Site icon Vistara News

Raja Marga Column : ಮಹಾನ್ ಕಾದಂಬರಿ ಪರ್ವ ಹುಟ್ಟಿದ್ದು ಹೇಗೆ?; ಭೈರಪ್ಪರ ಸಿದ್ಧತೆ ಹೇಗಿತ್ತು?

Parva Bhyrappa

(ನಿನ್ನೆಯ ಸಂಚಿಕೆಯಿಂದ ಮುಂದುವರಿದಿದೆ)
ಕನ್ನಡದ ಶ್ರೇಷ್ಠ ಲೇಖಕರಾದ ಎಸ್‌.ಎಲ್ ಭೈರಪ್ಪ (SL Bhyrappa) ಅವರು ಹೇಗೆ ಭಾರತದ ಮಹಾನ್ ಕಾದಂಬರಿಕಾರ ಆದರು ಅನ್ನುವುದನ್ನು ನಿನ್ನೆ ಬರೆದಿದ್ದೆ. ಅವರ ಶ್ರೇಷ್ಠ ಕಾದಂಬರಿಗಳು ಯಾವುವು? ಭೈರಪ್ಪ ಅವರ ಮಹಾನ್ ಕಾದಂಬರಿ ‘ ಪರ್ವ’ (Parva Novel) ಹೇಗೆ ಇಂದು ವಿಶ್ವಮಾನ್ಯತೆಯನ್ನು ಪಡೆಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಇಂದು ಆ ಕಾದಂಬರಿ ಹುಟ್ಟಿದ ಕಥೆ ಹೇಗೆ? ಪರ್ವ ಕಾದಂಬರಿಯನ್ನು ಬರೆಯಲು ಭೈರಪ್ಪ ಅವರಿಗೆ ಪ್ರೇರಣೆ ಕೊಟ್ಟದ್ದು ಯಾರು? ಅದಕ್ಕೆ ಅವರು ಮಾಡಿದ ಸಿದ್ಧತೆ ಮತ್ತು ಅಧ್ಯಯನ ಹೇಗಿತ್ತು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯೋಣ. ಭೈರಪ್ಪನವರು ‘ನಾನೇಕೆ ಬರೆಯುತ್ತೇನೆ? ‘ಎಂಬ ಪುಸ್ತಕದಲ್ಲಿ ಪರ್ವ ಹುಟ್ಟಿದ ಕತೆಯನ್ನು ಸುಮಾರು 35 ಪುಟ ಬರೆದಿದ್ದಾರೆ. ಅದರ ಸಾರಾಂಶ ಅವರದ್ದೇ ಮಾತುಗಳಲ್ಲಿ ಓದುತ್ತ ಹೋಗೋಣ (Raja Marga Column).

ಪರ್ವಕ್ಕೆ ಪ್ರೇರಣೆ ಸಿಕ್ಕಿದ್ದು ಹೀಗೆ..

1965ರ ಒಂದು ದಿನ ನಾನು ಚಿಕ್ಕಮಗಳೂರಿನ ಒಂದು ಸಾಹಿತ್ಯದ ವೇದಿಕೆಯಲ್ಲಿ ಇದ್ದೆ. ಆಗ ನನ್ನ ಆತ್ಮೀಯ ಸ್ನೇಹಿತ ಡಾಕ್ಟರ್ ಎನ್ ನಾರಾಯಣಪ್ಪ ಅವರು ನನ್ನನ್ನು ಸಭೆಗೆ ಪರಿಚಯ ಮಾಡುತ್ತಾ ಮುಂದೆ ಭೈರಪ್ಪನವರು ಮಹಾಭಾರತದ ಬಗ್ಗೆ ಒಂದು ದೊಡ್ಡ ಕಾದಂಬರಿ ಬರೆಯುತ್ತಾರೆ ಎಂದುಬಿಟ್ಟರು. ಆ ಬಗ್ಗೆ ಅವರು ನನ್ನ ಹತ್ತಿರ ಮೊದಲಾಗಿ ಚರ್ಚೆ ಮಾಡಿರಲಿಲ್ಲ. ಆದರೂ ಅವರು ನನ್ನ ಆತ್ಮೀಯ ಗೆಳೆಯರಾದ ಕಾರಣ ನಾನು ಏನೂ ಹೇಳಲಿಲ್ಲ.

ಆದರೆ ಅವನು ಉಡದ ಜಾತಿಗೆ ಸೇರಿದವನು. ಪದೇಪದೆ ಕಾಲ್ ಮಾಡಿ, ಪತ್ರ ಬರೆದು ನನಗೆ ನೆನಪು ಮಾಡುತ್ತಲೇ ಇದ್ದ. ಆದರೆ ಅಂತಹ ಒಂದು ಮಹಾನ್ ಕೃತಿಯನ್ನು ಬರೆಯಲು ನನ್ನ ಹತ್ತಿರ ಯಾವ ಸಿದ್ಧತೆ ಕೂಡ ಇರಲಿಲ್ಲ. ಮಾನಸಿಕ ಸಿದ್ಧತೆ ಕೂಡ ಇರಲಿಲ್ಲ.

ಮಹಾಭಾರತ ಕೇವಲ ಒಂದು ಪುರಾಣ ಅಲ್ಲ. ಅದು ಇತಿಹಾಸ!

ನಾನು ಉತ್ತರ ಭಾರತದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೆ. ಆಗ ನಾನು ಮಾಡಿದ ಅಧ್ಯಯನಗಳು ನನಗೆ ಸ್ಫೂರ್ತಿ ಆದವು. ಉದಾಹರಣೆಗೆ ಹಿಮಾಲಯ ಪರ್ವತದ ತಪ್ಪಲು ಪ್ರದೇಶವಾದ ಗಡವಾಲ್ ಭಾಗದ ಒಂದು ಹಳ್ಳಿಯಲ್ಲಿ ಇಂದಿಗೂ ಬಹು ಪತಿತ್ವ ಪದ್ಧತಿ ಇದೆ! ಕುಟುಂಬದ ಹಿರಿಯ ಮಗನು ಒಂದು ಹೆಣ್ಣನ್ನು ಮದುವೆಯಾಗಿ ಕರೆದುತಂದ ಅಂತಾದರೆ ಉಳಿದ ಎಲ್ಲ ಸೋದರರು ಆಕೆಯನ್ನು ತಮ್ಮ ಪತ್ನಿಯಾಗಿ ಸ್ವೀಕಾರ ಮಾಡುತ್ತಾರೆ! ಇದು ದ್ರೌಪದಿಯ ಪ್ರಸಂಗದಿಂದ ಸ್ಫೂರ್ತಿ ಪಡೆದದ್ದು. ಹಾಗೆಯೇ ವಿರಾಟ್ ನಗರದ (ಈಗ ಅದು ಒಂದು ಹಳ್ಳಿ) ದಂಪತಿಯರು ಸೇರಿ ಭೀಮನ ಪೂಜೆ ಮಾಡುತ್ತಾರೆ. ಯಾಕೆ? ಎಂದು ಕೇಳಿದರೆ ಹಿಂದೆ ಕೀಚಕ ಎಂಬ ಕ್ರೂರಿ ಊರಿನ ಹೆಣ್ಣು ಮಕ್ಕಳ ಅತ್ಯಾಚಾರ ಮಾಡುತ್ತಿದ್ದ, ಭೀಮ ಆತನನ್ನು ಕೊಂದು ಸ್ತ್ರೀಯರ ಸ್ವಾಭಿಮಾನ ಕಾಪಾಡಿದ ಎಂದು ಹೇಳುತ್ತಾರೆ. ಹಾಗೆಯೇ ದ್ವಾರಕಾ ನಗರ ಮತ್ತು ಕುರುಕ್ಷೇತ್ರದ ಉತ್ಖನನ ನಡೆದಾಗ ನಮಗೆ ದೊರೆತ ಮಾಹಿತಿಗಳ ಪ್ರಕಾರ ಮಹಾಭಾರತವು ಒಂದು ಇತಿಹಾಸದ ಭಾಗ ಎಂದು ಖಚಿತವಾಗಿ ಹೇಳಬಹುದು. ಆ ನಂಬಿಕೆಯ ಮೇಲೆ ನಾನು ಪರ್ವ ಬರೆಯಬೇಕು ಎಂದು ನಿರ್ಧಾರ ಮಾಡಿದ್ದೆ.

ಉತ್ತರಭಾರತದ ಪ್ರವಾಸಕ್ಕೆ ಸಿದ್ಧತೆ

ಹೇಳಿ ಕೇಳಿ ನಾನು ಇತಿಹಾಸದ ವಿದ್ಯಾರ್ಥಿ. ನನ್ನ ಕಾದಂಬರಿ ಕಲ್ಪನೆಗಳ ಮೇಲೆ ನಿಲ್ಲಬಾರದು, ಅದಕ್ಕೆ ವಾಸ್ತವದ ನೆಲೆಗಟ್ಟು ಬೇಕು ಎಂದು ನಿರ್ಧಾರ ಮಾಡಿದ್ದೆ. ಅದಕ್ಕೆ ನಾನು ಮಹಾಭಾರತ ನಡೆದ ಉತ್ತರದ ಸ್ಥಳಗಳ ಸಂದರ್ಶನ ಮಾಡಲೇ ಬೇಕಿತ್ತು.

ಕಾಲೇಜಿನಿಂದ ರಜೆ ಪಡೆಯುವುದು ತುಂಬಾ ಕಷ್ಟವಾಯಿತು. ಒಬ್ಬನೇ ಹೊರಡುವ ಕಾರಣ ರಿಸ್ಕ್ ಹೆಚ್ಚಿತ್ತು. ಊಟ, ವಸತಿಗಳ ಬಗ್ಗೆ ಕಲ್ಪನೆಯೇ ಇರಲಿಲ್ಲ. ರೈಲು ಹೋಗದ ಎಷ್ಟೋ ಪ್ರದೇಶಗಳು ಇದ್ದವು. ಮುಂಜಾಗರೂಕತೆಯ ಅಂಗವಾಗಿ ಕಾಲರಾ ಮತ್ತು ಟೈಫಾಯ್ಡ್ ನಿರೋಧಕ ಚುಚ್ಚುಮದ್ದು ತೆಗೆದುಕೊಂಡು ಸೂಟ್ ಕೇಸ್ ಹಿಡಿದು 1975ರ ಆಗಸ್ಟ್ ತಿಂಗಳಲ್ಲಿ ಹೊರಟೆ ಬಿಟ್ಟೆ.

ಮದುವೆಯಾದಾಗ ಭೈರಪ್ಪ ಹೀಗಿದ್ದರು.

ಸ್ಪಷ್ಟತೆ ನೀಡಿದ ಉತ್ತರ ಭಾರತದ ಪ್ರವಾಸ

ಗುಜರಾತಿನ ಸೋಮನಾಥದಿಂದ ನನ್ನ ಪ್ರವಾಸ ಶ್ರೀ ಕೃಷ್ಣನ ದ್ವಾರಕೆಯ ಮೂಲಕ ಮುಂದುವರೆಯಿತು. ಅಲ್ಲಿ ಡಾಕ್ಟರ್ ಜೆ.ಜೆ. ಥಾಕರ್ ಎಂಬ ವಿದ್ವಾಂಸರನ್ನು ದೀರ್ಘವಾಗಿ ಸಂದರ್ಶನ ಮಾಡಿ ದ್ವಾರಕೆಯ ಇತಿಹಾಸ, ಉತ್ಖನನ, ಯಾದವರ ಜೀವನ ಕ್ರಮ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಯಿತು. ಮಥುರಾ, ವಿರಾಟ ನಗರ, ಸಾಲ್ವನ ಸೌಭನಗರ, ರುಕ್ಮಿಣಿಯ ಕುಂಡಿನಾ ಪುರ, ಹಸ್ತಿನಾವತಿ, ಕುರುಕ್ಷೇತ್ರ, ಪಾಂಡುರಾಜನ ಪಾಂಡುಕೇಶ್ವರ…. ಯಾವುದನ್ನೂ ಬಿಡದೇ ಸಂದರ್ಶನ ಮಾಡಿದ್ದೆ. ಕುರುಕ್ಷೇತ್ರದ ಉತ್ಖನನದ ವಿವರಗಳನ್ನು ಡಾಕ್ಟರ್ ಫಡ್ಕೆ ಎಂಬವರು ನೀಡಿದರು. ಅವೆಲ್ಲವೂ ನನ್ನನ್ನು ಬೆಚ್ಚಿಬೀಳಿಸಿದವು.

ವೇದಗಳ ಕಾಲದ ಜೀವನ ಪದ್ಧತಿ

ನನ್ನ ಸಂಚಾರದ ಇನ್ನೊಂದು ಉದ್ದೇಶ ಎಂದರೆ ವೇದಗಳ ಕಾಲದ ಜೀವನ ಪದ್ಧತಿ, ಅವರ ಕೃಷಿ, ಆಹಾರ ಪದ್ಧತಿ, ಪಶು ಸಂಗೋಪನೆ, ಲೋಹವಿಜ್ಞಾನ, ಧಾರ್ಮಿಕ ನಂಬಿಕೆಗಳು, ಯುದ್ಧ ವಿಧಾನ, ನೀರಾವರಿ ಪದ್ಧತಿ, ರಾಜಕೀಯ ಹಿನ್ನೆಲೆ ಎಲ್ಲವನ್ನೂ ಅರಿಯುವುದು. ದಾರಿಯುದ್ದಕ್ಕೂ ಹತ್ತಾರು ವಿದ್ವಾಂಸರನ್ನು ಭೇಟಿ ಮಾಡಿದೆ. ಅವರು ಹೇಳಿದ್ದರಲ್ಲಿ ನನಗೆ ಕನ್ವಿನ್ಸ್ ಆದ ಭಾಗವನ್ನು ಮಾತ್ರ ಬರೆದಿಟ್ಟೆ. ನನ್ನ ಪ್ರವಾಸದ ಇನ್ನೊಂದು ಉದ್ದೇಶ ಎಂದರೆ ಮಹಾಭಾರತದ ನಿಖರವಾದ ಕಾಲ ನಿರ್ಣಯವನ್ನು ಮಾಡುವುದು. ಅದಕ್ಕೆ ಪೂರಕವಾಗಿಯೇ
ಮಹಾಭಾರತದ ಪಾತ್ರಗಳ ವಯಸ್ಸುಗಳನ್ನು ಒಂದು ಟೈಮ್ ಲೈನಿನಲ್ಲಿ ಅಳವಡಿಸುವುದು. ಉದಾಹರಣೆಗೆ ಕುರುಕ್ಷೇತ್ರ ಯುದ್ಧ ನಡೆದಾಗ ಭೀಷ್ಮರ ವಯಸ್ಸು 120 ವರ್ಷ ಆದರೆ ಉಳಿದ ಪಾತ್ರಗಳ ವಯಸ್ಸು ಎಷ್ಟು?
ಪಾರ್ಗಿಟರ್ ಎಂಬ ವಿದ್ವಾಂಸರು ನೀಡಿದ ಇಡೀ ಮಹಾಭಾರತದ ವಂಶವೃಕ್ಷವು ನನ್ನ ಹಲವು ಗೊಂದಲಗಳನ್ನು ಪರಿಹಾರ ಮಾಡಿತ್ತು. ನಾನೀಗ ಮಹಾಭಾರತದ ಕಾಲದಲ್ಲಿ ನಿಂತು ಯೋಚನೆ ಮಾಡುವ ಮಟ್ಟಕ್ಕೆ ಬೆಳೆದಿದ್ದೆ.

ಮಹಾಭಾರತದ ಒಂದೊಂದೇ ಪಾತ್ರವು ಒಳಗೆ ಇಳಿಯಿತು

ಕುಮಾರವ್ಯಾಸ ಬರೆದ ಭಾರತ, ಪಂಪನ ಭಾರತ ಮತ್ತು ಕೃಷ್ಣ ಶಾಸ್ತ್ರಿಗಳ ವಚನ ಭಾರತ ಮೊದಲೇ ಓದಿದ್ದ ಕಾರಣ ಮತ್ತು ಉತ್ತರ ಭಾರತದ ಪ್ರವಾಸ ಮಾಡಿದ ಕಾರಣ ಮಹಾಭಾರತದ ಒಂದೊಂದೇ ಪಾತ್ರವೂ ನನ್ನ ಒಳಗೆ ಇಳಿಯಲು ಆರಂಭ ಆಗಿದ್ದವು. ದ್ರೌಪದಿ, ಮಾದ್ರಿ, ಕುಂತಿ, ಭೀಷ್ಮ, ದ್ರೋಣ, ಕೃಪ, ಕೃಷ್ಣ, ಕರ್ಣ, ಭೀಮ, ಅರ್ಜುನ, ಶಲ್ಯ, ಶಕುನಿ ಮೊದಲಾದ ಪಾತ್ರಗಳು ನನ್ನೊಳಗೆ ಇಳಿಯಲು ಆರಂಭ ಆಗಿದ್ದವು. ನನ್ನ ನಿದ್ದೆ ಹೊರಟುಹೋಗಿತ್ತು. ಪರ್ವ ಬರೆಯಲೇ ಬೇಕು ಎಂಬ ತೀವ್ರವಾದ ತುಡಿತ ಒಳಗಿನಿಂದ ಆರಂಭ ಆಗಿತ್ತು. ಮೈಸೂರಿಗೆ ಹಿಂದಿರುಗಿ ಬಂದ ನಂತರ ಒಂದು ರೀತಿಯ ಕೋಶಾವಸ್ಥೆಗೆ ಇಳಿದಿದ್ದೆ. ಮತ್ತೆ ಮೂರುವರೆ ವರ್ಷಗಳ ದೀರ್ಘ ಅವಧಿಗೆ ಕೇವಲ ಅಧ್ಯಯನ ಮತ್ತು ಸಂಶೋಧನೆ ನಡೆದವು. ಶ್ರೇಷ್ಠ ವಿದ್ವಾಂಸರಾದ ವಿ.ಸೀ ಅವರ ಜೊತೆ ಮತ್ತು ಪಾವೆಂ.ಆಚಾರ್ಯ ಅವರ ಜೊತೆಗೆ ಹಲವು ದಿನಗಳ ಚರ್ಚೆಗಳು ನನ್ನ ಜಿಜ್ಞಾಸೆಗಳನ್ನು ತಣಿಸಿದವು. ಕುಂತಿಯ ಪಾತ್ರವು ನನ್ನನ್ನು ಗಾಢವಾಗಿ ತಟ್ಟಿದ ಕಾರಣ ಆಕೆಯ ಕಣ್ಣುಗಳಿಂದ ಪರ್ವ ಬರೆಯಬೇಕು ಎಂದು ನಿರ್ಧಾರ ಮಾಡಿದ್ದೆ. ಮಾದ್ರ ದೇಶದ ಮಣ್ಣಿನಿಂದ ಕಥೆ ಆರಂಭ ಆಗಬೇಕು ಎಂದು ಯೋಚನೆ ಮಾಡಿದ್ದೆ.

ಭೈರಪ್ಪ ಅವರು ಪರ್ವ ಕಾದಂಬರಿಯಲ್ಲಿ ಮಹಾಭಾರತವನ್ನು ನೋಡಿದ್ದು ಕುಂತಿಯ ಕಣ್ಣುಗಳಿಂದ.

ಇನ್ನು ಬಾಕಿ ಇದ್ದದ್ದು ‘ಬರವಣಿಗೆ’ ಎಂಬ ಹೆರಿಗೆ ನೋವು

ಕಾಲೇಜಿನಲ್ಲಿ ರಜೆ ಪಡೆಯಲು ನನಗೆ ಸಾಧ್ಯವೇ ಇರಲಿಲ್ಲ. ನನಗೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಬರೆಯಲು ಒಂದು ಮೌನದ ಜಾಗ ಬೇಕಿತ್ತು. ಅದಕ್ಕಾಗಿ ಮೈಸೂರು ರಾಮಕೃಷ್ಣಾಶ್ರಮದ ವೇದಾಂತ ಕಾಲೇಜಿನ ಒಂದು ಕೊಠಡಿಯನ್ನು ಆರಿಸಿಕೊಂಡೆ. ಆರಂಭದಲ್ಲಿ ಒಂದೊಂದೇ ಪುಟ ಬರೆದೆ. ಕ್ರಮೇಣ ವೇಗ ಹೆಚ್ಚಿತು. ರಾತ್ರಿ ನಿದ್ದೆ ಮರೆತೇ ಹೋಯಿತು. ಊಟ, ತಿಂಡಿ ವ್ಯತ್ಯಯ ಆಯಿತು. ಆರೋಗ್ಯ ಕೈ ಕೊಟ್ಟು ಮೂರು ತಿಂಗಳ ಗ್ಯಾಪ್ ಆಯಿತು. ತುಂಬಾ ಆಯಾಸ ಆದಾಗ ಆಶ್ರಮದ ತೋಟದಲ್ಲಿ ಸ್ವಲ್ಪ ಹೊತ್ತು ವಿಹಾರ ಮಾಡಿ ಬಂದರೆ ಆಯಾಸ ಪರಿಹಾರ ಆಗುತ್ತಿತ್ತು. ಕೆಲವೊಮ್ಮೆ ಬೆಳಿಗ್ಗೆ ಬೇಗ ಎದ್ದು ಬರೆಯುತ್ತಿದ್ದೆ. ಮರುದಿನ ಏನು ಬರೆಯಬೇಕು ಎಂದು ರಾತ್ರಿ ಕನಸಲ್ಲಿ ಬಂದು ಸ್ಫೂರ್ತಿ ಕೊಡುತ್ತಿತ್ತು. ಯಾರೋ ನನ್ನ ಕೈ ಹಿಡಿದು ಬರೆಸುತ್ತಿದ್ದಾರೆ ಎಂಬ ಭಾವ ಕಾಡುತ್ತಿತ್ತು.

ಇಷ್ಟೆಲ್ಲದರ ನಡುವೆ ದಿನವೂ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳಿಗೆ ಎರಡು ಪೀರಿಯಡ್ ಪಾಠ ಮಾಡಿ ಬರುವುದನ್ನು ತಪ್ಪಿಸಲಿಲ್ಲ. ಎಷ್ಟೋ ಬಾರಿ ಮಾನಸಿಕ ಒತ್ತಡದ ಕಾರಣ ಕೌನ್ಸೆಲಿಂಗ್ ಮಾಡಿಕೊಂಡದ್ದು ಇದೆ. ಕೊನೆಗೆ ನನ್ನ ಹಲವು ವರ್ಷಗಳ ಕನಸಿನ ಕಾದಂಬರಿ ಪರ್ವ ಪೂರ್ತಿಯಾಗಿ ಬಿಡುಗಡೆ ಆದಾಗ ನನಗೆ ಅದು ಮರುಹುಟ್ಟು ಆದ ಹಾಗೆ ಆಗಿತ್ತು!

ಇದನ್ನೂ ಓದಿ: Raja Marga Column : ಭೈರಪ್ಪರ ಪರ್ವ ಈಗ ಸಿನಿಮಾ; ಕನ್ನಡದ ಶ್ರೇಷ್ಠ ಕಾದಂಬರಿ ಸೀಮೋಲ್ಲಂಘನ

ಭರತವಾಕ್ಯ

ಪರ್ವ ಕಾದಂಬರಿ ಏಳುನೂರು ಪುಟಗಳ ಬೃಹತ್ ಕಾದಂಬರಿ. ಮಹಾಭಾರತದ ಕಥೆಯು ಹಲವು ಕವಿಗಳಿಂದ, ಹಲವು ಭಾಷೆಗಳಲ್ಲಿ ಮರುಹುಟ್ಟು ಪಡೆದರೂ ಪರ್ವ ಅವೆಲ್ಲವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಪರ್ವವು ಯುದ್ಧದ ಕರಾಳತೆಯನ್ನು ಬಹಳ ತೀವ್ರವಾಗಿ ಚಿತ್ರಣ ಮಾಡಿದೆ. ಉತ್ತರ ಭಾರತಕ್ಕೆ ಭೈರಪ್ಪ ಅವರು ಹೋದಾಗ 1965ರ ಭಾರತ ಪಾಕಿಸ್ತಾನ ಯುದ್ಧದ ಯೋಧರ ವಿಧವೆಯರನ್ನು ಭೇಟಿ ಮಾಡಿ ಅವರ ಬದುಕಿನ ಬಗ್ಗೆ ಚರ್ಚೆ ಮಾಡಿದ್ದರು. ಅದರಿಂದಾಗಿ ಈ ಕೃತಿಯು ಯುದ್ಧಗಳ ರಕ್ತಪಾತಕ್ಕೆ ವಿರುದ್ಧವಾಗಿದ್ದು ವಿಶ್ವಶಾಂತಿಯ ಪರವಾಗಿದೆ ಎಂದು ಅವರೇ ಹೇಳಿದ್ದಾರೆ. ಇಂಥಹ ಕೃತಿಗೆ ಜ್ಞಾನಪೀಠ ಪ್ರಶಸ್ತಿಯು ದೊರೆತಿಲ್ಲ ಅಂದರೆ ಆ ಪ್ರಶಸ್ತಿಯ ಬಗ್ಗೆಯೇ ಕೆಲವೊಮ್ಮೆ ಜಿಗುಪ್ಸೆ ಬರುತ್ತದೆ. ಪರ್ವ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿಗಿಂತ ಹೆಚ್ಚು ಎತ್ತರದಲ್ಲಿ ಇದೆ!

Exit mobile version