Site icon Vistara News

Raja Marga Column : ನಡುಹಗಲಿನಲಿ ರವಿ ಅಸ್ತಂಗತ; ಬೆಳಗೆರೆ ನಿರ್ಗಮಿಸಿ 3 ವರ್ಷ

Ravi Belagere

ನವೆಂಬರ್ 13, 2020: ರವಿ ಬೆಳಗೆರೆ (Ravi Belagere) ಅವರು ನಿಧನರಾದ ದಿನ ನಾನು ಅವರ ಬಗ್ಗೆ ಬರೆದ ಸಾಲುಗಳು ಇಲ್ಲಿವೆ. ‘ನನ್ನ ಬದುಕನ್ನು ಯಾರೂ ದಯವಿಟ್ಟು ಕಾಪಿ ಮಾಡುವುದು ಬೇಡ. ಆದರೆ ನನ್ನ ನವಿರಾದ ಬರವಣಿಗೆಯನ್ನು ಓದಲು ಯಾರಿಗೂ ಹಿಂಜರಿಕೆ ಬೇಡ. ರವಿ ಬೆಳಗೆರೆ ಎಂದಿಗೂ ಅಕ್ಷರದ ಹಾದರವನ್ನು ಮಾಡುವುದಿಲ್ಲ!’ ಎಂದು ಹೇಳಿದ ರವಿ ಬೆಳಗೆರೆಯವರು ನಡುಹಗಲಿನಲ್ಲಿಯೇ ತನ್ನ ಅಕ್ಷರದ ಯಾತ್ರೆಯನ್ನು ಮುಗಿಸಿದ್ದಾರೆ. ‘ಖಾಸ್ ಬಾತ್’ ಮುಗಿದಿದೆ! ‘ಬಾಟಮ್ ಐಟಮ್’ ಬಾಕಿ ಉಳಿದಿಲ್ಲ! ರವಿ ಬೆಳಗೆರೆ ಬಾರದ ಲೋಕಕ್ಕೆ ಕಾರಣವನ್ನು ಹೇಳದೆ ತೆರಳಿದ್ದಾರೆ (Raja Marga Column).

ನಾನಿಂದು ರವಿ ಬೆಳಗೆರೆ ಅವರ ಅದ್ಭುತ ಪುಸ್ತಕಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನಾನು ಓದಿದ್ದು ಅವರ ಬರೋಬ್ಬರಿ 75 ಪುಸ್ತಕಗಳನ್ನು! ಅವರ ಪ್ರತೀ ಪುಸ್ತಕವನ್ನು ಎರಡೆರಡು ಸಲ ಓದಿದ್ದೇನೆ. ನನ್ನ ಹದಿಹರೆಯ ಮತ್ತು ಯೌವ್ವನದ ಹೊತ್ತಲ್ಲಿ ನನ್ನ ಮೇಲೆ ಅತೀ ಹೆಚ್ಚು ಪ್ರಭಾವವನ್ನು ಬೀರಿದ್ದು ಅವರ ಪುಸ್ತಕಗಳು. ಇಂದು ನನ್ನ ಬರವಣಿಗೆಯಲ್ಲಿ ರವಿ ಬೆಳಗೆರೆ ಅವರ ಶೈಲಿ ಇದೆಯಲ್ಲ ಎಂದು ಹಲವರು ಆರೋಪ ಮಾಡಿದ್ದರೆ ಅದಕ್ಕೆ ಕಾರಣ ಅವರ ಪುಸ್ತಕಗಳ ಓದು ಅಷ್ಟೇ!

‘ಹಾಯ್ ಬೆಂಗಳೂರು’ ಎಂಬ ಕೃಷ್ಣ ಸುಂದರಿ!

1995ರಲ್ಲಿ ಅವರು ಆರಂಭಿಸಿದ ‘ಹಾಯ್ ಬೆಂಗಳೂರು’ (Hai Bangalore) ಪತ್ರಿಕೆಯು ಕನ್ನಡದ ಅತ್ಯಂತ ಜನಪ್ರಿಯವಾದ ವಾರಪತ್ರಿಕೆ ಆದದ್ದು ಅವರ ಲೇಖನಗಳ ಶಕ್ತಿಯಿಂದ! ವಿಠ್ಠಲ ಮೂರ್ತಿ, ಜೋಗಿ, ವಸಂತ್ ಗಿಳಿಯಾರ್ ಮೊದಲಾದ ಲೇಖಕರನ್ನು ಸ್ಟಾರ್ ಮಾಡಿದ್ದು ಅದೇ ಪತ್ರಿಕೆ. ಆ ಪತ್ರಿಕೆಯನ್ನು ಜನರು ‘ಕೃಷ್ಣ ಸುಂದರಿ’ ಎಂದು ಜನರು ಬಹಳ ಪ್ರೀತಿಯಿಂದ ಕರೆದರು.

ಜನರು ಆ ಪತ್ರಿಕೆಗಾಗಿ ಕಾಯುವ ಪರಿಸ್ಥಿತಿಯು ರಾಜ್ಯದಲ್ಲಿ ನಿರ್ಮಾಣವಾಗಿತ್ತು. ಅದರ ಲವ್ ಲವಿಕೆ, ಬಾಟಮ್ ಐಟಮ್, ಖಾಸ್, ಪಾಪಿಗಳ ಲೋಕದಲ್ಲಿ ಮೊದಲಾದ ಕಾಲಂಗಳು ಓದುಗರಿಗೆ ಹುಚ್ಚು ಹಿಡಿಸಿದ್ದು ಸುಳ್ಳಲ್ಲ! ಆ ವಾರಪತ್ರಿಕೆಯ ಪ್ರತಿಗಳು ಎರಡೇ ದಿನದಲ್ಲಿ ಖಾಲಿ ಆಗಿ ನಂತರ ಅಂಗಡಿಯವರು ಝೆರಾಕ್ಸ್ ಮಾಡಿ ಮಾರುವಷ್ಟು ಹಾಯ್ ಬೆಂಗಳೂರು ಪತ್ರಿಕೆಯು ಜನಪ್ರಿಯ ಆಗಿತ್ತು!

ರವಿ ಬೆಳಗೆರೆ ಶಬ್ದ ಗಾರುಡಿಗ

ಮುಂದೆ ಕೇವಲ ಯುವ ಓದುಗರನ್ನು ಮಾತ್ರ ಮನದಲ್ಲಿ ಇಟ್ಟುಕೊಂಡು ‘ಓ ಮನಸೇ’ ಎಂಬ ಹೆಸರಿನ ಪಾಕ್ಷಿಕವನ್ನು ರವಿ ಆರಂಬಿಸಿದರು. ಅದು ಕೂಡ ಕನ್ನಡಿಗರ ಕಣ್ಮಣಿ ಆಯಿತು. ಪತ್ರಿಕೆಗಳ ಅಕಾಡೆಮಿಕ್ ಭಾಷೆಯಿಂದ ಹೊರಬಂದು ಹೆಚ್ಚು ಆಲಂಕಾರಿಕವಾದ ಮತ್ತು ಹೃದಯಕ್ಕೆ ನೇರವಾಗಿ ಲಗ್ಗೆ ಇಡುವ ಭಾಷೆಯನ್ನು ಬಳಕೆ ಮಾಡಿದ್ದು ರವಿ ಅವರ ಹೆಗ್ಗಳಿಕೆ. ಶಬ್ದಗಳ ಬಳಕೆಯಲ್ಲಿ ಅವರು ಅದ್ಭುತವೇ ಹೌದು! ಆದ್ದರಿಂದ ಅವರು ಶಬ್ದ ಗಾರುಡಿಗ.

ಬಳ್ಳಾರಿಯಿಂದ ಬೆಂಗಳೂರಿಗೆ ಅವರ ಜರ್ನಿ

ಬಿರುಬಿಸಿಲಿನ ಜಿಲ್ಲೆಯಾದ ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಬಡತನದ ಕಾರಣಕ್ಕೆ ತುಮಕೂರು ಸಿದ್ದಗಂಗಾ ಶಾಲೆಯಲ್ಲಿ ಓದಿದವರು. SSLC ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್ ಆದವರು ರವಿ! ನಂತರ ಹೊಟ್ಟೆಪಾಡಿಗಾಗಿ ಹೊಟೇಲು ಮಾಣಿ, ರೂಮ್ ಬಾಯ್, ಹಾಲು ಮಾರುವ ಹುಡುಗ, ಸಿನೆಮಾ ಥಿಯೇಟರ್‌ನ ಗೇಟ್ ಕೀಪರ್, ಲಾಡ್ಜ್ ಸ್ವಾಗತಕಾರ, ಮೆಡಿಕಲ್ ರೆಪ್……. ಹೀಗೆ 13ಕ್ಕಿಂತ ಹೆಚ್ಚು ವೃತ್ತಿಗಳನ್ನು ಅವರು ಮಾಡಿದರು. ಮುಂದೆ ಇತಿಹಾಸದಲ್ಲಿ ಎಂ.ಎ. ಮಾಡಿ ಕಾಲೇಜು ಉಪನ್ಯಾಸಕ ವೃತ್ತಿ ಮಾಡಿದ್ದರು. ನಂತರ ಬರವಣಿಗೆಯೇ ರವಿ ಅವರ ವೃತ್ತಿಯಾಯಿತು. ಅದು ಕನ್ನಡದ ಭಾಗ್ಯ ಎಂದು ಹೇಳಬಹುದು!

ಬರವಣಿಗೆಯ ವೈಭವ

ತನ್ನದೇ ಬರವಣಿಗೆಯ ವೈಭವದ ಬಗ್ಗೆ ರವಿ ಸರ್ ಹೀಗೆ ಹೇಳಿದ್ದಾರೆ. ‘ಒಮ್ಮೆ ಬರೆಯಲು ಕೂತರೆ 20-30 ಪುಟ ಒಂದು ಚಿತ್ತಿಲ್ಲದೇ, ಒಂದೇ ಒಂದು ಕಾಟ್ ಕೂಡ ಹಾಕದೆ ಬರೆಯುತ್ತೇನೆ. ಕೆಲವು ಸಲ ರಾತ್ರಿ ಇಡೀ ಒರಗಿ ಕುಳಿತು ಬರೆಯುವೆ. ಯಾವ ರೆಫರೆನ್ಸ್ ಇಲ್ಲದೆ, ಗೂಗಲ್ ಇಣುಕಿ ನೋಡದೆ ನಾನು ಬರೆಯುತ್ತೇನೆ!’ ಎಂದು ಹೇಳಿದ್ದಾರೆ. ಐತಿಹಾಸಿಕ ಕತೆ, ಭೂಗತ ಜಗತ್ತಿನ ನೂರಾರು ಕಥೆಗಳು, ಆತ್ಮಕಥೆಗಳು, ಕಾದಂಬರಿಗಳನ್ನು, ರೊಮ್ಯಾಂಟಿಕ್ ಕತೆಗಳು…ಇವುಗಳನ್ನು ಅಷ್ಟು ನಿಖರವಾಗಿ ಮತ್ತು ವಾಸ್ತವಕ್ಕೆ ಹತ್ತಿರವಾಗಿ ಅವರು ಹೇಗೆ ಬರೆದರು? ಅದು ನಿಜಕ್ಕೂ ಅಚ್ಚರಿಯೆ ಸರಿ! ಅವರು ಬರೆಯುತ್ತಿದ್ದ ಕಾಲದಲ್ಲಿ ಗೂಗಲ್, ವಿಕಿಪೀಡಿಯ ಹೆಚ್ಚು ಬಳಕೆ ಇರಲಿಲ್ಲ. ರವಿ ಅದನ್ನು ಬಳಸಿದ್ದೆ ಇಲ್ಲ!

ರವಿಯ ಬರವಣಿಗೆಗೆ ಅವರೇ ಮಾದರಿ!

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯುದ್ಧಭೂಮಿಗೆ ನೇರ ಹೋಗಿ ವರದಿಗಾರಿಕೆ ಮಾಡಿದ್ದು, ಪಾಕಿಸ್ತಾನದಲ್ಲಿ ಭಯ ಹುಟ್ಟಿಸುವ ಅಡಗುತಾಣಗಳಲ್ಲಿ ಧೈರ್ಯವಾಗಿ ಓಡಾಡಿ ‘ನೀನಾ ಪಾಕಿಸ್ತಾನ?’ ಬರೆದದ್ದು, ಚಂಬಲ್ ಕಣಿವೆ ಇಡೀ ಓಡಾಡಿ ಚಂಬಲ್ ರಾಣಿ ಫೂಲನ್ ದೇವಿಯ ಕಥೆಯನ್ನು ಹೆಣೆದದ್ದು, ಭೂಗತ ಲೋಕದ ಉದ್ದಗಲದಲ್ಲಿ ಓಡಾಡಿ ಭೀಮಾ ತೀರದಲ್ಲಿ, ಪಾಪಿಗಳ ಲೋಕದಲ್ಲಿ ಕಾದಂಬರಿಗಳನ್ನು ಬರೆದು ಮುಗಿಸಿದ್ದು, ಚೀನಾದ ಯುದ್ಧದಲ್ಲಿ ರಾಜಕೀಯ ಕಾರಣಕ್ಕೆ ಬದುಕನ್ನು ಕಳೆದುಕೊಂಡ ಸೈನಿಕನ ಕಥೆಯನ್ನು ಹಿಡಿದು ಅದ್ಭುತವಾದ ‘ಹಿಮಾಲಯನ್ ಬ್ಲಂಡರ್’ ಪುಸ್ತಕವನ್ನು ಕಣ್ಣೀರು ಸುರಿಸುತ್ತ ಬರೆದದ್ದು, ರಕ್ತಸಿಕ್ತ ಇತಿಹಾಸ ಉಳ್ಳ ದಾವೂದ್ ಇಬ್ರಾಹಿಂ ಬದುಕಿನ ಬಗ್ಗೆ ‘D ಕಂಪೆನಿ’ ಎಂಬ ಪುಸ್ತಕವನ್ನು ಬರೆದದ್ದು, ಸಂದೀಪ್ ಉಣ್ಣಿಕೃಷ್ಣನ್ ಎಂಬ ದಿಟ್ಟ ಸೈನಿಕನ ರಾಷ್ಟ್ರಪ್ರೇಮವನ್ನು ಸುಂದರವಾಗಿ ಬರೆದದ್ದು, ನವಿರು ಪ್ರೇಮಕಥೆಯ ‘ನೀ ಹೀಂಗ ನೋಡಬ್ಯಾಡ ನನ್ನ’ ‘ಹೇಳಿ ಹೋಗು ಕಾರಣ’ ಬರೆದದ್ದು, ರಾಜಕುಮಾರ್ ಲೀಲಾವತಿ ಅವರ ಪರದೆಯ ಹಿಂದಿನ ಪ್ರಣಯದ ‘ರಾಜ್ ಲೀಲಾ ವಿನೋದ’ವನ್ನು ಮುಜುಗರವಿಲ್ಲದೆ ಜಗತ್ತಿಗೆ ತೆರೆದು ಇಟ್ಟದ್ದು, ಗಾಂಧಿಹತ್ಯೆಯ ಕರಾಳ ಸತ್ಯಗಳನ್ನು ಅನಾವರಣ ಮಾಡಿದ್ದು, ತನ್ನದೇ ಬದುಕಿನ ಕಥೆಯ ಖಾಸ್ ಬಾತನ್ನು ಹಲವು ಸಂಪುಟಗಳಲ್ಲಿ ಬರೆದದ್ದು…….. ಹೀಗೆ ಎಲ್ಲ ಪುಸ್ತಕಗಳಲ್ಲಿ ಮಿಂಚಿದ್ದು ರವಿ ಬೆಳಗೆರೆ ಅವರ ಮೊನಚು ಬರವಣಿಗೆ, ಧೈರ್ಯ, ದಿಟ್ಟತನ ಮತ್ತು ಸತ್ಯಶೋಧನೆಯ ಹಂಬಲ! ಅದು ರವಿ ಅವರ ಹೆಗ್ಗಳಿಕೆ!

ಪ್ರಾರ್ಥನಾ ಶಾಲೆ – ಅವರ ಅತೀ ದೊಡ್ಡ ಕೊಡುಗೆ

ಅವರು ಆರಂಭ ಮಾಡಿದ ಪ್ರಾರ್ಥನಾ ಶಾಲೆಯಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನನ್ನ ಜೀವನದ ದೊಡ್ಡ ಕೊಡುಗೆ ಎಂದರೆ ಪ್ರಾರ್ಥನಾ ಶಾಲೆ ಎಂದವರು ಹೇಳುತ್ತಿದ್ದರು.

ನನ್ನ ಮೊದಲ ಪುಸ್ತಕವಾದ ‘ಯಶಸ್ಸು ಆಕಸ್ಮಿಕವಲ್ಲ’ ವನ್ನು ಕುಂದಾಪುರದಲ್ಲಿ ಬಿಡುಗಡೆ ಮಾಡಿದ್ದು ರವಿ ಸರ್. ನಂತರ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಕೋಟಕ್ಕೆ ಬಂದಾಗಲೂ ಅವರ ಜೊತೆಗೆ ಮಾತಾಡಿದ್ದೆ. ನಂತರ ಅವರ ಟ್ರಂಪ್ ಕಾರ್ಡ್ ಆದ ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮದ ನಿರೂಪಣೆಗೆ ಮಾರುಹೋಗಿದ್ದೆ. ಅವರು ನನ್ನ ಬರವಣಿಗೆಯ ಮತ್ತು ನಿರೂಪಣೆಯ ಕ್ಷೇತ್ರದ ಐಕಾನ್ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವೆ.

ತನ್ನ ಖಾಸಗಿ ಬದುಕಿನ ಬಗ್ಗೆ ರವಿ ಅವರು ಏನನ್ನು ಕೂಡ ಮರೆಮಾಚುವ ಒಂದು ಸಣ್ಣ ಪ್ರಯತ್ನವನ್ನು ಕೂಡ ಮಾಡಲಿಲ್ಲ! ಅದರ ಬಗ್ಗೆ ಒಂದಿಷ್ಟೂ ಹೇಸಿಗೆ ಇಲ್ಲದೆ ಅವರು ಹೇಳಿದ ಮಾತು ‘ನನಗೆ ಜೀವನದಲ್ಲಿ ಎಲ್ಲವೂ ಎರಡೆರಡು ಆಗಿ ಹೋಯ್ತು! ಎರಡು ಹೆಂಡತಿ! ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, ಸಿಗರೇಟ್ ಮತ್ತು ಹೆಂಡ ಎರಡು ವ್ಯಸನಗಳು!’

ರವಿ ಬೆಳಗೆರೆ ತಮ್ಮ ಬಗ್ಗೆ ಹೇಳಿದ್ದು ಹೀಗೆ!

‘ನನಗೆ ನನ್ನ ಬದುಕಿನ ಬಗ್ಗೆ ಯಾವುದೇ ರಿಗ್ರೆಟ್ಸ್ ಕೂಡ ಇಲ್ಲ. ನಾನು ನನ್ನ ಜೀವನದ ಪ್ರತೀ ಕ್ಷಣವನ್ನು ಕೂಡ ಎಂಜಾಯ್ ಮಾಡಿದ್ದೇನೆ. THATS ALL!’

ಅಂತಹ ರವಿ ಬೆಳಗೆರೆ ಅವರು ಸ್ವರ್ಗದಲ್ಲಿಯೂ ಸಂಪಾದಕೀಯ ಬರೆಯುತ್ತ ಇರಬಹುದು. ಅವರೆಲ್ಲಿ ಸುಮ್ಮನೆ ಕೂರುತ್ತಾರೆ?

Exit mobile version