Site icon Vistara News

Raja Marga Column : ಮರೆಯಾದ ಗೋಲ್ಡನ್ ವಾಯ್ಸ್ : ಬಿನಾಕಾ ಗೀತಮಾಲಾದ ಅಮೀನ್ ಸಯಾನಿ

Raja Marga Column Ameen Sayani Geet mala

Raja Marga Column : ಆ ಅದ್ಭುತ ಬೇಸ್ ವಾಯ್ಸ್ ಭಾರತವನ್ನು (Powerful Base Voice) ಆರುವತ್ತು ವರ್ಷಕ್ಕೂ ಅಧಿಕ ಕಾಲ ರೂಲ್ ಮಾಡಿತ್ತು. ಆಲ್ ಇಂಡಿಯಾ ರೇಡಿಯೋದ (All India Radio) ಒಂದು ಜನಪ್ರಿಯ ಕಾರ್ಯಕ್ರಮ 42 ವರ್ಷಗಳ ಕಾಲ ನಿರಂತರ ಆಕಾಶವಾಣಿಯಿಂದ ಪ್ರಸಾರ ಆಯಿತು ಮತ್ತು ಲಿಮ್ಕಾ ದಾಖಲೆ ಕ್ರಿಯೇಟ್ ಮಾಡಿತು ಅಂದರೆ ಅದು ಅದ್ಭುತವೇ ಹೌದು. ಆ ಶೋನ ಹೆಸರು ‘ಬಿನಾಕಾ ಗೀತಮಾಲಾ’ (Binaca Geetmala) ಮತ್ತು ಆ ನಿರೂಪಕನ ಹೆಸರು ಅಮೀನ್ ಸಯಾನಿ (Ameen Sayani). ಅವರು ಈ ಮಂಗಳವಾರ (ಫೆಬ್ರುವರಿ 20) ನಮ್ಮನ್ನು ಅಗಲಿದ್ದಾರೆ ಅನ್ನುವುದು ಅವರ ಅಭಿಮಾನಿಗಳಿಗೆ ಬಿಗ್ ಶಾಕ್ ಹೌದು.

Raja Marga Column Ameen Sayani Geet mala2

Raja Marga Column: ಅದು ಕಾಪಿ ಮಾಡಲು ಸಾಧ್ಯವೇ ಆಗದ ಧ್ವನಿ!

ಅಮೀನ್ ಸಯಾನಿ ಹುಟ್ಟಿದ್ದು 1932 ಮುಂಬೈಯಲ್ಲಿ. ಜನ್ಮದತ್ತವಾಗಿ ಬಂದದ್ದು ಗೋಲ್ಡನ್ ವಾಯ್ಸ್. ಬಹಳ ಭಾರವಾದ ಬೇಸ್ ವಾಯ್ಸ್. ಆಕಾಶವಾಣಿಯ ಮೈಕ್ ಮುಂದೆ ಕೂತು ಅವರು ಮಾತಾಡಲು ತೊಡಗಿದರೆ ಇಡೀ ಭಾರತ ಮೈಮರೆತು ಕೇಳುತ್ತಿತ್ತು. ಹಿಂದಿ ಸಾಹಿತ್ಯವನ್ನು ಆಪೋಶನ ಮಾಡಿಕೊಂಡ ಹಾಗೆ ಓದಿಕೊಂಡಿದ್ದ ಅವರು ಇಂಗ್ಲಿಷ್ ಕೂಡ ಅದ್ಭುತವಾಗಿ ಮಾತಾಡುತ್ತಿದ್ದರು. ಅವರು ಮಾತಾಡುವಾಗ ಆಕಾಶವಾಣಿಯ ಮೈಕ್ ಕೂಡ ನಡುಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅವರು ತಮ್ಮ ತಾಯಿಯು ಹೊರತರುತ್ತಿದ್ದ ‘ರಾಹಬೀರ್ ‘ ಎಂಬ ಪತ್ರಿಕೆಗೆ ಹಿಂದಿ, ಗುಜರಾತಿ ಮತ್ತು ಉರ್ದು ಭಾಷೆಗಳಲ್ಲಿ ಲೇಖನ ಬರೆಯುತ್ತಿದ್ದರು. ಅವರ ತಾಯಿ ಗಾಂಧೀಜಿಯವರ ದಟ್ಟ ಪ್ರಭಾವದಿಂದ ರಾಷ್ಟ್ರೀಯ ವಿಚಾರ ಧಾರೆಯನ್ನು ಹೊಂದಿದ್ದರು. ಬರವಣಿಗೆಯಿಂದ ಅಮೀನ್ ಅವರ ಮಾತು ಪಳಗಿತು ಎನ್ನಬಹುದು. ಅವರು ಮಾತಿಗೆ ನಿಂತರೆ ಹಿಂದಿ ಮತ್ತು ಉರ್ದು ಶಾಯರಿಗಳು ಧಾರೆ ಧಾರೆಯಾಗಿ ಹರಿದು ಬರುತ್ತಿದ್ದವು. ಎಷ್ಟೋ ಶಾಯರಿಗಳು ಸ್ಥಳದಲ್ಲಿಯೇ ಹುಟ್ಟಿ ಬರುತ್ತಿದ್ದವು.

ಹೆಚ್ಚು ಗ್ರಾಂಥಿಕವಾದ ಮತ್ತು ಸಾಹಿತ್ಯಿಕವಾದ ಭಾಷೆಯನ್ನು ಬಳಸದೆ ಅತ್ಯಂತ ಸರಳವಾದ ಮತ್ತು ಸರಸವಾದ ಭಾಷೆ ಬಳಕೆ ಮಾಡಿಕೊಂಡ ಕಾರಣ ಅವರ ಕಾರ್ಯಕ್ರಮಗಳು ಸಾಮಾನ್ಯ ಜನರ ಹೃದಯವನ್ನು ಕೂಡ ತಟ್ಟಿದವು ಎನ್ನಬಹುದು.

ಅವರು ತಮ್ಮ ಮೊದಲ ಕೆಲಸ ಆರಂಭ ಮಾಡಿದ್ದು ಶ್ರೀಲಂಕಾ ರೇಡಿಯೋದ ಮೂಲಕ. ಅಲ್ಲಿ 1951ರಲ್ಲಿ ಹುಟ್ಟಿದ್ದು ಲಿಮ್ಕಾ ದಾಖಲೆಯ ಶೋ ‘ಬಿನಾಕಾ ಗೀತ ಮಾಲಾ’

Raja Marga Column : ಒಂದು ರೇಡಿಯೋ ಶೋ 42 ವರ್ಷ ಓಡಿತು ಎಂದರೆ!

ಬಿನಾಕ ಗೀತಮಾಲ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ. ಹೇಳಿ ಕೇಳಿ ಅದು ಆಗಿನ ಜನಪ್ರಿಯ ಹಿಂದೀ ಸಿನಿಮಾ ಗೀತೆಗಳ ಶೋ. ಜನರ ಆಯ್ಕೆಯ ಮಾನದಂಡದ ಮೇಲೆ ಆ ವಾರದ ಜನಪ್ರಿಯ ಹಾಡುಗಳ ಆಯ್ಕೆ ಮತ್ತು ಪ್ರಸಾರದ ಕಾರ್ಯಕ್ರಮ. ಪ್ರತೀ ವಾರ ಯಾವ ಹಾಡುಗಳು ಟಾಪ್ 3 (ಅಥವಾ ಟಾಪ್ 5) ಪ್ಲೇಸಲ್ಲಿ ಬಂದು ಕೂತವು ಎಂಬ ರಹಸ್ಯವನ್ನು ಕೊನೆಯವರೆಗೆ ಕಾಪಾಡಿಕೊಂಡು ಬರಲಾಗುತ್ತಿತ್ತು. ಉದಾಹರಣೆಗೆ ಯೇಸುದಾಸ್ ಹಾಡಿದ ಚಿತ್ ಚೋರ್ ಸಿನಿಮಾದ ‘ಗೋರಿ ತೇರಾ ಗಾಂವ್ ಬಡಾ ಪ್ಯಾರಾ’ ಹಾಡು ಸತತವಾಗಿ 13 ವಾರ ಟಾಪ್ ಒಂದು ಪ್ಲೇಸಲ್ಲಿ ಗಟ್ಟಿಯಾಗಿ ಕೂತಿತ್ತು. ಪಾಕಿಜಾ ಸಿನೆಮಾದ ‘ಇನ್ಹಿ ಲೋಗೋ ನೇ’ ಎಂಬ ಮುಜ್ರಾ ಹಾಡು ಹಲವು ವಾರ ಟಾಪ್ ಪ್ಲೇಸಲ್ಲಿ ಕೂತದ್ದು ನನಗೆ ನೆನಪಿದೆ. ಶೋಲೆ ಸಿನಿಮಾದ ‘ಏ ದೋಸತಿ’ ಹಾಡು, ಸದ್ಮಾ ಚಿತ್ರದ ‘ಸುರ್ ಮೈ ಅಖಿಯೊ ಮೇ’ ಮೊದಲಾದವುಗಳು ಎಷ್ಟೋ ವಾರಗಳ ಕಾಲ ಹಿಟ್ ಪ್ಲೇಸಲ್ಲಿ ವಿರಾಜಮಾನ ಆಗಿದ್ದವು.

‘ರಾಮ್ ತೇರಿ ಗಂಗಾ ಮೈಲಿ’ ಸಿನಿಮಾದ ‘ಸುನ್ ಸಾಯ್ಬಾ ಸುನ್’, ಸಾಗರ್ ಕಿನಾರೆ ಸಿನಿಮಾದ ಟೈಟಲ್ ಸಾಂಗ್, ಬಾಬ್ಬಿ ಸಿನೆಮಾದ ‘ಚಾಬಿ ಖೋ ಜಾಯ್’, ಜ್ಯೂಲಿ ಸಿನಿಮಾದ‌ ‘ಭೂಲ್ ಗಯಾ ಸಬ್ ಕುಚ್’ ಮೊದಲಾದ ಹಾಡುಗಳಿಗೆ ಸ್ಟಾರ್ ವ್ಯಾಲ್ಯೂ ಬಂದದ್ದು ಇದೇ ಕಾರ್ಯಕ್ರಮದ ಮೂಲಕ ಅಂದರೆ ಅತಿಶಯೋಕ್ತಿ ಅಲ್ಲ.

ಆ ಕಾರ್ಯಕ್ರಮದ ಜೀವಾಳವೇ ಅಮೀನ್ ಸಯಾನಿ ಅವರ ಅದ್ಭುತ ನಿರೂಪಣೆ ಮತ್ತು ಗೋಲ್ಡನ್ ವಾಯ್ಸ್.

ಅವರು ಆ ಹಾಡುಗಳ ಸಾಹಿತ್ಯದ ಮೌಲ್ಯ, ರಾಗ ಸಂಯೋಜನೆ, ವಾದ್ಯಗಳ ಬಳಕೆ, ಯಾವ ರಾಗ? ಯಾವ ತಾಳ, ಯಾವ ಗಾಯಕರು? ಹಾಡಿನ ಮನೋಧರ್ಮ ಯಾವುದು? ಆ ಹಾಡಿನ ಜನಪ್ರಿಯತೆಗೆ ಕಾರಣ ಏನು?… ಹೀಗೆ ಎಲ್ಲವನ್ನೂ ಹೃದ್ಯವಾದ ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ನಿರೂಪಣೆ ಮಾಡುತ್ತ ಹೋದಂತೆ ಜನರು ಅವರ ನಿರೂಪಣಾ ಶೈಲಿಗೆ ಮಾರುಹೋಗುತ್ತಿದ್ದರು. ಆಗಿನ ಜನಪ್ರಿಯ ಟೂಥ್ ಪೇಸ್ಟ್ ಬಿನಾಕಾ ಆ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡ ಕಾರಣ ಅದು ‘ಬಿನಾಕಾ ಗೀತಮಾಲಾ’ ಎಂದೇ ಜನಪ್ರಿಯ ಆಯಿತು. ಮುಂದೆ ಬಿನಾಕ ಕಂಪೆನಿ ಹೆಸರು ಬದಲಾವಣೆ ಮಾಡಿಕೊಂಡ ಕಾರಣ ಅದು ‘ಸಿಬಾಕಾ ಗೀತ್ ಮಾಲಾ’ ಆಗಿ ಬದಲಾಯಿತು.

ಮುಂದೆ ಅದೇ ಕಾರ್ಯಕ್ರಮ ಭಾರತೀಯ ಆಕಾಶವಾಣಿಗೆ (ಆಲ್ ಇಂಡಿಯಾ ರೇಡಿಯೋ) ವರ್ಗಾವಣೆ ಆಯಿತು. ಆದರೆ 42 ವರ್ಷ ಆ ಕಾರ್ಯಕ್ರಮದ ಜನಪ್ರಿಯತೆಯು (ಆಗ TRP ಎಂಬ ಮಾನದಂಡ ಇರಲಿಲ್ಲ) ಒಂದಿಂಚೂ ಕಡಿಮೆ ಆಗಿರಲಿಲ್ಲ ಅನ್ನುವುದು ಅಮೀನ್ ಸಯಾನಿ ಅವರ ಧ್ವನಿಯ ತಾಕತ್ತು. ಅದು ಆಕಾಶವಾಣಿಗೆ ಹೇಳಿ ಮಾಡಿಸಿದ ಧ್ವನಿ ಆಗಿತ್ತು. ಕಾರ್ಯಕ್ರಮದ ಮರುದಿನ ಇಡೀ ಭಾರತ ಆ ಕಾರ್ಯಕ್ರಮದ ಬಗ್ಗೆ ಮತ್ತು ಹಾಡುಗಳ ಬಗ್ಗೆ ಚರ್ಚೆ ಮಾಡುತ್ತಿದ್ದದನ್ನು ನಾನು ಗಮನಿಸಿದ್ದೇನೆ. ಆ ಹಾಡುಗಳ ಕ್ಯಾಸೆಟ್‌ಗಳು ಬಿಸಿ ದೋಸೆಯ ಹಾಗೆ ಮಾರಾಟ ಆಗುತ್ತಿದ್ದವು.

54,000 ರೇಡಿಯೋ ಶೋಗಳ ದಾಖಲೆ!

1951-2014 ಅವಧಿಯಲ್ಲಿ ಅವರು ನಡೆಸಿಕೊಟ್ಟ ರೇಡಿಯೋ ಶೋಗಳ ಸಂಖ್ಯೆ 54,000 ದಾಟಿತ್ತು ಅಂದರೆ ನಂಬುವುದು ಕಷ್ಟ ಆಗಬಹುದು! ಅದರ ಜೊತೆಗೆ 19,000 ರೇಡಿಯೋ ಜಿಂಗಲ್‌ಗಳಿಗೆ ಅವರ ಧ್ವನಿಯು ಬಳಕೆ ಆಗಿದೆ! ಹಲವು ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಿಗೆ ಅವರ ಧ್ವನಿಯು ಹಿನ್ನೆಲೆ ಧ್ವನಿಯಾಗಿ ಬಳಕೆ ಆಗಿದೆ. ಬಿಬಿಸಿ ಸೇರಿದಂತೆ ಹಲವು ವಿದೇಶದ ರೇಡಿಯೋ ಶೋಗಳಲ್ಲಿ ಅವರ ಧ್ವನಿಯ ನಿರೂಪಣೆಯು ಮಿಂಚಿದೆ. ಅವರ ‘ಬೇಹನೋ ಔರ್ ಬಾಯಿಯೋ ‘ಎಂಬ ಆರಂಭದ ಮಾತು ಸಿಕ್ಕಾಪಟ್ಟೆ ಮೋಡಿ ಮಾಡುತ್ತಿತ್ತು.

ಸಂಗೀತ್ ಕೆ ಸಿತಾರೆ ಮೇಹಫಿಲ್, ಬೋರ್ನ್ವಿಟಾ ಕ್ವಿಜ್ ಕಂಟೆಸ್ಟ್, ಶಾಲಿಮಾರ್ ಸೂಪರ್ ಜೋಡಿ ಇವೆಲ್ಲವೂ ಅವರೇ ಹುಟ್ಟುಹಾಕಿದ ಜನಪ್ರಿಯವಾದ ರೇಡಿಯೋ ಶೋಗಳು. ನಿರೂಪಣೆ ಕೂಡ ಅವರದ್ದೇ. ಅವರು ಜಗತ್ತಿನಾದ್ಯಂತ ಜನಪ್ರಿಯ ಹಾಡುಗಳ ಸ್ಟೇಜ್ಶೋ ಗಳನ್ನು ಹೋಸ್ಟ್ ಮಾಡಿದ್ದಾರೆ. ನಾನು ಅವರ ಧ್ವನಿಯ ಅಭಿಮಾನಿ ಎಂದು ಲತಾ ಮಂಗೇಶ್ಕರ್ ಮತ್ತು ಅಮಿತಾಬ್ ಬಚ್ಚನ್ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ : Raja Marga Column : ಬೇಕಿರುವುದು ಅನುಕಂಪವಲ್ಲ, ಸಹಾನುಭೂತಿ; ಏನೀ ಪ್ರೀತಿ ಮಂತ್ರ?

ಗೋಲ್ಡನ್ ವಾಯ್ಸ್ ಆಫ್ ಇಂಡಿಯಾ

2014ರವರೆಗೆ ರೇಡಿಯೋ ಶೋಗಳನ್ನು ನಿರ್ವಹಣೆ ಮಾಡುತ್ತ ಬಂದಿದ್ದ ಅವರ ಧ್ವನಿಯು ಭಾರತದಲ್ಲಿ ಮೆಟ್ರೋ ರೈಲುಗಳಲ್ಲಿ ಕೂಡ ಪ್ರಸಾರವಾಗಿ ಜನಪ್ರಿಯ ಆಗಿತ್ತು. ಅವರಿಗೆ ಪದ್ಮಶ್ರೀ ಪ್ರಶಸ್ತಿ, ‘ಗೋಲ್ಡನ್ ವಾಯ್ಸ್ ಆಫ್ ಇಂಡಿಯಾ’ ಪ್ರಶಸ್ತಿಗಳು ಕೂಡ ದೊರೆತಿರುವುದು ಉಲ್ಲೇಖನೀಯ.

ಅವರು ಈ ಮಂಗಳವಾರ ನಮ್ಮನ್ನು ಆಗಲಿದ್ದು (81 ವರ್ಷ) ಭಾರತೀಯ ರೇಡಿಯೋ ಅಭಿಮಾನಿಗಳಿಗೆ ತುಂಬಲಾಗದ ನಷ್ಟ. ಟಿವಿ ರಿಯಾಲಿಟಿ ಶೋಗಳ ಈ ಆಧುನಿಕ ಕಾಲದಲ್ಲೂ ರೇಡಿಯೋ ಕಿವಿಗೆ ಹಚ್ಚಿ ಆಲಿಸುವ ಕೋಟಿ ಕೋಟಿ ಅಭಿಮಾನಿಗಳು ಭಾರತದಲ್ಲಿ ಈಗಲೂ ಇದ್ದಾರೆ ಅಂದರೆ ಅದಕ್ಕೆ ಕಾರಣ ಅಮೀನ್ ಸಯಾನಿ ಅವರಂತಹ ಲೆಜೆಂಡ್ ವಾಯ್ಸ್‌ಗಳು. ಇಂದು ಆರ್ ಜೆ ಆಗಿ ಬದುಕು ಆರಂಭಿಸುವ ಹಲವು ಯುವಕ , ಯುವತಿಯರು ಅವರ ನಿರೂಪಣೆಯ ಶೈಲಿಯನ್ನು ಒಮ್ಮೆ ಗಮನಿಸುವುದು ಉತ್ತಮ. ಅವರಿಗೆ ನಮ್ಮ ಶ್ರದ್ಧಾಂಜಲಿ.

ಇಲ್ಲಿವೆ ಅಮೀನ್‌ ಸಯಾನಿ ಅವರ ವಿವರಣೆಗಳನ್ನು ಒಳಗೊಂಡ ನೂರು ಹಾಡುಗಳು

Exit mobile version