Site icon Vistara News

Raja Marga Column: ‘ದ ಲಾಸ್ಟ್ ಲೆಕ್ಚರ್’ ಪುಸ್ತಕ ಬರೆದ ರಾಂಡಿ ಪಾಷ್ ಕಣ್ಣೀರ ಕತೆ!

Randy pausch THE LAST LECTURE1

ವ್ಯಕ್ತಿತ್ವ ವಿಕಸನದ ತರಬೇತುದಾರನಾಗಿ (Personality development trainer) ನಾನು ತುಂಬಾನೇ ಓದುತ್ತೇನೆ. ಓದು ನನಗೆ ಅನಿವಾರ್ಯ ವ್ಯಸನ! ನಾನು ಓದಿ ಮುಗಿಸಿರುವ ಸಾವಿರಾರು ಪುಸ್ತಕಗಳಲ್ಲಿ ಇದು ನನ್ನನ್ನು ಗಾಢವಾಗಿ ತಟ್ಟಿದ ಪುಸ್ತಕ! ಅದು ಜಗತ್ತಿನ ಬೆಸ್ಟ್ ಸೆಲ್ಲರ್ (Worlds Best seller) ಪುಸ್ತಕ ಕೂಡ! ಆ ಪುಸ್ತಕವನ್ನು ನಾನು ಪ್ರೀತಿಯಿಂದ ಓದುತ್ತಾ ಹೋದಂತೆ ಕಣ್ಣೀರು ಸ್ಫೋಟವಾಗಿ ಗಲ್ಲದ ಮೇಲೆ ನೀರಾಗಿ ಹೋಯಿತು ಅಂದರೆ ಅದು ಉತ್ಪ್ರೇಕ್ಷೆ ಅಲ್ಲ! ಅದು ಸೂಕ್ಷ್ಮ ಭಾವನೆಯವರಿಗೆ ಮಾತ್ರ ಅರ್ಥ ಆಗುವ ಫೀಲ್! (Raja Marga Column)

ಆ ಪುಸ್ತಕದ ಹೆಸರು – ದ ಲಾಸ್ಟ್ ಲೆಕ್ಚರ್!
(THE LAST LECTURE)
ಬರೆದವರು – ಖ್ಯಾತ ಶಿಕ್ಷಕ ರಾಂಡಿ ಪಾಶ್ ಮತ್ತು ಜೆಫ್ರಿ ಜಸ್ಲೋ. (Jeffrey Zaslow and Randy Pausch)
ಕನ್ನಡಕ್ಕೆ ಅನುವಾದ ಮಾಡಿದವರು – ಎಸ್. ಉಮೇಶ್.

ಯಾರೀ ರಾಂಡಿ ಪಾಶ್?

ಆತನನ್ನು ಜನರು ‘ಪಿಟ್ಸ್‌ ಬರ್ಗ್‌ನ ಸಂತ ‘ಎಂದು ಕರೆದರು! ಕೇವಲ 47 ವರ್ಷ ಮಾತ್ರ ಬದುಕಿದ್ದ ರಾಂಡಿ ಪಾಶ್ ಮುಂದೆ ಆಗುವುದನ್ನು ಮೊದಲೇ ಗ್ರಹಿಸಿದ ಹಾಗೆ ಬದುಕಿದ! ಒಂದರ ಹಿಂದೆ ಒಂದು ಕನಸನ್ನು ಕಂಡ. ತನ್ನ ಎಲ್ಲ ಕನಸುಗಳನ್ನು ನನಸು ಮಾಡಿ ಇನ್ನು ಮುಗಿಯಿತು, ಇದೋ ಹೊರಟೆ ಕಣ್ರೋ! ಎಂಬ ಹಾಗೆ ಹೊರಟುಹೋದ.

ಆತನ ಬಳಿ ಎಲ್ಲವೂ ಇತ್ತು!

ರಾಂಡಿ ಪಾಶ್ ಹುಟ್ಟಿದ್ದು ಅಮೆರಿಕಾದಲ್ಲಿ. ಆತ ಮಹಾ ಪ್ರತಿಭಾವಂತ. ಆತ ವೃತ್ತಿಯಿಂದ ಒಬ್ಬ ಕಂಪ್ಯೂಟರ್ ವಿಜ್ಞಾನಿ. ಅವನಿಗೆ ಬಹು ದೊಡ್ಡ ಸಂಬಳದ ನೌಕರಿ ಇತ್ತು! ಸಮಾಜದಲ್ಲಿ ದೊಡ್ಡ ಹೆಸರಿತ್ತು! ದಂತದ ಗೊಂಬೆಯ ಹಾಗಿರುವ ಹೆಂಡತಿ ಇದ್ದಳು! ಅರಮನೆಯ ಹಾಗಿದ್ದ ಬಂಗಲೆ ಇತ್ತು! ಮೂರು ತಲೆಮಾರುಗಳಿಗೆ ಬೇಕಾದಷ್ಟು ಬ್ಯಾಂಕ್ ಬ್ಯಾಲೆನ್ಸ್ ಇತ್ತು! ಮೂವರು ಬುದ್ಧಿವಂತ ಮಕ್ಕಳು ಇದ್ದರು.

ಅವನಿಗೆ ಎಲ್ಲವೂ ಕಠಿಣ ದುಡಿಮೆಯಿಂದ ದೊರಕಿತ್ತು. ಅವನಿಗೆ ಸಾವಿರಾರು ಅಭಿಮಾನಿಗಳು ಇದ್ದರು. ಅವನು ಕಂಡಿದ್ದ ಅಷ್ಟೂ ಕನಸುಗಳು ಆತನ ಕಾಲ ಬುಡಕ್ಕೆ ಬಂದು ಬಿದ್ದಾಗಿತ್ತು! ನಾನು ಜಗತ್ತಿನ ಅತ್ಯಂತ ದೊಡ್ಡ ಸೆಲೆಬ್ರಿಟಿ ಎಂದು ಭಾವಿಸುವ ಹೊತ್ತಿನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಆತನನ್ನು ಆವರಿಸಿದ್ದು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್!

ಸಾವನ್ನು ಎದುರಿಸಲು ಮಾನಸಿಕ ಸಿದ್ಧತೆ!

ಕ್ಯಾನ್ಸರ್ ಮೊದಲ ಬಾರಿಗೆ ಟ್ರೇಸ್ ಆದಾಗ ಆತನು ಭರವಸೆ ಕಳೆದುಕೊಳ್ಳಲಿಲ್ಲ. ತನ್ನ ಆಪ್ತ ಗೆಳೆಯನಾಗಿದ್ದ ಡಾಕ್ಟರ್ ಮುಂದೆ ಕೂತು ಎಲ್ಲ ಪರೀಕ್ಷೆಗಳನ್ನು ಮಾಡಿಕೊಂಡ. ಆ ವೈದ್ಯನ ಮೇಲೆ ರಾಂಡಿಗೆ ಭಾರಿ ಭರವಸೆ ಇತ್ತು. ಆದರೆ ಆ ಡಾಕ್ಟರ್ ಅವನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಹೇಳಿದ ಮಾತು – ಸಾರಿ ಡಿಯರ್! ಕ್ಯಾನ್ಸರ್ ನಿನ್ನ ಇಡೀ ದೇಹವನ್ನು ಆಕ್ರಮಿಸಿ ಆಗಿದೆ!

ಯಾರ ವಿರುದ್ಧ ಆದರೂ ಹೋರಾಡಬಹುದು. ಆದರೆ ಸಾವಿನ ವಿರುದ್ಧ ಹೋರಾಡಿ ಗೆದ್ದವರು ಇದ್ದಾರಾ? ಸಾವು ಖಂಡಿತ ಎಂದು ಗೊತ್ತಾದಾಗ ರಾಂಡಿ ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ಮಾಡಿದನು. ಆತನ ಪ್ರೀತಿಯ ಪತ್ನಿ ಜೈ ಜೋರಾಗಿ ಕಣ್ಣೀರು ಹಾಕಿದಳು. ಆಕೆಯ ಕಣ್ಣೀರನ್ನು ಒರೆಸುತ್ತಾ ರಾಂಡಿ ಹೇಳಿದ್ದು ಒಂದೇ ಮಾತು – “ಜೈ ಡಾರ್ಲಿಂಗ್! ಅಳಬೇಡ. ನನ್ನ ಅನುಪಸ್ಥಿತಿಯಲ್ಲಿ ನೀನು ಬದುಕಲು ಕಲಿಯಬೇಕು!”

ತನ್ನ ವೀಲುನಾಮೆ ಇತ್ಯಾದಿ ಕೆಲಸವನ್ನು ಆತ ಬೇಗ ಬೇಗನೆ ಮುಗಿಸಿಕೊಂಡ. ಮಕ್ಕಳ ಭವಿಷ್ಯಕ್ಕೆ ಏನೆಲ್ಲ ಮಾಡಲು ಸಾಧ್ಯ ಇದೆಯೋ ಅದನ್ನೆಲ್ಲ ಮಾಡಿದ! ಹೆಂಡತಿಗೆ ಧೈರ್ಯ ತುಂಬಿಸಿದ.

ದ ಲಾಸ್ಟ್ ಲೆಕ್ಚರ್ ರೂಪುಗೊಂಡದ್ದು ಹೇಗೆ?

ಅಮೆರಿಕಾದಲ್ಲಿ ಒಬ್ಬ ದೊಡ್ಡ ಸಾಧಕ ಸಾವಿನ ಮನೆಯ ಕದ ತಟ್ಟುತ್ತ ಇದ್ದಾನೆ ಎಂದು ಖಚಿತ ಆದಾಗ ಒಂದು ಒಳ್ಳೆಯ ಸಂಪ್ರದಾಯ ಇದೆ. ಆತನ ಅಥವ ಆಕೆಯ ಸಮಾನ ಮನಸ್ಕರು ಒಂದು ಕಡೆ ಸೇರಿ ಒಂದು ಉಪನ್ಯಾಸ ಕೇಳಲು ಸಿದ್ಧರಾಗುತ್ತಾರೆ. ಸಾಯಲು ಹೊರಟ ವ್ಯಕ್ತಿ ತನ್ನ ಜೀವನದ ಸತ್ಯ ಘಟನೆಗಳನ್ನು ಒಂದು ಉಪನ್ಯಾಸ ರೂಪದಲ್ಲಿ ಅವರ ಮುಂದೆ ಇಡುತ್ತಾನೆ. ತನ್ನ ಬದುಕಿನ ಕಪ್ಪು ಪುಟಗಳನ್ನು ಕೂಡ ಆತ ಹೇಳಲು ಹಿಂಜರಿಯುವುದಿಲ್ಲ. ಅದನ್ನು ‘ಲಾಸ್ಟ್ ಲೆಕ್ಚರ್’ ಎಂದು ಕರೆಯುತ್ತಾರೆ.

ರಾಂಡಿ ಪಾಶ್ ತನ್ನ ಗೆಳೆಯರಿಂದ ಆ ವಿನಂತಿ ಬಂದಾಗ ಖುಷಿಯಿಂದ ಒಪ್ಪಿಕೊಂಡ. ಸ್ಥಿತಪ್ರಜ್ಞನಾಗಿ ಮಾತಾಡಲು ನಿಂತ. ಆತನ ಒಂದೂಕಾಲು ಘಂಟೆಯ ಉಪನ್ಯಾಸದ ಒಟ್ಟು ಸಾರಾಂಶವೆ ಈ ಪುಸ್ತಕ – ದ ಲಾಸ್ಟ್ ಲೆಕ್ಚರ್!

ಏನಿದೆ ಆ ಪುಸ್ತಕದಲ್ಲಿ?

ರಾಂಡಿ ಪಾಶ್ ಮಾಡಿದ ಆ ಉಪನ್ಯಾಸದಲ್ಲಿ ಆತನ ಜೀವನ ಪ್ರೀತಿ ಇದೆ. ಆತನ ಪ್ರೇಮ ಕಥೆಯಿದೆ. ಬಾಳಿನ ವ್ಯಥೆ ಇದೆ. ಎಲ್ಲರನ್ನೂ ಬಿಟ್ಟು ಹೋಗುತ್ತಿರುವ ನೋವಿದೆ. ಸಂಕಟವಿದೆ. ತನಗೆ ಬದುಕಲ್ಲಿ ತುಂಬು ಪ್ರೀತಿಯನ್ನು ಕೊಟ್ಟವರ ಬಗ್ಗೆ ಗಂಟಲು ಕಟ್ಟುವ ಕೃತಜ್ಞತೆ ಇದೆ. ಸೋಲುಗಳ ಬಗ್ಗೆ ತಿರಸ್ಕಾರ ಇದೆ. ಬದುಕಿನ ಬಗ್ಗೆ ಅಗಾಧ ಪ್ರೀತಿ ಇದೆ. ಕನಸುಗಳನ್ನು ಸಾಕ್ಷಾತ್ಕಾರ ಮಾಡಿದ ಬಗ್ಗೆ ಆನಂದ ಬಾಷ್ಪ ಇದೆ. ಮಾಡದೆ ಬಾಕಿ ಉಳಿದ ಕೆಲಸಗಳ ಬಗ್ಗೆ ಒಂದಿಷ್ಟು ವಿಷಾದ ಇದೆ!

“ತುಂಬಿದ ನಗೆಯನ್ನು ತುಟಿಯಲ್ಲಿ ತುಂಬಿಕೊಂಡು ಈ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ! ನನ್ನ ಎಲ್ಲ ಇಗೋ ಸುಟ್ಟುಕೊಂಡು ಬರಿಗೈಯಿಂದ ಹೊರಡುತ್ತೇನೆ. ನಿಮ್ಮ ಹಾರೈಕೆ ನನಗಿರಲಿ!” ಎಂದು ಹೇಳುತ್ತ ರಾಂಡಿ ತನ್ನ ಉಪನ್ಯಾಸವನ್ನು ಮುಗಿಸುತ್ತಾನೆ.

‘ದ ಲಾಸ್ಟ್ ಲೆಕ್ಚರ್ ‘ಸೂಪರ್ ಹಿಟ್ ಆದದ್ದು ಹೇಗೆ?

ಅದರಲ್ಲಿ ನೂರಾರು ಹೃದಯ ಹಿಂಡುವ ಘಟನೆಗಳು ಇವೆ. ಅವನು ಉಪನ್ಯಾಸ ಕೊಡಲು ಹೊರಡುವ ದಿನ ಆತನ ಪ್ರೀತಿಯ ಹೆಂಡತಿ ಜೈ ಅವರ 41ನೆಯ ಹುಟ್ಟುಹಬ್ಬ ಇತ್ತು. ಆಕೆಯ ಹಣೆಯ ಮೇಲೆ ಒಂದು ಸಿಹಿಮುತ್ತು ಕೊಟ್ಟು ಹೊರಡುವಾಗ ಆಕೆ ಹೇಳಿದ ಮಾತು – “ರಾಂಡಿ, ನನ್ನನ್ನು ಬಿಟ್ಟು ದೂರ ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತು?”
ಇಂಥಹ ಹೃದಯ ತಟ್ಟುವ ಸನ್ನಿವೇಶಗಳು ನೂರಾರು ಆ ಪುಸ್ತಕದಲ್ಲಿ ಇವೆ.

ರಾಂಡಿಗೆ ಕ್ಯಾನ್ಸರ್ ಬಂದಾಗಿನಿಂದ ತನ್ನ ಹೆಂಡತಿಯ ಎಲ್ಲ ಆಸೆಗಳನ್ನು ಪೂರ್ತಿ ಮಾಡುವ ಶಪಥ ಮಾಡಿ ಓಡಾಡುತ್ತಿದ್ದ.

ಇದನ್ನೂ ಓದಿ : Raja Marga Column : ಅವಳು ಬಾಣ ಬಿಡೋದು ಕಾಲಲ್ಲಿ!; ಎರಡೂ ಕೈ ಇಲ್ಲದ ಶೀತಲ್ ದೇವಿ ವಿಶ್ವವನ್ನು ಗೆದ್ದ ಕಥೆ

ಜಗತ್ತಿನ ಬೆಸ್ಟ್ ಸೆಲ್ಲರ್ ಆ ಪುಸ್ತಕ!

Randy pausch THE LAST LECTURE1

ಆ ‘ ಲಾಸ್ಟ್ ಲೆಕ್ಚರ್’ ವಿಡಿಯೋ ತುಂಬಾನೆ ಭಾವಪೂರ್ಣ ಆಗಿದೆ. ರಾಂಡಿ ಒಂದಿಷ್ಟೂ ಭಾವಾವೇಶಕ್ಕೆ ಒಳಗಾಗದೆ ಒಂದೂಕಾಲು ಘಂಟೆ ಹೊತ್ತು ಮಾತಾಡಿದ್ದಾನೆ. ಆ ವೀಡಿಯೋವನ್ನು ಈವರೆಗೆ ಒಂದು ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ! ಈಗಲೂ ವೀಕ್ಷಣೆ ಮಾಡುತ್ತಾ ಇದ್ದಾರೆ. ಅದು ಪುಸ್ತಕವಾಗಿ ಬಂದ ನಂತರ ಈವರೆಗೆ 34 ಲಕ್ಷ ಮಂದಿ ಆ ಪುಸ್ತಕವನ್ನು ಓದಿದ್ದಾರೆ! ಅದರಲ್ಲಿ 53 ಅಧ್ಯಾಯಗಳು ಇವೆ. ಪುಸ್ತಕ ಓದಿದ ಲಕ್ಷ ಲಕ್ಷ ಮಂದಿ ನನ್ನ ಹಾಗೆ ಕಣ್ಣೀರಾಗಿದ್ದಾರೆ.

ಎಷ್ಟೋ ಜನರು ಆ ಪುಸ್ತಕ ಓದಿ ತಮ್ಮ ಬದುಕಿನ ದಿಕ್ಕನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ! ಜಗತ್ತಿನ ಅತ್ಯಂತ ಜನಪ್ರಿಯ ಪುಸ್ತಕ ಅದು! ಅದಕ್ಕೆ ಕಾರಣ ರಾಂಡಿ ಫೀಲ್ ಮಾಡಿದ ಮಾನವೀಯ ಸಂಬಂಧಗಳೇ ಆಗಿವೆ!

2008ರಲ್ಲಿ ನಮ್ಮನ್ನು ಬಿಟ್ಟು ಅಗಲಿದ ರಾಂಡಿಗೆ ನಾವು ಅರ್ಪಿಸುವ ನಿಜವಾದ ಶೃದ್ಧಾಂಜಲಿ ಎಂದರೆ ಆ ಪುಸ್ತಕ ಒಮ್ಮೆಯಾದರೂ ಓದುವುದು.

Exit mobile version