ಪ್ರತೀ ವರ್ಷ ಡಿಸೆಂಬರ್ 22, ರಾಷ್ಟ್ರೀಯ ಗಣಿತದ ದಿನ (National Mathmatics day). ಅಂದು ಜಗತ್ತಿನ ಅತ್ಯಂತ ಶ್ರೇಷ್ಠ ಗಣಿತ ಶಾಸ್ತ್ರಜ್ಞರಾದ ನಮ್ಮ ಹೆಮ್ಮೆಯ ಶ್ರೀನಿವಾಸ್ ರಾಮಾನುಜಂ (Shrinivas Ramanujam) ಅವರ ಜನುಮ ದಿನ. ಅವರು ನಿಜವಾದ ಅರ್ಥದಲ್ಲಿ ಭಾರತದ ಗೌರವವೇ ಆಗಿದ್ದರು. ಸ್ವಲ್ಪ ತಡವಾಗಿ ಈ ಲೇಖನವನ್ನು ನಿಮ್ಮ ಕೈಯ್ಯಲ್ಲಿ ಇಡುತ್ತಿದ್ದೇನೆ (RaJa Marga Column).
ಗಣಿತದ ದೈತ್ಯ ಪ್ರತಿಭೆ ಪರೀಕ್ಷೆಯಲ್ಲಿ ಫೇಲ್!
ರಾಮಾನುಜನ್ 1903ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಕುಂಭಕೋಣಂನ ಸರಕಾರಿ ಕಾಲೇಜಿನಲ್ಲಿ FA ಪರೀಕ್ಷೆಗಾಗಿ (ಅದೊಂದು ಪ್ರವೇಶ ಪರೀಕ್ಷೆ ಆಗಿತ್ತು) ಓದುತ್ತಿದ್ದರು. ಅಲ್ಲಿ ಸಂಸ್ಕೃತ, ಜೀವ ವಿಜ್ಞಾನ, ಗಣಿತ, ರೋಮನ್ ಮತ್ತು ಗ್ರೀಕ್ ಚರಿತ್ರೆ, ಇಂಗ್ಲಿಷ್ ಮೊದಲಾದ ವಿಷಯಗಳನ್ನು ಅವರು ಓದಬೇಕಾಗಿತ್ತು. ಗಣಿತವನ್ನು ಮಾತ್ರ ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿದ್ದ ರಾಮಾನುಜನ್ ಬೇರೆ ಎಲ್ಲಾ ವಿಷಯಗಳನ್ನೂ ನಿರ್ಲಕ್ಷ್ಯ ಮಾಡಿದರು. ಅದರಲ್ಲಿ ಕೂಡ ಜೀವ ವಿಜ್ಞಾನವು ತನಗೆ ಜೀರ್ಣವೇ ಆಗುತ್ತಿಲ್ಲ ಎಂದು ಅವರು ಹೇಳುತ್ತಿದ್ದರು. ಪರಿಣಾಮ ಅವರು FA ಪರೀಕ್ಷೆಯಲ್ಲಿ ಫೇಲ್ ಆದರು!
ಪರಿಣಾಮವಾಗಿ ಅವರು ಹಡಗಿನ ಕಂಪನಿಯಲ್ಲಿ ಸಣ್ಣ ಕೆಲಸವನ್ನು ಮಾಡಬೇಕಾಯಿತು. ಆದರೆ ಗಮನವೆಲ್ಲ ಗಣಿತದ ಮೇಲೆ ಇತ್ತು. ಸೋಲುಗಳು ಬಂದಾಗ ಬೇಗ ಡಿಪ್ರೆಸ್ ಆಗುತ್ತಿದ್ದರು. ಅವರಿಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋಗುವ ಅಭ್ಯಾಸವೂ ಇತ್ತು! ಒಮ್ಮೆ ವಿಶಾಖ ಪಟ್ಟಣಕ್ಕೆ, ಮತ್ತೊಮ್ಮೆ ವಿಜಯವಾಡಕ್ಕೇ ಅವರು ಓಡಿ ಹೋಗಿದ್ದರು. ಮನೆಯವರು ಅವರನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ಪತ್ರಿಕೆಗಳಿಗೆ ಜಾಹೀರಾತನ್ನು ನೀಡುವ ಪ್ರಸಂಗಗಳು ಹಲವು ಬಾರಿ ಬಂದಿದ್ದವು.
ಹೆತ್ತವರು ಅವರಿಗೆ ಮದುವೆ ಮಾಡಿಸಿದರು
ಅವರ ಈ ವರ್ತನೆಯಿಂದ ಭಾರಿ ಬೇಸತ್ತು ಅವರ ಮನೆಯವರು ಜಾನಕಿ ಎಂಬ ಹದಿಹರೆಯದ ಸುಂದರ ಹುಡುಗಿಯ ಜೊತೆಗೆ ಅವರ ಮದುವೆ ಮಾಡಿದರು. ರಾಮಾನುಜನ್ ಜೀವನದಲ್ಲಿ ಜಾನಕಿ ಒಂದು ದುರಂತ ಪಾತ್ರ. ಯಾಕೆಂದರೆ ಗಂಡ ಮತ್ತು ಹೆಂಡತಿ ಇಬ್ಬರೂ ಜೊತೆಯಾಗಿದ್ದ ಅವಧಿ ತುಂಬಾ ಕಡಿಮೆ ಆಗಿತ್ತು.
ಮುಂದೆ ಗಣಿತದ ಉನ್ನತ ಸಂಶೋಧನೆಗೆ ಶ್ರೀನಿವಾಸ್ ರಾಮಾನುಜನ್ ಅವರಿಗೆ ಲಂಡನ್ನಿನ ಕ್ಯಾಂಬ್ರಿಜ್ ವಿವಿಗೆ ಕರೆ ಬಂದಾಗ ಜಾನಕಿ ತಾನೂ ಜೊತೆಗೆ ಬರುವೆ ಎಂದು ಹಠ ಹಿಡಿದರು. ಆಗ ರಾಮಾನುಜನ್ ಹೆಂಡತಿಗೆ ನೀನು ಬರುವುದೇ ಬೇಡ! ನೀನು ತುಂಬಾ ಚಂದ ಇದ್ದೀಯ. ನಿನ್ನನ್ನು ಅಲ್ಲಿ ಯಾರಾದರೂ ಅಪಹರಣ ಮಾಡಿದರೆ ನನಗೆ ಕಷ್ಟ ಆಗಬಹುದು ಅಂದಿದ್ದರು!
ಲಂಡನ್‌ಗೆ ಹೋಗಿ ಕೇಂಬ್ರಿಜ್ ವಿವಿಯಲ್ಲಿ ಗಣಿತದ ಸಂಶೋಧನೆಯಲ್ಲಿ ಮುಳುಗಿ ಬಿಟ್ಟಿದ್ದ ರಾಮಾನುಜನ್ ಅವರಿಗೆ ಲಂಡನ್‌ನ ತೀವ್ರವಾದ ಚಳಿ ಆರೋಗ್ಯವನ್ನು ಕೆಡಿಸಿತು. ಪೂರ್ಣ ಸಸ್ಯಾಹಾರಿ ಆಗಿದ್ದ ಅವರಿಗೆ ಅಲ್ಲಿ ಸರಿಯಾದ ಆಹಾರ ಸಿಗಲಿಲ್ಲ. ಅವರೇ ಅಡುಗೆ ಮಾಡಿ ಊಟ ಮಾಡುವುದು ಅವರಿಗೆ ಕಷ್ಟ ಆಯಿತು. ಪದೇಪದೆ ಹೆಂಡತಿಯ ನೆನಪು ಕಾಡಲು ತೊಡಗಿತು.
ರಾಮಾನುಜನ್ ಬರೆದರು ನೂರಾರು ಪ್ರೇಮಪತ್ರಗಳನ್ನು!
ತನ್ನ ಮನಸ್ಸಿಗಾದ ತೀವ್ರ ನೋವನ್ನು ಅವರು ಹಲವು ಪತ್ರಗಳ ಮೂಲಕ ಹೆಂಡತಿಗೆ ಬರೆದು ಲಂಡನ್‌ನ ಅಂಚೆ ಪೆಟ್ಟಿಗೆಗೆ ಹಾಕಿದ್ದರು. ಆದರೆ ಅದ್ಯಾವುದೂ ಹೆಂಡತಿಯ ಕೈ ಸೇರಲೇ ಇಲ್ಲ. ಅದಕ್ಕೆ ಕಾರಣ ಆದವರು ಅವರ ತಾಯಿ ಕೋಮಲತ್ತಮಾಳ್!
ದೊಡ್ಡ ಸಾಧನೆಯನ್ನು ಮಾಡಲು ಹೊರಟ ಮಗನು ಅದನ್ನು ಅರ್ಧದಲ್ಲಿ ನಿಲ್ಲಿಸಿ ಭಾರತಕ್ಕೆ ಬರಬಹುದು, ಹೆಂಡತಿಯ ಪ್ರೀತಿಯು ಅವರ ಸಾಧನೆಗೆ ಅಡ್ದಗಾಲು ಆಗಬಹುದು ಎಂದು ಆತಂಕ ಪಟ್ಟುಕೊಂಡ ಆ ಮಹಾತಾಯಿ ಮಗನ ಯಾವುದೇ ಪತ್ರವನ್ನು ಕೂಡ ಸೊಸೆಯ ಕೈ ಸೇರದ ಹಾಗೆ ನೋಡಿಕೊಂಡರು!
ಆತ್ಮಹತ್ಯೆಯ ಪ್ರಯತ್ನ!
ಇದು ಗೊತ್ತಿರದ ರಾಮಾನುಜನ್ ಹೆಂಡತಿಯ ಮೇಲೆ ಭಯಂಕರ ಸಿಟ್ಟು ಮಾಡಿಕೊಂಡು ಒಮ್ಮೆ ಆತ್ಮಹತ್ಯೆ ಮಾಡಲು ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲು ಬರುವ ಹೊತ್ತಿಗಾಗಿ ಕಾದು ಕೂತಿದ್ದರು. ಆದರೆ ರೈಲ್ವೆ ಗಾರ್ಡ್ ಗಮನಿಸಿದ ಕಾರಣ ಅವರು ಬದುಕಿದರು. ಅಲ್ಲಿನ ಕಾನೂನಿನ ಪ್ರಕಾರ ಆತ್ಮಹತ್ಯೆ ದೊಡ್ಡ ಅಪರಾಧ ಆದ ಕಾರಣ ಸ್ಕಾಟ್‌ಲ್ಯಾಂಡ್ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋದರು.
ಆಗ ಅವರ ಕೇಂಬ್ರಿಜ್ ಗುರು ಹಾರ್ಡಿ ಸರ್ ಮಧ್ಯೆ ಪ್ರವೇಶ ಮಾಡಿ ರಾಮಾನುಜನ್ ಕೇಂಬ್ರಿಜ್ ವಿವಿಯ ರಾಯಲ್ ಸೊಸೈಟಿ ಫೆಲೋ. ನೀವು ಅವರನ್ನು ಹಾಗೆ ಹಾಗೆಲ್ಲ ಬಂಧಿಸುವ ಹಾಗಿಲ್ಲ ಎಂದು ವಾದವನ್ನು ಮಾಡಿದರು. ಆದರೂ ಪೊಲೀಸರು ಒಪ್ಪಲಿಲ್ಲ. ಕೊನೆಗೆ ಅವರ ಆರೋಗ್ಯದ ಸಮಸ್ಯೆಯನ್ನು ಗಮನಿಸಿದ ಲಂಡನ್ ನಗರದ ಪೊಲೀಸರು ಅವರನ್ನು ಬಿಡುಗಡೆ ಮಾಡಿದರು.
ರಾಯಲ್ ಸೊಸೈಟಿಯ ಫೆಲೋ ಆದರು ರಾಮಾನುಜನ್
ಅಂದ ಹಾಗೆ ನಮಗೆ ಗೊತ್ತಿರಲಿ. ಕೇಂಬ್ರಿಜ್ ವಿವಿಯಲ್ಲಿ ರಾಯಲ್ ಸೊಸೈಟಿ ಫೆಲೋ ಪದವಿ ಪಡೆದ ಮೊದಲ ಭಾರತೀಯ ರಾಮಾನುಜನ್! FA ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಒಂದು ಪ್ರತಿಭೆಯು ತನ್ನ ಅಸಾಮಾನ್ಯ ಗಣಿತ ಪ್ರತಿಭೆಯ ಮೂಲಕ ಈ ಸಾಧನೆಯನ್ನು ಮಾಡಿದ್ದು ಸಣ್ಣ ಸಾಧನೆ ಅಲ್ಲವೇ ಅಲ್ಲ!
ಹಸಿವು, ಲಂಡನ್ ನಗರದ ತೀವ್ರವಾದ ಚಳಿ ಮತ್ತು ಮನೋವೇದನೆ ಎಲ್ಲವೂ ಸೇರಿ ಅವರ ಆರೋಗ್ಯ ಸ್ಥಿತಿಯನ್ನು ಗಂಭೀರ ಮಾಡಿತು. ಅವರ ಗುರುಗಳು ಅವರನ್ನು ಒತ್ತಾಯ ಮಾಡಿ ಹಡಗಿನಲ್ಲಿ ಭಾರತಕ್ಕೆ ಕಳುಹಿಸಿ ಕೊಟ್ಟರು. ಅವರು ತಮಿಳುನಾಡಿನ ತನ್ನ ಮನೆಗೆ ಹಿಂದಿರುಗಿದಾಗ ಅವರ ಹೆಂಡತಿಗೇ ಗಂಡನ ಗುರುತು ಹಿಡಿಯುವುದು ಕಷ್ಟ ಆಯಿತು.
ಆಕೆ ಕಣ್ಣೀರು ಸುರಿಸುತ್ತ ಗಂಡನ ಸೇವೆಗೆ ನಿಂತರು. ಆದರೆ ಆಗಲೇ ಅವರ ದೇಹವನ್ನು ಆವರಿಸಿದ್ದ ಕ್ಷಯ ರೋಗವು ಅವರನ್ನು ಕೇವಲ ಮೂವತ್ತೆರಡನೆಯ ವಯಸ್ಸಿಗೆ ಬಲಿ ಪಡೆದುಕೊಂಡಿತು!
ಸಾಯುವ ಕೆಲವು ದಿನಗಳ ಮೂಲಕ ರಾಮಾನುಜನ್ ತನ್ನ ಹೆಂಡತಿಯನ್ನು ಕರೆದು ಆಕೆಯ ಕೈಯಲ್ಲಿ ನೂರಾರು ಪುಟಗಳ ಕೈಬರಹದ ಗಣಿತ ಪ್ರಮೇಯಗಳ ನೋಟ್ಸ್ ಕೊಟ್ಟು ಅದನ್ನು ಅವರ ಗುರುಗಳಾದ ಹಾರ್ಡಿ ಸರ್ ಅವರಿಗೆ ಟಪ್ಪಾಲು ಮಾಡುವಂತೆ ವಿನಂತಿ ಮಾಡಿದ್ದರು. ಹೆಂಡತಿ ಹಾಗೆಯೇ ಮಾಡಿದರು. ಆದರೆ ಆ ಟಿಪ್ಪಣಿ ಲಂಡನ್ ನಗರಕ್ಕೆ ತಲುಪಿದಾಗ ರಾಮಾನುಜನ್ ಕಣ್ಣು ಮುಚ್ಚಿ ಆಗಿತ್ತು!
ವಿಶ್ವದ ಅತೀ ಶ್ರೇಷ್ಠ ಗಣಿತಜ್ಞನ ಬದುಕು ಹೀಗೆ ದುರಂತ ಅಂತ್ಯವನ್ನು ಕಂಡಿತು. ಆದರೆ ಅವರೇ ಸಂಶೋಧನೆ ಮಾಡಿದ 3900ಕ್ಕಿಂತ ಅಧಿಕವಾದ ಗಣಿತದ ಅನನ್ಯ ಪ್ರಮೇಯಗಳು ಅವರ ಪ್ರತಿಭೆಗೆ ಸಾಕ್ಷಿ ಆಗಿ ನಿಂತಿವೆ
ಇದನ್ನೂ ಓದಿ : Raja Marga Column : ನಿಮಗೆ KVG ಗೊತ್ತಾ? ಕಲಿತಿದ್ದು 8ನೇ ಕ್ಲಾಸ್, ಕಟ್ಟಿದ್ದು ಮೆಡಿಕಲ್ ಕಾಲೇಜು!
ಹೌದಾ, ನನ್ನ ಗಂಡ ಅಷ್ಟು ದೊಡ್ಡ ಜನವಾ?
ಮುಂದೆ ಹಾಲಿವುಡ್ ಅವರ ಬದುಕನ್ನು ಆಧರಿಸಿ The man who knew infinity ಎಂಬ ಜನಪ್ರಿಯವಾದ ಸಿನಿಮಾವನ್ನು ಮಾಡಿ ಗಣಿತ ಲೋಕದ ದೈತ್ಯ ಪ್ರತಿಭೆಗೆ ಶ್ರದ್ಧಾಂಜಲಿಯನ್ನು ಕೊಟ್ಟಿತು. ಸಿನಿಮಾ ಶೂಟಿಂಗ್ ಹೊತ್ತಲ್ಲಿ ಅದೇ ಚಿತ್ರತಂಡವು ಅವರ ಕುಂಭಕೋಣದ ಮನೆಗೆ ಬಂದಾಗ ರಾಮಾನುಜನ್ ಪತ್ನಿ ಜಾನಕಿ ಇನ್ನೂ ಬದುಕಿದ್ದರು.
ಚಿತ್ರ ತಂಡದವರು ರಾಮಾನುಜನ್ ಅವರ ಗಣಿತದ ಸಾಧನೆಯನ್ನು ಅದ್ಭುತವಾಗಿ ವರ್ಣನೆ ಮಾಡಿದಾಗ ಆಕೆ ಕಣ್ಣು ದೊಡ್ಡದು ಮಾಡಿ ಹೌದಾ, ನನ್ನ ಗಂಡನು ಅಷ್ಟೊಂದು ದೊಡ್ಡ ಜನವಾ? ಎಂದು ಮುಗ್ಧವಾಗಿ ಕೇಳಿದರಂತೆ! ಅದುವರೆಗೆ ಅವರಿಗೆ ತನ್ನ ಗಂಡನ ಸಾಧನೆಯ ಬಗ್ಗೆ ಏನೂ ಗೊತ್ತಿರಲಿಲ್ಲ!
ಗಂಡನು ಲಂಡನ್ನಿನಿಂದ ತನಗೆ ನೂರಾರು ಪ್ರೇಮ ಪತ್ರಗಳನ್ನು ಬರೆದಿದ್ದನು ಎಂಬ ವಿಷಯ ಗೊತ್ತಾದಾಗ ಜಾನಕಿ ದೊಡ್ಡ ದನಿಯಲ್ಲಿ ಅಳುತ್ತ ಇಡೀ ದಿನ ಕಣ್ಣೀರು ಹಾಕಿದ್ದರಂತೆ! ಆ ಯಾವ ಪತ್ರಗಳು ಆಕೆಗೆ ಕೊನೆಯವರೆಗೂ ಸಿಗಲೇ ಇಲ್ಲ!