Raja Marga column : ಭಾರತದಲ್ಲಿ ತಬಲಾಗೆ ಅನ್ವರ್ಥ ನಾಮ ಆಗಿ ಇದ್ದವರು ಉಸ್ತಾದ್ ಅಲ್ಲಾ ರಖಾ! (Ustad Alla Rakha) ಸಾವಿರಾರು ಶಿಷ್ಯರನ್ನು ತಯಾರು ಮಾಡಿದವರು ಅವರು. ಭಾರತದಲ್ಲಿ ಎಲ್ಲ ಸಂಗೀತ ಮಹೋತ್ಸವಗಳಲ್ಲಿ ತಬಲಾ ನುಡಿಸಿದ ಕೀರ್ತಿ ಉಸ್ತಾದ್ ಅಲ್ಲಾ ರಖಾ ಅವರದ್ದು. ಅವರ ಹಿರಿಯ ಮಗ ಝಾಕೀರ್ ಹುಸೇನ್ (Zakhir Hussain). ಆದರೆ ಅಪ್ಪ ಮಗನಿಗೆ ತಬಲಾ ಕಲಿಸಲಿಲ್ಲ. ಆದರೆ ಅಪ್ಪನ ಎಲ್ಲ ಸಂಗೀತ ಕಾರ್ಯಕ್ರಮಗಳಿಗೆ ಮಗ ತಪ್ಪದೇ ಹೋಗುತ್ತಿದ್ದ. ಅಪ್ಪನ ಹಿಂದೆ ಕೂತು ಅಪ್ಪನ ಬೆರಳ ಚಲನೆಯನ್ನು ಏಕಾಗ್ರತೆಯಿಂದ ಗಮನಿಸುತ್ತಿದ್ದ. ಮಗನಿಗೆ ಅಪ್ಪನೇ ಲೆಜೆಂಡ್! ಮಗನದ್ದು ಒಂದು ರೀತಿಯಲ್ಲಿ ಏಕಲವ್ಯ ಸಾಧನೆ. ಮಗನು 12ನೇ ವಯಸ್ಸಿಗೇ ತಬಲಾ ಸೋಲೋ ಕಾರ್ಯಕ್ರಮ (Tabla Solo Programme) ನೀಡಿದಾಗ ಅಪ್ಪ ಬೆರಗಾಗಿದ್ದರು. ಮುಂಬೈಯ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಅವರು ಸಂಪೂರ್ಣವಾಗಿ ಸಂಗೀತಕ್ಕೆ ಸಮರ್ಪಣೆ ಆದರು.
Raja Marga column : ಉಸ್ತಾದರು ನಡೆದದ್ದೇ ದಾರಿ!
ಬಾಲ್ಯದಲ್ಲಿ ತನ್ನ ಎರಡು ಸೋದರಿಯರನ್ನು ಮತ್ತು ಒಬ್ಬ ಸೋದರನನ್ನು ಅಕಾಲಿಕವಾಗಿ ಕಳೆದುಕೊಂಡ ನೋವನ್ನು ಎದೆಯಲ್ಲಿ ಇಟ್ಟುಕೊಂಡು ಉಸ್ತಾದರು ತಮ್ಮ ಎಲ್ಲ ನೋವುಗಳನ್ನು ಸಂಗೀತದಲ್ಲಿಯೇ ಮರೆತರು. ತಬಲಾದಲ್ಲಿ ಅದುವರೆಗೆ ಯಾರೂ ಮಾಡದ ಆವಿಷ್ಕಾರಗಳನ್ನು ಮಾಡಿದರು. ಶಾಸ್ತ್ರೀಯ ಸಂಗೀತ ಕಛೇರಿಗಳು, ವೆಸ್ಟರ್ನ್ ಫ್ಯೂಷನ್ ಕಾರ್ಯಕ್ರಮಗಳು, ತಬಲಾ ಸೋಲೋ ಕಾರ್ಯಕ್ರಮಗಳು, ಜುಗಲಬಂದಿಗಳು… ಮಾಧ್ಯಮ ಯಾವುದಾದರೇನು?
Raja Marga Column :ಉಸ್ತಾದರ ತಬಲಾ ನುಡಿತವೆಂದರೆ…!
ಅದು ಕೆಲವೊಮ್ಮೆ ಭೋರ್ಗರೆವ ಸಮುದ್ರದ ಹಾಗೆ! ಕೆಲವೊಮ್ಮೆ ನಿಧಾನವಾಗಿ ಬೀಸುವ ಮಂದಾನಿಲದ ಹಾಗೆ! ಇನ್ನೂ ಕೆಲವೊಮ್ಮೆ ಸಿಡಿಯುವ ಮಿಂಚಿನ ಹಾಗೆ! ಇನ್ನೊಮ್ಮೆ ತಾಯಿಯ ಮಮತೆಯ ಜೋಗುಳದ ಹಾಗೆ! ಇನ್ನೂ ಕೆಲವೊಮ್ಮೆ ಆಹ್ಲಾದಕರ ಸೋನೆಮಳೆಯ ಹಾಗೆ! ಮತ್ತೊಮ್ಮೆ ಮುಸಲಧಾರೆ ಆದ ಜಡಿಮಳೆಯ ಹಾಗೆ! ಮತ್ತೂ ಒಮ್ಮೆ ದುಂಬಿಯ ಝೇಂಕಾರ, ಜಲಪಾತದ ಘರ್ಜನೆ, ಕುದುರೆಯ ಖರಪುಟ, ರೈಲಿನ ಶಬ್ದ, ಗಾಳಿಯ ಬೀಸು, ಶಂಖದ ನಾದ, ಕಂಸಾಳೆಯ ತಾಳ, ಎದೆಯ ಬಡಿತ, ಪ್ರೇಯಸಿಯ ಗೆಜ್ಜೆಯ ನಾದ, ಕೈ ಬಳೆಗಳ ಶಬ್ದ…………… ಇನ್ನೂ ಏನೇನೋ ಅನುಭೂತಿಗಳು! ಅದ್ಯಾವುದೂ ನಮ್ಮ ಶಬ್ದಗಳಿಗೆ ನಿಲುಕುವುದಿಲ್ಲ! ಎದುರು ಕಣ್ಣು ಮುಚ್ಚಿ ಕೂತು ಅನುಭವಿಸಬೇಕು!
ತಬಲಾ ಎಂಬ ಅತೀ ಸಾಮಾನ್ಯವಾದ ಚರ್ಮವಾದ್ಯದಲ್ಲಿ ಅವರಷ್ಟು ನಾದಸೌಖ್ಯವನ್ನು ಕ್ರಿಯೇಟ್ ಮಾಡುವ ಕಲಾವಿದ ಜಗತ್ತಿನಲ್ಲಿಯೇ ಇನ್ನೊಬ್ಬರು ಇಲ್ಲ ಅಂದಿದ್ದರು ಲತಾ ಮಂಗೇಷ್ಕರ್! ಅವರ ಬೆರಳುಗಳನ್ನು ಕಣ್ಣಿಗೆ ಒತ್ತಿಕೊಂಡು ಸಂಭ್ರಮ ಪಟ್ಟಿದ್ದರು! ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಉಸ್ತಾದ್ ಝಾಕೀರ್ ಹುಸೇನರನ್ನು ತನ್ನ ಅಧಿಕೃತ ನಿವಾಸ ವೈಟ್ ಹೌಸ್‌ಗೆ ಕರೆಸಿ ಅವರ ವೆಸ್ಟರ್ನ್ ಫ್ಯೂಷನ್ ಕಾರ್ಯಕ್ರಮ ನಡೆಸಿ ಸನ್ಮಾನ ಮಾಡಿ ಕಳುಹಿಸಿದ್ದರು!
ಅವರು ನುಡಿಸಿದ ಎರಡು ಸೋಲೋ ಕಾರ್ಯಕ್ರಮಗಳನ್ನು ನಾನು ಎದುರು ಸಭೆಯಲ್ಲಿ ಕೂತು ನೋಡಿ ಮೂಕವಿಸ್ಮಿತ ಆಗಿದ್ದೆ. ಬಾಯಲ್ಲಿ ಬೋಲ್ ಹೇಳುತ್ತಾ ಒಂದಕ್ಷರವನ್ನೂ ಬಿಡದೇ ಅವುಗಳನ್ನು ತಬಲಾದಲ್ಲಿ ನುಡಿಸಿದಾಗ ಆಗುವ ರೋಮಾಂಚನ ಒಂದೆಡೆ! ಶಾಸ್ತ್ರೀಯ ಸಂಗೀತದ ಕಾರ್ಯಕ್ರಮದಲ್ಲಿ ಇತರ ಕಲಾವಿದರು ಹಾಡಿದ, ನುಡಿಸಿದ ಒಂದಕ್ಷರಕ್ಕೆ ಲೋಪವಾಗದ ಹಾಗೆ ಮೂರನೇ, ನಾಲ್ಕನೇ ಕಾಲದಲ್ಲಿ ಅವರ ಬೆರಳುಗಳು ತಬಲಾವನ್ನು ಮೀಟುತ್ತಿದ್ದರೆ ಅವರ ಜೊಂಪೆ ಜೊಂಪೆ ಕೂದಲು ಹಣೆಯ ಮೇಲೆ ಕುಣಿದಾಡುವುದನ್ನು ನೋಡುವುದೇ ಚೆಂದ! ಅವರ ಮತ್ತು ಅವರ ಅಪ್ಪನ ತಬಲಾ ಜುಗಲಬಂದಿಯ ಹತ್ತಾರು ವಿಡಿಯೋಗಳು ಯು ಟ್ಯೂಬ್ ವೇದಿಕೆಯಲ್ಲಿದ್ದು ಅವುಗಳನ್ನು ಆಲಿಸುವುದೇ ನಮ್ಮ ಕಿವಿಗಳ ಭಾಗ್ಯ!
ಅಹಂಕಾರದ ಲವಲೇಶವೂ ಇಲ್ಲದೆ ಅವರು ಎಳೆಯ ಕಲಾವಿದರನ್ನು ಪ್ರೋತ್ಸಾಹಿಸುವುದು, ಸಣ್ಣ ವಯಸ್ಸಿನ ಕಲಾವಿದರಿಗೆ ಕೂಡ ತಬಲಾ ಸಾಥ್ ನೀಡಿ ಪ್ರೋತ್ಸಾಹಿಸುವುದು ಅವರ ಭಾರೀ ದೊಡ್ದ ಗುಣ! ಇತ್ತೀಚೆಗೆ ತಬಲಾ ಕಿರಿಯ ಪ್ರತಿಭೆ ಝಾಂಪ ಲಾಹಿರಿ ಅವಳ ಸೋಲೋ ಪ್ರದರ್ಶನಕ್ಕೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಎರಡು ಗಂಟೆ ಎದುರಿನ ಸಾಲಿನಲ್ಲಿ ಕೂತದ್ದು, ನಂತರ ವೇದಿಕೆಯನ್ನು ಏರಿ ಆಕೆಯನ್ನು ಸನ್ಮಾನ ಮಾಡಿದ್ದು ಸ್ಮರಣೀಯ ಘಟನೆ!
ಸಾವಿರಾರು ವಿದೇಶೀ ಆಲ್ಬಂಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ತಬಲಾ ನುಡಿಸಿದ್ದಾರೆ. ಗ್ರಾಮ್ಮೀ ಮೊದಲಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ನೂರಾರು ದೊರೆತಿವೆ. ಅಮೆರಿಕ ಸರಕಾರವು ಕೊಡುವ ನೇಷನಲ್ ಹೆರಿಟೇಜ್ ಸ್ಕಾಲರ್‌ಶಿಪ್ ಅವಾರ್ಡ್ ಅವರಿಗೆ ದೊರಕಿದೆ.
ಭಾರತರತ್ನವೊಂದೇ ಬಾಕಿ!
ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ (2023) ಪ್ರಶಸ್ತಿಗಳು ಅವರಿಗೆ ಈಗಾಗಲೇ ಲಭಿಸಿವೆ. ಈ ಸರಣಿಯಲ್ಲಿ ಭಾರತರತ್ನವೊಂದೇ ಅವರಿಗೆ ಬಾಕಿ ಇದ್ದು ಅದಕ್ಕೆ ಅವರು ನೂರಕ್ಕೆ ನೂರರಷ್ಟು ಅರ್ಹರಿದ್ದಾರೆ! ಕೇಂದ್ರ ಸರಕಾರದ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರಕಾರ ಕೊಡುವ ಕಾಳಿದಾಸ ಸನ್ಮಾನ್… ಎಲ್ಲವೂ ಅವರಿಗೆ ದೊರೆತಿವೆ. ಅವರು ಹತ್ತಾರು ಸಿನೆಮಾಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಸಿನೆಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ!
ಇದನ್ನೂ ಓದಿ : Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು
Happy Birthday to Ustad Zakir Hussain!
— NFDC India (@nfdcindia) March 9, 2024
Zakir Hussain is hailed as one of the tabla's finest exponents. Immersed in music from an early age, he began performing at seven and touring at 12. With an illustrious career, he remains a titan of world percussion.#zakirhussain #legend pic.twitter.com/uJGWqyA0FC
ಭಾರತೀಯ ಸಂಗೀತದ ಬಗ್ಗೆ ಅವರು ಹೇಳಿದ್ದು
ಉಸ್ತಾದ್ ಝಾಕೀರ್ ಹುಸೇನರು ಭಾರತೀಯ ಸಂಗೀತದ ಬಗ್ಗೆ ಹೇಳಿದ ಮಾತುಗಳು ನನಗೆ ಭಾರಿ ಪ್ರೇರಣೆ ಕೊಟ್ಟಿವೆ. ಅವರ ಮಾತುಗಳಲ್ಲಿಯೇ ಕೇಳುತ್ತಾ ಹೋಗೋಣ!
‘ನಾನು ಭಾರತೀಯ ಸಂಗೀತದ ಆರಾಧಕ. ಸಂಗೀತದಲ್ಲಿ ನಾನು ಸಾಧನೆ ಮಾಡಿದ್ದು ಬಲು ಕಡಿಮೆ. ನಾನಿನ್ನೂ ಸಾಧಿಸಬೇಕಾದದ್ದು ತುಂಬಾ ಇದೆ. ನಾನು ಮದುವೆ ಪಾರ್ಟಿಗಳಲ್ಲಿ, ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ, ಗುಂಡು ಪಾರ್ಟಿಗಳಲ್ಲಿ ತಬಲಾ ನುಡಿಸುವುದಿಲ್ಲ! ಎಷ್ಟು ಕೋಟಿ ಕೊಟ್ಟರೂ ನಾನು ಅಲ್ಲಿಯ ಕಡೆಗೆ ಹೋಗುವುದಿಲ್ಲ! ನನ್ನ ಪ್ರಕಾರ ನನಗೆ ಭಾರತೀಯ ಸಂಗೀತ ಎಂದರೆ ಬಹಳ ದೊಡ್ಡ ಆರಾಧನೆ! ನಾನು ಸಂಗೀತ ಕಛೇರಿಗೆ ತಬಲಾ ನುಡಿಸುವ ಮೊದಲು ನನ್ನ ಎಲ್ಲಾ ಅಹಂಕಾರವನ್ನು ಪ್ರೇಕ್ಷಕರ ಕಾಲ ಬುಡದಲ್ಲಿ ಇಟ್ಟು ನಂತರ ನುಡಿಸಲು ಆರಂಭ ಮಾಡುತ್ತೇನೆ! ಪ್ರತೀಯೊಂದು ಸಂಗೀತದ ವೇದಿಕೆಯಲ್ಲಿಯೂ ನಾನು ಹೊಸತು ಹೊಸತು ಕಲಿಯುತ್ತಾ ಇದ್ದೇನೆ!’
ಅಂತಾ ತಬಲಾ ಸಾಮ್ರಾಟನಿಗೆ ಮಾರ್ಚ್ 9ನೇ 73ನೇ ಹುಟ್ಟಿದ ಹಬ್ಬ! ಹ್ಯಾಪಿ ಬರ್ತ್ ಡೇ ಲೆಜೆಂಡ್.