Raja Marga Column : ಒಂದು ಮುಗ್ಧ ಮಗುವು (Innocent Child) ಬೆಳೆಯುತ್ತ ಹೋದಂತೆ ಹೆತ್ತವರ ನೆಗೆಟಿವ್ ಮಾತು ಮತ್ತು ವರ್ತನೆಗಳು ಮಕ್ಕಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎಂದು ಹಿಂದಿನ ಅಂಕಣದಲ್ಲಿ ಬರೆದಿದ್ದೆ. ಇಂದು ಅದರ ಮುಂದುವರಿದ ಭಾಗದಲ್ಲಿ ಮಗುವಿನ ವಿವಿಧ ವ್ಯಕ್ತಿತ್ವಗಳು (Personalities of Child) ರೂಪುಗೊಳ್ಳುವ ರೀತಿಯನ್ನು ಬರೆಯುತ್ತಾ ಹೋಗುತ್ತೇನೆ. ಯಾವ ರೀತಿಯ ಮಗು ರೂಪುಗೊಳ್ಳಬೇಕು (How should a child evolve?) ಎಂದು ನಿರ್ಧಾರ ಮಾಡುವುದು ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿ (Responsibilities of teachers and parents) ಎಂದು ಸಂಶೋಧನೆಗಳು ಹೇಳುತ್ತವೆ.
Raja Marga Column : ಇದರಲ್ಲಿ ನಿಮ್ಮ ಮಗುವು ಯಾವ ಕೆಟಗರಿಗೆ ಸೇರುತ್ತದೆ?
1. ಅಡಾಪ್ಟೆಡ್ ಮಗು- Adapted Child
ಅಪ್ಪ, ಅಮ್ಮ ಕೀ ಕೊಟ್ಟರೆ ಅಳುವ, ಕೀ ಕೊಟ್ಟರೆ ನಗುವ ಮಗು ಇದು! ನಿಲ್ಲು ಅಂದ್ರೆ ನಿಲ್ಲುತ್ತದೆ, ಕೂರು ಅಂದರೆ ಕೂರುತ್ತದೆ. ಈ ಮಗುವಿಗೆ ಸ್ವಂತವಾದ ಭಾವನೆಗಳು ಇರುವುದಿಲ್ಲ!
‘ನಮ್ಮ ಮಗು ನಾವು ಹಾಕಿದ ಯಾವ ಗೆರೆಯನ್ನು ಕೂಡ ದಾಟುವುದಿಲ್ಲ. ಒಂದು ಕಡೆ ಕುಳಿತುಕೊಳ್ಳಲು ಹೇಳಿದರೆ ಅಲ್ಲಿಯೇ ಕೂತಿರುತ್ತದೆ!’ ಎಂದು ಪದೇಪದೆ ಹೇಳುವ ಪೋಷಕರು ಈ ರೀತಿಯ ಮಗುವನ್ನು ರೂಪಿಸುತ್ತಾರೆ. ಅಪ್ಪ ಅಥವಾ ಅಮ್ಮ ಹೆಚ್ಚು ಡಾಮಿನೇಟ್ ಮಾಡಿದರ ಪರಿಣಾಮ ಇಂತಹ ಮಗುವು ರೂಪುಗೊಳ್ಳುತ್ತದೆ. ನನ್ನ ಮಗು ನಾನು ಹೇಳಿದ ಹಾಗೆಯೇ ಕೇಳುತ್ತದೆ ಅನ್ನುವ ಪೋಷಕರ ಮಾತು ಮುಂದೆ ಆ ಮಗುವಿನಲ್ಲಿ ಹಲವು ವ್ಯಕ್ತಿತ್ವ ದೋಷಗಳನ್ನು ಉಂಟುಮಾಡಬಹುದು.
2. ಸೃಜನಶೀಲ ಮಗು – Creative Child
ಬಾಲ್ಯದಲ್ಲಿ ಹೆತ್ತವರಿಂದ ಹೆಚ್ಚು ವೈಚಾರಿಕ ಸ್ವಾತಂತ್ರ್ಯವನ್ನು ಪಡೆದ ಮಗುವು ಮುಂದೆ ಕ್ರಿಯೇಟಿವ್ ಮಗು ಆಗುತ್ತದೆ! ಈ ಮಗುವು ಸ್ವಂತ ನಿರ್ಧಾರವನ್ನು ಕೈಗೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ ಮತ್ತು ತುಂಬಾನೇ ಸೃಜನಶೀಲವಾಗಿ ಯೋಚನೆ ಮಾಡುತ್ತದೆ. ಹೊಸ ಹೊಸ ಐಡಿಯಾಗಳನ್ನು ಹುಟ್ಟು ಹಾಕುತ್ತದೆ. ಇದು ನಿಜವಾಗಿಯೂ ಗಿಫ್ಟೆಡ್ ಚೈಲ್ಡ್ ಆಗಿರುತ್ತದೆ!
ಅದು ಬಲ ಮೆದುಳಿನಿಂದ ಯೋಚನೆಗಳನ್ನು ಮಾಡುವ ಕಾರಣ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತದೆ. ಹೆತ್ತವರು ತುಂಬಾ ತಾಳ್ಮೆಯಿಂದ ಉತ್ತರ ನೀಡಿದರೆ ಅಥವಾ ಉತ್ತರವನ್ನು ತಾನೇ ಪಡೆಯಲು ಮಗುವಿಗೆ ಸಪೋರ್ಟ್ ಮಾಡಿದರೆ ಆ ಮಗುವು ಜಗತ್ತನ್ನು ಗೆಲ್ಲುತ್ತದೆ.
ಇದನ್ನೂ ಓದಿ : Raja Marga Column : ಪೋಷಕರೇ, ಮಕ್ಕಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
3. ಸ್ವಾವಲಂಬಿ ಮಗು- Self Dependent Child
ಬಾಲ್ಯದಿಂದಲೂ ತನ್ನ ಯೋಚನೆಗಳನ್ನು ಅಪ್ಲೈ ಮಾಡಲು ಸಪೋರ್ಟ್ ಪಡೆದ ಮಗುವು ಮುಂದೆ ಸೆಲ್ಫ್ ಡಿಪೆಂಡೆಂಟ್ ಮಗು ಆಗುತ್ತದೆ. ಈ ಮಗುವಿನ ಆತ್ಮವಿಶ್ವಾಸವು ಉನ್ನತ ಮಟ್ಟದಲ್ಲಿ ಇರುತ್ತದೆ ಮತ್ತು ಅದರ ನಿರ್ಧಾರಗಳು ಹೆಚ್ಚು ಪ್ರಾಕ್ಟಿಕಲ್ ಆಗಿರುತ್ತವೆ.
ಆರಂಭದಲ್ಲಿ ತಪ್ಪುಗಳನ್ನು ಮಾಡಿ ಪಾಠ ಕಲಿಯುವ ಮಗು ಮುಂದೆ ಸ್ವಯಂ ಕಲಿಕೆಯನ್ನು ಮಾಡುತ್ತದೆ. ತಮ್ಮ ಮಕ್ಕಳ ಅನುದೇಶಿತ ತಪ್ಪುಗಳನ್ನು ಕ್ಷಮಿಸುವ ಮತ್ತು ತಪ್ಪುಗಳನ್ನು ಪ್ರೀತಿಯಿಂದಲೆ ತಿದ್ದುವ ಪೋಷಕರು ಇಂತಹ ಮಗುವನ್ನು ರೂಪಿಸುತ್ತಾರೆ. ಇದು ಕೂಡ ಮುಂದೆ ಜಗತ್ತನ್ನೇ ಗೆಲ್ಲುವ ಮಗು.
4.ಭಾವನಾತ್ಮಕ ಮಗು- Emotional Child
ಬಾಲ್ಯದಲ್ಲಿ ಅತಿಯಾದ ಹೆತ್ತವರ ಪ್ರೀತಿ ಮತ್ತು ಕಾಳಜಿ ಪಡೆದ ಮಗು ಮುಂದೆ ಭಾವನಾತ್ಮಕ ಮಗು ಆಗಿ ರೂಪುಗೊಳ್ಳುತ್ತದೆ. ಸಣ್ಣ ಸಣ್ಣ ಕಾರಣಕ್ಕೆ ಪದೇಪದೆ ಅಳುವುದು ಮತ್ತು ನೋವು ಪಟ್ಟುಕೊಳ್ಳುವುದು ಅದರ ನೇಚರ್ ಆಗಿಬಿಡುತ್ತದೆ. ಎಲ್ಲವನ್ನೂ ಭಾವನಾತ್ಮಕ ಆಗಿಯೇ ತೆಗೆದುಕೊಳ್ಳುವ ಮಗುವು ಪ್ರಾಕ್ಟಿಕಲ್ ಆಗಿ ಬದುಕುವುದನ್ನು ಕಲಿಯುವ ಹೊರತು ಮುಂದೆ ಸಕ್ಸಸ್ ಪಡೆಯುವುದಿಲ್ಲ. ಭಾವನೆಗಳು ಖಂಡಿತವಾಗಿಯು ಮುಖ್ಯ! ಆದರೆ ಪ್ರಾಕ್ಟಿಕಲ್ ಜಗತ್ತಿನಲ್ಲಿ ಮಗು ಪ್ರಾಕ್ಟಿಕಲ್ ಆಗಿ ಬದುಕುವುದು ಅದಕ್ಕಿಂತಲೂ ಮುಖ್ಯ!
5. ಅತಿ ಕ್ರಿಯಾಶೀಲ ಮಗು- Hyper Active Child
ಅತಿಯಾಗಿ ತಂಟೆಯನ್ನು ಮಾಡುವ ಮತ್ತು ಭಾವನೆಗಳ ಮೇಲೆ ಒಂದಿಷ್ಟೂ ನಿಯಂತ್ರಣ ಇಲ್ಲದ ಮಗು ಇದು. ಪ್ರತೀ ಮಗುವಿನಲ್ಲಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಇದ್ದೇ ಇರುತ್ತವೆ. ಆ ಚಟುವಟಿಕೆಗಳು ಹೊರಬರಲು ಸರಿಯಾದ ಚಾನೆಲ್ ಸಿಗದೆ ಹೋದರೆ ಆ ಮಗು ತಂಟೆ ಮಾಡಲು ಆರಂಭ ಮಾಡುತ್ತದೆ.
ತನ್ನ ಮೇಲೆ ಹೆತ್ತವರ ಗಮನವು ಕಡಿಮೆ ಆಗ್ತಾ ಇದೆ ಎಂಬ ಭಾವನೆ ಮೂಡಿದ ಹಾಗೆ ಮಗುವು ಇನ್ನೂ ಹೆಚ್ಚು ತಂಟೆ ಮಾಡುತ್ತದೆ! ಬಾಲ್ಯದಲ್ಲಿಯೇ ಇದನ್ನು ಸರಿಪಡಿಸದೇ ಹೋದರೆ ಈ ಕೆಟಗರಿಯ ಮಗು ಮುಂದೆ ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಅತಿಯಾದ ಕ್ರಿಯಾಶೀಲತೆ ಇರುವ ಮಗುವನ್ನು ಪೋಷಣೆ ಮಾಡಲು ಹೆತ್ತವರಿಗೆ ಹೆಚ್ಚು ತಾಳ್ಮೆ ಬೇಕು. ಪ್ರೋತ್ಸಾಹದ ವಾತಾವರಣದಲ್ಲಿ ಅಂತಹ ಮಗುವನ್ನು ಸದಾ ಕಾಲ ಎಂಗೇಜ್ ಆಗಿ ಇಟ್ಟುಕೊಳ್ಳುವುದು ಸುಲಭದ ಕೆಲಸ ಅಲ್ಲ.
6. ನಾಯಕತ್ವದ ಮಗು- Leadership Child
ಮೌಲ್ಯಗಳನ್ನು ಪ್ರತೀ ಮಗುವು ಅನುಕರಣೆಯಿಂದ ಮತ್ತು ನಿರಂತರ ಅಧ್ಯಯನಗಳಿಂದ ಪಡೆಯುತ್ತದೆ. ತನ್ನದೇ ವಯೋಮಿತಿಯ ಮಕ್ಕಳ ಗುಂಪಿನಲ್ಲಿ ಒಂದು ಮಗು ಇರುವಾಗ ಅದರ ನಡವಳಿಕೆಯನ್ನು ಗಮನಿಸುವುದು ತುಂಬಾ ಮುಖ್ಯ. ಆಗ ಅದು ಬೇರೆಯವರ ಮೇಲೆ ಬೀರುವ ಹಾಗೂ ಬೇರೆಯವರಿಂದ ಪಡೆಯುವ ಪ್ರಭಾವಗಳನ್ನು ಸ್ವಲ್ಪ ಮಾನಿಟರ್ ಮಾಡಿದರೆ ಆ ಮಗು ಮುಂದೆ ಒಳ್ಳೆಯ ನಾಯಕ ಆಗುತ್ತದೆ.
ಇಲ್ಲಿ ಮಗುವು ಸ್ವತಂತ್ರವಾಗಿ ತೆಗೆದುಕೊಳ್ಳುವ ಸ್ವಯಂ ನಿರ್ಧಾರಗಳನ್ನು ಪೋಷಕರು ಪ್ರೋತ್ಸಾಹಿಸುವುದು ತುಂಬಾ ಮುಖ್ಯ. ಅಷ್ಟೇ ಮುಖ್ಯ ಆದದ್ದು ಮಕ್ಕಳು ತನ್ನ ವಯಸ್ಸಿನ ಇತರ ಮಕ್ಕಳ ಜೊತೆ ಬೆರೆಯುವುದು. ಅವರ ಜೊತೆಗೆ ಹೋಗಬೇಡ, ಇವರ ಜೊತೆಗೆ ಹೋಗಬೇಡ ಅಂತ ಪೋಷಕರು ಬೇಲಿ ಹಾಕುತ್ತಾ ಹೋದರೆ ಆ ಮಗುವಿನ ನಾಯಕತ್ವದ ಗುಣಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.
7. ಬುದ್ಧಿವಂತ ಮಗು – Intelligent Child
ಹಿಂದಿನ ಕಾಲದಲ್ಲಿ ಚಂದವಾಗಿ ಬಾಯಿಪಾಠವನ್ನು ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುವ ಮಗುವನ್ನು ಬುದ್ಧಿವಂತ ಮಗು ಅನ್ನುತ್ತಿದ್ದರು. ನನ್ನ ಪ್ರಕಾರ ಮಾರ್ಕ್ಸ್ ತೆಗೆದುಕೊಳ್ಳುವುದು ಮಗುವಿನ ಪ್ರತಿಭೆಯ ಭಾಗ. ಆದರೆ ಅದೊಂದೇ ಪ್ರತಿಭೆ ಅಲ್ಲ.
ತಾನು ಕಲಿತ ಅಂಶಗಳನ್ನು ಅಪ್ಲೈ ಮಾಡುವ ಮಗುವೇ ಈಗ ಬುದ್ಧಿವಂತ ಮಗು ಎಂದು ತಜ್ಞರು ಗುರುತಿಸುತ್ತಾರೆ. ತಾನು ಕಲಿತದ್ದನ್ನು ತನ್ನ ಜೀವನದಲ್ಲಿ ಅದು ಎಷ್ಟು ಅನ್ವಯ ಮಾಡಿಕೊಳ್ಳುತ್ತದೆ ಅನ್ನುವುದು ನಿಜವಾದ ಬುದ್ಧಿವಂತಿಕೆ. ಗಣಿತ ಮತ್ತು ವಿಜ್ಞಾನ ಸಮಸ್ಯೆಗಳನ್ನು ಬಿಡಿಸುವಾಗ ವೇಗ ಮತ್ತು ನಿಖರತೆಯನ್ನು ಹೊಂದಿರುವ ಮಗು ಖಂಡಿತವಾಗಿ ಬುದ್ಧಿವಂತ ಮಗು ಆಗಿರುತ್ತದೆ. ಶಾಲೆಯಲ್ಲಿ ಯಾಂತ್ರಿಕ, ನೀರಸ ಕೆಲಸ (ಡ್ರಿಲ್ ವರ್ಕ್)ಗಳನ್ನು ಮಾಡಿಸುವುದರಿಂದ ಅಥವಾ ಹೆಚ್ಚು ಬಾಯಿಪಾಠವನ್ನು ಮಾಡಿಸುವುದರಿಂದ ಮಗುವಿನ ಬುದ್ಧಿವಂತಿಕೆ ಹಿಂದೆ ಬೀಳುತ್ತದೆ.
8. ನ್ಯಾಚುರಲ್ ಮಗು- Natural Child
ಈ ಮಗುವು ನಿಜವಾಗಿಯೂ ಅದ್ಭುತ. ತನ್ನ ವಯಸ್ಸಿಗೆ ಸರಿಯಾಗಿ ಮುಗ್ಧತೆ ಹೊಂದಿರುವ ಮಗು ಅದು. ಆ ಮುಗ್ಧತೆಯ ನಿಜವಾಗಿಯೂ ಒಂದು ಅದ್ಭುತವಾದ ಮೌಲ್ಯ ಆಗಿರುತ್ತದೆ. ಆ ಮಗುವಿನ ಮಾತು, ನಡವಳಿಕೆ ಮತ್ತು ವರ್ತನೆಗಳು ಹೆಚ್ಚು ಸಹಜವಾಗಿರುತ್ತದೆ. ತನ್ನ ಮನಸ್ಸಿನ ಭಾವನೆಗಳನ್ನು ಅತ್ಯಂತ ಸಹಜವಾಗಿ ಅಭಿವ್ಯಕ್ತಿ ಮಾಡುವ ಮಗು ಮುಂದೆ ಹೆಚ್ಚು ಯಶಸ್ಸು ಪಡೆಯುತ್ತದೆ.
ಅದರ ಕಲಿಕೆಯಲ್ಲಿ ಹೆಚ್ಚು ಪ್ರಾಮಾಣಿಕತೆ ಇರುತ್ತದೆ. ಆ ಮಗುವು ಎಲ್ಲರನ್ನೂ ಪ್ರೀತಿ ಮಾಡುತ್ತದೆ ಮತ್ತು ಅದಕ್ಕೆ ಎಲ್ಲರ ಪ್ರೀತಿಯೂ ಬೇಕು. ಅಂತಹ ಮಗುವನ್ನು ಅತ್ಯಂತ ಸಹಜವಾದ ಮತ್ತು ಒತ್ತಡ ಇಲ್ಲದ ವಾತಾವರಣದಲ್ಲಿ ಇರುವ ಹಾಗೆ ನೋಡಿಕೊಂಡರೆ ಅದು ಕೂಡ ಗಿಫ್ಟೆಡ್ ಚೈಲ್ಡ್ ಆಗುತ್ತದೆ.
9. ಪ್ರತಿಭಾವಂತ ಮಗು- Talented Child
ಪ್ರತೀಯೊಂದು ಮಗುವು ಈ ಜಗತ್ತಿಗೆ ಬರುವಾಗ ಒಂದಲ್ಲ ಒಂದು ಪ್ರತಿಭೆಯನ್ನು ಪಡೆದು ಬಂದಿರುತ್ತದೆ. ಅಂತಹ ಪ್ರತಿಭೆಯನ್ನು ಎಳವೆಯಲ್ಲಿ ಗುರುತಿಸಿ, ಪ್ರೋತ್ಸಾಹಿಸುವ ಮತ್ತು ಅವುಗಳಿಗೆ ಸೂಕ್ತವಾದ ತರಬೇತಿ ನೀಡುವುದು ಸುಲಭ ಅಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಲ್ಲಿ ಅಂತಹ ಮಕ್ಕಳಿಗೆ ಹೆಚ್ಚು ಪೂರಕ ಪಠ್ಯ ಚಟುವಟಿಕೆ (Co Curricular Activities) ಬೇಕು. ಶಿಕ್ಷಕರೂ ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪೂರಕ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಕಲಿಕೆಯು ಹಿಂದೆ ಬೀಳುತ್ತದೆ ಅನ್ನುವುದನ್ನು ಯಾವ
ಶಿಕ್ಷಣ ತಜ್ಞರೂ ಒಪ್ಪುವುದಿಲ್ಲ.
10. ಸೂಕ್ಷ್ಮ ಸಂವೇದಿ ಮಗು-Sensitive Child
ತನ್ನ ಸುತ್ತಮುತ್ತದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅದಕ್ಕೆ ಪೂರಕವಾಗಿ ಸ್ಪಂದನೆ ಕೊಡುವ ಅದ್ಭುತ ಮಗು ಇದು. ಸೂಕ್ಷ್ಮತೆ ಮಗುವಿನ ಸಹಜ ಗುಣ. ಮಗುವಿನಲ್ಲಿ ಅವಲೋಕನ ಗುಣವು ಕೂಡ ಸಹಜವಾಗಿ ಇರುತ್ತದೆ. ಮನೆಯ ಮತ್ತು ಶಾಲೆಯ ಒಳಗಿನ ಸಂಬಂಧಗಳ ಮೂಲಕ ಈ ಮಗುವು ತುಂಬಾ ಕಲಿಯುತ್ತದೆ.
ಈ ಸಂದರ್ಭದಲ್ಲಿ ಅವರ ಜೊತೆ ಬೆರೆಯಬೇಡ, ಇವರ ಜೊತೆ ಮಾತಾಡಬೇಡ ಅಂತ ಬೇಲಿ ಹಾಕುವ ಹೆತ್ತವರು ಇಂತಹ ಅದ್ಭುತ ಮಗುವನ್ನು ಕೆಡಿಸುತ್ತಾರೆ. ಇಂತಹ ಮಗುವನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡುವುದು ಕೂಡ ಬಹಳ ದೊಡ್ಡ ತಪ್ಪು.
when the teacher pulled these out you knew it was about to be a good day pic.twitter.com/YpAuCbL7iI
— Nostalgia From Your Childhood (@NostalgiaFolder) March 5, 2024
ಭರತ ವಾಕ್ಯ
ಹೆತ್ತವರ ಮತ್ತು ಶಿಕ್ಷಕರ ವ್ಯಕ್ತಿತ್ವಗಳು ಬಾಲ್ಯ ಮತ್ತು ಹದಿಹರೆಯದಲ್ಲಿ ಮಗುವಿನ ಮೇಲೆ ದಟ್ಟವಾದ ಪ್ರಭಾವ ಬೀರುತ್ತವೆ. ಮುಂದೆ ಗೆಳೆಯರು, ಪುಸ್ತಕಗಳು, ಭಾಷಣಗಳು ಕೂಡ ಮಗುವಿನ ವ್ಯಕ್ತಿತ್ವದ ನಿರೂಪಣೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಹೆತ್ತವರ ಮತ್ತು ಶಿಕ್ಷಕರ ಸಹಜವಾದ ವರ್ತನೆಗಳು ಜಗತ್ತಿಗೆ ಒಂದು ಬಹು ಸುಂದರವಾದ ಮಗುವನ್ನು ಕೊಡುಗೆಯಾಗಿ ನೀಡುತ್ತವೆ.