ನಾನು ಹಿಂದೆ ಬರೆದಂತೆ (Raja Marga Column) ಕಾರ್ಕಳ ತಾಲೂಕಿನ ಕಲ್ಯಾ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ (Kalya Govt. school) ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಸ್ಮಾರಕ (Captain MV Pranjal) ರಚಿಸುವ ನಿರ್ಧಾರ ಮಾಡಿದ್ದು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ. ಎರಡೇ ದಿನಕ್ಕೆ ಸ್ಮಾರಕದ ಭೂಮಿಪೂಜೆ ಕಾರ್ಕಳದ ಶಾಸಕರಿಂದ ನಡೆದು ಹೋಯಿತು. ಅದೇ ದಿನ ಜನವರಿ 26ರಂದು ಈ ಐತಿಹಾಸಿಕ ಸ್ಮಾರಕದ ಉದ್ಘಾಟನೆ ಆಗಬೇಕು ಎಂದು ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಪೂರ್ವ ವಿದ್ಯಾರ್ಥಿಗಳ ಸಂಘಗಳು ಸಂಕಲ್ಪ ಮಾಡಿ ಹೊರಟಿತ್ತು. ಮಣಿಪಾಲದಲ್ಲಿ ಇರುವ ಪ್ರವೀರ್ ಎಂಬ ಕಲಾವಿದನಿಗೆ ಕ್ಯಾಪ್ಟನ್ ಪ್ರಾಂಜಲ್ ಅವರ ಮೂರ್ತಿ ನಿರ್ಮಿಸುವ ಹೊಣೆ ನೀಡಿಯಾಗಿತ್ತು.
Raja Marga Column :ಪ್ರಾಂಜಲ್ ಅಪ್ಪ, ಅಮ್ಮ ಇಬ್ಬರೂ ಬರಬೇಕು ಎಂಬ ಹಠ
ಉದ್ಘಾಟನೆಯ ಕಾರ್ಯಕ್ರಮಕ್ಕೆ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಹೆತ್ತವರನ್ನು ಕರೆಯಬೇಕು ಎಂದು ಸಮಿತಿಯವರು ಹಠ ಹಿಡಿದು ಕೂತಿದ್ದರು. ಪ್ರಾಂಜಲ್ ಅವರ ಅಪ್ಪ ವೆಂಕಟೇಶ್ ಮತ್ತು ತಾಯಿ ಅನುರಾಧಾ ಬೆಂಗಳೂರಿನಲ್ಲಿ ಇದ್ದವರು. ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ಅವರ ದುಃಖ ಎಷ್ಟು ತೀವ್ರವಾದದ್ದು ಎಂದು ನನಗೆ ಗೊತ್ತಿತ್ತು. ನನ್ನ ಗೆಳೆಯರ ಮೂಲಕ ವೆಂಕಟೇಶ್ ಅವರ ನಂಬರ್ ದೊರೆತರೂ ನನಗೆ ಅವರ ಜೊತೆಗೆ ಮಾತಾಡಲು ಧೈರ್ಯ ಬರಲೇ ಇಲ್ಲ. ಕೊನೆಗೆ ನಿವೃತ್ತ ಸೈನಿಕರಾದ ಕ್ಯಾಪ್ಟನ್ ವಿಜಯ್ ಫೆರ್ನಾಂಡಿಸ್ ನನ್ನ ನೆರವಿಗೆ ಬಂದರು.
ಅವರು ವೆಂಕಟೇಶ್ ಸರ್ ಅವರ ಜೊತೆಗೆ ಮಾತಾಡಿ ಕಲ್ಯಾ ಶಾಲೆಯಲ್ಲಿ ನಿಮ್ಮ ಮಗನ ಸುಂದರ ಸ್ಮಾರಕ ಆಗ್ತಾ ಇದೆ, ನೀವು ಬರಬೇಕು ಎಂದಾಗ ತಕ್ಷಣ ಒಪ್ಪಿಕೊಂಡರು. ನಾನು ಸರ್ ಜೊತೆಗೆ ಮಾತಾಡಿ ಅವರಿಗೆ ವಿಳಾಸ, ವಿವರ ಇತ್ಯಾದಿ ನೀಡಿದೆ. ಆದರೆ ಮುಂದೆ ಕೆಲವು ಅನಿಶ್ಚಿತ ಘಟನೆಗಳು ನಡೆದವು. ಡೆಲ್ಲಿಯಲ್ಲಿ ಒಂದು ಕಾರ್ಯಕ್ರಮ ಇದೆ, ನಾವು ಹೋಗಬೇಕಾಗಬಹುದು, ನಿಮ್ಮಲ್ಲಿ ಬರುವುದು ಕಷ್ಟ ಎಂದು ವೆಂಕಟೇಶ್ ಸರ್ ಒಮ್ಮೆ ಮೆಸೇಜ್ ಮಾಡಿದ್ದರು. ಆ ದಿನ ಸಮಿತಿಯವರು ಭರವಸೆ ಕಳೆದುಕೊಂಡಿದ್ದರು. ಆ ಸಣ್ಣ ಗ್ರಾಮದ ಬಂಧುಗಳೂ ನಿರಾಸೆಯಲ್ಲಿ ಮುಳುಗಿದ್ದರು.
ಆದರೆ ಕ್ಯಾಪ್ಟನ್ ವಿಜಯ್ ಫೆರ್ನಾಂಡಿಸ್ ಬೆನ್ನು ಬಿಡದೇ ವೆಂಕಟೇಶ್ ಅವರನ್ನು ದುಂಬಾಲು ಬಿದ್ದರು. ಊರಿನವರ ಫೀಲಿಂಗ್ ಅವರಿಗೆ ತಲುಪಿಸಿದರು. ತಾಳ್ಮೆಯಿಂದ ಕಾದರು. ಕಾರ್ಯಕ್ರಮದ ಹಿಂದಿನ ಸಂಜೆ ನನಗೆ ವಿಜಯ್ ಫೆರ್ನಾಂಡಿಸ್ ಕಾಲ್ ಮಾಡಿ ಅಪ್ಪ ಅಮ್ಮ ಇಬ್ಬರೂ ಬರಲು ಒಪ್ಪಿದ್ದಾರೆ ಎಂದು ತಿಳಿಸಿದಾಗ ಸಮಿತಿಯ ಎಲ್ಲರೂ ಸಂಭ್ರಮ ಪಟ್ಟದ್ದನ್ನು ನಾನೆಂದಿಗೂ ಮರೆಯಲಾರೆ. ಮರುದಿನ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕ್ರಿಯೇಟ್ ಆಗಿತ್ತು. ಬಹಳ ದೊಡ್ಡ ವಾಹನ ರ‍್ಯಾಲಿಯನ್ನು ಸಂಘಟನೆ ಮಾಡಬೇಕು, ವೆಂಕಟೇಶ್ ದಂಪತಿಗಳನ್ನು ತೆರೆದ ವಾಹನದಲ್ಲಿ ಕರೆದು ತರಬೇಕು, ಅವರಿಗೆ ಬಹಳ ದೊಡ್ಡ ಸನ್ಮಾನ ಮಾಡಬೇಕು, ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದೆಲ್ಲ ಕನವರಿಕೆಗಳು.
Raja Marga Column : ವೆಂಕಟೇಶ್ ದಂಪತಿಗಳು ಬಂದರು ದೇವರು ನಡೆದು ಬಂದ ಹಾಗೆ!
ಕಾರ್ಯಕ್ರಮದ ಒಂದು ತಾಸು ಮೊದಲೇ ವೆಂಕಟೇಶ್ ದಂಪತಿಗಳು ಶಾಲೆಯನ್ನು ತಲುಪಿದ್ದರು. ಅಲ್ಲಿ ಅವರನ್ನು ಪ್ರತ್ಯಕ್ಷವಾಗಿ ನೋಡಿದವರು ಯಾರೂ ಇರಲಿಲ್ಲ. ಅವರೇ ಎಲ್ಲರನ್ನೂ ಪರಿಚಯ ಮಾಡಿಕೊಂಡು ಮಾತಾಡಿದರು. ಎಲ್ಲರ ಜೊತೆಗೆ ಬೆರೆತರು. ತೆರೆದ ವಾಹನ ಹತ್ತಿ ಹಳ್ಳಿಯವರಿಗೆ ನಗು ಹಂಚಿದರು. ಪೂರ್ಣಕುಂಭ ಹಿಡಿದವರು, ಶಾಲೆಯ ಶಿಕ್ಷಕರು, ಶಾಲೆಯ ಹೆತ್ತವರು, ಅಲ್ಲಿಗೆ ಆಗಲೇ ಬಂದಿದ್ದ 30ರಷ್ಟು ನಿವೃತ್ತ ಸೈನಿಕರು ಎಲ್ಲರ ಜೊತೆಗೆ ಮೆದುವಾಗಿ ಮಾತಾಡಿದರು. ತಮ್ಮ ಮಗ ಪ್ರಾಂಜು ಮಾಡಿದ ಸಾಹಸದ ಕಥೆಗಳನ್ನು ಹೇಳಿದರು. ಶಾಲೆಯ ಎಲ್ಲ ಮಕ್ಕಳೂ ಬಂದು ಅವರ ಕಾಲು ಹಿಡಿದಾಗ ಎಲ್ಲರನ್ನೂ ಆಶೀರ್ವಾದ ಮಾಡಿದರು. ಶಿಕ್ಷಕರನ್ನು ಪ್ರೀತಿಯಿಂದ ಮಾತಾಡಿಸಿದರು.
ಎದೆಯಲ್ಲಿ ಹೆಪ್ಪುಗಟ್ಟಿದ ನೋವು ಇದ್ದರೂ…
ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕವನ್ನು ಅವರೇ ಲೋಕಾರ್ಪಣೆ ಮಾಡಿದರು. ಸೇರಿದ ಸೈನಿಕರ ಜೊತೆ ತಲೆಯೆತ್ತಿ ನಡೆದು ಗೌರವ ರಕ್ಷೆ ನೀಡಿದರು. ತಮ್ಮ ಮಗನ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಮಾಡಿದರು. ಎದೆಯಲ್ಲಿ ಹೆಪ್ಪುಗಟ್ಟಿದ ನೋವು ಇದ್ದರೂ ಒಂದಿಷ್ಟೂ ತೋರಿಸಿಕೊಡದೇ ನಗುಮುಖದಲ್ಲಿಯೇ ಇದ್ದರು. ಮುಂದೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊನೆಯವರೆಗೆ ಭಾಗವಹಿಸಿದರು.
ಮಗನ ಬಗ್ಗೆ ತುಂಬಾನೇ ಹೆಮ್ಮೆ ಪಟ್ಟರು
ಇಬ್ಬರೂ ತಮ್ಮ ಮಗನ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತಾಡಿದರು. ತಮ್ಮ ಮಗನ ಜೊತೆಗೆ ಮಡಿದ ಇತರ ಸೈನಿಕರ ಬಗ್ಗೆ ಮಾತಾಡಿದರು. ತುಂಬಾ ನೊಂದಿರುವ ತಮ್ಮ ಸೊಸೆ ಅದಿತಿಯ ಬಗ್ಗೆ ಮಾತಾಡುವಾಗ ಅವರ ಗಂಟಲು ಕಟ್ಟಿತು.
ತಮ್ಮ ಮಗನಿಗಾಗಿ ಸ್ಮಾರಕ ನಿರ್ಮಾಣ ಮಾಡಿದ ಕಲ್ಯಾ ಊರವರಿಗೆ, ಸಮಿತಿಯವರಿಗೆ ಧನ್ಯವಾದ ಹೇಳಿದರು. ಇತರ ಅತಿಥಿಗಳು ಮಾಡಿದ ಸಂಸ್ಮರಣ ಭಾಷಣಗಳನ್ನು ಮೌನವಾಗಿ ಆಲಿಸಿದರು. ಶಾಲೆಯ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತಾಡಿದರು. ಸನ್ಮಾನ ಸ್ವೀಕಾರ ಮಾಡುವುದಿಲ್ಲ ಎಂದು ಆರಂಭದಲ್ಲಿ ಹೇಳಿದ್ದರೂ ಊರವರ ಪ್ರೀತಿಗೆ ತಲೆಬಾಗಿ ಜೊತೆಯಲ್ಲಿ ಕೂತು ಸನ್ಮಾನ ಸ್ವೀಕಾರ ಮಾಡಿದರು. ಅಮ್ಮ ಅನುರಾಧಾ ‘ಸೈನಿಕನ ಸ್ವಗತ’ ಎಂಬ ಕವಿತೆಯನ್ನು ಚಂದವಾಗಿ ಓದಿದರು.
Raja Marga Column : ವೀರ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್‌ಗೆ ಸ್ಮಾರಕ ಕಟ್ಟಿ ಸೆಲ್ಯೂಟ್ ಹೊಡೆದ ಕಲ್ಯದ ಜನ#vistaranews #rajamargacolumn #captainmvpranjal #rajamargacolumn #motivationalstoryinkannada
— Vistara News (@VistaraNews) January 26, 2024
https://t.co/dnKiimFkB9
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವತ್ತಕ್ಕೂ ಹೆಚ್ಚು ನಿವೃತ್ತ ಸೈನಿಕರನ್ನು ಸಮಿತಿಯ ಪರವಾಗಿ ಮುಂದೆ ನಿಂತು ಸನ್ಮಾನಿಸಿದರು. ಆ ಕಾರ್ಯಕ್ರಮದಲ್ಲಿ ಸನ್ಮಾನ ಪಡೆದ ಗುರುವಾಯನಕೆರೆಯ ಹುತಾತ್ಮ ಸೈನಿಕ ಏಕನಾಥ್ ಶೆಟ್ಟಿಯವರ ಧರ್ಮಪತ್ನಿ ಜಯಂತಿ ಶೆಟ್ಟಿ ಅವರ ಜೊತೆಗೆ ಪ್ರೀತಿಯಲ್ಲಿ ಮಾತಾಡಿ ಅವರ ವಿಳಾಸ ಪಡೆದರು. ಕೊನೆಗೆ ಎಲ್ಲರಿಗೂ ಕೈಮುಗಿದು ಧನ್ಯವಾದ ಹೇಳಿ ಲಘು ಉಪಾಹಾರ ಸ್ವೀಕಾರ ಮಾಡಿ ಉಡುಪಿಗೆ ಕಾರು ಹತ್ತಿದರು. ಅಂದಾಜು ನಾಲ್ಕೂವರೆ ಘಂಟೆ ಅವರು ಒಂದಿಷ್ಟೂ ದಣಿವು, ಆಯಾಸ ಇಲ್ಲದೇ ನಮ್ಮ ಜೊತೆಗೆ ಬೆರೆತರು ಅನ್ನುವುದೇ ನಮಗೆ ಲೈಫ್ ಟೈಮ್ ಮೆಮೊರಿ.
ಆ ಸಣ್ಣ ಹಳ್ಳಿಯಲ್ಲಿ ಅಂದು ಭಾಗವಹಿಸಿದ್ದ ಅಂದಾಜು 350-400 ಜನರು ಭಾರವಾದ ಎದೆಯೊಂದಿಗೆ ಮನೆಗೆ ಹಿಂದಿರುಗಿದ್ದರು. ಎಷ್ಟೋ ಜನರು ಕಣ್ಣೀರು ಸುರಿಸಿದ ಅದ್ಭುತ ಕಾರ್ಯಕ್ರಮ ಅದು. ಆ ಸಣ್ಣ ಗ್ರಾಮ ಕಲ್ಯಾ ಅಂದು ಇತಿಹಾಸ ಬರೆದಿತ್ತು.
ಇದನ್ನೂ ಓದಿ : Raja Marga Column : ವೀರ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್‌ಗೆ ಸ್ಮಾರಕ ಕಟ್ಟಿ ಸೆಲ್ಯೂಟ್ ಹೊಡೆದ ಕಲ್ಯದ ಜನ
ಆ ದಂಪತಿಗಳು ಯಾಕೆ ಗ್ರೇಟ್ ಅಂದರೆ…
ಎರಡೇ ದಿನಗಳಲ್ಲಿ ವೆಂಕಟೇಶ್ ದಂಪತಿಗಳು ಉಡುಪಿಯಿಂದ ಕಾರಿನಲ್ಲಿ ಗುರುವಾಯನಕೆರೆಗೆ ಹೊರಟಿದ್ದರು. ಅಲ್ಲಿ ಅವರಿಗೊಂದು ಕರ್ತವ್ಯ ಬಾಕಿ ಇತ್ತು. ಅಲ್ಲಿ ಹುತಾತ್ಮ ಸೈನಿಕ ಏಕನಾಥ್ ಶೆಟ್ಟಿ ಅವರ ಮನೆ ಹುಡುಕಿಕೊಂಡು ಹೋದರು. ಆ ಸೈನಿಕನ ಧರ್ಮಪತ್ನಿ ಜಯಂತಿ ಶೆಟ್ಟಿ ಮತ್ತು ಮನೆಯವರ ಜೊತೆಗೆ ತುಂಬಾ ಹೊತ್ತು ಪ್ರೀತಿಯಿಂದ ಮಾತಾಡಿದರು. ಉಪಾಹಾರ ಸ್ವೀಕಾರ ಮಾಡಿದರು. ಮನೆಯ ಅಂಗಳದಲ್ಲಿ ಸ್ಥಾಪನೆ ಆಗಿದ್ದ ಹುತಾತ್ಮ ಸೈನಿಕ ಏಕನಾಥ್ ಶೆಟ್ಟಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಯಂತಿ ಶೆಟ್ಟಿ ಅವರಿಗೆ ಧೈರ್ಯ ತುಂಬಿದರು.
ಇದನ್ನೂ ಓದಿ: Raja Marga Column : ವಾಯುಸೇನೆಯ ಯಶೋಗಾಥೆ ʻಫೈಟರ್ʼ ಸಿನಿಮಾ; ಮಿಸ್ ಮಾಡ್ಬೇಡಿ
ಸ್ವತಃ ದುಃಖದಲ್ಲಿ ಮುಳುಗಿದ್ದ ಸೈನಿಕನ ಕುಟುಂಬವೊಂದು ಇನ್ನೊಂದು ಸಂತೃಪ್ತ ಕುಟುಂಬಕ್ಕೆ ಸಾಂತ್ವನ ಮತ್ತು ಸ್ಫೂರ್ತಿ ತುಂಬಿದ ಅದ್ಭುತ ನಿದರ್ಶನ ಇದು! ಸೈನಿಕರು ಗ್ರೇಟ್ ಆಗೋದು ಇದೇ ಕಾರಣಕ್ಕೆ! ಅಂದ ಹಾಗೆ ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ಘೋಷಣೆ ಆದ ಸುದ್ದಿ ಬಂದಿದೆ.