Site icon Vistara News

Raja Marga Column : ಫೈಟಿಂಗ್ ಸ್ಪಿರಿಟ್‌ಗೆ ಮತ್ತೊಂದು ಹೆಸರೇ ಕಗಿಸೊ ರಬಡ!

Raja Marga Column : Kagiso Rabada

Raja Marga Column : ಆತ ತನ್ನ ಶಾಲಾ ದಿನಗಳಲ್ಲಿ ರಗ್ಬೀ ಮಾತ್ರ ಆಡಿಕೊಂಡು ಬರುತ್ತಿದ್ದವನು. ಆತನ ಅಪ್ಪ ವೈದ್ಯ ಆಗಿದ್ದರು. ರಗ್ಬೀ ಹೇಳಿ ಕೇಳಿ ತುಂಬಾ ಆಕ್ರಮಣಕಾರಿ ಆಟ. ಎಲ್ಲಿ ತನ್ನ ಮಗನ ಕಾಲಿಗೆ ಪೆಟ್ಟಾಗುತ್ತದೋ ಎಂಬ ಆತಂಕ ಆತನ ಅಪ್ಪನಿಗೆ. ಅದಕ್ಕೆ ಪೂರಕವಾಗಿ ಆತನ ಶಾಲೆಯ ಕ್ರಿಕೆಟ್ ಕೋಚ್, ಸ್ಮಿತ್ ಎಂದು ಆತನ ಹೆಸರು, ‘ಮಿಸ್ಟರ್, ನೀನೇಕೆ ಕ್ರಿಕೆಟ್ ಪ್ರಯತ್ನ ಮಾಡಬಾರದು?’ ಎಂದು ಕೇಳಿದಾಗ ಆತನ ಬದುಕಿನಲ್ಲಿ ಒಂದು ಮೇಜರ್ ಆದ ಟರ್ನಿಂಗ್ ಪಾಯಿಂಟ್ ಬಂದೇ ಬಿಟ್ಟಿತು. ಆತ ರಗ್ಬೀ ಬಿಟ್ಟು ಕ್ರಿಕೆಟ್ ಕಡೆಗೆ ಹೊರಳಿದ್ದು ಕ್ರಿಕೆಟಿನ ಭಾಗ್ಯ ಎಂದೇ ಹೇಳಬಹುದು. ಆತನೇ ಸೌತ್ ಆಫ್ರಿಕಾದ ಅತ್ಯಂತ ವೇಗದ ಬೌಲರ್, ಕ್ರಿಕೆಟ್ ವಜ್ರ ಕಗಿಸೊ ರಬಡ (Kagiso Rabada).

ವರ್ಣಬೇಧ ನೀತಿಯ ಕುಲುಮೆ ದ. ಆಫ್ರಿಕಾ.

ಶತಮಾನಗಳಿಂದ ವರ್ಣ ಬೇಧ ನೀತಿಯಿಂದ ನಲುಗಿ ಹೋಗಿದ್ದ ದಕ್ಷಿಣ ಆಫ್ರಿಕಾ 1990ರ ದಶಕದಲ್ಲಿ ಒಂದು ನಿಯಮ ಮಾಡಿಕೊಂಡಿತ್ತು. ಅದೆಂದರೆ ರಾಷ್ಟ್ರೀಯ ತಂಡದಲ್ಲಿ ನಾಲ್ವರು ಕರಿಯ ಆಟಗಾರರು ಇರಲೇಬೇಕು ಎಂದು! ಆದರೆ ಮುಂದೆ ಆ ನಿಯಮವನ್ನೇ ಗಾಳಿಗೆ ತೂರಲಾಯಿತು. ಮಖಾಯ ಎಂಟಿನಿ ಮತ್ತು ಕಗಿಸೊ ರಬಡ ಈ ನಿಯಮದ ಫಲಾನುಭವಿಗಳು ಆಗಿರದೆ ತಮ್ಮ ಸ್ವಂತ ಪ್ರತಿಭೆಯಿಂದ ಮೇಲೆ ಬಂದವರು. ಅದರಲ್ಲಿಯೂ ರಬಡ ಅಂದರೆ ನಿಜವಾದ ಫೈಟಿಂಗ್ ಸ್ಪಿರಿಟ್ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಇಂದು ಅರ್ಥ ಮಾಡಿಕೊಂಡಿದೆ. ಅದಕ್ಕೆ ಅನ್ವರ್ಥವಾಗಿ ಆತ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತ ಮುನ್ನುಗ್ಗುತ್ತಿದ್ದಾರೆ.

2014ರ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 25 ರನ್ ನೀಡಿ ಆರು ವಿಕೆಟ್ ಪಡೆದುಕೊಂಡಾಗ ಕೋಚ್ ಸ್ಮಿತ್ ಭಾರೀ ಖುಷಿ ಪಟ್ಟಿದ್ದರು. ವೈದ್ಯರಾದ ಅಪ್ಪನ ಖುಷಿಗೆ ಪಾರವೇ ಇರಲಿಲ್ಲ. ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಲು ಆತನಿಗೆ ಏನೇನೂ ತೊಂದರೆ ಆಗಲಿಲ್ಲ. ಡೆಲ್ ಸ್ಟೇನ್ ಜೊತೆಗೆ ಆರಂಭಿಕ ಬೌಲರ್ ಆಗಿ ಆತ ಸತತವಾಗಿ 140-150 ಕಿಲೋಮೀಟರ್ ವೇಗದಲ್ಲಿ ಬಾಲ್ ಎಸೆಯುತ್ತಿದ್ದರೆ ಎದುರಾಳಿ ಆಟಗಾರರು ಎಚ್ಚರಿಕೆಯ ಆಟವನ್ನು ಆಡಬೇಕಾಗಿತ್ತು. 23 ವರ್ಷ ತುಂಬುವ ಮೊದಲೇ ಏಕದಿನ ಮತ್ತು ಟೆಸ್ಟ್ ಪಂದ್ಯ ಎರಡರಲ್ಲಿಯೂ ವಿಶ್ವ ನಂಬರ್ ಒನ್ ರಾಂಕಿಂಗ್ ಆತನಿಗೆ ದೊರೆತು ಆಗಿತ್ತು. ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ 144 ರನ್ ನೀಡಿ 13 ವಿಕೆಟ್ ಪಡೆದಾಗ ಆತನ ವಯಸ್ಸಿನ್ನೂ 20 ವರ್ಷ ದಾಟಿರಲಿಲ್ಲ!

ಅತೀ ಸಣ್ಣ ವಯಸ್ಸಿಗೇ ಕ್ರಿಕೆಟಿನ ಮೂರೂ ಫಾರ್ಮಾಟ್‌ಗಳಲ್ಲಿಯೂ ಹ್ಯಾಟ್ರಿಕ್ ಪಡೆದ ಬೌಲರ್ ಎಂಬ ಕೀರ್ತಿ ಆತನಿಗೆ ದೊರೆತಿತ್ತು. 23ನೇ ವಯಸ್ಸು ದಾಟುವ ಮೊದಲು 150 ಟೆಸ್ಟ್ ವಿಕೆಟ್ ಪಡೆದ ಜಗತ್ತಿನ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆ ಆತನಿಗೆ ಒಲಿದು ನಿಂತಿತ್ತು. ಜಗತ್ತಿನ ಯಾವ ಪಿಚ್ಚಿನಲ್ಲಿ ಕೂಡ ವಿಕೆಟ್ ಕೀಳುವ ಸಾಮರ್ಥ್ಯವೂ ಆತನಿಗೆ ಒಲಿದು ಬಂದ ಹಾಗಿದೆ. ಭಾರತದ ಸ್ಪಿನ್ ಬೌಲಿಂಗ್ ಪಿಚ್ಚಿನಲ್ಲಿಯೂ ಕಾಗಿಸೋ ದಾಖಲೆಗಳು ಅತ್ಯುತ್ತಮವಾಗಿ ಇವೆ.

ದಾಖಲೆಗಳು, ದಾಖಲೆಗಳು, ದಾಖಲೆಗಳು….

ನಮಗೆಲ್ಲ ತಿಳಿದಿರುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಭಾರೀ ಪ್ರತಿಭಾವಂತರ ತಂಡ ಹೌದು. ಆದರೆ ವಿಶ್ವಮಟ್ಟದ ಟ್ರೋಫಿ ಗೆಲ್ಲುವ ವಿಷಯಕ್ಕೆ ಬಂದರೆ ಅದು ಶಾಪಗ್ರಸ್ತ ತಂಡ ಎಂದು ಮತ್ತೆ ಮತ್ತೆ ಸಾಬೀತು ಆಗ್ತಾ ಇದೆ. ಅಂತಹ ತಂಡದ ಭಾಗವಾಗಿ ವಿಶ್ವಮಟ್ಟದ ಯಾವುದೇ ಬ್ಯಾಟರ್ ವಿಕೆಟ್ ಪಡೆಯುವಲ್ಲಿ ಕಾಗಿಸೋ ಭಾರೀ ಮುಂದಿದ್ದಾರೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ ಎಲ್ ರಾಹುಲ್ ವಿಕೆಟುಗಳನ್ನು ಅತೀ ಹೆಚ್ಚು ಬಾರಿ ಪಡೆದ ಕೀರ್ತಿ ಆತನದ್ದು. ಅದೂ ಬೌಲ್ಡ್ ಮೂಲಕ ಅಂದರೆ ಅದು ಹೆಚ್ಚು ಸರಿ.

ಇದನ್ನೂ ಓದಿ : Raja Marga Column : ಮನುಷ್ಯನ ಮೆದುಳಿಗೇ ಚಿಪ್ : ಬೇಕಾ ಇಂಥ ಸಂಶೋಧನೆ?

ಕಗಿಸೊ ರಬಡ ಮಾಡಿದ ಬೌಲಿಂಗ್‌ ದಾಖಲೆಗಳ ವಿವರ ಇಲ್ಲಿದೆ.

61ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಕಾಗಿಸೋ ಈಗಾಗಲೇ 287 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ ಆತನ ವಿಕೆಟ್ ಗಳಿಕೆ 157 ಆಗಿದೆ. 56 T20 ಪಂದ್ಯಗಳಲ್ಲಿ 58ವಿಕೆಟುಗಳು ಆತನ ದಾಖಲೆಯ ಭಾಗವಾಗಿದೆ.

ಈ ದಾಖಲೆಗಳ ಹೊರತಾಗಿ ಕೂಡ ಕಾಗಿಸೋ ಒಳ್ಳೆಯ ಸ್ನೇಹಮಯಿ ವ್ಯಕ್ತಿ ಎಂದು ನಮಗೆ ಅರಿವಾಗಿದೆ. ಕ್ರಿಕೆಟ್ ಗ್ರೌಂಡ್ನಲ್ಲಿ ನಗುವಿನ ಚಟಾಕಿ ಹಾರಿಸುತ್ತ ನಿಲ್ಲುವ, ಮುಗ್ಧವಾಗಿ ನಗು ತುಳುಕಿಸುವ, ಗ್ರೌಂಡ್ ಫೀಲ್ಡಿಂಗಿನಲ್ಲಿಯೂ ತುಂಬಾ ಚುರುಕಾಗಿರುವ, ಅಂಪಾಯರ್ ಮೇಲೆ ಒತ್ತಡ ಹಾಕಿ ವಿಕೆಟ್ ಪಡೆಯಲು ಹೋಗದ, ಜಂಟಲ್ ಮ್ಯಾನ್ ಕ್ರಿಕೆಟರ್ ಎಂದು ಎಲ್ಲರಿಂದಲೂ ಕರೆಯಲ್ಪಡುವ, ವೇಗದಲ್ಲಿ ವರ್ತಮಾನದ ಜಗತ್ತಿನಲ್ಲಿ ಹೋಲಿಕೆಯೇ ಇಲ್ಲದ ಕಾಗಿಸೋ ಒಬ್ಬ ಲೆಜೆಂಡ್ ಆಟಗಾರ ಆಗಿ ರೂಪುಗೊಳ್ಳುತ್ತಿದ್ದಾರೆ. ವಿಕೆಟ್ ಪಡೆದಾಗ ಹಕ್ಕಿಯ ಹಾಗೆ ಕೈ ಅರಳಿಸಿ ಓಡುವ ಆತನ ಶೈಲಿ ತುಂಬಾ ಜನಪ್ರಿಯ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗನಲ್ಲಿ ಹಲವು ವರ್ಷಗಳಿಂದ ಆಡುತ್ತಾ ಬಂದಿರುವ ಕಾಗಿಸೋ ರಬಡಾ ಈ ವರ್ಷ ದಾಖಲೆ ಮೊತ್ತಕ್ಕೆ ಪಂಜಾಬ್ ತಂಡದಲ್ಲಿ ಆಡಲು ಆಯ್ಕೆ ಆಗಿದ್ದಾರೆ ಅನ್ನುವುದೇ ಸೆನ್ಸೇಷನಲ್ ಸುದ್ದಿ.

ಆತನನ್ನು ಕ್ರಿಕೆಟ್ ಆಡಲು ಎಳೆದುತಂದ ಕೋಚ್ ಸ್ಮಿತ್ ಅವರಿಗೊಂದು ಸೆಲ್ಯೂಟ್ ಹೇಳುವಾ ಆಯ್ತಾ.‌..

Exit mobile version