Site icon Vistara News

ರಾಜ ಮಾರ್ಗ ಅಂಕಣ : ನಾನು ಆಜಾದ್‌, ಇನ್ನೆಂದೂ ನಿಮ್ಮ ಕೈಗೆ ಸಿಗಲಾರೆ; ಆ ಕ್ರಾಂತಿಕಾರಿ ಸಾವಿನಲ್ಲೂ ಮಾತು ಉಳಿಸಿಕೊಂಡಿದ್ದ!

Chandra Shekhara Azaad

ಡಿಸೆಂಬರ್ 20, 1921. ಬನಾರಸ್ ನಗರದ ಒಂದು ಬ್ರಿಟಿಷ್ ಕೋರ್ಟ್‌ನಲ್ಲಿ (British court) ಒಬ್ಬ ಪಾರ್ಸಿ ನ್ಯಾಯಾಧೀಶನಾದ ಜಸ್ಟೀಸ್ ಖಾರೇಘಾಟ್ ಮುಂದೆ ಒಬ್ಬ ತೀಕ್ಷ್ಣ ಕಣ್ಣುಗಳ ಹುಡುಗ ಎದೆ ಉಬ್ಬಿಸಿ ನಿಂತುಕೊಂಡಿದ್ದ! ಆತನ ವಯಸ್ಸು ಕೇವಲ 15 ವರ್ಷ (15 Year old Fighter) ಆಗಿತ್ತು! ಆ ಮ್ಯಾಜಿಸ್ಟ್ರೇಟ್ ಖಾರೇಘಾಟನಿಗೆ ಭಾರತೀಯ ಹೋರಾಟಗಾರರನ್ನು (Indian Fighters) ಕಂಡರೆ ಮೈಯೆಲ್ಲ ಉರಿದುಹೋಗುತ್ತಿತ್ತು. ಆ ಸಣ್ಣ ಹುಡುಗನು ಮಾಡಿದ್ದ ತಪ್ಪು ಏನೆಂದರೆ ಬ್ರಿಟಿಷ್ ಸರಕಾರದ ವಿರುದ್ಧ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ್ದು ಮತ್ತು ಒಬ್ಬ ಮುದುಕನನ್ನು ಲಾಠಿಯಿಂದ ಹೊಡೆಯುತ್ತಿದ್ದ ಬ್ರಿಟಿಷ್ ಪೊಲೀಸನ ಹಣೆಗೆ ನೇರವಾಗಿ ನಿಖರವಾಗಿ ಗುರಿಯಿಟ್ಟು ಕಲ್ಲು ಬಿಸಾಡಿ ಗಾಯ ಮಾಡಿದ್ದು! (ರಾಜ ಮಾರ್ಗ ಅಂಕಣ)

ಮ್ಯಾಜಿಸ್ಟ್ರೇಟ್ ಕೇಳಿದ ಮೂರು ಪ್ರಶ್ನೆಗಳಿಗೆ ಸಿಡಿಲಿನ ಉತ್ತರ!

ಮ್ಯಾಜಿಸ್ಟ್ರೇಟ್ ಮೊದಲ ಪ್ರಶ್ನೆ ಕೇಳಿದ್ದರು. ನಿನ್ನ ಹೆಸರು?
ಹುಡುಗ ಸಿಡಿದು ಹೇಳಿದ – ಆಝಾದ್! (ಅಂದರೆ ಸ್ವತಂತ್ರ)

ಮ್ಯಾಜಿಸ್ಟ್ರೇಟ್ ಎರಡನೆಯ ಪ್ರಶ್ನೆ ಕೇಳಿದರು. ನಿನ್ನ ತಂದೆ ಯಾರು?
ಮತ್ತೆ ಸಿಡಿಲಿನಂಥ ಉತ್ತರ – ಸ್ವತಂತ್ರತಾ!

ಮೂರನೇ ಪ್ರಶ್ನೆ – ನಿನ್ನ ಮನೆ ಎಲ್ಲಿದೆ?
ಮತ್ತೆ ಗುಂಡು ಹೊಡೆದಂಥ ಉತ್ತರ – ಸೆರೆಮನೆ!

ಇದ್ಯಾವುದೂ ಸಿದ್ಧತೆ ಮಾಡಿ ಬಂದು ಒಪ್ಪಿಸಿದ ಉತ್ತರಗಳು ಆಗಿರಲಿಲ್ಲ! ಆದರೆ, ಬ್ರಿಟಿಷ್ ಸಾಮ್ರಾಜ್ಯದ ಎದೆಯನ್ನು ನಡುಗಿಸುವ ಧಿಮಾಕಿನ ಉತ್ತರಗಳು!

ಈ ಉತ್ತರಗಳಿಂದ ಕುದ್ದುಹೋದ ನ್ಯಾಯಾಧೀಶ ಅವನ ವಯಸ್ಸನ್ನು ಕೂಡ ಲೆಕ್ಕಿಸದೆ ಅವನಿಗೆ ಆ ಕಾಲದಲ್ಲಿ ಅತೀ ಕ್ರೂರ ಶಿಕ್ಷೆ ಎಂದೇ ಪರಿಗಣಿಸಲ್ಪಟ್ಟ 15 ಚಡಿ ಏಟಿನ ಶಿಕ್ಷೆ ವಿಧಿಸಿ ಎದ್ದುಹೋದ!

ಮರುದಿನ ಅದೇ ಹುಡುಗನನ್ನು ಬರೇ ಕೌಪೀನದಲ್ಲಿ ನಿಲ್ಲಿಸಿ ಅತ್ಯಂತ ಬಲಿಷ್ಠವಾದ ಒಬ್ಬ ಆಳಿನ ಕೈಯಲ್ಲಿ ಹರಿತವಾದ ಅಲಗು ಹೊಂದಿದ್ದ ಚಾಟಿ ಕೊಟ್ಟು ಹದಿನೈದು ಏಟುಗಳನ್ನು ಹೊಡೆಸಲಾಯಿತು. ಆ ಚಾಟಿಯನ್ನು ಇಡೀ ರಾತ್ರಿ ನೀರಲ್ಲಿ ನೆನೆಹಾಕಿ ಗಡಸು ಮಾಡಲಾಗಿತ್ತು! ರಕ್ತ ಝಿಲ್ಲೆಂದು ಚಿಮ್ಮಿತ್ತು. ಚರ್ಮ ಕಿತ್ತು ಬಂದಿತ್ತು. ಹುಡುಗ ಪ್ರತೀ ಏಟಿಗೂ ವಂದೇ ಮಾತರಮ್, ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತ ಎಲ್ಲ ಏಟುಗಳನ್ನು ಸಹಿಸಿಕೊಂಡ!

ಹುಡುಗ ಮಾಡಿದ ಗಟ್ಟಿ ಪ್ರತಿಜ್ಞೆ

ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ನಂತರ ತಾನು ಇನ್ನು ಯಾವತ್ತೂ ಬ್ರಿಟಿಷ್ ಪೊಲೀಸರ ಕೈಗೆ ಸಿಕ್ಕಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ!

‘ಮೈ ಆಜಾದ್ ಹೂಂ. ಆಜಾದ್ ಹೀ ರಹೂಂಗಾ!’ ಇದು ಅಂದು ಅವನು ಮಾಡಿದ ಪ್ರತಿಜ್ಞೆ.

ಮುಂದೆ ಹತ್ತು ವರ್ಷಗಳ ಕಾಲ ಆತನು ತನ್ನ ಕ್ರಾಂತಿಕಾರಿಗಳ ಸೈನ್ಯವನ್ನು ಕಟ್ಟಿಕೊಂಡು ಬ್ರಿಟಿಷ್ ಸರಕಾರವನ್ನು ಅಕ್ಷರಶಃ ನಡುಗಿಸಿದ್ದ. ಭಗತ್ ಸಿಂಗ್ ಅಂತವರಿಗೆ ಪ್ರೇರಣೆ ಕೊಟ್ಟದ್ದು ಅವನೇ. ಆತನಿಗೆ ಹಿಂಸೆಯಿಂದ ಮಾತ್ರವೇ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬ ಬಲವಾದ ನಂಬಿಕೆಯು ಇತ್ತು. ಆತನ ಕ್ರಾಂತಿಕಾರಕ ಚಟುವಟಿಕೆಗಳ ಬಗ್ಗೆ ನಾನಿಂದು ವಿಸ್ತಾರವಾಗಿ ಬರೆಯಲು ಹೋಗುವುದಿಲ್ಲ.

ಮುಂದೆ ಆ ಅಗ್ನಿಪರೀಕ್ಷೆಯ ದಿನ ಬಂದೇ ಬಿಟ್ಟಿತು!

ಅಂದು ಫೆಬ್ರುವರಿ 27, 1931! ಆ ಕ್ರಾಂತಿಕಾರಿ ತನ್ನ ಸಹವರ್ತಿಯ ಜೊತೆಗೆ ಅಲಹಾಬಾದ್‌ನ ಆಲ್ಫ್ರೆಡ್ ಪಾರ್ಕಿನಲ್ಲಿ ರಹಸ್ಯವಾಗಿ ಮಾತನಾಡುತ್ತಿದ್ದಾಗ ಪೊಲೀಸರಿಗೆ ಯಾರಿಂದಲೋ ಸೂಚನೆ ಹೋಗಿತ್ತು. ಕೆಲವೇ ಕ್ಷಣದಲ್ಲಿ ಪೊಲೀಸ್ ಸೈನ್ಯವು ಪಾರ್ಕಿಗೆ ಬಂದು ನಾಲ್ಕು ದಿಕ್ಕುಗಳಲ್ಲಿ ಸುತ್ತುವರಿಯಿತು.

ಚಂದ್ರಶೇಖರ್‌ ಆಜಾದ್‌ ಪಾರ್ಕ್

ತುಂಬಾ ಹೊತ್ತಿನವರೆಗೆ ಭಾರಿ ಗುಂಡುಗಳ ಚಕಮಕಿಯು ನಡೆಯಿತು. ಶೂಟೌಟ್ ಸದ್ದಿಗೆ ಪಾರ್ಕ್ ನಡುಗಿ ಹೋಯಿತು. ಇನ್ನೇನು ಪೊಲೀಸರ ಕೈಯು ಮೇಲಾಗಿ ಆತನನ್ನು ಅರೆಸ್ಟ್ ಮಾಡಲು ಸಮೀಪ ಬಂದ ಹಾಗೆ ಅದುವರೆಗೆ ಏಕಾಂಗಿ ಆಗಿ ಹೋರಾಡುತ್ತಿದ್ದ ಆ ಕ್ರಾಂತಿಸಿಂಹ ತನ್ನ ಪಿಸ್ತೂಲಿನ ಕೊನೆಯ ಗುಂಡು ತನ್ನ ಹಣೆಯನ್ನು ಸೀಳಿಕೊಂಡು ಹೋಗುವ ಹಾಗೆ ಶೂಟ್ ಮಾಡಿಕೊಂಡು ತನ್ನ ಪ್ರಾಣವನ್ನು ತಾನೇ ಕಳೆದುಕೊಂಡಿದ್ದ! ಹುತಾತ್ಮನಾಗಿದ್ದ.

ಬ್ರಿಟಿಷ್ ಪೊಲೀಸರ ಕೈಗೆ ತಾನು ಯಾವಾಗಲೂ ಸೆರೆ ಸಿಕ್ಕಲಾರೆ ಎಂದು ತನ್ನ ಹದಿನೈದನೇ ವರ್ಷದಲ್ಲಿ ಪ್ರತಿಜ್ಞೆ ಮಾಡಿದ್ದ ಆತ ಸಾವಿನಲ್ಲಿಯೂ ತನ್ನ ಗಟ್ಟಿ ಸಂಕಲ್ಪವನ್ನು ಉಳಿಸಿಕೊಂಡಿದ್ದ! ಸಾಯುವಾಗ ಆತನ ವಯಸ್ಸು ಕೇವಲ 25!

ಆತನ ಹೆಸರು ಚಂದ್ರಶೇಖರ್ ಆಜಾದ್! ಭಾರತ ಸ್ವಾತಂತ್ರ್ಯ ಪಡೆದ ನಂತರ ಆ ಪಾರ್ಕನ್ನು ‘ಆಜಾದ್ ಪಾರ್ಕ್’ ಎಂದು ಮರು ನಾಮಕರಣ ಮಾಡಲಾಯಿತು. ನಾನು ನನ್ನ ಪ್ರೌಢಶಾಲೆಯ ದಿನಗಳಲ್ಲಿ ಬಾಬು ಕೃಷ್ಣಮೂರ್ತಿ ಅವರು ಬರೆದ ‘ ಅಜೇಯ ‘ ಪುಸ್ತಕ ಹಲವು ಬಾರಿ ಓದಿದ್ದೆ.

ನಾನು 1999ರ ಒಂದು ಮುಂಜಾನೆ ಆ ಪಾರ್ಕಿನ ಆಜಾದ್ ಪ್ರತಿಮೆಯ ಎದುರು ನಿಂತು ಕಣ್ಣೀರು ಸುರಿಸಿ ಹಿಂದೆ ಬಂದಿದ್ದೆ. ಹುತಾತ್ಮ ಆಜಾದ್ ಭಾರತದ ಯುವಕರಿಗೆ ನಿಜವಾದ ಐಕಾನ್ ಎಂದು ನನ್ನ ಭಾವನೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

Exit mobile version