ಸ್ವಯಮೇವ ಮೃಗೇಂದ್ರತಾ ಅಂದರೇನು?
ಕಾಡಿನಲ್ಲಿ ಸಿಂಹಕ್ಕೆ ಯಾರೂ ಪಟ್ಟಾಭಿಷೇಕ ಮಾಡುವುದಿಲ್ಲ. ಯಾರೂ ಕಿರೀಟ ಧಾರಣೆ ಮಾಡುವುದಿಲ್ಲ. ಸಿಂಹವು ತನ್ನ ಸ್ವಯಂ ಸಾಮರ್ಥ್ಯಗಳನ್ನು (Self Empowerment) ಉದ್ದೀಪನ ಮಾಡಿಕೊಂಡು ‘ಮೃಗಗಳ ರಾಜ’ (King of Animals) ಎಂದು ಕರೆಸಿಕೊಳ್ಳುತ್ತದೆ – ಹೀಗೆ ಹೇಳುತ್ತದೆ ಒಂದು ಸಂಸ್ಕೃತದ ಸುಭಾಷಿತ. ಸಿಂಹವು ತನ್ನ ಗತ್ತು, ಗೈರತ್ತು, ಗಾಂಭೀರ್ಯ, ನಡಿಗೆ ಮತ್ತು ನೋಟಗಳಿಂದ ಕಾಡಿನ ರಾಜ ಎಂದು ಕರೆಸಿಕೊಳ್ಳುತ್ತದೆ. ನಾವೂ ನಮ್ಮ ಸಾಮರ್ಥ್ಯಗಳ ಅರಿವು ಮೂಡಿಸಿಕೊಂಡರೆ ಖಂಡಿತವಾಗಿ ಸಿಂಹಸದೃಶ ವ್ಯಕ್ತಿತ್ವವನ್ನು (Personality like a lion) ಪಡೆಯಬಹುದು. ಇಂಥ ಸಿಂಹ ಸದೃಶ ವ್ಯಕ್ತಿತ್ವವನ್ನು ಪಡೆಯಲು ಇಲ್ಲಿವೆ ಅತ್ಯಂತ ಸರಳವಾದ 12 ಹಂತಗಳು. ಇವುಗಳನ್ನು ಬಳಸಿಕೊಂಡು ಎತ್ತರಕ್ಕೆ, ಆಳಕ್ಕೆ ಮತ್ತು ವಿಸ್ತಾರವಾಗಿ ಬೆಳೆಯಿರಿ (Raja Marga Column).
Raja Marga Column : 1. ನಿಮ್ಮ ಸಾಮರ್ಥ್ಯಗಳನ್ನು ಅರಿಯಿರಿ (Strengths)
ನಮ್ಮ ಸಾಮರ್ಥ್ಯಗಳನ್ನು ನಾವು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ನೀವು ಯಾವ ಕೆಲಸವನ್ನು ಚೆನ್ನಾಗಿ ಮಾಡುತ್ತೀರಿ ಅನ್ನುವುದು ಎಲ್ಲರಿಗಿಂತ ಮೊದಲು ನಿಮಗೆ ಗೊತ್ತಿರಬೇಕು. ನೀವು ಯಾವ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ ಇದೆ ಅನ್ನುವುದು ನಿಮಗೆ ಆದಷ್ಟು ಬೇಗ ಗೊತ್ತಾಗಬೇಕು.
Raja Marga Column : 2. ನಿಮ್ಮ ಪರಿಮಿತಿಯನ್ನು ಒಪ್ಪಿಕೊಳ್ಳಿ (Limits)
ಯಾವುದನ್ನು ನೀವು ಮಾಡಲು ಸಾಧ್ಯ ಇಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳುವುದು ತುಂಬಾ ಮುಖ್ಯ. ಯಾವುದೇ ವ್ಯಕ್ತಿಯು ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಯಾವುದು ನನ್ನಿಂದ ಸಾಧ್ಯವಿಲ್ಲ ಎಂದು ಗೊತ್ತಾದರೆ ನಮ್ಮ ಸಮಯ, ನಮ್ಮ ಶ್ರಮ, ನಮ್ಮ ಎನರ್ಜಿ ಉಳಿಯುತ್ತದೆ.
3. ನಮ್ಮ ವಿಧಿ ಮತ್ತು ನಿಷೇಧಗಳು (Do’s and Don’ts)
ಸಮಾಜ ನಮಗೆ ವಿಧಿಸಿದ ವಿಧಿ (Do’s) ಮತ್ತು ನಿಷೇಧಗಳನ್ನು (Don’ts) ನಾವು ಅಷ್ಟು ಬೇಗ ಮೀರುವುದು ಕಷ್ಟ. ಇವುಗಳನ್ನು ಸಾಂಪ್ರದಾಯಿಕ ಮೌಲ್ಯಗಳು ಅನ್ನುತ್ತೇವೆ. ಈ ವಿಧಿ ಮತ್ತು ನಿಷೇಧಗಳು ನಮ್ಮನ್ನು ಯಾವಾಗಲೂ ಗೆಲುವಿನ ಕಡೆಗೆ ಮುನ್ನಡೆಸುತ್ತವೆ.
4. ನಿರಂತರ ಅಧ್ಯಯನ (Knowledge Gain)
ಇಂದು ಜ್ಞಾನವನ್ನು ಸಂಪಾದನೆ ಮಾಡಲು ಹೆಚ್ಚು ಅವಕಾಶಗಳು ಇವೆ. ಪುಸ್ತಕಗಳು ನಮಗೆ ಅಪಾರವಾದ ಜ್ಞಾನವನ್ನು ಕೊಡುತ್ತವೆ. ಇಂದು ಗೂಗಲ್, ವಿಕಿಪೀಡಿಯ ಮೂಲಕ ಕೂಡ ಹೆಚ್ಚು ಜ್ಞಾನ ಸಂಪಾದನೆ ಸಾಧ್ಯ ಆಗುತ್ತದೆ. ಏನಿದ್ದರೂ ನಾವು ಸಂಪಾದನೆ ಮಾಡಿದ ಜ್ಞಾನ ನಿರಂತರ ಹೊರಮುಖವಾಗಿ ಹರಿಯಲು ತೊಡಗಿದರೆ ಮಾತ್ರ ಆ ಜ್ಞಾನವು ನಮಗೆ ಒಂದು ಪ್ರಬಲ ಅಸ್ತ್ರ ಆದೀತು.
5. ನಮ್ಮ ಕೌಶಲಗಳು (Skills)
ಸ್ವ ಸಬಲೀಕರಣ ಎಂದು ನಾವು ಹೊರಡುವಾಗ ಇಂದು ಜ್ಞಾನವನ್ನು ಕೌಶಲಗಳು ಮೀರಿಸುತ್ತವೆ. ಅದರಲ್ಲಿ ಕೂಡ ಸಂವಹನ ಕೌಶಲ, ನಿರೂಪಣಾ ಕೌಶಲ, ವಿವಿಧ ಭಾಷಾ ಕೌಶಲಗಳು, ಯಾಂತ್ರಿಕ ಕೌಶಲಗಳು ಇಂದು ಜಗತ್ತನ್ನು ಆಳುತ್ತಿವೆ. ಅದರಲ್ಲಿಯೂ ಸಂವಹನ ಕೌಶಲವನ್ನು (Communication) ಕೌಶಲಗಳ ರಾಜ ಎಂದು ಕರೆಯುತ್ತಾರೆ.
6. ನಿಮ್ಮ ಸಂಬಂಧಗಳು (Relations)
ನಮ್ಮ ಸಂಬಂಧಗಳಲ್ಲಿ ಕೆಲವು ಸಂಬಂಧಗಳು ಕೇವಲ ಆಫಿಷಿಯಲ್ ಆಗಿರುತ್ತವೆ. ಇನ್ನೂ ಕೆಲವು ಕ್ಯಾಶುವಲ್ ಆಗಿರುತ್ತವೆ. ಕೆಲವೇ ಕೆಲವು ಸಂಬಂಧಗಳು ಭಾವನಾತ್ಮಕ ಆಗಿರುತ್ತವೆ. ನಮ್ಮ ಭಾವನೆಗಳ ಅತ್ಯಂತ ಒಳಗಿನ ವರ್ತುಲದಲ್ಲಿ ಕುಳಿತು ನಮಗೆ ಕನೆಕ್ಟ್ ಆದವರು ನಮಗೆ ಪಾಸಿಟಿವ್ ಎನರ್ಜಿ ಕೊಡುತ್ತಾರೆ.
7. ನಮ್ಮ ನಂಬಿಕೆಗಳು (Faiths)
ನಮ್ಮಲ್ಲಿ ಮುಖ್ಯವಾಗಿ ಎರಡು ವಿಧವಾದ ನಂಬಿಕೆಗಳು ಇರುತ್ತವೆ. ಒಂದು ನಮ್ಮ ಮೇಲೆ ಬೇರೆಯವರು ಆರೋಪಿಸಿರುವುದು (Induced). ಇನ್ನೊಂದು ನಾವಾಗಿ ಒಪ್ಪಿಕೊಂಡದ್ದು (Self accepted). ಅದರಲ್ಲಿ ನಾವು ಅರಿವಿನ ಮೂಲಕ ಒಪ್ಪಿಕೊಂಡ ನಂಬಿಕೆಗಳು ನಮಗೆ ದಾರಿದೀಪ ಆಗುತ್ತವೆ.
8. ನಮ್ಮ ನಿರ್ಧಾರಗಳು (Decisions)
ಗೊಂದಲದ ಮನಸ್ಸಿನವರು (Fluctuating minds) ನಿರ್ಧಾರ ತೆಗೆದುಕೊಳ್ಳಲು ಸೋಲುತ್ತಾರೆ. ಆದರೆ ಗಟ್ಟಿ ಇಚ್ಛಾಶಕ್ತಿ ಇರುವವರು ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಆ ನಿರ್ಧಾರವನ್ನು ಉಳಿಸಿಕೊಳ್ಳುತ್ತಾರೆ. ತುಂಬಾ ಭಾವನಾತ್ಮಕ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸೋಲುತ್ತವೆ ಅನ್ನುತ್ತದೆ ನನ್ನ ಅನುಭವ.
9. ನಮ್ಮ ಮಾರ್ಗದರ್ಶಕರು (Mentors)
ಜೀವನದ ಯಾವುದೇ ಹಂತದಲ್ಲಿ ಕೂಡ ನಮಗೆ ಮಾರ್ಗದರ್ಶಕರು ಬೇಕು. ಎಲ್ಲಾ ಹಂತಗಳಲ್ಲಿ ತಪ್ಪು ಮಾಡಿ ಕಲಿಯುವ ಕಲಿಕೆ ಒಳ್ಳೆಯದಲ್ಲ. ಹದಿಹರೆಯದಲ್ಲಿ ನಾವು ಹೆಚ್ಚು ಸೆಲ್ಫ್ ಎಕ್ಸ್‌ಪರಿಮೆಂಟ್ ಮಾಡಲು ಹೊರಡುತ್ತೇವೆ. ಆಗ ಸಹಜವಾದ ತಪ್ಪುಗಳು ನಡೆಯುತ್ತವೆ. ಆಗ ನಾವು ಹೆಚ್ಚು ಮೆಂಟರ್‌ಗಳ ಅಭಿಪ್ರಾಯಗಳನ್ನು ಮುಕ್ತವಾಗಿ ಸ್ವೀಕಾರ ಮಾಡಿ ಅನುಷ್ಟಾನ ಮಾಡಿಕೊಂಡರೆ ಗಟ್ಟಿಯಾಗುತ್ತಾ ಹೋಗುತ್ತೇವೆ.
10. ನಮ್ಮ ಸ್ಮಾರ್ಟ್ ಗುರಿಗಳು (Smart Goals)
ನಮ್ಮ ಯಶಸ್ಸಿನ ಪ್ರಯಾಣದಲ್ಲಿ ಮೈಲುಗಲ್ಲುಗಳಾಗಿ ನಿಲ್ಲುವುದು ನಮ್ಮ SMART ಆದ ಗುರಿಗಳು. S ಅಂದರೆ Specific, M ಅಂದರೆ Measurable, A ಅಂದರೆ Achievable, R ಅಂದರೆ Realistic , T ಅಂದರೆ Time Bound. ಅದರಲ್ಲಿ ಕೂಡ ಅಲ್ಪ ಕಾಲೀನ ಮತ್ತು ದೀರ್ಘ ಕಾಲೀನ ಎಂಬ ಎರಡು ವಿಧವಾದ ಗುರಿಗಳು ಇವೆ. ಗುರಿಗಳನ್ನು ಬರೆದಿಟ್ಟರೆ ಅವುಗಳನ್ನು ಸುಲಭದಲ್ಲಿ ತಲುಪಲು ಆಗುತ್ತದೆ.
11. ನಮ್ಮ ಮಾನಸಿಕ ಸ್ಥಿತಿ (Mindset)
ಸೋಲು ಅಥವಾ ಗೆಲುವನ್ನು ನಾವು ಹೇಗೆ ಸ್ವೀಕಾರ ಮಾಡುತ್ತೇವೆ ಅನ್ನುವುದು ನಮ್ಮ ಯಶಸ್ಸಿನ ಖಚಿತವಾದ ಅಂಶ. ಗೆಲುವು ನಮಗೆ ಅಹಂ ಕೊಡಬಹುದು. ಆದರೆ ಸೋಲು ನಮಗೆ ಅನುಭವವನ್ನು ಕೊಟ್ಟು ಒಳಗಿಂದ ಸ್ಟ್ರಾಂಗ್ ಮಾಡುತ್ತದೆ. ನಮ್ಮ ಯಾವುದೇ ಬೆಳವಣಿಗೆ ಒಳಗಿನಿಂದ ಹೊರಗೆ ಆಗಬೇಕು. ನಾವು ಬದುಕನ್ನು ಹೇಗೆ ನೋಡುತ್ತೇವೆ ಅನ್ನೋದರ ಮೇಲೆ ನಮ್ಮ ಯಶಸ್ಸು ಅಡಗಿದೆ.
12. ಆತ್ಮಜಾಗೃತಿ (Self Realisation)
ನಾನೇನು? ನನ್ನ ಜೀವನದ ಉದ್ದೇಶ ಏನು? ಅನ್ನುವುದನ್ನು ನಾವು ಆದಷ್ಟು ಬೇಗ ಅರ್ಥ ಮಾಡಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಅಮೆರಿಕಾದ ಸರ್ವಧರ್ಮ ಸಭೆಯಲ್ಲಿ ಭಾಷಣ ಮಾಡಿದ ನಂತರ ವಿವೇಕಾನಂದರ ಬದುಕಿನಲ್ಲಿ ಆದ ತಿರುವು ನಾವು ನೋಡಿದ್ದೇವೆ. ಅದಕ್ಕೆ ಕಾರಣ ಅವರಲ್ಲಿ ಆಗಿದ್ದ ಆತ್ಮಜಾಗೃತಿ. ಈ ಹಂತಕ್ಕೆ ತಲುಪಿದ ನಂತರ ನಾವು ಐಕಾನ್ ಆಗುತ್ತೇವೆ. ಅಲ್ಲಿಂದ ನಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯ ಆಗುವುದಿಲ್ಲ.
ಇದನ್ನೂ ಓದಿ: Raja Marga Column : ಹತ್ಯಾರೋಂ ಕಾ ಜವಾಬ್… ಶಾಸ್ತ್ರೀಜಿ ಗುಡುಗಿಗೆ ಪಾಕಿಸ್ತಾನ ನಡುಗಿತ್ತು!
ಭರತವಾಕ್ಯ
ನಾವು ಇವತ್ತು ಏನಾಗಿದ್ದೇವೆಯೋ ಅದಕ್ಕೆ ಕಾರಣ ನಮ್ಮ ಯೋಚನೆಗಳು ಮತ್ತು ಭಾವನೆಗಳು. ಇವೆರಡನ್ನೂ ಸರಿ ಮಾಡಿಕೊಂಡರೆ ನಮ್ಮ ಬದುಕು ತುಂಬಾ ಸುಂದರವಾಗುತ್ತದೆ. ಅಲ್ಲವೇ?