ಮೊನ್ನೆ ಮೊನ್ನೆ ತನ್ನ 13ನೆಯ ಹುಟ್ಟುಹಬ್ಬವನ್ನು ಸೆಲೆಬ್ರೇಟ್ (13 year old daughter) ಮಾಡಿದ ನನ್ನ ಮಗಳು ಇಂದಿಗೂ ರಾತ್ರಿ ಮಲಗುವುದು ಅಪ್ಪನ ಕಾಲಿನ ಮೇಲೆಯೇ. ಅಪ್ಪನ ಬಾಯಿಂದ ಅದ್ಭುತವಾದ ಕಾಲ್ಪನಿಕ ಕಥೆಗಳನ್ನು ಕೇಳುತ್ತ, ಜೋಗುಳದ ಹಾಡುಗಳನ್ನು ಕೇಳುತ್ತ ಆಕೆ ದೊಡ್ಡವಳಾದವಳು. ಅವಳೀಗ ಪ್ರೈಮರಿ ಶಿಕ್ಷಣವನ್ನು (Primary Education) ಮುಗಿಸಿ ಹೊಸತೊಂದು ಖಾಸಗಿ ಹೈಸ್ಕೂಲಿಗೆ (Private High school) ಸೇರಿದವಳು. ನನ್ನ ಮಗಳು ಈಗ ಎಂಟನೇ ಕ್ಲಾಸ್ (Raja Marga Column).
ಅವಳೀಗ ಮೊದಲಿನ ಹಾಗೆ
ಮನಸ್ಸು ಬಿಚ್ಚಿ ಮಾತಾಡುವುದಿಲ್ಲ!
ರಾತ್ರಿ ಮಲಗುವ ಮೊದಲು ಅವಳು ಇಡೀ ದಿನ ನಡೆದ ಪ್ರತೀ ಒಂದು ಘಟನೆಯನ್ನೂ ಅಪ್ಪನಿಗೆ ಹೇಳುತ್ತಾಳೆ. ಆಗ ಅವಳಿಗೆ ಯಾವ ಫಿಲ್ಟರ್ ಅಡ್ಡ ಬರುವುದಿಲ್ಲ. ಇದನ್ನು ಹೇಳಬೇಕೋ ಬೇಡವೋ ಎಂಬ ಗೊಂದಲ ಇರುವುದಿಲ್ಲ. ಟೀಚರ್ ಹೊಗಳಿದ್ದು, ಕ್ಲಾಸ್‌ಮೇಟ್ ಗೀರಿದ್ದು, ಆಕೆಯ ಓರಗೆಯ ಹುಡುಗ ಕಣ್ಣು ಹೊಡೆದು ಲವ್ ಯು ಅಂದದ್ದು….ಎಲ್ಲವನ್ನೂ ಅವಳು ಹೇಳಿಯೇ ಹೇಳುತ್ತಾಳೆ.
ಆದರೆ ಇತ್ತೀಚೆಗೆ ಯಾವುದನ್ನೂ ಹೇಳದೆ ಆಕೆ ಮೌನವಾಗಿದ್ದಾಳೆ. ಆಕೆಯ ಕಣ್ಣುಗಳಲ್ಲಿ ಅಗಾಧವಾದ ಭಯ ಹೊರಗೆ ಇಣುಕುತ್ತದೆ. ಉತ್ಸಾಹದ ಚಿಲುಮೆ ಆಗಿದ್ದ ನನ್ನ ಪ್ರಿನ್ಸೆಸ್ ಈಗ ಮಂಕಾಗಿರುವುದು ನನಗೆ ಅಚ್ಚರಿ ತರುತ್ತದೆ. ಆರಂಭದಲ್ಲಿ ಹೊಸ ಶಾಲೆಗೆ ಸೇರಿದ್ದಾಳೆ, ಹೊಂದಾಣಿಕೆ ಕಷ್ಟ ಆಗಿರಬಹುದು ಎಂದು ನಾನು ಭಾವಿಸಿದ್ದೆ. ಅಥವಾ ಪ್ರಾಯಕ್ಕೆ ಬಂದಿದ್ದ ಕಾರಣ ಗೊಂದಲಗಳು ಇರಬಹುದು ಎಂದು ಯೋಚಿಸಿದ್ದೆ. ಆದರೆ ಅವಳ ನೋವಿಗೆ ಅದ್ಯಾವುದೂ ಕಾರಣ ಅಲ್ಲ ಎಂದು ಗೊತ್ತಾದಾಗ ನಾನು ಅವಳ ಬಾಯಿ ಬಿಡಿಸುವುದು ಅನಿವಾರ್ಯ ಆಯಿತು. ಒಮ್ಮೆಗೇ ಅವಳು ನನ್ನ ಕುತ್ತಿಗೆಯ ಸುತ್ತ ಬಳಸಿ ಹಿಡಿದು ಜೋರಾಗಿ ಅಳಲು ಆರಂಭ ಮಾಡಿದಳು! ಎಷ್ಟೋ ದಿನಗಳಿಂದ ಒತ್ತಿ ಹಿಡಿದ ಅಣೆಕಟ್ಟು ಪ್ರವಾಹವಾಗಿ ಹರಿಯಲು ಆರಂಭ ಆಯಿತು.
ಅಪ್ಪಾ, ನನಗೆ ಈ ಶಾಲೆ ಬೇಡ!
ನನ್ನ ಪ್ರಿನ್ಸೆಸ್ ಹಾಗೆಂದು ಹಠ ಹಿಡಿದು ಅಳುವಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವಳು ಸೇರಿದ ಹೈಸ್ಕೂಲ್ ನಮ್ಮೂರಲ್ಲಿಯೆ ಪ್ರಸಿದ್ಧವಾದ ಶಾಲೆ. ಒಳ್ಳೆಯ ಅಧ್ಯಾಪಕರು ಇದ್ದಾರೆ. ಚಂದ ಪಾಠ ಮಾಡುವ ಶಾಲೆ ಅದು. ಪರೀಕ್ಷೆಯ ರಿಸಲ್ಟ್ ತುಂಬ ಚೆನ್ನಾಗಿದೆ. ಸೌಲಭ್ಯಗಳು ಚೆನ್ನಾಗಿವೆ. ಹಾಗಿರುವಾಗ ಅವಳು ಯಾಕೆ ಆ ಶಾಲೆ ಬೇಡ ಅಂತಾಳೆ? ನನಗೆ ಅರ್ಥ ಆಗಲಿಲ್ಲ.
ಆಗ ಅವಳ ಅಳು ನಿಯಂತ್ರಣಕ್ಕೆ ಬಂದಿತ್ತು. ನನ್ನ ಪ್ರಿನ್ಸೆಸ್ ಈಗ ಒಂದೊಂದಾಗಿ ಕಾರಣವನ್ನು ಹೇಳುತ್ತಾ ಹೋದಂತೆ ನಾನು ಬೆಚ್ಚಿ ಬಿದ್ದೆ.
ಓವರ್ ಟು ಮೈ ಪ್ರಿನ್ಸೆಸ್….
ಅಪ್ಪ, ನಾನು ಓದಿದ ಪ್ರೈಮರಿ ಶಾಲೆಯಲ್ಲಿ ನನಗೆ ಯಾವ ಒತ್ತಡವೂ ಇರಲಿಲ್ಲ. ತುಂಬಾ ಗೆಳೆಯರು, ನೂರಾರು ಚಟುವಟಿಕೆಗಳು, ಚಂದ ಚಂದ ಕನಸುಗಳು, ಆಟಗಳು, ನೃತ್ಯಗಳು, ಹಾಡುಗಳು ಎಲ್ಲವೂ ಇದ್ದವು. ಒಂದು ದಿನವೂ ನಮ್ಮ ಅಧ್ಯಾಪಕರು ಪರೀಕ್ಷೆಗಳ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಓರಗೆಯ ಗೆಳೆಯರು ಒಬ್ಬರಿಗೆ ಒಬ್ಬರು ಸಪೋರ್ಟ್ ಮಾಡುತ್ತಿದ್ದರು. ಚಂದ ಕಲಿಯುವ ವಾತಾವರಣ ಇತ್ತು. ನಮ್ಮ ಮಧ್ಯೆ ಸ್ಪರ್ಧೆ ಇರಲೇ ಇಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದೇ ಇಲ್ಲ.
ಈಗ ಎಲ್ಲವನ್ನೂ ಬಾಯಿಪಾಠ ಮಾಡಿಸುತ್ತಾರೆ!
ಆದರೆ ಈಗ ನಮ್ಮ ಹೈಸ್ಕೂಲ್ ಅದಕ್ಕೆ ವಿರುದ್ಧವಾಗಿದೆ. ಅಧ್ಯಾಪಕರು ಚಂದ ಪಾಠ ಮಾಡುತ್ತಾರೆ. ಆದರೆ ಪ್ರತೀ ದಿನವೂ ಪರೀಕ್ಷೆ, ಪರೀಕ್ಷೆ ಎಂದು ಗೋಳು ಹೊಯ್ದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಬಾಯಿಪಾಠ ಮಾಡಲು ಒತ್ತಾಯ ಮಾಡುತ್ತಾರೆ. ನಾನು ಪ್ರೈಮರಿ ಶಾಲೆಯಲ್ಲಿ ಎಂದಿಗೂ ಬಾಯಿಪಾಠ ಮಾಡಿದ್ದು ಇಲ್ಲ. ಎಲ್ಲವನ್ನೂ ನಮ್ಮ ಅಧ್ಯಾಪಕರು ಅರ್ಥ ಮಾಡಿ ಬಿಡುತ್ತಿದ್ದರು. ಬಾಯಿಪಾಠದ ಅಗತ್ಯವೇ ಬೀಳಲಿಲ್ಲ. ಆದರೆ ಈಗ ಇಲ್ಲಿನ ಅಧ್ಯಾಪಕರು ಬಲವಂತವಾಗಿ ಬಾಯಿಪಾಠ ಮಾಡಿಸುತ್ತಾರೆ. ನಮ್ಮದೇ ವಾಕ್ಯ ಮಾಡಿ ಉತ್ತರ ಬರೆದರೆ ಮಾರ್ಕ್ ಕೊಡುವುದೇ ಇಲ್ಲ! ಒಂದೊಂದು ಉತ್ತರವನ್ನು ಹತ್ತು ಸಲ ಬರೆಸುತ್ತಾರೆ. ಅದರಿಂದ ನಮಗೇನು ಲಾಭ? ನಾನು ಬಾಲ್ಯದಿಂದಲೂ ಕ್ರಿಯೇಟಿವ್ ಆಗಿ ಕಲಿತವಳು. ಯಾಂತ್ರಿಕವಾಗಿ ಕಲಿಯುವುದು ನನ್ನಿಂದ ಆಗೋದಿಲ್ಲ ಅಪ್ಪ. ಅವರು ಕೊಟ್ಟ ನೋಟ್ಸ್ ಬಾಯಿಪಾಠ ಮಾಡಿ ಉತ್ತರ ಬರೆಯುವುದು ಅದ್ಯಾವ ಬುದ್ಧಿವಂತಿಕೆ?
ನನಗೆ ಒಮ್ಮೆ ಹೇಳಿದರೆ ಎಲ್ಲವೂ ಅರ್ಥ ಆಗುತ್ತದೆ ಅಪ್ಪ. ಮತ್ತೆ ಅವರು ಯಾಕೆ ಒಂದೊಂದು ವಾಕ್ಯ ಮೂರು ಮೂರು ಬಾರಿ ಹೇಳುತ್ತಾರೆ?
ಶಿಕ್ಷಕರು ನಮಗೆ ಚುಚ್ಚಿ ನೋವು ಕೊಟ್ಟು ಮಾತಾಡ್ತಾರೆ
ನಮ್ಮ ಶಿಕ್ಷಕರು ತರಗತಿಯಲ್ಲಿ ಅನಾವಶ್ಯಕವಾಗಿ ಕಂಪೇರ್ ಮಾಡ್ತಾರೆ. ಅವಳನ್ನು ನೋಡಿ ಕಲಿ, ಇವನನ್ನು ನೋಡಿ ಕಲಿ ಎಂದೆಲ್ಲ ಹೇಳುತ್ತಾರೆ. ನನಗದು ಇಷ್ಟ ಆಗೋದಿಲ್ಲ ಅಪ್ಪ. ನಾನು ನಾನೇ ಆಗಿರೋದು ನನಗೆ ಇಷ್ಟ. ನಾನ್ಯಾಕೆ ಅವನ ಹಾಗೆ, ಅವಳ ಹಾಗೆ ಇರಬೇಕು? ಮಾತು ಮಾತಿಗೂ ಚುಚ್ಚಿ ಮಾತಾಡ್ತಾರೆ.
ಮೊನ್ನೆ ನಮ್ಮ ಗಣಿತ ಮ್ಯಾಮ್ ಬೋರ್ಡ್ ಮೇಲೆ ಒಂದು ಲೆಕ್ಕ ತಪ್ಪು ಮಾಡಿದರು. ನಾನು ಎದ್ದು ನಿಂತು ಅದು ತಪ್ಪು ಅಂತ ಹೇಳಿದ್ದೆ. ಆಗ ಆ ಮ್ಯಾಮ್ ಗಟ್ಟಿಯಾಗಿ ‘ಕೂತ್ಕೋ ಕೂತ್ಕೋ. ನೀನು ಗಣಿತ ಮೇಷ್ಟ್ರ ಮಗಳು ಎಂದು ಗೊತ್ತಿದೆ!’ ಎಂದರು. ನನಗೆ ಅಳು ಬಂತು ಅಪ್ಪ. ನಾನೇನು ತಪ್ಪು ಹೇಳಿದ್ದೇನೆ? ಅವರ್ಯಾಕೆ ನಿಮ್ಮ ಬಗ್ಗೆ ಹಗುರವಾಗಿ ಮಾತಾಡಬೇಕು? ನನಗದು ಇಷ್ಟ ಆಗೋದಿಲ್ಲ ಅಪ್ಪ.
ಶಿಕ್ಷಕರು ಇಲ್ಲಿ ತಾರತಮ್ಯ ಮಾಡ್ತಾರೆ ಅಪ್ಪ
ನಮ್ಮ ಶಾಲೆಯಲ್ಲಿ ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ತಾರತಮ್ಯ ಇದೆ ಅಪ್ಪ. ಶ್ರೀಮಂತರ ಮಕ್ಕಳು ಶಾಲೆಗೆ ಹೆಚ್ಚು ಡೊನೇಶನ್ ಕೊಡುವ ಕಾರಣ ಅವರಿಗೆ ಹೆಚ್ಚು ಮಾರ್ಕ್, ಅವರಿಗೆ ಹೆಚ್ಚು ಬಹುಮಾನ, ಅವರಿಗೆ ಹೆಚ್ಚು ಹೊಗಳಿಕೆ. ನನಗದು ಇಷ್ಟ ಆಗೋದಿಲ್ಲ ಅಪ್ಪ.
ಮೊನ್ನೆ ಒಂದು ಸಣ್ಣ ಸ್ಪೆಲ್ಲಿಂಗ್ ತಪ್ಪು ಮಾಡಿದ್ದಕ್ಕೆ ಬೈದರು. ನೂರು ಸಲ ಬರೆಯಲು ಹೇಳಿದರು. ನಾನೇನಾದರೂ ಬೇಕೆಂದೇ ತಪ್ಪು ಮಾಡುತ್ತೇನಾ? ತಪ್ಪು ಮಾಡಲು ಅವಕಾಶ ಇಲ್ಲದ ಶಾಲೆ ನನಗೆ ಬೇಡ. ನನ್ನ ಕ್ರಿಯೇಟಿವ್ ಟ್ಯಾಲೆಂಟ್ ಅವರಿಗೆ ಬೇಡ ಅಂದರೆ ನನಗೆ ಶಾಲೆಯೇ ಬೇಡ! ನಮ್ಮದು ಶಾಲೆ ಎಂಬ ಭಾವನೆ ಬರುವುದಿಲ್ಲ ಅಪ್ಪ.
ಅದು ರ‍್ಯಾಂಕ್ ಪಡೆಯುವ ಒಂದು ಕಾರ್ಖಾನೆ!
ಒಂದೇ ಒಂದು ಬದುಕಿನ ಪಾಠ ಇಲ್ಲ. ಎಲ್ಲರೂ ಮಾರ್ಕ್, ಮಾರ್ಕ್ ಎಂದು ಅರಚುತ್ತಾರೆ. ರ‍್ಯಾಂಕ್ ಪಡೆಯುವ ಮಕ್ಕಳಿಗೆ ಸಪರೇಟ್ ಕ್ಲಾಸಸ್ ಮಾಡ್ತಾರೆ. ಕಡಿಮೆ ಮಾರ್ಕ್ ತೆಗೆದುಕೊಳ್ಳುವ ಮಕ್ಕಳಿಗೆ ಬೇರೆ ಅಧ್ಯಾಪಕರು ಪಾಠ ಮಾಡ್ತಾರೆ. ಪರೀಕ್ಷೆಗೆ ಬರುವ ಪ್ರಶ್ನೆಗಳನ್ನು ಮಾತ್ರ ಹೇಳಿಕೊಡುತ್ತಾರೆ. ನಾವೇನಾದರೂ ಕುತೂಹಲಕ್ಕೆ ಪ್ರಶ್ನೆ ಕೇಳಿದರೆ ಅಧಿಕ ಪ್ರಸಂಗಿ ಎಂದು ಬೈತಾರೆ. ನನಗೆ ಈ ಶಾಲೆ ಬೇಡ ಅಪ್ಪ.
ಓರಗೆಯ ಗೆಳೆಯರಲ್ಲ ಅವರು, ಸ್ಪರ್ಧಿಗಳು!
ಇನ್ನು ನಮ್ಮ ಓರಗೆಯ ಇತರರು ನನಗೆ ಗೆಳೆಯರಾಗಿ ಕಾಣುತ್ತಿಲ್ಲ. ಅವರು ನನ್ನ ಜೊತೆಗೆ ರೇಸಿಗೆ ನಿಂತ ಹಾಗೆ ವರ್ತಿಸುತ್ತಾರೆ. ಅವರಿಗಿಂತ ನನಗೆ ಒಂದು ಮಾರ್ಕ್ ಹೆಚ್ಚು ಬಂದರೂ ಉರಿದು ಸಾಯುತ್ತಾರೆ. ಯಾವುದೇ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂದರೆ ಪಾರ್ಶಿಯಾಲಿಟಿ ಎಂದು ಬೊಬ್ಬೆ ಹೊಡೆಯುತ್ತಾರೆ. ನನ್ನ ವಿರುದ್ಧ ಶಿಕ್ಷಕರ ಬಳಿ ಹೋಗಿ ಚಾಡಿ ಹೇಳುತ್ತಾರೆ. ನಾನು ಓದಬಾರದು ಎಂದು ನಾನು ಕಷ್ಟ ಪಟ್ಟು ಬರೆದ ನೋಟ್ಸ್ ಪುಟಗಳನ್ನು ಹರಿಯುತ್ತಾರೆ. ಹಿಂಸೆ ಕೊಡುತ್ತಾರೆ. ಶಿಕ್ಷಕರಿಗೆ ಗಿಫ್ಟ್ ತಂದುಕೊಟ್ಟು ಪ್ಲೀಸ್ ಮಾಡ್ತಾರೆ.
ಅಂತಹ ಮಕ್ಕಳನ್ನು ನಮ್ಮ ಟೀಚರ್ಸ್ ತಲೆಯ ಮೇಲೆ ಹೊತ್ತು ಪೂಜೆ ಮಾಡ್ತಾರೆ. ಸ್ಕೂಲ್ ಡೇನಲ್ಲಿಯೂ ಅಂತಹ ಮಕ್ಕಳಿಗೆ ಮಾತ್ರ ವೇದಿಕೆ. ಅವರಿಗೆ ಸಾಲು ಸಾಲು ಬಹುಮಾನಗಳು! ಉಳಿದವರಿಗೆ ಏನೂ ಇಲ್ಲ.
ನಮ್ಮ ಶಾಲೆಯಲ್ಲಿ ಮಾರ್ಕ್ ಪಡೆಯುವುದು ಮಾತ್ರ ಟ್ಯಾಲೆಂಟ್!
ಬೇರೆ ಯಾವ ಟ್ಯಾಲೆಂಟ್ ಕೂಡ ನಮ್ಮ ಶಿಕ್ಷಕರಿಗೆ ಬೇಡ. ಸ್ಪೋರ್ಟ್ಸ್, ಗೇಮ್ಸ್, ನಾಟಕ, ಸ್ಕಿಟ್, ಹಾಡು, ಡ್ಯಾನ್ಸ್ ಇದ್ಯಾವುದಕ್ಕೂ ನಮ್ಮ ಶಾಲೆಯಲ್ಲಿ ವೇದಿಕೆ ಇಲ್ಲ. ಗೇಮ್ಸ್ ಪೀರಿಯಡ್ ಇದ್ದಾಗಲೂ ಟೀಚರ್ಸ್ ಬಂದು ಗಣಿತ, ವಿಜ್ಞಾನ, ಇಂಗ್ಲಿಷ್ ಪಾಠ ಮಾಡ್ತಾರೆ. ನಮ್ಮ ಇಂಗ್ಲಿಷ್ ಟೀಚರ್ ಇವತ್ತಿಗೂ ಭಾಷಾಂತರ ವಿಧಾನದಲ್ಲಿ ಪಾಠ ಮಾಡ್ತಾರೆ. ನಮಗೆ ಇಂಗ್ಲೀಷ್ ಭಾಷೆಯಲ್ಲಿಯೇ ಮಾತಾಡಬೇಕು ಅನ್ನುತ್ತಾರೆ. ಅವರು ಸ್ಟಾಫ್ ರೂಂನಲ್ಲಿ ಇಂಗ್ಲಿಷ್ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ! ನನಗೆ ಈ ಶಾಲೆ ಬೇಡವೇ ಬೇಡ ಅಪ್ಪ. ಪ್ಲೀಸ್ ಬೇರೆ ಕಡೆ ಸೇರಿಸಿ.
ಇದನ್ನೂ ಓದಿ : Raja Marga Column : ಗಂಡ, ಮಕ್ಕಳ ಕೊಂದವರ ಕ್ಷಮಿಸಿದ್ದೇನೆ ಎಂದು ಹೇಳಿದ್ದರು ಆಕೆ!
ಭರತವಾಕ್ಯ
ನನ್ನ ಮಗಳ ನಿರ್ಧಾರ ಸರಿ ಇತ್ತು. ನಾಳೆಯೇ ಅವಳನ್ನು ಬೇರೆ ಶಾಲೆಗೆ ಸೇರಿಸುವ ಭರವಸೆ ಕೊಟ್ಟೆ. ಅವಳು ಥ್ಯಾಂಕ್ಸ್ ಅಪ್ಪ ಎಂದು ನನ್ನ ಕೆನ್ನೆಗೆ ಮುತ್ತು ಕೊಟ್ಟು ನಿದ್ದೆಗೆ ಜಾರಿದಳು.