Raja Marga Column : ದೇವರ ಅಸ್ತಿತ್ವವನ್ನೇ (Existance of God) ಪ್ರಶ್ನೆ ಮಾಡುವವರು, ದೇವರೇ ಇಲ್ಲ ಎಂದು ವಾದ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಅಂತವರಿಗೆ ಕೂಡ ದೇವರ ಅನುಭೂತಿ (Feeling of God) ಬೇರೆ ಬೇರೆ ರೂಪದಲ್ಲಿ ಆಗಿರಬಹುದು! ಅದನ್ನು ಅನುಭವಿಸಲು ಸ್ಟ್ರಾಂಗ್ ಆದ ಆ್ಯಂಟೆನಾ (Strong Antenna) ನಮ್ಮಲ್ಲಿ ಇರಬೇಕು ಅಷ್ಟೇ!
Raja Marga Column :ನಮ್ಮಜ್ಜ ಬಾಲ್ಯದಲ್ಲಿ ಹೇಳುತ್ತಿದ್ದ ಕತೆ
ನಮ್ಮಜ್ಜ ಎಂದಿಗೂ ಸುಳ್ಳು ಹೇಳುವವರೇ ಅಲ್ಲ ಎಂಬಲ್ಲಿಗೆ ಇದನ್ನು ನೀವು, ನಾವು ನಂಬಲೇ ಬೇಕು. ಅವರು ಕಾಪು ಪುರಾತನ ಮಾರಿಗುಡಿಯ ಸ್ಥಾಪಕರು ಮತ್ತು ಅರ್ಚಕರು ಆಗಿದ್ದರು. ಮಾರಿಯಮ್ಮನಿಗೆ ತುಂಬಾ ಚಿನ್ನದ ಆಭರಣಗಳು ಇದ್ದವು. ಅವುಗಳನ್ನು ಇಡಲು ಆಗ ಭದ್ರತೆ ಇರಲಿಲ್ಲ. ಕಳ್ಳರ ಕಾಟ ಬೇರೆ!
ಅದಕ್ಕಾಗಿ ಆ ಆಭರಣಗಳನ್ನು 15-16 ಕಿಲೋಮೀಟರ್ ದೂರದ ಮಣಿಪಾಲ್ ಸಿಂಡಿಕೇಟ್ ಬ್ಯಾಂಕಿನಲ್ಲಿ ಆಗಿನ ಲಾಕರ್‌ನಲ್ಲಿ ಇಡುವ ವ್ಯವಸ್ಥೆ ಆಗಿತ್ತು. ಅಲ್ಲಿಂದ ಮಾರಿಪೂಜೆಯ ಹೊತ್ತಿಗೆ ಅಜ್ಜ ತಲೆಯ ಮೇಲೆ ಬಂಗಾರದ ಬುಟ್ಟಿ ಹೊತ್ತುಕೊಂಡು ನಡೆದೇ ಕಾಪುವಿಗೆ ಬರಬೇಕಾಗಿತ್ತು. ಮತ್ತೆ ಮಾರಿ ಪೂಜೆ ಮುಗಿದ ನಂತರ ಪುನಃ ಆ ಬಂಗಾರವನ್ನು ಅದೇ ಮಣಿಪಾಲಕ್ಕೆ ಹಿಂತಿರುಗಿಸುವ ವ್ಯವಸ್ಥೆ ಮಾಡುತ್ತಿದ್ದರು ನಮ್ಮ ಅಜ್ಜ.
ಒಮ್ಮೆ ಅಜ್ಜ ಮಣಿಪಾಲದಿಂದ ಚಿನ್ನದ ಬುಟ್ಟಿಯನ್ನು ತಲೆಯ ಮೇಲೆ ಇಟ್ಟುಕೊಂಡು ಕಾಪುವಿನ ಕಡೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಕಟಪಾಡಿ ದಾಟಿದ ನಂತರ ಕಾಡಿನ ದಾರಿ. ಆಗಲೇ ಕತ್ತಲು ಆವರಿಸಿತ್ತು. ಅಜ್ಜನಿಗೆ ಭಯ ಆರಂಭ ಆಯಿತು.
ಅದು ಪ್ರಾಣ ಭಯ ಅಲ್ಲ. ಅಜ್ಜ ಹೆದರಿದ್ದು ಮಾರಿಯಮ್ಮನ ಆಭರಣದ ಆಸೆಗೆ ಕಳ್ಳರು ಬಂದು ಕದ್ದುಕೊಂಡು ಹೋದರೆ ಅಪವಾದ ಎದುರಿಸಬೇಕಲ್ಲ ಎಂಬ ಕಾರಣಕ್ಕೆ! ಇನ್ನೂ ಸುಮಾರು ದೂರ ಇದೆ ಕಾಪು. ರಸ್ತೆ ಕಾಣದಷ್ಟು ಕತ್ತಲೆ. ಆಗ ಅಜ್ಜ, ” ಅಮ್ಮ, ನಿನ್ನದೇ ಆಭರಣ. ನೀನೇ ಕಾಪಾಡು!” ಎಂದು ಒಮ್ಮೆ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿ ಮುನ್ನಡೆದರು.
ಅಲ್ಲಿಂದ ಆರಂಭವಾಗಿ ಘಲ್ ಘಲ್ ಎಂಬ ಗೆಜ್ಜೆಯ ಶಬ್ದವು ಅಜ್ಜನ ಕಿವಿಗೆ ಕೇಳಲು ಆರಂಭವಾಯಿತು! ಮೂಗಿಗೆ ಮಲ್ಲಿಗೆ ಸುವಾಸನೆ ಅಡರಿತು! ಕಾಪು ಮಾರಿಗುಡಿ ತಲುಪಿ ಆ ಬಂಗಾರ ಒಳಗಿಡುವತನಕ ಆ ಘಲ್ ಘಲ್ ಶಬ್ದ ನಿಲ್ಲಲೇ ಇಲ್ಲ. ಮಲ್ಲಿಗೆಯ ಸುವಾಸನೆ ಕಡಿಮೆ ಆಗಲೇ ಇಲ್ಲ! ಅಲ್ಲಿಗೆ ಅಜ್ಜ ನಿಟ್ಟುಸಿರು ಬಿಟ್ಟಿದ್ದರು.
ಈ ಘಟನೆಯನ್ನು ಅಜ್ಜ ನಮಗೆ ರಸವತ್ತಾಗಿ ವರ್ಣಿಸುವಾಗ ಅವರ ಕಣ್ಣಲ್ಲಿ ಏನೋ ಅವ್ಯಕ್ತವಾದ ಬೆಳಕು ಕಾಣುತ್ತಿತ್ತು. ಅಜ್ಜ ಬದುಕಿದ್ದೇ ಹಾಗೆ! ಅದು ಸತ್ಯದ ಕಾಲ ಆಗಿತ್ತು. ಆದ್ದರಿಂದ ದೇವರ ಅಸ್ತಿತ್ವವು ಯಾವ್ಯಾವುದೋ ರೂಪದಲ್ಲಿ ಆಗಿನ ಕಾಲದವರಿಗೆ ಅನುಭವ ಆಗುತ್ತಿತ್ತು. ಆದರೆ ಮುಂದೆ ಆ ಕಾಲವು ಸರಿದು ಹೋಗಿ ಇಂದಿನ ಕಾಲಕ್ಕೆ ಬಂದಾಗ ದೇವರನ್ನು ಪ್ರಶ್ನೆ ಮಾಡುವವರಿಗೆ ಆ ಅನುಭವ ಆಗುವುದು ಕಡಿಮೆ. ಅದಕ್ಕೆ ಕಾರಣ ಏನೆಂದರೆ ನಮ್ಮ ಆ್ಯಂಟೆನಾ ವೀಕ್ ಆಗಿರುವುದು ಹೊರತು ಬೇರೇನೂ ಅಲ್ಲ!
ನನ್ನ ಮಟ್ಟಿಗೆ ದೇವರ ನಂಬಿಕೆ!
ನಾನು ದೇವರ ಪೂಜೆ, ಪುನಸ್ಕಾರ ಇವುಗಳ ಬಗ್ಗೆ ಹೆಚ್ಚು ಗೊಡವೆ ಮಾಡದಿದ್ದರೂ ದೇವರ ಅಸ್ತಿತ್ವವನ್ನು ಗಾಢವಾಗಿ ನಂಬುತ್ತೇನೆ. ನಾನು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವುದು ನನ್ನ ನಂಬಿಕೆ! ನನಗೆ ಸಣ್ಣ ಸಣ್ಣ ಉಪಕಾರ ಮಾಡುವ ಜನರಲ್ಲಿ ಕೂಡ ದೇವರನ್ನು ಕಾಣುವುದು ನನ್ನ ನಂಬಿಕೆ! ನನಗೆ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಎದುರಿಸಿ ನಿಲ್ಲುತ್ತೇನೆ. ದೊಡ್ಡ, ಎದುರಿಸಲಾಗದ ಸಮಸ್ಯೆಗಳು ಬಂದಾಗ ಒಂದು ಕ್ಷಣ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥನೆ ಮಾಡಿ ನೀನೇ ಪರಿಹಾರ ಮಾಡು ಎಂದು ಬೇಡಿಕೊಂಡು ದೇವರಿಗೆ ಶರಣಾಗುತ್ತೇನೆ. ಮತ್ತೆ ಆ ಸಮಸ್ಯೆಯ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ ಆ ಸಮಸ್ಯೆ ಹೂವು ಎತ್ತಿದ್ದಷ್ಟೆ ಸಲೀಸಾಗಿ ಪರಿಹಾರ ಆಗಿರುವುದು ನಾನು ನಂಬಿದ ದೇವರ ಪವರ್!
ನನ್ನ ಮಟ್ಟಿಗೆ ದೇವರು ನನ್ನ ಬೆಸ್ಟ್ ಫ್ರೆಂಡ್!
ನನ್ನ ಮಟ್ಟಿಗೆ ದೇವರು ಭಯ ಹುಟ್ಟಿಸುವ ಭಯೋತ್ಪಾದಕ ಅಲ್ಲ. ದೇವರು ನನ್ನ ಬೆಸ್ಟ್ ಫ್ರೆಂಡ್!
ನನ್ನ ದೇವರು ನನ್ನಿಂದ ಏನನ್ನೂ ಬಯಸುವುದಿಲ್ಲ. ನನ್ನ ಪಂಚೇಂದ್ರಿಯಗಳ ವ್ಯಾಪ್ತಿಗೆ ನಿಲುಕುವುದಿಲ್ಲ.
ನಾನು ಮಾನವೀಯ ಅಂತಃಕರಣದಲ್ಲಿ, ನಾನು ಮಾಡುವ ಕರ್ತವ್ಯದಲ್ಲಿ, ನಾನು ಮಾಡುವ ಸಣ್ಣ ಪುಟ್ಟ ಸಮಾಜಸೇವೆಗಳಲ್ಲಿ, ನನ್ನನ್ನು ಪ್ರಶ್ನಾತೀತವಾಗಿ ಪ್ರೀತಿಸುವ ನಿಷ್ಕಲ್ಮಶ ಹೃದಯಗಳಲ್ಲಿ, ನನ್ನ ತರಗತಿಯಲ್ಲಿ ಕೂತು ಪಾಠ ಕೇಳುವ ಮುಗ್ಧ ಹೃದಯದ ಮಕ್ಕಳಲ್ಲಿ, ನನ್ನ ತರಬೇತಿಯಲ್ಲಿ ಕುಳಿತು ನನ್ನಲ್ಲಿ ಅವರ ಅಣ್ಣನನ್ನೋ, ಅವರ ಗೆಳೆಯನನ್ನೋ, ಅವರ ಅಪ್ಪನನ್ನೋ ಕಾಣುವ ಪವಿತ್ರವಾದ ಮನಸುಗಳಲ್ಲಿ ದೇವರಿದ್ದಾನೆ ಎಂದು ನನ್ನ ನಂಬಿಕೆ! ಪ್ರತಿಯೊಬ್ಬ ಮನುಷ್ಯನಲ್ಲಿ ಏನು ಒಳ್ಳೆಯದು ಇದೆಯೋ ಅದೇ ದೇವರು ಎಂದು ನಂಬುವವನು ನಾನು. ನನ್ನ ಜೀವನದ ನಿರ್ಣಾಯಕ ಘಟ್ಟದಲ್ಲಿ ನನಗೆ ಧೈರ್ಯ ತುಂಬಿಸಿ ನನ್ನ ನೆರವಿಗೆ ನಿಂತವರು ನನ್ನ ದೇವರು. ಅಳು ಬಂದಾಗ ನನ್ನ ಕಣ್ಣೀರು ಒರೆಸುವವರು ನನ್ನ ದೇವರು.
ನಿಮ್ಮ ಭಾಷಣಗಳಿಂದ, ತರಬೇತಿಗಳಿಂದ, ಲೇಖನಗಳಿಂದ ನನ್ನಲ್ಲಿ ಬದಲಾವಣೆ ಆಗಿದೆ ಎಂದು ಭಾವಿಸುವವರು ನನ್ನ ದೇವರು! ದೂರದಲ್ಲಿ ಕೂತು ನನ್ನ ಸಾಧನೆಗಳನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಕೂಡ ನನ್ನ ದೇವರೇ! ಏಕೆಂದರೆ ನಾನಿಂದು ಏನಾದರೂ ಸಾಧಿಸಿದ್ದರೆ ಅದಕ್ಕೆ ಅವರೇ ಪ್ರೇರಣೆ! ನನ್ನಿಂದ ಎಲ್ಲ ಪ್ರಯೋಜನ ಪಡೆದು ನನಗೆ ಅವರ ತುರ್ತು ಅಗತ್ಯ ಇದ್ದಾಗ ಬಿಟ್ಟು ಹೋದವರು ಕೂಡ ನನ್ನ ದೇವರೇ! ಏಕೆಂದರೆ ಯಾರಿಲ್ಲದೆ ಕೂಡ ಬದುಕಿ ತೋರಿಸು ಎಂದು ಸವಾಲು ಹಾಕಿದವರು ಅವರು! ನನ್ನ ಆತ್ಮವಿಶ್ವಾಸ ಹೆಚ್ಚಿಸಿದ ದೇವರು ಅವರು.
ಇದನ್ನೂ ಓದಿ : Raja Marga Column : ಹೂವಿಗಿಂತ ಮೃದು ವಜ್ರಕ್ಕಿಂತ ಕಠೋರ ಆಗೋದು ಹೇಗೆ?
ದೇವರ ಮೇಲಿನ ನನ್ನ ನಂಬಿಕೆಯು ಎಷ್ಟೋ ಬಾರಿ ದೇವರಿಗಿಂತ ಸ್ಟ್ರಾಂಗ್ ಆಗಿರುತ್ತದೆ! ಆ ನಂಬಿಕೆ ಎಂದಿಗೂ ಮೋಸ ಹೋಗಿಲ್ಲ. ನನಗೆ ಸಹಾಯ ಬೇಕಾದಾಗ, ಉಸಿರು ಕಟ್ಟುವ ಸಂದರ್ಭ ಬಂದಾಗ ದೇವರು ಯಾರ್ಯಾರದೋ, ಯಾವ್ಯಾವುದೋ ರೂಪದಲ್ಲಿ ಬಂದು ನನಗೆ ಸಹಾಯ ಮಾಡಿ ಹೋಗುತ್ತಾರೆ! ಹಾಗಿರುವಾಗ ನಾನು ದೇವರಿಲ್ಲ ಎಂದು ವಾದ ಮಾಡುವುದು ಹೇಗೆ?
ಯಾವುದೋ ಕಷ್ಟದಲ್ಲಿ ಸಿಲುಕಿಕೊಂಡಾಗ, ದಾರಿ ಮಧ್ಯೆ ಯಾರೂ ಸಿಗದೆ ಕಂಗಾಲಾದಾಗ, ಇನ್ನೇನು ಮಾಡುವುದು ಎಂದು ದಿಕ್ಕೇ ತೋಚದೆ ಹೋದಾಗಲೆಲ್ಲ ಯಾರಾದರೂ ಯಾವುದೋ ರೂಪದಲ್ಲಿ ಬಂದು ಬೆಂಗಾವಲಿಗೆ ನಿಲ್ಲುತ್ತಾರಲ್ಲಾ.. ಅವರು ಕೂಡಾ ಒಂಥರಾ ದೇವರೇ ಅಲ್ವಾ?
ನನ್ನ ಅಜ್ಜ ಹೇಳಿದ ಒಂದು ಮಾತು ನನಗೆ ಮರೆತುಹೋಗುವುದಿಲ್ಲ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಯಾರೋ ಭಿಕ್ಷುಕನು ಮನೆ ಬಾಗಿಲಿಗೆ ಬಂದು ಅಮ್ಮಾ ಹಸಿವು ಅಂದಾಗ ನಾವು ಊಟ ಹಾಕದೆ ಕಳುಹಿಸಬಾರದು. ಏಕೆಂದರೆ ದೇವರು ಆ ಭಿಕ್ಷುಕನ ರೂಪದಲ್ಲಿಯೂ ಬಂದಿರಬಹುದು!