Site icon Vistara News

Raja Marga Column : ರಾಮ ಮರ್ಯಾದಾ ಪುರುಷೋತ್ತಮ ಆಗಿದ್ದು ಹೇಗೆ?

Raja Marga Maryada purushottama RamaRaja Marga Maryada purushottama Rama

ಅಜರಾಮರ ರಾಮ- ಭಾಗ 1

ಆದಿಕವಿ ಎಂದು ಬಣ್ಣಿಸಲ್ಪಟ್ಟ ವಾಲ್ಮೀಕಿಯಿಂದ (Adikavi Valmiki) ರಚಿತವಾದ ರಾಮಾಯಣವು (Ramayana Epic) 24,000 ಶ್ಲೋಕಗಳನ್ನು ಹೊಂದಿರುವ, ಏಳು ಕಾಂಡಗಳನ್ನು ಹೊಂದಿರುವ ಮಹಾಕಾವ್ಯ. ಇಡೀ ಮಹಾಕಾವ್ಯದ ಕೇಂದ್ರಬಿಂದು ಅಂದರೆ ಅದು ಶ್ರೀ ರಾಮಚಂದ್ರ ಪ್ರಭುವೇ ಆಗಿದ್ದಾನೆ.(Raja Marga Column)

ಪುನಾತಿ ಭುವನಮ್ ಪುಣ್ಯಂ
ರಾಮಾಯಣ ಮಹಾನದಿ
(ಜಗತ್ತಿನ ಪುಣ್ಯ ಸಂಚಾರಿಯಾದ ರಾಮಾಯಣ ಎನ್ನುವ ಮಹಾನದಿ ಎನ್ನುವುದು ಈ ಶ್ಲೋಕದ ಭಾವಾರ್ಥ).

ಜಗತ್ತಿನ ಅತ್ಯಂತ ಶ್ರೇಷ್ಠವಾದ ಮಹಾಕಾವ್ಯ

ಇಡೀ ಜಗತ್ತಿನ ಬೇರೆಲ್ಲ ಮಹಾ ಕಾವ್ಯಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಇಟ್ಟು ಇನ್ನೊಂದು ತಕ್ಕಡಿಯಲ್ಲಿ ರಾಮಾಯಣವನ್ನು ಇಟ್ಟರೆ ರಾಮಾಯಣವೇ ಹೆಚ್ಚು ಭಾರವಾಗುತ್ತದೆ ಎನ್ನುವುದು ವಿದ್ವಾಂಸರ ಖಚಿತವಾದ ಅಭಿಮತ. ಮೌಲ್ಯ ನಿರ್ಣಯದಲ್ಲಿ, ಪಾತ್ರ ಪೋಷಣೆಯಲ್ಲಿ, ಸರಳ ನಿರೂಪಣೆಯಲ್ಲಿ, ಛಂದಸ್ಸಿನಲ್ಲಿ,
ರಸಾಸ್ವಾದನೆಯಲ್ಲಿ, ಭಾಷಾ ಸೌಂದರ್ಯದಲ್ಲಿ…. ಹೀಗೆ ಎಲ್ಲ ವಿಭಾಗಗಳಲ್ಲಿಯೂ ರಾಮಾಯಣವು ಬೇರೆಲ್ಲಾ ಮಹಾ ಕಾವ್ಯಗಳಿಗಿಂತ ತುಂಬಾ ಮುಂದಿದೆ ಅನ್ನುವುದು ಖಚಿತ. ಹಾಗೆ ಕಥಾ ನಾಯಕನ ಬಗ್ಗೆ ಅಧ್ಯಯನ ಮಾಡಿದಾಗ ಪ್ರಭು ಶ್ರೀ ರಾಮನೇ ಅಗ್ರೇಸರ ಹೌದು. ಜಗತ್ತಿನ ಎಲ್ಲ ಶ್ರೇಷ್ಠ ಮೌಲ್ಯಗಳನ್ನು ಒಂದೇ ಪಾತ್ರದಲ್ಲಿ ಕಾಣುವುದು ವಿರಳ. ಆದರೆ ರಾಮನು ಆ ಎಲ್ಲ ಮೌಲ್ಯಗಳ ರಾಯಭಾರಿ. ಅದರಿಂದಾಗಿ ಆತ ಮರ್ಯಾದಾ ಪುರುಷೋತ್ತಮ. ಅದರಿಂದಾಗಿ ಆತ ಪರಮಾದರ್ಶ ಪುರುಷ.

ರಾಮಾಯಣದಲ್ಲಿ ನೂರಾರು ನಿದರ್ಶನಗಳು

ಇದಕ್ಕೆ ರಾಮಾಯಣದಲ್ಲಿ ಅದಕ್ಕೆ ನೂರಾರು ನಿದರ್ಶನಗಳು ದೊರೆಯುತ್ತವೆ. ಮುಂದೆ ಓದಿ…

1) ‘ನನ್ನ ಮಗ ಭರತನಿಗೆ ಪಟ್ಟ ಕಟ್ಟಬೇಕು. ನೀನು ಕಾಡಿಗೆ ನಡೆ’ ಎಂದು ಹೇಳಿದ್ದು ಚಿಕ್ಕಮ್ಮ ಕೈಕೇಯಿ. ದಶರಥ ಆ ಮಾತನ್ನು ಹೇಳಲೇ ಇಲ್ಲ. ಕೊನೆಯದಾಗಿ ಆಶೀರ್ವಾದ ಪಡೆಯಲು ರಾಮನು ದಶರಥನ ಬಳಿ ಹೋದಾಗ ಸ್ವತಃ ದಶರಥ ಹೇಳಿದ್ದು – ರಾಮಾ, ಹೋಗಬೇಡ. ನೀನೇ ಪಟ್ಟವೇರು. ಪತ್ನಿಯ ಮೋಹಕ್ಕೆ ಒಳಗಾಗಿ ನಾನು ಕೆಟ್ಟೆ. ನೀನು ಕಾಡಿಗೆ ಹೋಗಬೇಡ ರಾಮಾ’ ಎಂದದ್ದು ದಶರಥ.
ಆದರೆ ಸ್ವತಃ ರಾಮನಿಗೆ ಪಿತೃವಾಕ್ಯಂ ಶಿರೋಧಾರ್ಯಂ! ರಾಮನು ಕಾಡಿಗೆ ಹೊರಟೇ ಬಿಟ್ಟ.

2) ಚಿತ್ರಕೂಟ ಪರ್ವತದಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದಾಗ ಅಲ್ಲಿಗೆ ಬಂದ ಭರತ, ಅಯೋಧ್ಯೆಯ ಮಹಾಜನರು, ಸ್ವತಃ ಕೈಕೇಯಿ ಕಣ್ಣೀರು ಸುರಿಸಿ ಕ್ಷಮೆ ಕೇಳುತ್ತಾ ರಾಮನು ಮತ್ತೆ ಅಯೋಧ್ಯೆಗೆ ಬರಬೇಕು ಎಂದು ವಿನಂತಿ ಮಾಡುತ್ತಾರೆ. ಗುರುಗಳಾದ ವಸಿಷ್ಠರು ಎಷ್ಟೇ ಕೇಳಿದರೂ ರಾಮನ ನಿರ್ಧಾರ ಅಚಲ ಆಗಿತ್ತು. ನನ್ನ ತಂದೆ ಮಾತು ತಪ್ಪಿ ನರಕದಲ್ಲಿ ತೊಳಲಾಡುವ ಕಷ್ಟ ಬೇಡ. ನಾನು ಅಯೋಧ್ಯೆಗೆ ಬರಲಾರೆ ಎಂದವನು ರಾಮ.

3) ಚಿತ್ರಕೂಟದಲ್ಲಿ ಬಂಗಾರದ ಜಿಂಕೆಯ ಬಗ್ಗೆ ಸೀತೆ ಮೋಹಕ್ಕೆ ಒಳಗಾಗಿ ಅದು ಬೇಕು ಎಂದು ಹಠ ಹಿಡಿದಾಗ ರಾಮನು ಅದು ಖಚಿತವಾದ ರಕ್ಕಸರ ಮಾಯೆ. ಮೋಹಕ್ಕೆ ಒಳಗಾಗಬೇಡ ಎನ್ನುತ್ತಾನೆ. ಸೀತೆ ಮತ್ತು ಕೂಡ ಹಠ ಹಿಡಿದಾಗ ಆಕೆಯ ರಕ್ಷಣೆಯ ಜವಾಬ್ದಾರಿಯನ್ನು ಲಕ್ಷಣನಿಗೆ ಒಪ್ಪಿಸಿ ಜಿಂಕೆಯ ಬೇಟೆಗೆ ಹೊರಡುತ್ತಾನೆ.

4) ರಾವಣನು ಸೀತೆಯನ್ನು ಅಪಹಾರ ಮಾಡಿದ ಸುದ್ದಿಯನ್ನು ಜಟಾಯು ಹೇಳಿ ಮರಣವನ್ನು ಅಪ್ಪಿದಾಗ ರಾಮನು ಮಮ್ಮಲ ಮರುಗುತ್ತಾನೆ. ಕಂಬನಿ ಮಿಡಿಯುತ್ತಾನೆ. ಆ ಹಕ್ಕಿಯ ಅಂತಿಮ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿ ಮತ್ತೆ ಮುಂದೆ ಹೋಗುತ್ತಾನೆ.

5) ದಲಿತ ಮಹಿಳೆ ಶಬರಿ ಮುಗ್ಧತೆಯಿಂದ ಕಚ್ಚಿ ಕೊಟ್ಟ ಹಣ್ಣುಗಳನ್ನು ರಾಮನು ಒಂದಿಷ್ಟೂ ಹೇಸಿಗೆ ಪಡದೇ ತಿನ್ನುತ್ತಾನೆ. ಆಕೆಯ ಪಾದಗಳಿಗೆ ನಮಸ್ಕಾರ ಮಾಡಿ ಮುಂದೆ ಹೋಗುತ್ತಾನೆ.

6) ಚಿತ್ರಕೂಟದಲ್ಲಿ ದಿನವೂ ಋಷಿ ಮುನಿಗಳ ಪುರಾಣ ಪ್ರವಚನಗಳನ್ನು ಕೇಳುತ್ತಾ ರಾಮನು ಆನಂದ ಪಡುತ್ತಾನೆ. ಅದಕ್ಕೆ ಕಾರಣಕರ್ತಳಾದ ಕೈಕೇಯಿಗೆ ಆತನು ದಿನವೂ ಮನಸಿನಲ್ಲಿ ಧನ್ಯವಾದ ಹೇಳುತ್ತಾನೆ.

7) ಕಾಡಿನಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಕೂಡ ಋಷಿ ಮುನಿಗಳು ರಕ್ಕಸರಿಂದ ಯಜ್ಞಕ್ಕೆ ತೊಂದರೆ ಉಂಟಾಗಿದೆ ಎಂದು ರಾಮನ ಬಳಿ ಬಂದು ವಿನಂತಿ ಮಾಡಿದಾಗ ಆಯುಧಗಳನ್ನು ಧರಿಸಿಕೊಂಡು ಹೋಗಿ ದುಷ್ಟ ಶಿಕ್ಷಣ ಮಾಡುತ್ತಾನೆ. ಕ್ಷತ್ರಿಯ ಕುಲದ ತನ್ನ ಕರ್ತವ್ಯವನ್ನು ಆತನು ಎಲ್ಲಿ ಹೋದರೂ ನಿರ್ಲಕ್ಷ್ಯ ಮಾಡುವುದಿಲ್ಲ.

8) ಅಪ್ರತಿಮ ಪರಾಕ್ರಮಿ ಆದ ರಾಮನಿಗೆ (ಆತನು ಸ್ವತಃ ದೇವರ ಅವತಾರ ಎಂದು ವಿಶ್ವಾಮಿತ್ರರು ಆತನಿಗೆ ಹೇಳಿದ್ದರೂ) ರಾವಣನ ಲಂಕೆಯನ್ನು ಗೆಲ್ಲಲು ಆತನು ವಾನರ ಪಡೆಯ ಸಹಾಯವನ್ನು ಪಡೆಯುತ್ತಾನೆ. ಹನುಮಂತನನ್ನು ತುಂಬಾ ಪ್ರೀತಿಸುತ್ತಾನೆ.

9) ರಾಮ ಮತ್ತು ಹನುಮಂತ ಇವರಿಬ್ಬರ ಸ್ನೇಹವು ರಾಮಾಯಣದ ಅತ್ಯಂತ ದೊಡ್ಡ ವಿಸ್ಮಯ. ಹನುಮಂತ ಖಂಡಿತವಾಗಿ ಸೀತೆಯವರೆಗೆ ತಲುಪುತ್ತಾನೆ ಎಂದು ನಾಯಕನಾದ ರಾಮನಿಗೆ ಗೊತ್ತಿತ್ತು. ಅದಕ್ಕಾಗಿ ಆತನು ಮುದ್ರೆ ಉಂಗುರವನ್ನು ಬೇರೆ ಯಾರ ಕೈಯಲ್ಲಿಯೂ ಕೊಡದೆ ಹನುಮಂತನ ಕೈಯ್ಯಲ್ಲಿ ಕೊಟ್ಟದ್ದು ರಾಮನ ನಂಬಿಕೆ.

ಇದನ್ನೂ ಓದಿ : Raja Marga Column : ರಾಮನ ಕಥೆ ಕಾಲ್ಪನಿಕ ಅಲ್ವೇ ಅಲ್ಲ, ಅಯೋಧ್ಯೆಯಲ್ಲಿದೆ ನೂರಾರು ಸಾಕ್ಷಿ!

10) ತಾನು ಸುಗ್ರೀವನಿಗೆ ಕೊಟ್ಟ ವಚನವು ಪೂರ್ತಿ ಆದ ನಂತರವೇ ರಾಮನು ವಾನರ ಸೇನೆಯ ಸಹಾಯ ಪಡೆಯುತ್ತಾನೆ. ಅದೂ ವಾಲಿವಧೆಯ ಆರು ತಿಂಗಳ ನಂತರ. ಸುಗ್ರೀವನಿಗೆ ಪಟ್ಟಾಭಿಷೇಕ ಆದ ನಂತರ.

11) ಮರೆಯಲ್ಲಿ ನಿಂತು ಬಾಣ ಹೊಡೆದು ತನ್ನನ್ನು ಕೊಂದ ಬಗ್ಗೆ ಇದು ಸರಿಯಾ ರಾಮ? ಎಂದು ವಾಲಿಯು ಸಾಯುವ ಸಂದರ್ಭದಲ್ಲಿ ಪ್ರಶ್ನೆ ಮಾಡುತ್ತಾನೆ. ಆಗ ಶ್ರೀರಾಮನು ಅವನ ಗೊಂದಲವನ್ನು ಪರಿಹಾರ ಮಾಡಿ ಅವನಿಗೆ ಮೋಕ್ಷವನ್ನು ಕರುಣಿಸುತ್ತಾನೆ.

12) ಯುದ್ಧವು ‘ಹಿಂಸಾ ವಿನೋದಿ’ ಎಂಬ ಅರಿವು ರಾಮನಿಗೆ ಇತ್ತು. ಅದಕ್ಕಾಗಿ ರಾವಣನ ಜೊತೆಗೆ ಸಂಧಾನಕ್ಕೆ ಹನುಮಂತನನ್ನು ರಾಮನು ಕಳುಹಿಸಿದಾಗ ಹೇಳಿ ಕಳಿಸಿದ ಮಾತು – ಸೀತೆಯನ್ನು ಗೌರವ ಪೂರ್ವಕವಾಗಿ ಹಿಂದೆ ಕಳುಹಿಸಿದರೆ ಯುದ್ಧವೇ ಬೇಡ ಎಂದು! ಕ್ಷತ್ರಿಯನಾದರೂ ರಾಮನ ನಿಲುವು ಅಹಿಂಸಾಪರ ಆಗಿತ್ತು.

(ಮುಂದುವರಿಯುತ್ತದೆ)

Exit mobile version