ಯಾರಾದರೂ ಇಬ್ಬರು ಲೆಜೆಂಡ್ ಪ್ರತಿಭೆಗಳು (Legendary Achievers) ಪ್ರಕಾಶಕ್ಕೆ ಬಂದ ಕೂಡಲೇ ಅವರ ಅಭಿಮಾನಿಗಳು ಮತ್ತು ಮಾಧ್ಯಮಗಳು ಅವರ ನಡುವೆ ಒಂದು ಅನಾರೋಗ್ಯಕರ ಹೋಲಿಕೆಗೆ ಮುಂದಾಗುತ್ತವೆ. ಅದು ಆ ಲೆಜೆಂಡ್‌ಗಳಿಗೆ ಕೂಡ ಇಷ್ಟ ಇರುವುದಿಲ್ಲ. ಒಂದು ಕಾಲದಲ್ಲಿ ಗಾಯಕರಾದ ಎಸ್ ಪಿ ಬಾಲಸುಬ್ರಮಣ್ಯಂ(SP Balasubrahmanyam) ಮತ್ತು ಕೆ.ಜೆ. ಯೇಸುದಾಸ್ (KJ Yesudas) ನಡುವೆ ಹೀಗೇ ಒಂದು ಹೋಲಿಕೆಯು ಆರಂಭವಾಯಿತು. ಆಗ ಸಿಟ್ಟು ಮಾಡಿಕೊಂಡ ಬಾಲಸುಬ್ರಮಣ್ಯಂ ಅವರು ‘ಯೇಸುದಾಸ್ ಅವರು ನನ್ನ ಗುರು. ಅವರ ಮುಂದೆ ನಾನು ಏನೂ ಅಲ್ಲ. ದಯವಿಟ್ಟು ನಮ್ಮನ್ನು ಹೋಲಿಕೆ ಮಾಡಬೇಡಿ ‘ ಎಂದದ್ದು ಮಾತ್ರವಲ್ಲ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಯೇಸುದಾಸ್ ಅವರ ಪಾದಪೂಜೆ ಮಾಡಿ ಸನ್ಮಾನ ಮಾಡಿ ಗೌರವಿಸಿದ್ದರು. ಅಲ್ಲಿಗೆ ಆ ಹೋಲಿಕೆಯು ನಿಂತು ಹೋಗಿತ್ತು. (Raja Marga Column)
ಇದೀಗ ಸಚಿನ್ ಮತ್ತು ವಿರಾಟ್ ಹೋಲಿಕೆ
ತುಂಬಾ ವರ್ಷಗಳ ಹಿಂದೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಕ್ರಿಕೆಟ್ ನಿವೃತ್ತಿ ಪಡೆದಿದ್ದ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ‘ಮುಂದೆ ನಿಮ್ಮ ಕ್ರಿಕೆಟ್ ದಾಖಲೆಗಳನ್ನು ಯಾರು ಮುರಿಯಬಹುದು?’ ಎಂದು ಕೇಳಿದಾಗ ಸಚಿನ್ ಒಂದು ಕ್ಷಣ ಕೂಡ ಯೋಚನೆ ಮಾಡದೆ ‘ವಿರಾಟ್ ಕೊಹ್ಲಿ ‘ ಎಂದು ಹೇಳಿದ್ದರು. ಆ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ (Virat Kohli) ಕೂಡ ಹಾಜರಿದ್ದರು. ಪ್ರಾಯಶಃ ಅಲ್ಲಿಂದ ಈ ಅಭಿಮಾನಿಗಳ ಹೋಲಿಕೆ ಆರಂಭ ಆಗಿದೆ. ಅದಕ್ಕೆ ಸರಿಯಾಗಿ ವಿರಾಟ್ ಇದೀಗ ಸಚಿನ್ ಅವರ ಏಕದಿನದ ಶತಕಗಳ ದಾಖಲೆಯನ್ನು ಸಮ ಮಾಡಿದ್ದಾರೆ. ಈ ವಿಶ್ವಕಪ್ ಕೂಟದಲ್ಲಿಯೇ ಅವರು ಸಚಿನ್ ಅವರ ಏಕದಿನದ ದಾಖಲೆಯನ್ನು ಮುರಿಯಬಹುದು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ದಾಖಲೆಗಿಂತ ವಿರಾಟ್ ತುಂಬಾ ಹಿಂದೆ ಇದ್ದಾರೆ. ಏಕೆಂದರೆ ಟೆಸ್ಟ್ ಪಂದ್ಯಗಳ ಸಂಖ್ಯೆ ಈಗ ಕಡಿಮೆ ಆಗಿದೆ.
ಯಾವೆಲ್ಲ ಹೋಲಿಕೆ ಸದ್ಯ ಇವರ ನಡುವೆ?
ಇವರಿಬ್ಬರೂ ಆಕ್ರಮಣಕಾರಿ ಬಲಗೈ ಬ್ಯಾಟರುಗಳು. ಏಕದಿನದ ಫಾರ್ಮಾಟಿಗೆ ಹೇಳಿ ಮಾಡಿಸಿದ ದಾಂಡಿಗರು. ನಿರಂತರತೆ ಕಾಪಾಡಿಕೊಂಡು ಆಡಿದವರು. ಇಬ್ಬರೂ ವಿಶ್ವಮಟ್ಟದ ಚಾಂಪಿಯನ್ ಆಟಗಾರರು.
1) ಸಚಿನ್ ತನ್ನ 16ನೇ ವರ್ಷಕ್ಕೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದವರು. ವಿರಾಟ್ ಅಂಡರ್ 19 ಭಾರತದ ತಂಡದ ಪರವಾಗಿ ಆಡಿದ್ದರೂ ಅಧಿಕೃತವಾಗಿ ಭಾರತ ತಂಡಕ್ಕೆ ಆಯ್ಕೆ ಆದಾಗ 19 ವರ್ಷ ಆಗಿತ್ತು.
2) ಸಚಿನ್ ತನ್ನ ಮೊದಲ ಶತಕ ಹೊಡೆದದ್ದು 78ನೇ ಇನಿಂಗ್ಸ್‌ನಲ್ಲಿ. ಆದರೆ ವಿರಾಟ್ ಮೊದಲ ಶತಕ ಹೊಡೆದದ್ದು ತನ್ನ 13ನೇ ಇನಿಂಗ್ಸ್‌ನಲ್ಲಿ.
3) ಸಚಿನ್ ತನ್ನ 49 ಏಕದಿನದ ಶತಕಗಳನ್ನು ಹೊಡೆದದ್ದು ತನ್ನ 24 ವರ್ಷಗಳ ವೃತ್ತಿ ಜೀವನದಲ್ಲಿ. ವಿರಾಟ್ 49 ಶತಕ ಪೂರ್ತಿ ಮಾಡಲು ಕೇವಲ 16 ವರ್ಷಗಳು ಸಾಕಾದವು.
4) ಸಚಿನ್ ಅವರ 49 ಶತಕಗಳಲ್ಲಿ 17 ಶತಕಗಳು ಚೇಸಿಂಗ್‌ನಲ್ಲಿ ಬಂದಿವೆ. ಅದರಲ್ಲಿ 14 ಪಂದ್ಯಗಳಲ್ಲಿ ಭಾರತ ಗೆದ್ದಿದೆ. ವಿರಾಟ್ 49 ಶತಕಗಳಲ್ಲಿ 27 ಶತಕಗಳು ಚೇಸಿಂಗನಲ್ಲಿ ಬಂದಿವೆ. ಅದರಲ್ಲಿ 23 ಭಾರತಕ್ಕೆ ಗೆಲುವು ತಂದುಕೊಟ್ಟಿವೆ.
5) ಸಚಿನ್ ಅವರ 49 ಶತಕಗಳಲ್ಲಿ 29 ಶತಕಗಳು ವಿದೇಶದಲ್ಲಿ ದಾಖಲು ಆಗಿವೆ. ಅದು ಕೂಡ 16 ದೇಶಗಳ ವಿರುದ್ಧ. ವಿರಾಟ್ ವಿದೇಶದಲ್ಲಿ 26 ಶತಕ 12 ದೇಶಗಳಲ್ಲಿ ಹೊಡೆದಿದ್ದಾರೆ.
6) ಸಚಿನ್ ಅವರ 9.22 ಇನಿಂಗ್ಸ್‌ಗೆ ಒಂದರಂತೆ ಶತಕ ಬಂದಿದ್ದರೆ ವಿರಾಟ್ ಅವರ 5.65 ಇನಿಂಗ್ಸ್‌ಗೆ ಒಂದರಂತೆ ಶತಕಗಳು ಬಂದಿವೆ.
7) ಸಚಿನ್ ಹೆಚ್ಚಿನ ಪಂದ್ಯಗಳಲ್ಲಿ ಓಪನಿಂಗ್ ಸ್ಪಾಟ್‌ನಲ್ಲಿ ಬ್ಯಾಟ್ ಬೀಸಿದ್ದರೆ, ವಿರಾಟ್ ಆರಂಭದಿಂದ ನಂಬರ್ 3 ಸ್ಪಾಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ.
8) ಸಚಿನ್ ಅವರ ಏಕದಿನದ ಬ್ಯಾಟಿಂಗ್ ಸರಾಸರಿ 44.8 ಆದರೆ ವಿರಾಟ್ ಅವರ ಸರಾಸರಿ 58.5. ಇಲ್ಲಿ ವಿರಾಟ್ ಮುಂದಿದ್ದಾರೆ.
9) ಸಚಿನ್ ಆಡುವಾಗ 18 ಬಾರಿ ನರ್ವಸ್ ನೈಂಟಿಗೆ ಬಲಿ ಆದರೆ ವಿರಾಟ್ ಬಲಿ ಆದದ್ದು 7 ಬಾರಿ ಮಾತ್ರ.
10) ಸಚಿನ್ ಆಡುವಾಗ ಡಿ ಆರ್ ಎಸ್ ಇರಲಿಲ್ಲ. ಅಂಪೈರ್ ತಪ್ಪು ಔಟ್ ಕೊಟ್ಟರೂ ಸಚಿನ್ ತಲೆತಗ್ಗಿಸಿ ಹಿಂದೆ ಬರುತ್ತಿದ್ದರು. ಆದರೆ ವಿರಾಟ್ ಆಡುವಾಗ ಡಿಆರ್‌ಎಸ್ ಬಂದಿತ್ತು.
11) ಸಚಿನ್ ಆಡುತ್ತಿದ್ದ ಕಾಲದಲ್ಲಿ ಟಿ 20 ಪಂದ್ಯಗಳು ಹೆಚ್ಚು ನಡೆಯುತ್ತಿರಲಿಲ್ಲ. ವಿರಾಟ್ ಆಡುವ ಕಾಲವು ಟಿ 20 ವೈಭವದ ಕಾಲ. ಅದರಿಂದ ಸಹಜವಾಗಿ ಕ್ರಿಕೆಟ್ ವೇಗ ಪಡೆದುಕೊಂಡಿತ್ತು.
12) ಸಚಿನ್ ಆಡುತ್ತಿದ್ದಾಗ ವಕಾರ್ ಯೂನಿಸ್, ಶೋಯಿಬ್ ಅಖ್ತರ್, ಬ್ರೆಟ್ ಲೀ, ಗ್ಲೆನ್ ಮೆಗ್ರಾಥ್ ಮೊದಲಾದ ವೇಗದ ಬೌಲರ್‌ಗಳಿಂದ ಸವಾಲು ಎದುರಿಸಿದ್ದರೆ ವಿರಾಟ್ ಅವರು ಲಸಿತ್ ಮಾಲಿಂಗ, ಶಾಹೀನ್ ಆಫ್ರಿದಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಜಾನ್ಸನ್ ಮೊದಲಾದ ವೇಗದ ಬೌಲರಗಳ ಸವಾಲು ಎದುರಿಸಬೇಕಾಯಿತು.
ಹೀಗೆ ಹೋಲಿಕೆ ಮಾಡುತ್ತಾ ಹೋದಂತೆ ಇನ್ನೂ ನೂರು ಹೋಲಿಕೆ ಮಾಡುತ್ತಾ ಹೋಗಬಹುದು. ನನ್ನ ಲೇಖನದ ಉದ್ದೇಶ ಅದಲ್ಲವೇ ಅಲ್ಲ. ಇಬ್ಬರೂ ಲೆಜೆಂಡ್ ಆಟಗಾರರೂ ಪರಸ್ಪರರ ಪ್ರತಿಭೆಗಳ ಬಗ್ಗೆ ಗೌರವದ ಮಾತು ಹೇಳಿದ್ದಾರೆ. ವಿರಾಟ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ‘ಸಚಿನ್ ಸರ್ ಅವರಿಂದ ಮೆಚ್ಚುಗೆ ಪಡೆಯುವುದೇ ನನ್ನ ಜೀವನದ ಸ್ಮರಣೀಯ ಕ್ಷಣ. ನಾನೆಂದೂ ಅವರ ಸಮ ಆಗಲಾರೆ ‘ಎಂದು ಹೇಳಿದ್ದಾರೆ.
ಇದನ್ನೂ ಓದಿ: Raja Marga Column : ಈ ದೀಪಾವಳಿಗೆ ನಮ್ಮೊಳಗೆ ಬೆಳಕಿನ ಬೀಜಗಳ ಬಿತ್ತೋಣ ಬನ್ನಿ!
ವಿರಾಟ್ ಇನ್ನೂ ನಾಲ್ಕೈದು ವರ್ಷ ಭಾರತಕ್ಕಾಗಿ ಆಡಬಹುದು. ಸಚಿನ್ ಅವರ ಇನ್ನೂ ಹಲವು ದಾಖಲೆ ಮುರಿಯಬಹುದು. ಅವರಿಬ್ಬರೂ ಭಾರತದ ಹೆಮ್ಮೆಯನ್ನು ಇಮ್ಮಡಿ ಮಾಡಿದವರು. ಅವರಿಬ್ಬರ ಹೋಲಿಕೆ ಮಾಡುತ್ತಾ, ವ್ಯಕ್ತಿ ಪೂಜೆ ಮಾಡುತ್ತ ಹೋಗುವುದಕ್ಕಿಂತ ಅವರ ಸಾಧನೆಗಳಿಂದ ಯುವ ಜನತೆ ಪ್ರೇರಣೆ ಪಡೆದರೆ ಸಾಕು.
ಸಚಿನ್ ಅವರ ರಿಲೇ ಬ್ಯಾಟನ್ ಈಗ ವಿರಾಟ್ ಕೊಹ್ಲಿ ಅವರ ಕೈಗೆ ಬಂದಿದೆ. ಮುಂದೆ ಅದನ್ನು ವಿರಾಟ್ ಬೇರೆ ಯಾರಿಗಾದರೂ ಕೊಟ್ಟು (ಶುಭಮನ್ ಗಿಲ್ ಅಥವಾ ಕೆ ಎಲ್ ರಾಹುಲ್) ಅವರ ಕೈಗೆ ಕೊಟ್ಟು ನಿವೃತ್ತಿ ಹೊಂದಿದರೆ ಭಾರತದ ಸುವರ್ಣ ಕ್ರಿಕೆಟ್ ಪರಂಪರೆಯು ಮುಂದುವರೆಯುತ್ತದೆ. ಏನಂತೀರಿ?