Site icon Vistara News

Raja Marga Column : ಪೋಲಿಯೊ ಲಸಿಕೆ ಕಂಡುಹಿಡಿದ ಜೋನಾಸ್ ಸಾಲ್ಕ್‌ ಕೊನೆಗೆ ಮಾಡಿದ್ದೇನು?

Jonas salc who found Vaccine for polio

ಪೋಲಿಯೊ (Polio disease) ಎಂಬ ಭಯಾನಕ ರೋಗದ ಬಗ್ಗೆ 25-30 ವರ್ಷಗಳ ಹಿಂದಿನವರೆಗೆ ಜಗತ್ತಿನಲ್ಲಿ ಎಷ್ಟೊಂದು ಭೀತಿ ಹರಡಿತ್ತು ಎಂದರೆ ನೀವು ನಂಬಲು ಸಾಧ್ಯವೇ ಇಲ್ಲ!

ಆ ಕಾಲದಲ್ಲಿ ವರ್ಷಕ್ಕೆ ಜಗತ್ತಿನಲ್ಲಿ ಅಂದಾಜು ಮೂರೂವರೆ ಲಕ್ಷ ಮಕ್ಕಳು ಈ ಕಾಯಿಲೆಗೆ ಬಲಿಪಶು ಆಗುತ್ತಿದ್ದರು! ಚಿಕ್ಕ ಪ್ರಾಯದ ಅಷ್ಟೂ ಮಕ್ಕಳು ಕಾಲಿನ ತ್ರಾಣ ಕಳೆದುಕೊಂಡು ಮೂಲೆ ಸೇರುತ್ತಿದ್ದರು. ಸಣ್ಣ ಮಕ್ಕಳು ತಮ್ಮ ಹೆತ್ತವರಿಗೆ ಭಾರವಾಗಿ ಬದುಕುವ ಸ್ಥಿತಿ ಅದು! ಆ ಕಾಯಿಲೆಗೆ ಮದ್ದೇ ಇಲ್ಲ ಎಂಬ ನಂಬಿಕೆ ಇತ್ತು. ಅದು ದೇವರ ಶಾಪ ಎಂದು ನಂಬುವ ಮಂದಿಗೂ ಆಗ ಕೊರತೆ ಇರಲಿಲ್ಲ!

ಆದರೆ ಈಗ ಜಗತ್ತಿನಲ್ಲಿ ವರ್ಷಕ್ಕೆ ನೂರು ಮಕ್ಕಳು ಮಾತ್ರ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ! ಈ ಕ್ರಾಂತಿಕಾರಕ ಬದಲಾವಣೆಗೆ ಕಾರಣ ಯಾರು? ಅದಕ್ಕೆ ಲಸಿಕೆ ಕಂಡು ಹಿಡಿಯಲು ಆತನು ಮಾಡಿದ ತ್ಯಾಗ ಎಂಥದ್ದು? ನಾವು ಪರಿಚಯ ಮಾಡಲೇಬೇಕಾದ ಆ ಅಮೆರಿಕನ್ ವೈದ್ಯನು ಯಾರು? (Raja marga Column)

ಆ ವೈದ್ಯನ ಹೆಸರು ಜೋನಾಸ್ ಎಡ್ವರ್ಡ್ ಸಾಲ್ಕ್!
(Jonas Edward Salk, American virologist and biomedical scientist)

ಆತನಿಗೆ ವೈದ್ಯಕೀಯ ಸಂಶೋಧನೆಯಲ್ಲಿ ಮಾತ್ರ ಆಸಕ್ತಿ!

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಜನಿಸಿದ ಆತನು ವೈದ್ಯಕೀಯ ವಿಜ್ಞಾನವನ್ನು ಓದಿ ವೈದ್ಯನಾಗಿ ಪ್ರಾಕ್ಟೀಸ್ ಮಾಡಿ ತುಂಬಾ ಹಣವನ್ನು ಸಂಪಾದನೆ ಮಾಡಬಹುದಿತ್ತು. ಆದರೆ ಆತನಿಗೆ ಸಂಶೋಧನೆಯಲ್ಲಿ ಮಾತ್ರ ಆಸಕ್ತಿ ಇತ್ತು. ಪ್ರತೀ ಬೇಸಿಗೆಯ ಕಾಲದಲ್ಲಿ ಹೆಚ್ಚಾಗಿ ಹರಡಿ ಸಾವಿರಾರು ಮಕ್ಕಳ ಕಾಲುಗಳನ್ನು ನಿಶ್ಯಕ್ತಿ ಮಾಡುವ ಪೋಲಿಯೊ ಬಗ್ಗೆ ಭಾರೀ ಭಯ ಹರಡಿದ್ದ ಕಾಲ ಅದು!

polio drops in India

1950ರ ಹೊತ್ತಿಗೆ ಅಮೆರಿಕನ್ನರು ಹೆದರುತ್ತಿದ್ದದ್ದು ಅಣು ಬಾಂಬಿಗೆ ಮತ್ತು ಪೋಲಿಯೊ ರೋಗಕ್ಕೆ ಮಾತ್ರ! ಅದಕ್ಕೆ ಲಸಿಕೆಯನ್ನು ಕಂಡು ಹಿಡಿಯುವ ಸವಾಲಿನ ಕಾರ್ಯಕ್ಕೆ ಕೈ ಹಾಕಿದ ಡಾಕ್ಟರ್ ಸಾಲ್ಕ್ ಏಳು ವರ್ಷಗಳ ಕಾಲ ಊಟ, ತಿಂಡಿ, ನಿದ್ರೆ, ವಿಶ್ರಾಂತಿ ಎಲ್ಲವನ್ನೂ ಮರೆತು ಸಂಶೋಧನೆಗೆ ಇಳಿದರು. ಅದಕ್ಕಾಗಿ ಅವರು ನೂರಾರು ಸವಾಲುಗಳನ್ನು ಎದುರಿಸಿದರು.

ಮುಳ್ಳಿನಿಂದ ಮುಳ್ಳಿನಿಂದಲೇ ತೆಗೆದ ಡಾಕ್ಟರ್ ಸಾಲ್ಕ್ !

ಪೋಲಿಯೊ ಲಸಿಕೆಯ ಸಂಶೋಧನೆ ಮಾಡಲು ಆತನು ಅಳವಡಿಸಿದ ವಿಧಾನವು ತುಂಬಾ ಕುತೂಹಲಕಾರಿ ಆಗಿದೆ. ಪೋಲಿಯೋ ರೋಗವನ್ನು ಹರಡುವ ಒಂದು ವೈರಸ್ ಇದೆ. ಅದನ್ನು ಆತನು ಜೀವಂತವಾಗಿ ಸೃಷ್ಟಿಸಿದನು! ಅದರ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಅದನ್ನು ಜೀವಂತವಾಗಿ ಮಾನವ ದೇಹದ ಒಳಗೆ ಸೇರಿಸಿದಾಗ ಅದು ಲಸಿಕೆಯಾಗಿ ಕೆಲಸ ಮಾಡಲು ಆರಂಭ ಮಾಡುತ್ತದೆ! ಈ ವಿಧಾನದಿಂದ ಡಾಕ್ಟರ್ ಸಾಲ್ಕ್ ಪೋಲಿಯೊ ಲಸಿಕೆಯನ್ನು 1955ರಲ್ಲಿ ಯಶಸ್ವೀ ಆಗಿ ಸಂಶೋಧನೆ ಮಾಡಿದ್ದರು!

polio drops in India

ಅಮೆರಿಕಾಕ್ಕೆ ಅಮೆರಿಕಾವೆ ಸೆಲ್ಯೂಟ್ ಹೊಡೆದು ನಿಂತಿತು!

1957ರಲ್ಲಿ ಅಮೆರಿಕಾದ 18 ಲಕ್ಷ ಮಕ್ಕಳಿಗೆ ಈ ಲಸಿಕೆಯನ್ನು ಹಾಕಲಾಯಿತು. ಫಲಿತಾಂಶ ನೂರಕ್ಕೆ ನೂರು ದೊರೆಯಿತು! ಆಗ ಇಡೀ ಅಮೆರಿಕಾ ಅವರಿಗೆ ಸೆಲ್ಯೂಟ್ ಹೊಡೆದು ನಿಂತಿತ್ತು! ಒಂದು ಯುದ್ಧವನ್ನು ಗೆದ್ದ ಸಂಭ್ರಮವು ಅಲ್ಲಿ ಮನೆ ಮಾಡಿತ್ತು. ರಾತ್ರಿ ಹಗಲು ಆಗುವುದರ ಒಳಗೆ ಡಾಕ್ಟರ್ ಜೋನಾಸ್ ಸಾಲ್ಕ್ ಅಮೆರಿಕಾದ ಎಲ್ಲರ ಕಣ್ಮಣಿ ಆಗಿ ಮಾರ್ಪಟ್ಟರು! ಯಾವಾಗ ಈ ಪೋಲಿಯೋ ಲಸಿಕೆಯು ಫಲಿತಾಂಶವನ್ನು ಕೊಡಲು ಆರಂಭ ಮಾಡಿತೋ ಆಗ ಜಗತ್ತಿನ ಶ್ರೀಮಂತ ರಾಷ್ಟ್ರಗಳು ಆ ಲಸಿಕೆಯನ್ನು ಖರೀದಿ ಮಾಡಲು ಕ್ಯೂ ನಿಂತವು!

polio drops in India

ಡಾಕ್ಟರ್ ಸಾಲ್ಕ್ ಆ ಲಸಿಕೆಯನ್ನು ಮಾರಾಟ ಮಾಡಲೇ ಇಲ್ಲ!

ಎಲ್ಲ ದೇಶಗಳಿಗೂ ಪೋಲಿಯೊ ಭೀತಿಯು ಇದ್ದ ಕಾರಣ ಅವರೆಲ್ಲರೂ ಸ್ಪರ್ಧೆಗೆ ಬಿದ್ದು ಖರೀದಿಗೆ ನಿಂತವು. ಡಾಕ್ಟರ್ ಸಾಲ್ಕ್ ಆಗಲೇ ಆ ಪೋಲಿಯೊ ಲಸಿಕೆಯ ಪೇಟೆಂಟನ್ನು ತನ್ನ ಹೆಸರಿಗೆ ಪಡೆದುಕೊಂಡಾಗಿತ್ತು. ವಿಶ್ವದ ಶ್ರೀಮಂತವಾದ ರಾಷ್ಟ್ರಗಳು ಯಾವ ರೇಟ್ ಆದರೂ ಕೊಟ್ಟು ಲಸಿಕೆಯನ್ನು ಖರೀದಿ ಮಾಡುವ ಸಾಮರ್ಥ್ಯ ಹೊಂದಿದ್ದವು.

ಆ ಲಸಿಕೆ ಮಾರಾಟ ಆಗಿದ್ದರೆ ಡಾಕ್ಟರ್ ಜೋನಾಸ್ ಸಾಲ್ಕ್ ಆ ಕಾಲಘಟ್ಟದಲ್ಲಿಯೇ ಅಂದಾಜು 43,000 ಕೋಟಿ ರೂಪಾಯಿ ಸಂಪಾದನೆ ಮಾಡಬಹುದಾಗಿತ್ತು! ಆ ವ್ಯವಹಾರದಿಂದ ಡಾಕ್ಟರ್ ಸಾಲ್ಕ್ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಆಗಬಹುದಾಗಿತ್ತು!

ಆದರೆ ಡಾಕ್ಟರ್ ಸಾಲ್ಕ್ ತಾನು ಸಂಶೋಧನೆ ಮಾಡಿದ ಪೋಲಿಯೋ ಲಸಿಕೆಯನ್ನು ಯಾರಿಗೂ ಮಾರಾಟ ಮಾಡಲು ಒಪ್ಪಲೇ ಇಲ್ಲ!

ಅವರು ಹಾಗೆ ಮಾರಾಟ ಮಾಡಿದ್ದರೆ ಪೋಲಿಯೋ ಲಸಿಕೆ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಲಭ್ಯ ಆಗುತ್ತಿತ್ತು. ಬಡವರ ಮಕ್ಕಳು ಮತ್ತೆ ಅದೇ ಪೋಲಿಯೊ ಮಾರಿಗೆ ಬಲಿ ಆಗಬೇಕಾಗುತ್ತಿತ್ತು! ಅದರಿಂದಾಗಿ ಅವರು ಜೀವನಪೂರ್ತಿ ಪಾಪಪ್ರಜ್ಞೆಯಿಂದ ಹೊರಬರಲು ಆಗುತ್ತಲೇ ಇರಲಿಲ್ಲ!

polio drops in India

ಇದನ್ನೆಲ್ಲ ಯೋಚಿಸಿದ ಅವರು ತಮ್ಮ ಏಳು ವರ್ಷಗಳ ಸಂಶೋಧನೆಯ ಫಲವಾದ ಪೋಲಿಯೊ ಲಸಿಕೆಯನ್ನು ಎಲ್ಲ ದೇಶಗಳಿಗೂ ಉಚಿತವಾಗಿ ಹಂಚಿದರು! ವಿಶ್ವದ ಇಡೀ ಮಾನವ ಕುಲವೇ ಅವರ ಈ ಕೊಡುಗೆಯಿಂದ ಭಾರೀ ಲಾಭವನ್ನು ಪಡೆಯಿತು ಮತ್ತು ಅವರನ್ನು ಶಾಶ್ವತವಾಗಿ ನೆನೆಯಿತು!

ನೀವ್ಯಾಕೆ ಈ ಲಸಿಕೆ ಮಾರಾಟ ಮಾಡಿ ಲಾಭ ಪಡೆಯಲಿಲ್ಲ? ಎಂದು ಅವರನ್ನು ಯಾರೋ ಕೇಳಿದಾಗ ಅವರು ಹೇಳಿದ ಮಾತು: “ಸೂರ್ಯ ಮತ್ತು ಭೂಮಿಯ ಮೇಲೆ ಯಾರಾದರೂ ಹಕ್ಕು ಸ್ಥಾಪನೆ ಮಾಡಲು ಸಾಧ್ಯವೇ? ಇದೂ ಹಾಗೆ!”

ಇದನ್ನೂ ಓದಿ : Raja Marga Column : ಅಜೀಂ ಪ್ರೇಮ್‌ಜಿ ಎಂಬ ಭಾರತದ ಭಾಗ್ಯ; ದಾನ ಮಾಡುವುದನ್ನು ಇವರಿಂದ ಕಲೀಬೇಕು!

ಭಾರತದಲ್ಲಿಯೂ ಪೋಲಿಯೊ ಲಸಿಕೆ ಕ್ರಾಂತಿ ಮಾಡಿತು!

ಡಾಕ್ಟರ್ ಜೋನಾಸ್ ಸಾಲ್ಕ್ ಅವರ ಲಸಿಕೆ ಸಂಶೋಧನೆಯ ಫಲವಾಗಿ ನಮ್ಮ ಭಾರತದಲ್ಲಿ ಕೂಡ ‘ಪಲ್ಸ್ ಪೋಲಿಯೊ’ ಅಭಿಯಾನವು ವೇಗವನ್ನು ಪಡೆಯಿತು. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಈ ಅಭಿಯಾನದ ಹೊಣೆಯನ್ನು ಹೊತ್ತುಕೊಂಡು ಯಶಸ್ವೀ ಆಗಿ ನಿರ್ವಹಣೆ ಮಾಡಿ ಗೆದ್ದಿತು!

polio drops in India

ಪರಿಣಾಮವಾಗಿ ಮಾರ್ಚ್ 27, 2014ರ ದಿನ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ‘ಪೋಲಿಯೊ ಮುಕ್ತ’ ಎಂದು ಘೋಷಣೆ ಮಾಡಿತು!

ಅದರ ಬಹುಪಾಲು ಕ್ರೆಡಿಟ್ ವೈದ್ಯ ಡಾಕ್ಟರ್ ಜೋನಾಸ್ ಸಾಲ್ಕ್ ಅವರಿಗೆ ಸಲ್ಲಬೇಕು ಅಲ್ಲವೇ? ಅವರ ಮಾನವೀಯ ಮುಖಕ್ಕೆ ಕೂಡ ಒಂದು ಸಲಾಂ ಹೇಳೋಣ ಅಲ್ವಾ? ಆದರೆ ಅವರಿಗೆ ನೊಬೆಲ್ ಪ್ರಶಸ್ತಿ ಯಾಕೆ ಸಿಗಲಿಲ್ಲ ಅನ್ನುವ ಒಂದು ಸಣ್ಣ ನೋವು ನನ್ನನ್ನು ಇಂದಿಗೂ ಕಾಡುತ್ತಿದೆ.

Exit mobile version