Site icon Vistara News

Raja Marga Column : ವಹೀದಾ ರೆಹಮಾನ್‌; ಆಕೆಯ ಬದುಕು ಸ್ವಾಭಿಮಾನದ ಯಶೋಗಾಥೆ

Waheeda rehaman dada saheb Phalke award winner 2023

ಈ ವಾರ ನಡೆದ 69ನೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ (National Film awards 2023) ವಿತರಣೆಯ ಕಾರ್ಯಕ್ರಮ ಹೆಚ್ಚು ಭಾವಪೂರ್ಣ ಆಗಿತ್ತು. ಅದಕ್ಕೆ ಕಾರಣ ಕೇವಲ ಆಕೆ! 85 ವರ್ಷದ ಆ ಬೆಳ್ಳಿಯ ಕೂದಲಿನ ಸುಂದರಿ ವೇದಿಕೆಯ ಮೇಲೆ ಹತ್ತಿ ರಾಷ್ಟ್ರಪತಿ ಅವರ ಕೈಯಿಂದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke award) ಪಡೆದು ಮಾತಾಡಲು ನಿಂತಾಗ ತುಂಬಾ ಭಾವುಕರಾದರು. ಶಬ್ದಗಳಿಗೆ ತಡಕಾಟ. ಗಂಟಲು ಕಟ್ಟಿ ಧ್ವನಿ ಭಾರವಾಯಿತು (Raja Marga Column).

ಆದರೂ ಆಕೆ ತಾನು ಸಾಗಿ ಬಂದ ದಾರಿಯ ಬಗ್ಗೆ, ತನಗೆ ನೆರವು ನೀಡಿದವರ ಬಗ್ಗೆ, ಬೆನ್ನು ತಟ್ಟಿದವರ ಬಗ್ಗೆ ಚಂದವಾಗಿ ಮಾತಾಡಿದರು. ಕೆಳಗೆ ಇಳಿದು ಬಂದಾಗ ಈ ಪೀಳಿಗೆಯ ನಟ, ನಟಿಯರು ಮುತ್ತಿಕೊಂಡು ಆಕೆಯನ್ನು ಅಭಿನಂದನೆ ಮಾಡಿದಾಗ ಆ ಗಲ್ಲಗಳಲ್ಲಿ ಅದೇ ನಾಚಿಗೆಯ ಕಾಮನಬಿಲ್ಲು ಬರೆದು ಮೌನವಾದರು. ನಿಮಗೆ ಇಷ್ಟು ತಡವಾಗಿ ಈ ಪ್ರಶಸ್ತಿ ಬಂದಿರುವ ಬಗ್ಗೆ ಬೇಜಾರು ಇದೆಯಾ? ಎಂದು ಒಬ್ಬ ಅಧಿಕ ಪ್ರಸಂಗಿ ಪತ್ರಕರ್ತ ಕೇಳಿದಾಗ “ಯಾಕೆ ಬೇಜಾರು? ನನಗಿಂತ ನೂರಾರು ಪಟ್ಟು ಪ್ರತಿಭಾವಂತರು ಇದ್ದರಲ್ಲ!” ಎಂದು ನಗು ತುಳುಕಿಸಿ ನಿಂತರು.

ಆಕೆಯ ಹೆಸರು ವಹೀದಾ ರೆಹಮಾನ್-waheeda rehman

ಆಕೆ ಭಾರತೀಯ ಸಿನಿಮಾ ರಂಗದಲ್ಲಿ ಐವತ್ತು ವರ್ಷಗಳ ಕಾಲ ಮೆರೆದ ಮಹಾನ್ ಅಭಿನೇತ್ರಿ, ಅತ್ಯುತ್ತಮ ನೃತ್ಯಪಟು ವಹೀದಾ ರೆಹಮಾನ್. ಆಕೆಯ ಬದುಕೇ ಒಂದು ಸ್ವಾಭಿಮಾನದ ಯಶೋಗಾಥೆ.

waheeda rehman Sahib Bibi Aur Ghulam

ಬಾಲ್ಯದಿಂದಲೂ ನೃತ್ಯದ ಕಡೆಗೆ ಒಲವು

1938ನೆ ಫೆಬ್ರುವರಿ ಮೂರರಂದು ತಮಿಳುನಾಡಿನ ಚೆಂಗಲ್ಪಟ್ಟು ಎಂಬಲ್ಲಿ ಅತ್ಯಂತ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ವಹೀದಾಗೆ ಡಾಕ್ಟರ್ ಆಗಬೇಕು ಎಂದು ಆಸೆ ಇತ್ತಂತೆ. ಹೆತ್ತವರ ನಾಲ್ಕು ಹೆಣ್ಣು ಮಕ್ಕಳಲ್ಲಿ ಈಕೆ ಕೊನೆಯವರು. ಅಪ್ಪ ಜಿಲ್ಲಾಧಿಕಾರಿ ಆಗಿದ್ದರು. ಆದರೆ ಮಗಳಿಗೆ ಹದಿನೈದು ವರ್ಷ ತುಂಬುವಾಗ ಅಪ್ಪ ತೀರಿದಾಗ ಕುಟುಂಬ ದಿಕ್ಕು ತಪ್ಪಿತು. ಕಲಿಯುವ ಆಸಕ್ತಿ ಖಾಲಿ ಆಯಿತು. ಆಗ ವಹೀದಾ ಪೂರ್ಣ ಪ್ರಮಾಣದಲ್ಲಿ ನೃತ್ಯದಲ್ಲಿ ತೊಡಗಿಸಿಕೊಂಡರು. ಆಕೆಯ ಪ್ರತಿಭೆಗೆ ತೆಲುಗು ಮತ್ತು ತಮಿಳು ಸಿನೆಮಾಗಳಲ್ಲಿ ಅವಕಾಶಗಳು ಬಂದವು. ಅಮ್ಮ ಮಗಳ ಆಸೆಗೆ ಭಂಗ ತರಲಿಲ್ಲ. ಆದರೆ ಅವಕಾಶ ಕೊಡಲು ಬಂದ ನಿರ್ಮಾಪಕರ ಹತ್ತಿರ ಆಕೆ ಮೂರು ಷರತ್ತುಗಳನ್ನು ಹಾಕಿದ್ದರು.

1. ಇಡೀ ಸಿನಿಮಾದ ಕಥೆ ಮೊದಲೇ ಹೇಳಬೇಕು. ಕಥೆ ಕೇಳಿದ ಮೇಲೆ ನಾವು ಆಯ್ಕೆ ಮಾಡುತ್ತೇವೆ.
2. ಸಂಜೆ ಏಳು ಗಂಟೆಯ ಮೊದಲು ಸಿನಿಮಾ ಶೂಟಿಂಗ್ ಮುಗಿಸಿ ಮಗಳು ಮನೆಗೆ ಬರಬೇಕು.
3. ಪಾತ್ರಗಳ ಡ್ರೆಸ್ ಆಯ್ಕೆ ನಮ್ಮದು.
ತೆಲುಗು ನಿರ್ಮಾಪಕರು ಒಪ್ಪಿ ಆಕೆ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಾಗ ವಯಸ್ಸು ಕೇವಲ 17! ಸಿನಿಮಾದ ಹೆಸರು ‘ರೋಜಲು ಮಾರಾಯಿ’.

ಆ ಸಿನಿಮಾದಲ್ಲಿಯೂ ನೃತ್ಯ ಕಲಾವಿದೆಯ ಪಾತ್ರ. ಸಿನಿಮಾ ಸೂಪರ್ ಹಿಟ್. ಮುಂದಿನ ಸಿನಿಮಾ ಆಗಿನ ಸೂಪರ್ ಸ್ಟಾರ್ NTR ಜೊತೆಗೆ. ದಕ್ಷಿಣ ಭಾರತದ ಸಿನೆಮಾ ಪ್ರೇಕ್ಷಕರು ಆಕೆಯ ಮೋಹಕ ನೃತ್ಯ ಮತ್ತು ಭಾವನಾತ್ಮಕ ಅಭಿನಯಕ್ಕೆ ಮಾರು ಹೋದರು. ಆಗ ತನ್ನ ಮುಂದಿನ CID ಸಿನಿಮಾಕ್ಕೆ ಹೊಸ ಮುಖವನ್ನು ಅನ್ವೇಷಣೆ ಮಾಡುತ್ತಿದ್ದ ಬಾಲಿವುಡ್ ಲೆಜೆಂಡ್ ನಟ ಗುರುದತ್ತ ಅವರ ಕಣ್ಣಿಗೆ ವಹೀದಾ ರೆಹಮಾನ್ ಬಿದ್ದ ನಂತರ ಆಕೆಯ ಪ್ರತಿಭೆಯ ಅನಾವರಣ ಪೂರ್ಣ ಪ್ರಮಾಣದಲ್ಲಿ ಆಯಿತು. ಒಂದು ಕಡೆ ಗುರುದತ್ತ, ಮತ್ತೊಂದು ಕಡೆ ದೇವ್ ಆನಂದ್‌ ಆಕೆಯ ನೆರವಿಗೆ ನಿಂತರು. ಕೆಲವೇ ಸಿನಿಮಾಗಳ ಒಳಗೆ ವಹೀದಾ ರೆಹಮಾನ್ ಭಾರತದ ಅತ್ಯಂತ ಬೇಡಿಕೆಯ ಮತ್ತು ಪರಿಪೂರ್ಣ ನಟಿ ಆಗಿ ಅರಳಿದರು. 1950-1970ರ ನಡುವೆ ಆಕೆ ಬಾಲಿವುಡ್ ರಂಗದ ಅನಭಿಷಿಕ್ತ ರಾಣಿಯಾಗಿ ಮೆರೆದರು. ಆಕೆ ಅಭಿನಯ ಮಾಡಿದ್ದು ಒಟ್ಟು 90 ಸಿನಿಮಾಗಳಲ್ಲಿ. 1970ರ ನಂತರ ಗ್ಲಾಮರ್ ಕಡಿಮೆ ಆಯಿತು ಎಂದು ಆಕೆಗೆ ಮನವರಿಕೆ ಆದಾಗ ಪೋಷಕ ಪಾತ್ರಗಳ ಕಡೆಗೆ ಹೊರಳಿದರು. ಅಮಿತಾಬ್ ಜೊತೆ ಆರಂಭದಲ್ಲಿ ರೊಮ್ಯಾಂಟಿಕ್ ನಟಿ ಆಗಿ ಮಿಂಚಿದ ವಹೀದಾ ಮುಂದೆ ಅದೇ ಅಮಿತಾಬ್‌ಗೆ ‘ಕಭೀ ಖುಷಿ ಕಭೀ ಗಮ್’ ಸಿನೆಮಾದಲ್ಲಿ ಅಮ್ಮನಾಗಿ ಮಿಂಚಿದರು!

ವಹೀದಾ ಹೇಳಿದ್ದು – ನಾನು ನಾನೇ! ನಾನು ಬದುಕುವುದು ನನಗಾಗಿ!

ವಹೀದಾ ಹಿಂದೀ ಸಿನಿಮಾ ರಂಗಕ್ಕೆ ಬಂದಾಗ ಎಲ್ಲರ ಹಾಗೆ ಆಕೆಗೂ ಹೆಸರು ಬದಲಾವಣೆ ಮಾಡುವ ಒತ್ತಾಯ ಬಂದಿತ್ತು. ಆಕೆಯ ಸಮಕಾಲೀನ ನಟಿಯರಾದ ಮಧುಬಾಲಾ, ನರ್ಗೀಸ್, ಮೀನಾ ಕುಮಾರಿ ಎಲ್ಲರೂ ತಮ್ಮ ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಆದರೆ ಆಕೆ ತನ್ನ ಹೆಸರನ್ನು ಬದಲಾವಣೆ ಮಾಡಲು ಒಪ್ಪಲೇ ಇಲ್ಲ. ನಾನು ಬದುಕುವುದು ನನಗಾಗಿ ಎಂದು ಬಿಟ್ಟರು.

ಅಭಿನಯದಲ್ಲಿ ಆಕೆಯೇ ಒಂದು ರೂಪಕ

ಇನ್ನು ಅಭಿನಯಕ್ಕೆ ಬಂದಾಗ ಆಕೆ ಎಲ್ಲರಿಗಿಂತ ಮುಂದೆ ಇದ್ದರು. ಮೀನಾ ಕುಮಾರಿಯ ಭಾವಾಭಿನಯ, ನರ್ಗೀಸ್ ಅವರ ಆಕರ್ಷಕ ಮೈಕಟ್ಟು, ಮಧುಬಾಲಾ ಅವರ ನೃತ್ಯ ಪ್ರತಿಭೆ ಇವುಗಳ ಎರಕದ ಹಾಗೆ ಇದ್ದರು ವಹೀದಾ ರೆಹಮಾನ್. ದೇವಾನಂದ್ ಮತ್ತು ಗುರುದತ್ತ ಆಕೆಯ ಬೆಸ್ಟ್ ಗೆಳೆಯರು ಮತ್ತು ಮೆಂಟರ್‌ಗಳು. ಅದರಲ್ಲಿಯೂ ಗುರುದತ್ತ ಸಿನಿಮಾಗಳಲ್ಲಿ ಆಕೆಯದ್ದು ಅದ್ಭುತವಾದ ಅಭಿನಯ.

ಆಗ ರಾಜಕಪೂರ್ – ನರ್ಗೀಸ್ ಜೋಡಿ ಎಷ್ಟು ಜನಪ್ರಿಯ ಆಗಿತ್ತೋ ಅಷ್ಟೇ ಜನಪ್ರಿಯತೆ ಗುರುದತ್ತ- ವಹೀದಾ ರಹಮಾನ್ ಅವರ ಜೋಡಿಗೆ ಇತ್ತು. ಎಷ್ಟು ಕ್ಲಿಷ್ಟ ಪಾತ್ರಗಳಾದರೂ ಅದರಲ್ಲಿ ಮುಳುಗಿ ಬಿಡುವ ತಾಕತ್ತು ಆಕೆಗೆ ಒಲಿದು ಬಂದಿತ್ತು.

ತನ್ನ ಸಹ ನಟ ಕಮಲ್ ಜೀತ್ ಜೊತೆಗೆ ಮದುವೆ ಆದ ವಹೀದಾ ಇಂದಿನವರೆಗೂ ತನ್ನ ಖಾಸಗಿ ಜೀವನ ಮತ್ತು ಸಿನಿಮಾ ಜೀವನ ಬೆರಕೆ ಮಾಡಿದವರು ಅಲ್ಲ. ಯಾರೊಂದಿಗೂ ಜಗಳ ಮಾಡಿದವರು ಅಲ್ಲ. ತಾನಾಯಿತು, ತನ್ನ ಸಿನಿಮಾ ಆಯಿತು ಎನ್ನುವುದು ಅವರ ನಿಲುವು. ಅದನ್ನು ಅವರು ಇದುವರೆಗೂ ಪಾಲಿಸಿಕೊಂಡು ಬಂದಿದ್ದಾರೆ.

ವಹೀದಾ ಜೀವನದ ಆರು ಸ್ಮರಣೀಯ ಸಿನೆಮಾಗಳು

ಆಕೆಯ ಎಲ್ಲ ಸಿನಿಮಾಗಳೂ ಕ್ಲಾಸಿಕ್ ಆಗಿವೆ. ಅದರಲ್ಲಿ ಆರು ಅತ್ಯದ್ಭುತ ಸಿನಿಮಾಗಳ ಬಗ್ಗೆ ಮಾತ್ರ ನಾನಿಂದು ಬರೆಯುತ್ತೇನೆ. ಅವುಗಳು ನಾನು ನೋಡಿ ಬೆರಗಾದ ಸಿನೆಮಾಗಳು.

1. ಗೈಡ್ – 1965

ಖ್ಯಾತ ಇಂಗ್ಲಿಷ್ ಕಥೆಗಾರ ಆರ್ ಕೆ ನಾರಾಯಣ್ ಅವರ ಕಥೆಯನ್ನು ಆಧಾರವಾಗಿ ಇಟ್ಟುಕೊಂಡ ಚಿತ್ರ ಇದು. ಇದರಲ್ಲಿ ವಹೀದಾ ಮಾಡಿದ ಪಾತ್ರದ ಹೆಸರು ರೋಸಿ. ಅದು ತನ್ನ ಗಂಡನಿಂದ ನಿರ್ಲಕ್ಷ್ಯಕ್ಕೆ ಒಳಗಾದ ಹೆಣ್ಣಿನ ಪಾತ್ರ. ವೃತ್ತಿಯಲ್ಲಿ ಗೈಡ್ ಆದ ದೇವಾನಂದ್ ಆಕೆಯ ಬದುಕಿನಲ್ಲಿ ಬಂದಾಗ ಆಕೆ ಕಾರಂಜಿಯಾಗಿ ಬಿಡುತ್ತಾಳೆ. ಆ ಸಿನಿಮಾದಲ್ಲಿ ಆಕೆಯ ಅದ್ಭುತವಾದ ನೃತ್ಯಗಳು ಇವೆ. ‘ಪ್ರಿಯಾ ತೊಸೇ ನೈನಾ ಲಾಗೆರೆ ‘ ನೃತ್ಯ ನೋಡಿ ನೀವು ಫಿದಾ ಆಗುವುದು ಖಂಡಿತ. ಅದು ವಹೀದಾ ಅವರ ಪವರ್.

2. ಪ್ಯಾಸಾ – 1957

ಇದು ಟಿಪಿಕಲ್ ಆದ ಗುರುದತ್ತ ಅವರ ಸಿನಿಮಾ. ಆಕೆಯದ್ದು ಗುಲಾಬೋ ಎಂಬ ವೇಶ್ಯೆಯ ಪಾತ್ರ. ಆಕೆ ತುಂಬಾ ಕಾಳಜಿ ಮತ್ತು ನಿಜವಾದ ಪ್ರೀತಿಯನ್ನು ಧಾರೆ ಎರೆಯುವ ವೇಶ್ಯೆ. ಆಕೆಯ ಭಾವತೀವ್ರತೆಗೆ ಇಡೀ ಭಾರತೀಯ ಸಿನಿಮಾ ರಂಗ ಆ ಕಾಲಕ್ಕೆ ಬೆರಗಾಗಿತ್ತು. ಪ್ಯಾಸಾ ಭಾರತೀಯ ಸಿನಿಮಾ ರಂಗದ ಟಾಪ್ ಟೆನ್ ಕ್ಲಾಸಿಕ್ ಸಿನಿಮಾಗಳಲ್ಲಿ ಸ್ಥಾನ ಪಡೆದಿದೆ. ಅದಕ್ಕೆ ಕಾರಣ ವಹೀದಾ.

3. ಚೌದವೀ ಕಾ ಚಾಂದ್ – 1960

waheeda rehman Sahib Bibi Aur Ghulam

ಇದು ಕೂಡ ಗುರುದತ್ತ ಅವರ ಕ್ಲಾಸಿಕ್ ಚಿತ್ರ. ಜಮೀಲಾ ಎನ್ನುವ ಲೋಕೋತ್ತರ ಸುಂದರಿಯ ಪಾತ್ರ ವಹೀದಾ ಅವರದ್ದು. ಸಿನಿಮಾದಲ್ಲಿ ತ್ರಿಕೋನ ಪ್ರೇಮದ ಕಥೆ ಇದೆ. ಶೃಂಗಾರ ರಸ ಮತ್ತು ಕರುಣಾ ರಸಗಳ ಎರಕದ ಅಭಿನಯ ವಹೀದಾ ಅವರದ್ದು. ‘ಬಾಲಮ್ ಸೇ ಮಿಲನ್ ಹೋಗಾ’ ಹಾಡು ಒಮ್ಮೆ ನೋಡಿ. ಆ ಸಿನಿಮಾದ ಟೈಟಲ್ ಸಾಂಗ್ ಕೇಳಿ. ನೀವು ವಹೀದಾ ಅವರನ್ನು ಪ್ರೀತಿ ಮಾಡದೆ ಇರಲು ಸಾಧ್ಯವೇ ಇಲ್ಲ.

4. ಕಾಗಜ್ ಕೆ ಫೂಲ್ – 1959

ಗುರುದತ್ತ ಅವರ ಸಿನಿಮಾ ಅಂದ ಮೇಲೆ ಅದು ಅದ್ಭುತವೇ ಹೌದು. ಇದರಲ್ಲಿ ವಹೀದಾ ಅವರದು ಶಾಂತಿ ಎಂಬ ಮುಗ್ಧ ಹುಡುಗಿಯ ಪಾತ್ರ. ಈ ಸಿನಿಮಾದಲ್ಲಿ ಗುರುದತ್ತ ಒಬ್ಬ ಚಿತ್ರ ನಿರ್ದೇಶಕ. ‘ಉಡ್ ಜಾ ಉಡ್ ಜಾ ಪ್ಯಾಸೇ ಭವರೆ ‘ ಮೊಹಮದ್ ರಫಿ ಅವರ ಅದ್ಭುತ ಕಂಠದಲ್ಲಿ ಮೂಡಿ ಬಂದ ಈ ಹಾಡಿನಲ್ಲಿ ವಹೀದಾ ಅವರ ಅಭಿನಯದ ಆಳವನ್ನು ನೀವು ಗಮನಿಸದರೆ ಅದು ಮರೆತು ಹೋಗುವುದಿಲ್ಲ.

5. ಕಭೀ ಕಭೀ -1976

ಯಶ್ ಚೋಪ್ರಾ ಅವರ ನಿರ್ದೇಶನ, ತ್ರಿಕೋನ ಪ್ರೇಮದ ಕಥೆ. ಅಮಿತಾಬ್ ಬಚ್ಚನ್ ಜೊತೆ ವಹೀದಾ ತ್ರಿಕೋನ ಪ್ರೇಮದ ಕಥೆಯನ್ನು ನಿರ್ವಹಣೆ ಮಾಡುತ್ತಾರೆ. ಮಾಗಿದ ಅಭಿನಯ ಆಕೆಯದ್ದು.

6. ಸಾಹಿಬ್ ಬೀವಿ ಔರ್ ಗುಲಾಮ್

ಮತ್ತೆ ಗುರುದತ್, ಮೀನಾ ಕುಮಾರಿ ಮತ್ತು ವಹೀದಾ ರೆಹಮಾನ್ ಅವರ ಪ್ರೇಮ ತ್ರಿಕೋನದ ಕಥೆ. ಬೆಂಗಾಲಿ ಕಾದಂಬರಿ ಆಧಾರಿತ ಸಿನೆಮಾ. ಇದರಲ್ಲಿ ಮೀನಾ ಕುಮಾರಿ ಮತ್ತು ವಹೀದಾ ಜಿದ್ದಿಗೆ ಬಿದ್ದವರ ಹಾಗೆ ಅಭಿನಯ ಮಾಡಿದ್ದಾರೆ. ಇದು ಗುರುದತ್ತ ಮತ್ತು ವಹೀದಾ ಜೊತೆಯಾಗಿ ಅಭಿನಯ ಮಾಡಿದ ಕೊನೆಯ ಸಿನೆಮಾ. ಇದರ ನಂತರ ಗುರುದತ್ ತನಗೆ ಅವಕಾಶ ಕೂಡಲೇ ಇಲ್ಲ ಎಂದು ವಹೀದಾ ಇಂದಿನವರೆಗೂ ವಿಷಾದ ಪಡುತ್ತಾರೆ.

‘ರೇಷ್ಮಾ ಔರ್ ಶೇರಾ’ ಸಿನೆಮಾದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ, ಮೂರು ಫಿಲ್ಮ್ ಫೇರ್ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮಭೂಷಣ ಇಂತಹ ಪ್ರಶಸ್ತಿಗಳನ್ನು ಪಡೆದ ವಹೀದಾ ರೆಹಮಾನ್ ಅವರಿಗೆ ಅತ್ಯಂತ ಯೋಗ್ಯವಾಗಿ ಈ ಬಾರಿಯ ಫಾಲ್ಕೆ ಪ್ರಶಸ್ತಿ ದೊರೆತಿದೆ. ಆಕೆಗೆ ಶುಭವಾಗಲಿ.

Exit mobile version