Site icon Vistara News

Raja Marga Column : ವೀರ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್‌ಗೆ ಸ್ಮಾರಕ ಕಟ್ಟಿ ಸೆಲ್ಯೂಟ್‌ ಹೊಡೆದ ಕಲ್ಯದ ಜನ

Capt MV pranjal Family1

ಎಷ್ಟೋ ಬಾರಿ ನನಗೆ ಅನ್ನಿಸುತ್ತದೆ, ಈ ಸೈನಿಕರು ಯಾವ ಲೋಕದಿಂದ ಬಂದವರು ಎಂದು! Ultimate Sacrifice ಇದರ ಇನ್ನೊಂದು ಹೆಸರೇ ಸೈನಿಕರು. Nation First ಎಂಬ ಘೋಷಣೆಗೆ ಅನ್ವರ್ಥ ಹೆಸರು ಇದ್ದರೆ ಅದು ಸೈನಿಕರು. ನಾನು ಹತ್ತಾರು ಹುತಾತ್ಮ ಸೈನಿಕರ ಕುಟುಂಬಗಳನ್ನು ಭೇಟಿ ಮಾಡಿದ್ದೇನೆ. ಬೆಂಕಿಯಂತಹ ನೋವನ್ನು ಒಳಗಿಟ್ಟುಕೊಂಡು ಅವರು ಆ ಭಾವುಕ ಕ್ಷಣದಲ್ಲಿ ಕೂಡ ಸ್ಥಿತಪ್ರಜ್ಞರಾಗಿ ನಿಲ್ಲುವುದು ಇದೆಯಲ್ಲ ಅದು ಯಾರನ್ನೂ ಕರಗಿಸುತ್ತದೆ (Raja Marga Column).

Raja Marga Column Capt-MV-pranjal-Family

ಸಂದೀಪ್ ಉನ್ನಿಕೃಷ್ಣನ್ (Sandeep Unnikrishnan) ಅವರು ಹುತಾತ್ಮರಾದ ನಂತರ ಅವರ ಅಪ್ಪ ಮತ್ತು ಅಮ್ಮನನ್ನು ಒಮ್ಮೆ ಭೇಟಿ ಮಾಡಿದ್ದೆ. ನಮ್ಮ ಮಗನ ಬಗ್ಗೆ ನಮಗೆ ತುಂಬಾ ಪ್ರೌಡ್ ಫೀಲಿಂಗ್ ಇದೆ ಎಂದವರು ಹೇಳಿದ್ದರು. ನಮ್ಮೊಳಗೆ ನಮ್ಮ ಮಗ ಇನ್ನೂ ಜೀವಂತ ಆಗಿದ್ದಾನೆ ಎಂದಿದ್ದರು. ಅವರ ಮನೆಯಲ್ಲಿ ಮಗನ ದೊಡ್ಡ ಫೋಟೋದ ಮುಂದೆ ಆ ಗಂಡ ಹೆಂಡತಿ ಇಬ್ಬರೂ ತುಂಬ ಹೊತ್ತು ಇಂದಿಗೂ ಮೌನವಾಗಿ ನಿಲ್ಲುತ್ತಾರೆ. ಆತನ ಜೊತೆಗೆ ಮೌನವಾಗಿ ಸಂವಹನ ಮಾಡುತ್ತಾರೆ.

ಬೆಂಗಳೂರಿನ ಶಕುಂತಲಾ ಭಂಡಾರ್ಕರ್ (Shakuntala Bhandarkar) ಎಂಬ ಮಹಿಳೆಯ ಕಥೆ ಇನ್ನೂ ರೋಚಕ ಇದೆ. ಅವರ ಪತಿ ಅಜಿತ್ ಭಂಡಾರ್ಕರ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ಆದವರು. ಆಕೆ ಒಂದು ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಪತಿ ಹುತಾತ್ಮ ಆದಾಗ ಅವರ ಗಂಡು ಮಕ್ಕಳಿಬ್ಬರೂ ತುಂಬಾ ಚಿಕ್ಕವರು. ಮುಂದೆ ಅವರಿಬ್ಬರೂ ಓದಿ ಅಮ್ಮನ ಭುಜದ ಎತ್ತರಕ್ಕೆ ಬೆಳೆದು ನಿಲ್ಲುತ್ತಾರೆ. ಒಂದು ದಿನ ಇಬ್ಬರೂ ಅಪ್ಪನ ಹಾಗೆ ಸೈನ್ಯಕ್ಕೆ ಸೇರುವ ತುಡಿತ ತೋರುತ್ತಾರೆ. ಆಗ ಅಮ್ಮ ಹೇಗೆ ನಿರಾಕರಣೆ ಮಾಡುತ್ತಾರೆ?

Raja Marga Column Capt-MV-pranjal-Family

ಅಮ್ಮನ ಪ್ರೇರಣೆ ಪಡೆದು ಮುಂದೆ ಅವರಿಬ್ಬರೂ ಸೈನ್ಯಕ್ಕೆ ಸೇರಿ ಯೂನಿಫಾರ್ಮ್ ಧರಿಸಿ ಮನೆಗೆ ಬಂದಾಗ ಮೂವರೂ ಅಪ್ಪನ ಫೋಟೋದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಕ್ಷಣ ಇದೆಯಲ್ಲ ಅದು ನಿಜಕ್ಕೂ ಅದ್ಭುತ ಅನುಭವ ನೀಡುತ್ತದೆ.

ಹುತಾತ್ಮ ಸೈನಿಕರ ಹೆಂಡತಿ ಕಣ್ಣೀರು ಹಾಕುವುದಿಲ್ಲ(Raja Marga Column)

ಹುತಾತ್ಮ ಸೈನಿಕರ ಪತ್ನಿ ಅಥವಾ ಕುಟುಂಬದವರು ಮರಣೋತ್ತರವಾಗಿ ಶೌರ್ಯ ಪ್ರಶಸ್ತಿಗಳನ್ನು ಪಡೆಯುವ ಕಾರ್ಯಕ್ರಮಗಳ ನೇರ ಪ್ರಸಾರ ನಾನು ಟಿವಿಯಲ್ಲಿ ತಪ್ಪದೆ ನೋಡುತ್ತೇನೆ. ಅದು ಅತ್ಯಂತ ಭಾವಪೂರ್ಣ ಆಗಿರುತ್ತದೆ. ಅಲ್ಲಿ ಅಳಬಾರದು ಎಂಬ ನಿಯಮ ಖಂಡಿತವಾಗಿ ಇಲ್ಲ. ಆದರೆ ಸೈನಿಕರ ಪತ್ನಿ ಅಥವಾ ಮನೆಯವರು ಅಲ್ಲಿ ಒಂದು ತೊಟ್ಟು ಕಣ್ಣೀರು ಹಾಕುವುದಿಲ್ಲ. ಹಾಗೆ ಅಳುವುದು ನಮ್ಮ ಪತಿಗೆ ಅಥವ ಮಗನಿಗೆ ಮಾಡುವ ಅಪಮಾನ ಎಂದವರು ಭಾವಿಸುತ್ತಾರೆ. ಬೆಟ್ಟದಷ್ಟು ನೋವನ್ನು ಎದೆಯಲ್ಲಿ ಇಟ್ಟುಕೊಂಡು ಅವರು ನಿಲ್ಲುವ ಆ ದೃಶ್ಯವು ನಮ್ಮನ್ನು ನಿಜಕ್ಕೂ ಬೆರಗು ಗೊಳಿಸುತ್ತದೆ. ಹಾಗೆಯೇ ಅವರು ತಮ್ಮ ಕರ್ತವ್ಯಪ್ರಜ್ಞೆಯನ್ನು ಜಾಗೃತ ಮಾಡಿಕೊಂಡು ಮತ್ತೆ ಬದುಕಿಗೆ ಹಿಂದಿರುಗುವ ರೀತಿ ಇದೆಯಲ್ಲ ಅದು ನಿಜಕ್ಕೂ ಅನುಪಮ ಮತ್ತು ಅನುಕರಣೀಯ.

ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬ ನಾಡಿಗೇ ಮಾದರಿ (Raja Marga Column)

ಕ್ಯಾಪ್ಟನ್ ಎಂ ವಿ ಪ್ರಾಂಜಲ್ (Capt MV Pranjal) ಅವರ ತಂದೆ ಎಂ ವೆಂಕಟೇಶ್ ಅವರು ಮಂಗಳೂರಿನ ಬೃಹತ್ ಕಾರ್ಪೊರೇಟ್ ಸಂಸ್ಥೆ ಎಂ ಆರ್ ಪಿ ಎಲ್ ನಲ್ಲಿ MD ಆಗಿದ್ದವರು. ತುಂಬಾ ಓದಿಕೊಂಡವರು ಮತ್ತು ತುಂಬಾ ಶ್ರೀಮಂತರು. ಅವರ ಧರ್ಮಪತ್ನಿ ಅನುರಾಧಾ ಗೃಹಿಣಿ. ಅವರಿಗೆ ಒಬ್ಬನೇ ಮಗ ಪ್ರಾಂಜಲ್. ಆತನೂ ಬುದ್ಧಿವಂತ ಮತ್ತು ಪ್ರತಿಭಾವಂತ. ಇಂಜಿನಿಯರಿಂಗ್ ಸೀಟ್ ಮೆರಿಟ್ ಆಧಾರದಲ್ಲಿ ಪಡೆದವನು. ಆತನ ಎತ್ತರ ಆರು ಅಡಿಗಿಂತ ಹೆಚ್ಚು ಇತ್ತು.

ಅಂತಹ ಮಗ ಒಂದು ದಿನ ಅಪ್ಪನ ಮುಂದೆ ನಿಂತು ಸೈನ್ಯಕ್ಕೆ ಸೇರುವ ಆಸೆ ವ್ಯಕ್ತಪಡಿಸಿದಾಗ ಅಪ್ಪ ತಡೆಯಲಿಲ್ಲ. ‘ನಿನ್ನ ನಿರ್ಧಾರ ಸರಿ ಇದೆ ಮಗ ‘ ಎಂದು ಆತನನ್ನು ಆಶೀರ್ವಾದ ಮಾಡಿ 2014ರಲ್ಲಿ ಅವರು ಸೈನ್ಯಕ್ಕೆ ಕಳುಹಿಸಿದ್ದರು. ತನ್ನ ಧೈರ್ಯ, ನಾಯಕತ್ವ ಗುಣ, ದೇಶ ಪ್ರೇಮ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇವುಗಳಿಂದ ಮಗನು ಭಾರೀ ಎತ್ತರಕ್ಕೆ ಬೆಳೆದರು. ಸೇನಾ ಕಾಲೇಜಿನಲ್ಲಿ BE ಶಿಕ್ಷಣವೂ ಪೂರ್ತಿ ಆಯಿತು. ಸೇನೆಯು ತನಗೆ ನೀಡಿದ ಎಲ್ಲ ಹೊಣೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಪ್ರಾಂಜಲ್ ಅವರಿಗೆ ಅತೀ ಸಣ್ಣ ಪ್ರಾಯದಲ್ಲಿ ಕ್ಯಾಪ್ಟನ್ ಹುದ್ದೆ ದೊರಕಿತ್ತು. ಒಂದೆರಡು ತಿಂಗಳಲ್ಲಿ ಮೇಜರ್ ಹುದ್ದೆಯೂ ಅವರಿಗೆ ದೊರೆಯುವ ಅವಕಾಶ ಇತ್ತು. ಆದರೆ ವಿಧಿಯ ಮನಸಿನಲ್ಲಿ ಬೇರೆಯೇ ಇತ್ತು.

Raja Marga Column Capt-MV-pranjal-Family

2023ರ ನವೆಂಬರ್ 22ರಂದು ಏನಾಯಿತು ಎಂದರೆ… (Raja Marga Column)

ಜಮ್ಮು ಕಾಶ್ಮೀರದ ರಜೌರಿ ಪ್ರಾಂತ್ಯದಲ್ಲಿ ದಟ್ಟ ಕಾಡಿನ ನಡುವೆ ಕಟ್ಟರ್ ಭಯೋತ್ಪಾದಕರು ಅಡಗಿ ಕೂತಿರುವ ವಾರ್ತೆ ಸೇನೆಯನ್ನು ತಲುಪಿತ್ತು. ಆ ಭಯೋತ್ಪಾದಕರು ಜನವಸತಿ ಪ್ರದೇಶಗಳ ಮೇಲೆ ಧಾಳಿ ಮಾಡಲು ಸಂಚು
ಹೂಡಿದ್ದರು. ಅವರನ್ನು ಮಟ್ಟ ಹಾಕುವ ಹೊಣೆಯನ್ನು ಸೇನೆ ಪ್ರಾಂಜಲ್ ಅವರಿಗೆ ನೀಡಿತ್ತು. ಒಂದು ಸಣ್ಣ ತುಕಡಿಯನ್ನು ಮುಂದೆ ಇಟ್ಟುಕೊಂಡು ಆ ಪ್ರದೇಶದ ಕಡೆಗೆ ಪ್ರಾಂಜಲ್ ಧಾವಿಸಿದ್ದಾರೆ. ಕಾಡಿನ ನಡುವೆ ದೀರ್ಘ ಕಾಲ ಗುಂಡಿನ ಚಕಮಕಿ ಆಗಿದೆ. ಟೆರರ್ ನಾಯಕನೂ ಅಲ್ಲಿ ಅಡಗಿದ್ದ.

ಆ ಉಗ್ರರನ್ನು ಹೆಡೆಮುರಿ ಕಟ್ಟಬೇಕಾದರೆ ಪ್ರಾಂಜಲ್ ತನ್ನ ಮರೆಯಿಂದ ಹೊರಬರಲೇ ಬೇಕಾಗಿತ್ತು. ಆಗಲೇ ಉಗ್ರರ ಅತ್ಯಾಧುನಿಕ ಬಂದೂಕುಗಳು ಗುಂಡು ಸುರಿದು ಪ್ರಾಂಜಲ್ ಅವರ ದೇಹವನ್ನು ತೂರಿಕೊಂಡು ಹೋಗಿದ್ದವು. ಇಡೀ ದೇಶವು ಆ ಸೈನಿಕನ ಅಂತ್ಯಕ್ಕೆ ಮರುಗಿತ್ತು. ಆತನು ಹತ್ತನೇ ತರಗತಿಯ ತನಕ ಕರಾವಳಿಯ ಶಾಲೆಗಳಲ್ಲಿ ಓದಿದ ಕಾರಣ (ಡೆಲ್ಲಿ ಪಬ್ಲಿಕ್ ಸ್ಕೂಲ್, NMPT) ಕರಾವಳಿ ಕರ್ನಾಟಕದಲ್ಲಿ ತೀವ್ರ ನೋವಿನ ಅಲೆಗಳು ಎದ್ದಿದ್ದವು. ವೀರ ಮರಣವನ್ನು ಅಪ್ಪುವಾಗ ಪ್ರಾಂಜಲ್ ವಯಸ್ಸು ಕೇವಲ 29!

ಇಡೀ ಕುಟುಂಬ ದುಃಖವನ್ನು ನುಂಗಿ ನಿಂತಿತ್ತು.

ಅಪ್ಪ ವೆಂಕಟೇಶ್, ತಾಯಿ ಅನುರಾಧಾ ತಮ್ಮ ಒಬ್ಬನೇ ಮಗನನ್ನು ಎಳವೆಯಲ್ಲಿ ಕಳೆದುಕೊಂಡು ಶೋಕದ ಶಿಖರದಲ್ಲಿ ಇದ್ದರು. ಬೆಂಗಳೂರಿನ ಮನೆಯ ಅಂಗಳಕ್ಕೆ ತ್ರಿವರ್ಣ ಧ್ವಜ ಹೊದ್ದು ಮಗನ ಪಾರ್ಥಿವ ಶರೀರ ಬಂದಾಗ ಅಪ್ಪ ಮತ್ತು ಅಮ್ಮ ಬರಿಗಾಲಲ್ಲಿ ಓಡಿ ಬಂದರು. ಕೇವಲ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಹೆಂಡತಿ ಅದಿತಿ ಎದೆಯನ್ನು ಕಲ್ಲು ಮಾಡಿ ನಿಂತಿದ್ದರು. ಸೇನೆಯ ಪ್ರೋಟೋಕಾಲ್‌ನಂತೆ ಸೇನಾ ಮುಖ್ಯಸ್ಥರು ಪತಿಯ ಶವಕ್ಕೆ ಹೊದ್ದ ತ್ರಿವರ್ಣ ಧ್ವಜವನ್ನು ಮಡಚಿ ಆಕೆಯ ಕೈಯ್ಯಲ್ಲಿ ಕೊಟ್ಟಾಗಲೂ ಆಕೆ ಅಳಲಿಲ್ಲ. ಆದರೆ ಅಲ್ಲಿ ಇದ್ದವರೆಲ್ಲರೂ ಕಣ್ಣೀರು ಮಿಡಿದರು.

ಅದಕ್ಕೆ ಹಿರಿಯರು ಕೊಟ್ಟ ಶೀರ್ಷಿಕೆ – ಅಲ್ಟಿಮೇಟ್ ಸಾಕ್ರಿಫೈಸ್.

ಇದನ್ನೂ ಓದಿ: Raja Marga Column : ಕ್ಯಾ. ಪ್ರಾಂಜಲ್‌ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!

ಇಂದು ( ಜನವರಿ 26) ಕ್ಯಾ.ಪ್ರಾಂಜಲ್ ಸ್ಮಾರಕ ಲೋಕಾರ್ಪಣೆ

ಇಂದು ಕಾರ್ಕಳ ತಾಲೂಕಿನ ಕಲ್ಯ ಶಾಲೆಯಲ್ಲಿ ಹುತಾತ್ಮ ಸೈನಿಕ ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ಲೋಕಾರ್ಪಣೆ ಆಗ್ತಾ ಇದೆ. ಕಲ್ಯ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿ, ಪೂರ್ವ ವಿದ್ಯಾರ್ಥಿಗಳ ಸಂಘಗಳು ಕೈ ಜೋಡಿಸಿ ಈ ಉದಾತ್ತ ಆಶಯದ ಸ್ಮಾರಕವನ್ನು ನಿರ್ಮಿಸಿವೆ. ನಿವೃತ್ತ ಸೈನಿಕರ ವೇದಿಕೆಯ ಸಹಯೋಗ ಕೂಡ ಇಂದಿನ ಕಾರ್ಯಕ್ರಮಕ್ಕೆ ದೊರಕಿದೆ.

ಬಹಳ ಮುಖ್ಯ ಎಂದರೆ ತಮ್ಮ ಮಗನ ಸ್ಮಾರಕವನ್ನು ಗೌರವಿಸಲು ಪ್ರಾಂಜಲ್ ಅಪ್ಪ ವೆಂಕಟೇಶ್ ಮತ್ತು ಅಮ್ಮ ಅನುರಾಧಾ ಬೆಂಗಳೂರಿನಿಂದ ಕಾರ್ಕಳಕ್ಕೆ ಬರಲಿದ್ದಾರೆ. ಕಲ್ಯ ಎಂಬ ಸಣ್ಣ ಗ್ರಾಮದಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಊರವರು ಸಾಕ್ಷಿ ಆಗಲಿದ್ದಾರೆ. ಇಂದು ಸಂಜೆ ಐದು ಘಂಟೆಗೆ ಆ ಕಾರ್ಯಕ್ರಮ. ದೇಶಾಭಿಮಾನಿ ಬಂಧುಗಳು ಭಾಗವಹಿಸಬೇಕು ಎನ್ನುವುದು ವಿನಂತಿ. ಈ ಲೇಖನ ಬರೆಯುವ ಹೊತ್ತಿಗೆ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ಘೋಷಣೆ ಆದ ಸುದ್ದಿಯೂ ಬಂದಿದೆ.

ನಾಡಿನ ಮಗನಿಗೆ ರಾಷ್ಟ್ರದ ಗೌರವ ದೊರೆತಿದೆ.

Exit mobile version