾಸಗಳಲ್ಲಿ ಉತ್ತಮವಾದ ಒಂದು ವಿನ್ಯಾಸವನ್ನು ಆಯ್ಕೆ ಮಾಡಿತು. ನಂತರ ಮರದ ಕೆತ್ತನೆಯ ದೇಗುಲದ ವಿನ್ಯಾಸ ಕೂಡ ಅವರು ಸಿದ್ದ ಮಾಡಿಕೊಟ್ಟರು.

ಮುಂದೆ ಅಮೃತ ಸದೃಶವಾದ ಮುಹೂರ್ತದಲ್ಲಿ ಸಂತರ ಮಾರ್ಗದರ್ಶನದಲ್ಲಿ ಭೂಮಿ ಪೂಜನವು ನಡೆಯಿತು. ಅದರ ನಂತರ ದೇಗುಲದ ನಿರ್ಮಾಣ ಕಾರ್ಯವು ಅತ್ಯಂತ ವೇಗವಾಗಿ ನಡೆದು ಈಗ ಪ್ರಾಣ ಪ್ರತಿಷ್ಠೆಗೆ ಕ್ಷಣ ಗಣನೆ ಆರಂಭ ಆಗಿದೆ. ಇತ್ತೀಚೆಗೆ ಸಂತರ ಸಲಹೆಯ ಮೇರೆಗೆ ಚಂದ್ರಕಾಂತ್ ಅವರು ತಮ್ಮ ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಕೂಡ ಮಾಡಿ ಕೊಟ್ಟಿದ್ದಾರೆ.

ಇದನ್ನೂ ಓದಿ : Raja Marga Column : ಅದು ಮಸೀದಿಯಲ್ಲ ಮಂದಿರ ಎಂಬ ದಾಖಲೆ ನೀಡಿದ್ದು ಒಬ್ಬ ಮುಸ್ಲಿಂ!

ಚಂದ್ರಕಾಂತ್ ಸೊಂಪೂರ ಅವರ ಹೆಸರು ಚಿರಸ್ಥಾಯಿ.

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ, ಅದರ ಪಕ್ಕದಲ್ಲಿ ಸೀತಾ ಮಂದಿರ, ಲಕ್ಷ್ಮಣ ಮಂದಿರ, ಭರತ ಮಂದಿರ ಮತ್ತು ಗಣಪತಿ ದೇವರ ಮಂದಿರಗಳು ತಲೆ ಎತ್ತಿ ನಿಲ್ಲಲ್ಲಿವೆ. ಅಷ್ಟ ಭುಜಾಕೃತಿಯ ಪಂಚಾಂಗದ ಮೇಲೆ ಈ ಭವ್ಯ ದೇವಾಲಯ ಸಂಕೀರ್ಣವು ಜಗತ್ತಿನ ಹಿಂದೂಗಳ ಅತಿ ಶ್ರೇಷ್ಠ ಶ್ರದ್ಧಾಕೇಂದ್ರ ಆಗುವುದು ಖಂಡಿತ. ಅದರ ಮೂಲಕ ಭಾರತದ ಐನೂರು ವರ್ಷಗಳ ಕನಸು ನನಸು ಆಗಲಿದೆ. ಹಾಗೆಯೇ ಈ ಶತಮಾನಗಳ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಅಂದಾಜು ಮೂರು ಲಕ್ಷ ಹಿಂದೂಗಳ ಆತ್ಮಕ್ಕೆ ಶಾಂತಿ ದೊರೆಯಲಿದೆ.

ಈ ರಾಮ ಮಂದಿರದ ವಿನ್ಯಾಸದ ಮೂಲಕ ಚಂದ್ರಕಾಂತ ಸೋಮಪುರ ಅವರು ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲಿದ್ದಾರೆ.

Exit mobile version