Site icon Vistara News

Raja Marga Column : ಜನ ಇವರನ್ನು ಕಂಡ ಕೂಡಲೇ ಥಟ್‌ ಅಂತ ಹೇಳ್ತಾರೆ.. ಇವರು ಡಾ. ನಾ. ಸೋಮೇಶ್ವರ!

Dr Na Someshwara That anta Heli

ಡಾಕ್ಟರ್ ನಾ.ಸೋಮೇಶ್ವರ (Dr. Na Someshwara) ಕರ್ನಾಟಕದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಚಂದನ ವಾಹಿನಿಯಲ್ಲಿ ವರ್ಷಾನುಗಟ್ಟಲೆ ನಿರಂತರವಾಗಿ ಪ್ರಸಾರವಾಗುತ್ತಿರುವ ‘ಥಟ್ ಅಂತ ಹೇಳಿ’ (That antha Heli quiz programme) ಜನಪ್ರಿಯ ರಸಪ್ರಶ್ನೆಗಳ ರೋಚಕ ಕಾರ್ಯಕ್ರಮವನ್ನು ಮರೆಯಲು ಸಾಧ್ಯವೇ ಇಲ್ಲ! ಆ ಕಾರ್ಯಕ್ರಮದ ಮೋಡಿಗೆ ಒಳಗಾಗದವರು ಯಾರೂ ಇಲ್ಲ ಎಂದು ಖಚಿತವಾಗಿ ಹೇಳಬಹುದು. ಅದರ ರೂವಾರಿ ಡಾಕ್ಟರ್ ನಾರಪ್ಪ ಸೋಮೇಶ್ವರ.

ಬಡತನದ ಬಾಲ್ಯ ಅವರದ್ದು

ಡಾಕ್ಟರ್ ಸೋಮೇಶ್ವರ ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ, 14 ಮೇ 1955ರಂದು. ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು ಅವರು ಎದುರಿಸಿದ್ದರು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ಎರಡು. ಪತ್ರಿಕೆಗೆ ಲೇಖನಗಳನ್ನು ಮತ್ತು ಚಿತ್ರಗಳನ್ನು ಬರೆಯುವುದು ಹಾಗೂ ತನಗಿಂತ ಕಿರಿಯ ತರಗತಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡುವುದು.

ಅವರು ಜನಪ್ರಿಯ ವೈದ್ಯರಾದರು

ಅವರು ಎಂಬಿಬಿಎಸ್ ಪದವಿ ಸಂಪಾದನೆ ಮಾಡಿದ್ದು ಪ್ರತಿಷ್ಠಿತವಾದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ. (Bangalore Medical College) ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಾ ಬಿಡುವಿನ ಅವಧಿಯಲ್ಲಿ ಅವರು ಕನ್ನಡದಲ್ಲಿ ಸರಣಿ ವೈದ್ಯಕೀಯ ಲೇಖನಗಳನ್ನು ಬರೆಯಲು ಆರಂಭಿಸಿದರು.

‘ಜೀವ ನಾಡಿ’ ಎಂಬ ವೈದ್ಯಕೀಯ ವಿಜ್ಞಾನದ ಜನಪ್ರಿಯವಾದ ಮಾಸ ಪತ್ರಿಕೆಯನ್ನು ಪ್ರಧಾನ ಸಂಪಾದಕರಾಗಿ ಮುನ್ನಡೆಸಿದರು. ವೈದ್ಯಕೀಯ ವಿಜ್ಞಾನದ (Medical science) ಜ್ಞಾನವನ್ನು ಜನಸಾಮಾನ್ಯರ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅವಿರತವಾದ ಪ್ರಯತ್ನ ಅವರದ್ದು! ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನದ 50 ಪುಸ್ತಕಗಳನ್ನು ಅವರು ಈಗಾಗಲೇ ಬರೆದಿದ್ದಾರೆ. ಇನ್ನೂ ಹಲವು ಪುಸ್ತಕಗಳು ಪ್ರಕಾಶನದ ಹಂತದಲ್ಲಿವೆ. ಅವರ ಸಾವಿರಾರು ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೈದ್ಯಕೀಯ ವಿಷಯಗಳ ಬಗ್ಗೆ 1200 ಟಿವಿ ಕಾರ್ಯಕ್ರಮಗಳನ್ನು ಅವರು ನೀಡಿದ್ದಾರೆ. ಅಸಂಖ್ಯವಾದ ರೇಡಿಯೋ ಕಾರ್ಯಕ್ರಮ ನೀಡಿದ್ದಾರೆ.

ಅವರಿಗೆ ಒಲಿದಿದೆ ಡಾಕ್ಟರ್ ಬಿ. ಸಿ. ರಾಯ್ ಪ್ರಶಸ್ತಿ

ಅವರಿಗೆ ಅತ್ಯುತ್ತಮ ವೈದ್ಯರಿಗೆ ನೀಡಲ್ಪಡುವ ಡಾಕ್ಟರ್ ಬಿ. ಸಿ. ರಾಯ್ ಪ್ರಶಸ್ತಿಯು (BC Roy Award) ದೊರೆತಿದೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ. ಕರ್ನಾಟಕದ ಅತ್ಯುತ್ತಮ ವಿಜ್ಞಾನ ಲೇಖಕ ಪ್ರಶಸ್ತಿ (Best Science writer) ಅವರು ನಿರಂತರವಾಗಿ ಪಡೆಯುತ್ತಿದ್ದಾರೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಅವರು ಪಡೆದಿದ್ದಾರೆ.

‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’ ಮತ್ತು ‘ಜ್ಞಾನೇಂದ್ರಿಯಗಳು ಮತ್ತು ನಮ್ಮ ಒಡಲಿನ ವಿಸರ್ಜನಾ ಅಂಗಗಳು’ ಅವರ ಅತ್ಯಂತ ಜನಪ್ರಿಯ ಪುಸ್ತಕಗಳು. ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನಗಳನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದ ಕೀರ್ತಿಯು ಖಂಡಿತವಾಗಿಯೂ ಡಾಕ್ಟರ್ ನಾ. ಸೋಮೇಶ್ವರ ಅವರಿಗೆ ದೊರೆಯಬೇಕು.

ಥಟ್ ಅಂತ ಹೇಳಿ – ಅವರದ್ದೇ ಮಾನಸ ಶಿಶು

ಇನ್ನು ಅವರ ಟ್ರೆಂಡ್ ಸೆಟ್ಟರ್ ಟಿವಿ ಕಾರ್ಯಕ್ರಮ ‘ಥಟ್ ಅಂತ ಹೇಳಿ ‘ ಬಗ್ಗೆ ನಾನು ಬರೆಯಲೇಬೇಕು. ಚಂದನ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುವ ಈ ಕ್ವಿಜ್ ಕಾರ್ಯಕ್ರಮವು 2002ರ ಜನವರಿ 4ರಂದು ಆರಂಭವಾಯಿತು. ಅಂದಿನಿಂದ ನಿರಂತರವಾಗಿ ವಾರಕ್ಕೆ ಐದು ದಿನ (ಸೋಮವಾರದಿಂದ ಶುಕ್ರವಾರದವರೆಗೆ ) ಪ್ರಸಾರವಾಗುವ ಕಾರ್ಯಕ್ರಮ ಇದು. ಪ್ರತೀ ದಿನ ಮೂರು ಜನ ಒಂದೇ ವಯಸ್ಸಿನ ಸ್ಪರ್ಧಿಗಳು ಭಾಗವಹಿಸುತ್ತಾರೆ. ಅವರನ್ನು ರಾಜ್ಯದ ಮೂಲೆ ಮೂಲೆಗಳಿಂದ ಆಯ್ಕೆ ಮಾಡಲಾಗುತ್ತದೆ.

ಶಿಕ್ಷಣ, ಸಂಸ್ಕೃತಿ, ವಿಜ್ಞಾನ, ಒಗಟು, ಪದಬಂಧ, ತಂತ್ರಜ್ಞಾನ, ನಾಡು ನುಡಿ, ಕನ್ನಡ ಸಾಹಿತ್ಯ ಮೊದಲಾದ ಹತ್ತು ಕ್ಷೇತ್ರಗಳ ಪ್ರಶ್ನೆಗಳು ಇರುತ್ತವೆ. ಆಡಿಯೋ ಮತ್ತು ವಿಡಿಯೋ ಸುತ್ತುಗಳು ಇರುತ್ತವೆ. ಸರಿ ಉತ್ತರ ಕೊಟ್ಟವರಿಗೆ ಉತ್ತಮ ಪುಸ್ತಕಗಳನ್ನು ಬಹುಮಾನವಾಗಿ ನೀಡುವುದು ಈ ಕ್ವಿಜ್ ಕಾರ್ಯಕ್ರಮದ ವೈಶಿಷ್ಟ್ಯ. ಕ್ವಿಜ್ ಮಾಸ್ಟರ್ ಆಗಿ ಡಾಕ್ಟರ್ ನಾ. ಸೋಮೇಶ್ವರ ಅವರ ನಿರೂಪಣೆಯೇ ಈ ಕಾರ್ಯಕ್ರಮದ ಜೀವಾಳ. ಆರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತ್ತು. ನಂತರ ಯಾವುದೇ ಪ್ರಾಯೋಜಕರು ಇಲ್ಲದೆ ಕೂಡ ಈ ಜನಪ್ರಿಯ ಕಾರ್ಯಕ್ರಮವು ಚಂದನ ವಾಹಿನಿಯಲ್ಲಿ ನಿರಂತರ ಪ್ರಸಾರವಾಗುತ್ತಿದೆ.

2012ರಲ್ಲಿ 1756 ಎಪಿಸೋಡ್ ಪೂರ್ತಿ ಮಾಡುವ ಮೂಲಕ ಈ ಕ್ವಿಜ್ ಶೋ ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಸ್ಥಾನವನ್ನು ಪಡೆಯಿತು! ಭಾರತದಲ್ಲಿ ಅದುವರೆಗೆ ಯಾವ ಟಿವಿ ಕ್ವಿಜ್ ಕಾರ್ಯಕ್ರಮವು ಇಷ್ಟೊಂದು ದೀರ್ಘ ಅವಧಿಗೆ ನಡೆದಿಲ್ಲ ಎನ್ನುವುದು ಆ ಕಾರ್ಯಕ್ರಮ ಮತ್ತು ಸೋಮೇಶ್ವರ ಅವರ ಹಿರಿಮೆ.

ದಾಖಲೆ ದಾಖಲೆ ಮತ್ತು ದಾಖಲೆ!

‘ಥಟ್ ಆಂತ ಹೇಳಿ ‘ ಟಿವಿ ಕ್ವಿಜ್ ಕಾರ್ಯಕ್ರಮವು 2023ರ ಜುಲೈ ತಿಂಗಳ ಹೊತ್ತಿಗೆ 4446 ಯಶಸ್ವೀ ಕಂತುಗಳನ್ನು ಪೂರೈಸಿ ಮುನ್ನಡೆದಿದೆ. ಭಾಗವಹಿಸಿದ ಸ್ಪರ್ಧಿಗಳ ಸಂಖ್ಯೆಯು ಅಂದಾಜು 15,0000ಕ್ಕಿಂತ ಹೆಚ್ಚು! ಕೇಳಿದ ಪ್ರಶ್ನೆಗಳ ಸಂಖ್ಯೆಯೇ 50,000ಕ್ಕಿಂತ ಅಧಿಕ! ಒಂದು ಪ್ರಶ್ನೆ ಕೂಡ ಇದುವರೆಗೂ ರಿಪೀಟ್ ಆಗಿಲ್ಲ ಅನ್ನೋದು ಗ್ರೇಟ್. ಬಹುಮಾನವಾಗಿ ನೀಡಿದ ಪುಸ್ತಕಗಳ ಸಂಖ್ಯೆಯೇ ಅಂದಾಜು 60,000! ಯಾರನ್ನೂ ಅಪಮಾನ ಮಾಡದೆ ಧೈರ್ಯ ತುಂಬುವ ಅವರ ಶೈಲಿಯು ನಿಜಕ್ಕೂ ಅದ್ಭುತವೇ ಆಗಿದೆ. ಉತ್ತರ ನೀಡಿದ ನಂತರ ಸೋಮೇಶ್ವರ ಅವರು ನೀಡುವ ಪೂರಕ ಮಾಹಿತಿಗಳು ಕೂಡ ಅದ್ಭುತವೇ ಆಗಿರುತ್ತವೆ. ಎಲ್ಲಾ ವಿಧವಾಗಿ ಕೂಡ ಈ ಕಾರ್ಯಕ್ರಮ ಮುರಿಯಲಾಗದ ದಾಖಲೆಯೇ ಆಗಿದೆ!

ಇದನ್ನೂ ಓದಿ: Raja Marga Column : ನಮ್ಮದು ಯುವ ಭಾರತ; ಇಷ್ಟೊಂದು ಯುವ ಶಕ್ತಿ ಯಾವ ದೇಶದಲ್ಲೂ ಇಲ್ಲ!

ಭರತ ವಾಕ್ಯ

ಡಾಕ್ಟರ್ ನಾ ಸೋಮೇಶ್ವರ ಅವರು ಕನ್ನಡದ ನಾಡು, ನುಡಿಯ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಕೊಡುಗೆಯನ್ನು ನೀಡುತ್ತಿದ್ದಾರೆ. ಯಾರೂ ಮುರಿಯಲಾಗದ ದಾಖಲೆ ಆ ಕಾರ್ಯಕ್ರಮದ್ದು. ಅವರಿಗೆ ನಮ್ಮ ಪ್ರಣಾಮಗಳು.

Exit mobile version