Site icon Vistara News

Raja Marga Column : ಮಕ್ಕಳು ಬಾಲ್ಯದಲ್ಲಿ ಎಂತಹ ಪುಸ್ತಕ ಓದಬೇಕು? ಹೇಗೆ ಓದಬೇಕು?

Book reading Habits in Children

ಕೈಗೆ ಮೊಬೈಲ್ ಬಂದ ನಂತರ ಮಕ್ಕಳು ಪುಸ್ತಕ ಓದುವುದು (Book reading habit ಕಡಿಮೆ ಆಗಿದೆ ಎನ್ನುವ ಮಾತನ್ನು ಬಹಳ ಮಂದಿ ಹೇಳುತ್ತಿದ್ದಾರೆ. ಅದು ಪೂರ್ತಿ ಸತ್ಯ ಅಲ್ಲ ಎಂದು ನಾನು ಹೇಳುತ್ತೇನೆ. ಇಂದು ಮೊಬೈಲ್‌ನ ಮೂಲಕ ಬರೆಯುವ ಮತ್ತು ಓದುವವರ ಸಂಖ್ಯೆಯು ತುಂಬಾ ಹೆಚ್ಚಿದೆ. ತಮಗೆ ಇಷ್ಟವಾದ ಪುಸ್ತಕಗಳ ಪಿಡಿಎಫ್ ಫೈಲ್‌ಗಳನ್ನು ಡೌನ್ಲೋಡ್ ಮಾಡಿಕೊಂಡು ಓದುವವರ ಸಂಖ್ಯೆ ಇಂದು ಹೆಚ್ಚಿದೆ. ಆದರೆ ಪುಸ್ತಕವನ್ನು ಓದುವ ಖುಷಿ ಮತ್ತು ಅನುಭವಗಳು ನಿಮಗೆ ಮೊಬೈಲ್ ಓದಿನಲ್ಲಿ (Reading in Mobile) ಸಿಗುವುದಿಲ್ಲ ಅನ್ನುವುದು ನೂರಕ್ಕೆ ನೂರು ನಿಜ!
ಹಾಗಿದ್ದರೆ ನಮ್ಮ ಮಕ್ಕಳು ಬಾಲ್ಯದಲ್ಲಿ
ಯಾಕೆ ಪುಸ್ತಕ ಓದಬೇಕು?
ಇತ್ತೀಚೆಗೆ ಪಾಠಪುಸ್ತಕ ಬಿಟ್ಟು ಬೇರೆ ಯಾವುದೇ ಪುಸ್ತಕವನ್ನು ಓದದ ಮಕ್ಕಳು ಇದ್ದಾರೆ. ಶಾಲೆಗಳಲ್ಲಿ ಗ್ರಂಥಾಲಯದ ಉಪಯೋಗ ಇಂದು ಕಡಿಮೆ ಆಗ್ತಾ ಇದೆ. ಹೆತ್ತವರ ಮತ್ತು ಶಿಕ್ಷಕರ ಒತ್ತಡಕ್ಕೆ ಮಕ್ಕಳು ಇಂದು ಪರೀಕ್ಷೆ, ‌ರ‍್ಯಾಂಕ್‌, ಗ್ರೇಡ್ ಇತ್ಯಾದಿಗಳಲ್ಲಿ ಪೂರ್ತಿಯಾಗಿ ಮುಳುಗಿ ಹೋಗಿದ್ದಾರೆ. ಈ ವ್ಯವಸ್ಥೆಯು ಹೃದಯಶೂನ್ಯವಾದ ಸಮಾಜವನ್ನು ನಿರ್ಮಿಸುವ ಅಪಾಯ ಇದೆ. (Raja Marga Column)

ಒಂದು ಪುಸ್ತಕ ಅಂದರೆ……….

ಅದು ಒಬ್ಬ ಲೇಖಕನ ಆತ್ಮ!
ಒಬ್ಬ ಲೇಖಕನ ಸಮಗ್ರ ಅಭಿವ್ಯಕ್ತಿ!
ಒಬ್ಬ ಲೇಖಕನ ಚಿಂತನೆ ಮತ್ತು ಮೌಲ್ಯಗಳ ಕಣಜ!
ಸುಜ್ಞಾನದ ನಿರಂತರವಾದ ಬೆಳಕು!
ಎಂದಿಗೂ ಬತ್ತಿಹೋಗದ ಅರಿವಿನ ಒರತೆ!
ನಮ್ಮ ವಿಕಸನದ ಅನನ್ಯ ಕೊಡುಗೆ!
ಅಕ್ಷರ ಜ್ಞಾನದ ದಾರಿದೀಪ!
ಮೌನ ಕ್ರಾಂತಿಯ ಹರಿಕಾರ!
ಜೀವನದ ಅನುಭವಗಳ ರಸಪಾಕ!
ಇನ್ನೂ ಏನೇನೋ…! ಮತ್ತೇನೋ….!

Panchatantra kathegalu

ಮಹಾ ಪುರುಷರ ಮೇಲೆ ಪುಸ್ತಕಗಳ ಪ್ರಭಾವ

ಒಂದೊಂದು ಪುಸ್ತಕವು ಮಹಾಪುರುಷರ ಜೀವನದಲ್ಲಿ
ಮಹಾ ತಿರುವು ತಂದುಕೊಟ್ಟ ಉದಾಹರಣೆಗಳು ಇವೆ.

ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಜಾನ್ ರಸ್ಕಿನ್ ಅವರು ಬರೆದ UNTO THE LAST ಪುಸ್ತಕ, ಲಿಯೋ ಟಾಲ್‌ಸ್ಟಾಯ್ ಬರೆದ WAR and PEACE ಪುಸ್ತಕ…… ಹೀಗೆ ಹತ್ತಾರು ಪ್ರಭಾವವನ್ನು ಉಲ್ಲೇಖ ಮಾಡಬಹುದು. ಜಗತ್ತಿನ ದಿಗ್ಗಜ ವ್ಯಕ್ತಿಗಳು ಒಂದಲ್ಲ ಒಂದು ಪುಸ್ತಕಗಳಿಂದ, ಒಂದಲ್ಲ ಒಂದು ಲೇಖಕರಿಂದ, ಪುಸ್ತಕಗಳಿಂದ ಪ್ರಭಾವಿತವಾದ ನೂರಾರು ಉದಾಹರಣೆಗಳು ನನ್ನ ಹತ್ತಿರ ಇವೆ.

ಅನನ್ಯ ಅನುಭೂತಿಗಾಗಿ ಓದು

ಒಂದೊಂದು ಪುಸ್ತಕದ ಓದುವಿಕೆಯು ನಮ್ಮನ್ನು ಅನಂತ ವಿಕಾಸದ ಕಡೆಗೆ ಕೈಹಿಡಿದು ಕರೆದುಕೊಂಡು ಹೋಗುತ್ತದೆ. ನಾವು ಒಂದೊಂದು ಪುಸ್ತಕವನ್ನು ಓದುವಾಗ ನಮಗೆ ಸಿಗುವ ಅನುಭೂತಿಗೆ ಬೆಲೆಯನ್ನು ಕಟ್ಟಲು ಸಾಧ್ಯವೇ ಇಲ್ಲ. ಪುಸ್ತಕದ ಓದುವಿಕೆ ನಮಗೆ ಕಟ್ಟಿಕೊಡುವ ಜ್ಞಾನವು ನಮ್ಮ ಭವಿಷ್ಯವನ್ನು ಗಟ್ಟಿ ಮಾಡುತ್ತ ಹೋಗುತ್ತದೆ. ಓದುವಿಕೆ ನಮ್ಮನ್ನು ಜೀವಂತವಾಗಿ ಇಡುತ್ತದೆ. ನಮ್ಮ ಚಿಂತನೆಗಳನ್ನು ಹರಿತ ಮಾಡುತ್ತದೆ. ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಮ್ಮ ಮಾತಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಣ್ಣ ಮಕ್ಕಳು ಯಾವ ರೀತಿಯ ಪುಸ್ತಕ ಓದಬೇಕು?

ಅವರವರ ಗ್ರಹಿಕೆಯ ಮಟ್ಟಕ್ಕೆ ಪೂರಕವಾದ, ಆಸಕ್ತಿಗೆ ಅನುಗುಣವಾದ ಪುಸ್ತಕವನ್ನು ಓದಿದರೆ ಮಾತ್ರ ಆ ಓದು ನಮಗೆ ಆನಂದವನ್ನು ಕೊಡುತ್ತದೆ. ಸಣ್ಣ ಮಕ್ಕಳು ಓದುವಿಕೆಯನ್ನು ಆರಂಭ ಮಾಡುವಾಗ ಅವರ ಕಲ್ಪನೆಯನ್ನು ವಿಕಸಿತ ಮಾಡುವ ಪುಸ್ತಕಗಳು ಬೇಕು. ಮಕ್ಕಳಿಗೆ ಅರ್ಥವಾಗುವ ಸರಳವಾದ ಭಾಷೆ ಮತ್ತು ನಿರೂಪಣೆ ಇರಬೇಕು. ಪುಸ್ತಕದ ಗಾತ್ರವು ಕಿರಿದಾಗಬೇಕು. ಪುಸ್ತಕದಲ್ಲಿ ಬಣ್ಣ ಬಣ್ಣದ ಚಿತ್ರಗಳು ತುಂಬಿದ್ದರೆ ಮಕ್ಕಳ ಓದು ಅದ್ಭುತ ಆಗುತ್ತದೆ.

ಪ್ರಾಣಿ ಪಕ್ಷಿಗಳ ಕತೆಗಳು ಸೂಕ್ತ!

ಸಣ್ಣ ಮಕ್ಕಳಿಗೆ ಪ್ರಾಣಿ ಪಕ್ಷಿಗಳ ಕಾಲ್ಪನಿಕ ಕತೆಗಳು ಹೆಚ್ಚು ಇಷ್ಟವಾಗುತ್ತವೆ. ಅದರಲ್ಲಿ ಕೂಡ ಕಲ್ಪನೆಯನ್ನು ಮೀರಿದ ಉತ್ಪ್ರೇಕ್ಷೆಯು ಇರಬೇಕು. ಅಂದರೆ ಎಲ್ಲರ ಪ್ರಾಣಿ, ಪಕ್ಷಿಗಳು ನಮ್ಮ ಹಾಗೆ ಮಾತಾಡಬೇಕು. ಬುದ್ಧಿವಂತ ಆದರೆ ಮೋಸ ಮಾಡುವ ನರಿ, ಬಾಯಾರಿದ ಕಾಗೆ, ಕುಣಿದಾಡುವ ನವಿಲು, ಇಂಪಾಗಿ ಹಾಡುವ ಕೋಗಿಲೆ, ಕಾಡಿನ ರಾಜನಾದ ಸಿಂಹ, ಘರ್ಜಿಸುವ ಹುಲಿರಾಯ, ಮುಗ್ಧವಾದ ಮೊಲ, ನಿಧಾನವೇ ಪ್ರಧಾನ ಆದ ಆಮೆ, ಚೈತನ್ಯದ ಚಿಲುಮೆ ಆದ ಜಿಂಕೆ, ದೈತ್ಯ ಗಾತ್ರದ ಆನೆ, ಬೆಳ್ಳಗಿನ ಮೋಡಗಳ ಹಾಗೆ ಇರುವ ಹಂಸ…. ಮೊದಲಾದ ಪಾತ್ರಗಳು ಮಗುವಿನ ಭಾವಲೋಕದಲ್ಲಿ ಅಳಿಸಲಾಗದ ಹೆಜ್ಜೆಗುರುತುಗಳನ್ನು ಉಂಟುಮಾಡುತ್ತವೆ.

ಒಂದಾನೊಂದು ಕಾಲದಲ್ಲಿ ಎಂದು ಆರಂಭ ಆಗುವ ಕತೆ

ವಿಷ್ಣು ಶರ್ಮ ಅವರು ಬರೆದ ಪಂಚತಂತ್ರದ ಕತೆಗಳು, ತೀವ್ರ ಕುತೂಹಲ ಕೆರಳಿಸುವ ವಿಕ್ರಮ ಬೇತಾಳನ ಕತೆಗಳು, ಕಥಾ ಸರಿತ್ಸಾಗರ, ಸುಭಾಷಿತದ ಕತೆಗಳು, ತೆನಾಲಿ ರಾಮಕೃಷ್ಣನ ಕತೆಗಳು, ಅಕ್ಬರ್ ಬೀರಬಲ್ಲರ ಕತೆಗಳು, ಬುದ್ಧನ ಜಾತಕದ ಕತೆಗಳು, ಕಾಕೊಲುಕೀಯ ……….ಇವೆಲ್ಲವೂ ಸಣ್ಣಮಕ್ಕಳ ಬಾಲ್ಯವನ್ನು ಶ್ರೀಮಂತವಾಗಿ ಮಾಡುತ್ತವೆ.

ಆ ರೀತಿಯ ಮಕ್ಕಳ ಓದಿಗೆ ಪೂರಕವಾದ ಮತ್ತು ನನ್ನ ಬಾಲ್ಯವನ್ನು ಶ್ರೀಮಂತ ಮಾಡಿದ ಚಂದಮಾಮ, ಬಾಲಮಿತ್ರ, ಗೊಂಬೆಮನೆ, ಚಂಪಕ ಮೊದಲಾದ ವಾರ ಮತ್ತು ಮಾಸಪತ್ರಿಕೆಗಳು ಈಗ ನಮ್ಮ ಮಕ್ಕಳ ಕೈಗೆ ಸಿಗ್ತಾ ಇಲ್ಲ ಅನ್ನುವ ದುಃಖ ನನಗೆ ಇದೆ.

ಪಂಚತಂತ್ರದ ಕಥೆಗಳು ಹುಟ್ಟಿದ್ದು ಹೇಗೆ?

ಸಾವಿರಾರು ವರ್ಷಗಳ ಹಿಂದೆ ಒಬ್ಬ ಅರಸನಿಗೆ ಮೂರು ಜನ ದಡ್ಡ ಮಕ್ಕಳು ಹುಟ್ಟಿದ್ದರು. ಅದರಿಂದಾಗಿ ಅರಸನಿಗೆ ತುಂಬಾ ಆತಂಕ ಉಂಟಾಯಿತು. ದಡ್ಡ ಮಕ್ಕಳನ್ನು ಮುಂದೆ ತನ್ನ ಉತ್ತರಾಧಿಕಾರಿ ಮಾಡುವುದು ಹೇಗೆ? ಎಂಬ ಆತಂಕ ಅರಸನದ್ದು! ಆಗ ಅರಸ ಒಂದು ಬಹಿರಂಗವಾದ ಸವಾಲು ಹಾಕಿ ಡಂಗುರವನ್ನು ಸಾರುತ್ತಾನೆ. ತನ್ನ ಮೂವರು ದಡ್ಡ ಮಕ್ಕಳನ್ನು ಯಾರಾದರೂ ಬುದ್ಧಿವಂತರನ್ನಾಗಿ ಮಾಡಿದರೆ ಅರ್ಧ ರಾಜ್ಯವನ್ನು ಕೊಡುವೆ ಅನ್ನುವುದು ಆ ಸವಾಲು!

ಆ ಸವಾಲನ್ನು ಮೊದಲು ಸ್ವೀಕಾರ ಮಾಡಿದವನು ವಿಷ್ಣು ಶರ್ಮ ಎಂಬ ವಿದ್ವಾಂಸ. ಆತನು ಅರಸನ ಅನುಮತಿ ಪಡೆದು ಅವನ ಮಕ್ಕಳನ್ನು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾನೆ. ಆ ಆಶ್ರಮವು ದಟ್ಟವಾದ ಕಾಡಿನಲ್ಲಿ ಇತ್ತು. ಆಶ್ರಮದ ಎದುರು ಒಂದು ಆಲದ ಮರ. ಅದರ ಬುಡದಲ್ಲಿ ಒಂದು ಕಟ್ಟೆ.

ವಿಷ್ಣು ಶರ್ಮನು ಅರಸನ ಮಕ್ಕಳನ್ನು ಆ ಕಟ್ಟೆಯ ಮೇಲೆ ಕೂರಿಸಿ ಅವರಿಗೆ ದಿನಕ್ಕೊಂದು ಪ್ರಾಣಿ, ಪಕ್ಷಿಗಳ ಕತೆಯನ್ನು ಹೇಳುತ್ತಾ ಹೋಗುತ್ತಾನೆ. ಬಾಯಾರಿದ ಕಾಗೆ, ಮೋಸ ಮಾಡುವ ನರಿ, ಉಪವಾಸ ಮಾಡುವ ಮಂಗಗಳು, ಸಿಂಹ ಮತ್ತು ಇಲಿಯ ಕತೆ, ವೃದ್ದ ಬ್ರಾಹ್ಮಣನ ಕತೆ…..ಇವೆಲ್ಲವೂ ವಿಷ್ಣು ಶರ್ಮ ಸೃಷ್ಟಿಸಿದ ಕತೆಗಳೇ ಆಗಿವೆ. ಕತೆಯು ಪೂರ್ತಿ ಆದ ನಂತರ ಆ ಕತೆಗಳ ನೀತಿಯನ್ನು ಅರಸನ ಮಕ್ಕಳ ಮೂಲಕ ಹೇಳಿಸುತ್ತ ಆ ಮಕ್ಕಳು ಕೊನೆಗೆ ಬುದ್ಧಿವಂತರಾದರು ಅನ್ನುವುದು ಆ ಕತೆಗಳ ಶಕ್ತಿ! ಪಂಚ ತಂತ್ರದಲ್ಲಿ ಆ ರೀತಿಯ ಸಾವಿರಾರು ಕತೆಗಳು ಇವೆ. ಪಂಚತಂತ್ರವು ಜಗತ್ತಿನ ಹತ್ತಾರು ಭಾಷೆಗಳಿಗೆ ಅನುವಾದ ಆಗಿದೆ ಅನ್ನುವುದು ಹೆಗ್ಗಳಿಕೆ.

ವಿದೇಶದಲ್ಲಿ ಕೂಡ ಮಕ್ಕಳ ಕತೆಗಳು ಇವೆ!

ಅದೇ ರೀತಿಯಲ್ಲಿ ವಿದೇಶದ ಕತೆಗಳನ್ನು ಪರಿಗಣಿಸಿದಾಗ ಈಸೋಪನ ಕತೆಗಳು ಒಂದು ಅದ್ಭುತವಾದ ಸೃಷ್ಟಿ. ಅದರಲ್ಲಿ ಕೂಡ ಹೆಚ್ಚು ಬರುವುದು ಪ್ರಾಣಿ ಪ್ರಪಂಚದ ಕತೆಗಳೇ! ಆದರೆ ಈ ಕತೆಗಳ ಕೊನೆಯಲ್ಲಿ ನೀತಿ ಅಥವಾ ಮಾರಲ್ ಎಂದು ಪ್ರತ್ಯೇಕವಾಗಿ ಈಸೋಪನು ಹೇಳಲು ಹೋಗುವುದಿಲ್ಲ. ಯಾಕೆಂದರೆ ಸಣ್ಣ ಮಕ್ಕಳಿಗೆ ಮಾರಲ್ ಹೇಳುವ ಅಗತ್ಯ ಇಲ್ಲ. ಅವರಿಗೆ ಮಾರಲ್ ಗ್ರಹಿಸುವ ಶಕ್ತಿ ಇದೆ ಎಂದು ಈಸೋಪ ಹೇಳುತ್ತಾನೆ.

ಅದೇ ರೀತಿಯಲ್ಲಿ ಸಿಂದಬಾದನ ಯಾತ್ರೆಗಳು, ಅರೇಬಿಯನ್ ನೈಟ್ಸ್, ಸೈಕ್ಲೋಪ್ ಮತ್ತು ಯುಲಿಸಿಸ್ ಕತೆಗಳು, ಹರ್ಕ್ಯುಲಿಸ್ ಕತೆಗಳು, ಪಿಗ್ಮಿ ಮತ್ತು ಲಿಲಿ ಪುಟ್ ಕತೆಗಳು, ಆಲಿಬಾಬ ಮತ್ತು ನಲ್ವತ್ತು ಕಳ್ಳರು …………..ಇವು ಕೂಡ ಮಕ್ಕಳಿಗಾಗಿ ಬರೆದ ಅದ್ಭುತವಾದ ರಮ್ಯಕತೆಗಳು. ಅವುಗಳು ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ವೃದ್ಧಿಸುತ್ತವೆ ಮತ್ತು ಸಾಹಸೀ ಪ್ರವೃತ್ತಿಯನ್ನು ಹೆಚ್ಚು ಮಾಡುತ್ತವೆ. ಈ ರೀತಿಯ ಪುಸ್ತಕಗಳನ್ನು ಓದುವ ಕಾರಣ ಮಕ್ಕಳ ಬಲ ಮೆದುಳು ಚುರುಕಾಗಿ ಅವರು ಕ್ರಿಯೇಟಿವ್ ಆಗುತ್ತಾರೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ. ಮಕ್ಕಳ ಕತೆಗಳನ್ನು ಬರೆಯುವುದು ಕಾದಂಬರಿ ಬರೆಯುವುದಕ್ಕಿಂತ ತುಂಬಾ ಕಷ್ಟ ಎಂದು ಶಿವರಾಮ ಕಾರಂತರು ಹೇಳಿದ್ದು ನನಗೆ ನೆನಪಿದೆ.

ಹುಚ್ಚು ಹಿಡಿಸುವ ‘ಭಾರತ ಭಾರತಿ’ ಪುಸ್ತಕಗಳು!

ನಾನು ಬಾಲ್ಯದಲ್ಲಿ ಹೆಚ್ಚು ಓದಿದ್ದು ರಾಷ್ಟ್ರೋತ್ಥಾನ ಪರಿಷತ್ ಪ್ರಕಟಿಸಿರುವ ಸಣ್ಣ ಗಾತ್ರದ ‘ಭಾರತ ಭಾರತಿ’ ಪುಸ್ತಕಗಳು! ಮಕ್ಕಳ ಓದಿನ ವೇಗದಲ್ಲಿ ಒಂದೆರಡು ಘಂಟೆಯಲ್ಲಿ ಓದಿ ಮುಗಿಸುವ ಪುಸ್ತಕಗಳು ಅವು. ಅದರಲ್ಲಿ ಮಹಾಪುರುಷರ ಬದುಕಿನ ಕತೆಗಳು, ಸ್ಫೂರ್ತಿ ತುಂಬುವ ಘಟನೆಗಳು, ಅವರ ಬದುಕಿನ ಮೌಲ್ಯಗಳು ಅಡಕವಾಗಿರುತ್ತವೆ. ಅವುಗಳನ್ನು ಓದುವಾಗ ಮಕ್ಕಳು ಪಡೆಯುವ ಖುಷಿಯು ನಿಜಕ್ಕೂ ಅದ್ಭುತವಾದದ್ದು. ಓದುತ್ತ ಹೋದ ಹಾಗೆ ಮಹಾಪುರುಷರ ಬದುಕಿನ ಮೌಲ್ಯಗಳು ನಿಧಾನವಾಗಿ ಮಕ್ಕಳ ಒಳಗೆ ಇಳಿದುಬಿಡುತ್ತವೆ.

ಪ್ರೈಮರಿ ಶಾಲೆಯ ಟೀಚರ್ ಆದ ನನ್ನ ಅಮ್ಮ ನನಗೆ ಇಂತಹ ನೂರಾರು ಪುಸ್ತಕಗಳನ್ನು ಕೊಟ್ಟು ಬಾಲ್ಯದಲ್ಲಿ ಓದಿಸಿದ್ದು ನನ್ನ ಭಾವಕೋಶವನ್ನು ಶ್ರೀಮಂತ ಮಾಡಿದ್ದವು.

ಇದನ್ನೂ ಓದಿ: Raja Marga Column : ಅಂದು ಕಪಿಲ್ ದೇವ್ ಮೈಯಲ್ಲಿ ಆವೇಶ ಬಂದಿತ್ತು‌, ಥೇಟ್ ಕಾಂತಾರ ಸ್ಟೈಲಲ್ಲಿ!

ಮಕ್ಕಳು ಪುಸ್ತಕಗಳನ್ನು ಹೇಗೆ ಓದಬೇಕು?

ಅಂತಹ ಪುಸ್ತಕಗಳನ್ನು ಓದಲು ಇದೇ ಹೊತ್ತು ಎಂದು ನಿಗದಿ ಮಾಡುವುದು ಕಷ್ಟ. ಆದರೂ ಬೆಳಗಿನ ಹೊತ್ತು ಅಥವಾ ಸಂಜೆ ಹೊತ್ತು ಪುಸ್ತಕಗಳ ಓದಿಗೆ ಪ್ರಶಸ್ತ. ಸಣ್ಣ ಪುಸ್ತಕಗಳು ಆದ್ದರಿಂದ ಒಂದು ಓದಿನಲ್ಲಿಯೇ ಮುಗಿದು ಹೋಗುತ್ತವೆ. ಗಟ್ಟಿಯಾಗಿ ಓದುವುದಕ್ಕಿಂತ ಮೌನವಾಗಿ ಓದುವುದು ಹೆಚ್ಚು ಪ್ರಯೋಜನಕಾರಿ. ಓದುತ್ತ ಹೋದಂತೆ ಮುಖ್ಯವಾದ ಅಂಶಗಳನ್ನು ಒಂದು ಪುಸ್ತಕದಲ್ಲಿ ಬರೆಯುವ ಅಭ್ಯಾಸವನ್ನು ಹೆತ್ತವರು ಮಕ್ಕಳಿಗೆ ಮಾಡಿಸಿದರೆ ಇನ್ನೂ ಅದ್ಭುತ!

ಅದೇ ಕತೆಗಳನ್ನು ಹೆತ್ತವರು, ಶಿಕ್ಷಕರು ಅಥವಾ ಅಜ್ಜ ಮತ್ತು ಅಜ್ಜಿಯರು ಮೆದುವಾದ ಧ್ವನಿಯಲ್ಲಿ ಮಕ್ಕಳ ಮುಂದೆ ಓದಿ ಹೇಳಿದರೆ ಅದರ ಇಂಪ್ಯಾಕ್ಟ್ ಸಾವಿರ ಪಟ್ಟು ಹೆಚ್ಚಾಗುತ್ತದೆ. ಸ್ವಲ್ಪ ಧ್ವನಿಯ ಏರಿಳಿತ ಮತ್ತು ಸಹಜ ಮುಖದ ಭಾವನೆಗಳ ಮೂಲಕ ಕತೆಗಳನ್ನು ಹೇಳಿದರೆ ಅದರ ಸ್ವಾರಸ್ಯವು ಇನ್ನೂ ಹೆಚ್ಚುತ್ತದೆ. ಅದನ್ನು ವಿಡಿಯೋಗಳ ಮೂಲಕ ನೋಡಿದರೆ ಮಕ್ಕಳ ಮೇಲೆ ಇನ್ನೂ ಹೆಚ್ಚು ಪರಿಣಾಮ ಆಗುತ್ತದೆ. ವಾಲ್ಟ್ ಡಿಸ್ನಿ ನಿರ್ಮಿಸಿದ ಡೊನಾಲ್ಡ್ ಡಕ್ ಮತ್ತು ಮಿಕ್ಕಿ ಮೌಸ್ ಕಾರ್ಟೂನ್ ಸರಣಿಯು ಜನಪ್ರಿಯ ಆಗಲು ಕಾರಣವೇ ಅದು!
ನಿಮ್ಮ ಮಕ್ಕಳು ಓದಲು ಪ್ರೋತ್ಸಾಹಿಸಿ ಎನ್ನುವುದೇ ಭರತ ವಾಕ್ಯ.

Exit mobile version