Site icon Vistara News

Raja Marga Column : ನಮ್ಮದು ಯುವ ಭಾರತ; ಇಷ್ಟೊಂದು ಯುವ ಶಕ್ತಿ ಯಾವ ದೇಶದಲ್ಲೂ ಇಲ್ಲ!

LinkedIns Tips for Graduates in the Job Search

ಇಡೀ ಜಗತ್ತು ಇವತ್ತು ಭಾರತದ ಕಡೆಗೆ ಮಾತ್ಸರ್ಯದಿಂದ ನೋಡಲು ತೊಡಗಿದೆ! ಅದಕ್ಕೆ ಕಾರಣ ನನ್ನ ಭಾರತ ಈಗ ‘ಯುವ ಭಾರತ’ (Young India) ಆಗಿ ಹೊಮ್ಮುತ್ತಿರುವುದೇ ಆಗಿದೆ. ಹೌದು, ನನ್ನ ಭಾರತ ಇಂದು ದೊಡ್ಡ ಮಟ್ಟದಲ್ಲಿ ಬದಲಾಗುತ್ತಿದೆ. ಈಗಿನ ಭಾರತದ ಜನಸಂಖ್ಯೆಯಲ್ಲಿ (Population of India) 35 ವರ್ಷದ ಒಳಗಿನ ಯುವಜನರ ಪ್ರಮಾಣ 66%! ಅದರಲ್ಲಿಯೂ 25 ವರ್ಷದ ಒಳಗಿನ ಯುವಜನರ ಸಂಖ್ಯೆ 50%! (Raja Marga Column)

ಈ ಅನುಪಾತವು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ನನ್ನ ಭಾರತ ‘ಯುವ ಭಾರತ’ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಶೈಕ್ಷಣಿಕ ಮಟ್ಟ (Education level) ಕೂಡ ಏರಿಕೆ ಆಗಿದೆ. ಶಾಲಾ, ಪ್ರೌಢಶಾಲಾ ಹಂತಗಳಲ್ಲಿ ಮಕ್ಕಳ ಡ್ರಾಪ್ ಔಟ್ ಪ್ರಮಾಣವು (School Dropout) ತುಂಬಾ ಕಡಿಮೆ ಆಗಿದೆ. ಭಾರತದಲ್ಲಿ ಇಂದು 15 ಲಕ್ಷ ಶಾಲೆಗಳು, 95 ಲಕ್ಷ ಶಿಕ್ಷಕರು, 26.5 ಕೋಟಿ ವಿದ್ಯಾರ್ಥಿಗಳು ಇದ್ದಾರೆ! ಇದು ಕೂಡ ಜಾಗತಿಕ ದಾಖಲೆ.

ಅದರ ಪರಿಣಾಮವಾಗಿ ಭಾರತದ ‘ಮಾನವ ಸಂಪನ್ಮೂಲ ರೇಟಿಂಗ್’ (Human resource rating) ಏರಿಕೆ ಆಗಿದೆ ಎಂದು ಸಮೀಕ್ಷೆಗಳು ತೋರಿಸಿವೆ. ಆದ್ದರಿಂದ ನನ್ನ ಭಾರತ ಬದಲಾಗುತ್ತಿದೆ.

ನನ್ನ ಭಾರತ- ಕೌಶಲ ಭಾರತ (Skill India)

yuva Bharat

ನಮ್ಮ ಯುವಜನತೆಯು ‘ಸ್ಕಿಲ್ ಇಂಡಿಯಾ’ ವಿಭಾಗದಲ್ಲಿ ದಾಪುಗಾಲನ್ನು ಹಾಕಿ ಮುನ್ನಡೆಯುತ್ತಿದೆ. ಭಾರತದಲ್ಲಿ ಬೇಸಿಕ್ ಸೈನ್ಸ್ ಕಲಿಯುವ ವಿದ್ಯಾರ್ಥಿಗಳು ಇಂದು ಜಾಸ್ತಿ ಆಗುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಇಂದು ಭಾರತದ್ದೇ ಸಿಂಹಪಾಲು. ಒಂದು ಕಾಲದಲ್ಲಿ ತನ್ನ ಉಪಗ್ರಹಗಳನ್ನು ಹಾರಿಸಲು ರಷ್ಯಾ ಅಥವಾ ಅಮೆರಿಕಾದ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಿದ್ದ ಭಾರತ ಇಂದು ನೂರಾರು ವಿದೇಶದ ಉಪಗ್ರಹಗಳನ್ನು ಹಾರಿಸುವ ಮಟ್ಟಕ್ಕೆ ಏರಿದ್ದು ಸಣ್ಣ ಸಾಧನೆ ಅಲ್ಲ. ಮಂಗಳ ಯಾನ, ಚಂದ್ರ ಯಾನ, ಸೌರ ಯಾನ, ಕ್ಷಿಪಣಿ ತಂತ್ರಜ್ಞಾನ…..ಈ ಯಾವ ವಿಭಾಗ ಆರಿಸಿದರೂ ಭಾರತ ಇಂದು ಕ್ರಾಂತಿಕಾರಕ ಸಾಧನೆ ಮಾಡುತ್ತಿದೆ. ಇಂದು ಭಾರತದ ಗುರಿಯು
‘Developing India’ ಅಲ್ಲವೇ ಅಲ್ಲ. ಅದು ‘Developed India ‘ ಅನ್ನೋದು ಜಗತ್ತಿಗೆ ಅರ್ಥ ಆಗಿದೆ!

ನನ್ನ ಭಾರತ ಇಂದು ‘ಉದ್ಯೋಗ ಭಾರತ’

ಒಂದು ಕಾಲದಲ್ಲಿ ಅಮೆರಿಕಾದ ಮಗು ಅಳುತ್ತಿದ್ದಾಗ ಅಲ್ಲಿಯ ಅಮ್ಮ ಹೇಳುತ್ತಿದ್ದರು – ಅಳಬೇಡ, ಭಾರತದ ಹಸಿದ ಮಗು ಬರ್ತಾ ಇದೆ, ನಿನ್ನ ತುತ್ತು ಕಸಿದು ಕೊಳ್ಳುತ್ತಿದೆ ಎಂದು! ಇಂದು ಅದೇ ಅಮ್ಮ ಹೇಳುತ್ತಿದ್ದಾರೆ – ಚೆನ್ನಾಗಿ ಓದು ಮಗನೇ, ಭಾರತದ ಕಲಿತ ಮಗು ಬರ್ತಾ ಇದೆ. ನಿನ್ನ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದೆ ಎಂದು!

ಅಷ್ಟರಮಟ್ಟಿಗೆ ನನ್ನ ಭಾರತವು ಬದಲಾಗುತ್ತಿದೆ. ಭಾರತದಲ್ಲಿ ಈಗಾಗಲೇ ಡಿಜಿಟಲ್ ಕ್ರಾಂತಿ, ಸ್ಟಾರ್ಟಪ್ ಕ್ರಾಂತಿ ಮತ್ತು ನಾವೀನ್ಯತೆ ಕ್ರಾಂತಿಗಳು ಆಗ್ತಾ ಇವೆ. ಮುದ್ರಾ ಯೋಜನೆಯ ಮೂಲಕ ಯುವಜನತೆಗೆ 23,00,000 ಕೋಟಿ ನೆರವು ಈಗಾಗಲೇ ನೀಡಲಾಗಿದೆ. ಸ್ಟಾರ್ಟಪ್‌ಗಳ ಮೂಲಕ ಹತ್ತು ಲಕ್ಷ ಯುವ ಉದ್ಯಮಿಗಳು ಹೊಸದಾಗಿ ಹೊರಹೊಮ್ಮಿದ್ದಾರೆ. ಎಂಟರಿಂದ ಒಂಬತ್ತು ಕೋಟಿ ಯುವಕರು ಸ್ವಂತ ಉದ್ಯೋಗ ಈಗಾಗಲೇ ಪಡೆದುಕೊಂಡಿದ್ದಾರೆ. ಉದ್ಯೋಗ ಪರ್ವ ಮುಂದುವರೆಯುತ್ತಿದೆ. ನನ್ನ ಭಾರತ ಬಲಿಷ್ಠ ಆಗುತ್ತಿದೆ.

yuva Bharat

ಭಾರತಕ್ಕೆ ಎರಡು ಶಕ್ತಿಗಳು ಇವೆ

ಒಂದು ಜನಸಂಖ್ಯೆ. ಇನ್ನೊಂದು ಪ್ರಜಾಪ್ರಭುತ್ವ. ನಮ್ಮ ಯುವಜನತೆ ಸ್ವತಂತ್ರವಾಗಿ ಯೋಚನೆ ಮಾಡಲು ಕಲಿತಿದ್ದಾರೆ. ನವೀನತೆಯ ಕೋರ್ಸುಗಳ ಕಡೆಗೆ ಯುವಜನತೆ ಹೊರಳುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ಮೊದಲಾದ ಹೊಸ ತಂತ್ರಜ್ಞಾನ ಭಾರತಕ್ಕೆ ಬಂದು ಇಂದು ತುಂಬಾ ವರ್ಷಗಳು ಆಗಿವೆ. ಭಾರತದ ಯುವಜನತೆಯು ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಿರುವುದು ಭಾರತಕ್ಕೆ ದೊಡ್ಡ ವರವೇ ಆಗಿದೆ. ಜನಸಂಖ್ಯೆಯ ಸ್ಫೋಟದ ಬಗ್ಗೆ ಇಂದು ಭಾರತದಲ್ಲಿ ಯಾರೂ ತಲೆ ಕೆಡಿಸಿಕಳ್ಳುವುದಿಲ್ಲ. ಅದರ ಬದಲಾಗಿ ಮಾನವ ಸಂಪನ್ಮೂಲದ ಅಭಿವೃದ್ಧಿಯ ಬಗ್ಗೆ ಭಾರತ ಇಂದು ಅಧಿಕಾರಯುತ ಆಗಿ ಮಾತಾಡುತ್ತಿದೆ. ಯುವಜನತೆ ಇಂದು ರಾಜಕೀಯದಲ್ಲಿ ಹೆಚ್ಚು ಸಹಭಾಗಿತ್ವ ಮಾಡಲು ತೊಡಗಿದ ನಂತರ ಕೇಂದ್ರ ಮತ್ತು ರಾಜ್ಯಗಳಲ್ಲಿ ಹೆಚ್ಚು ಸ್ಥಿರ ಸರಕಾರಗಳು ರಚನೆ ಆಗುತ್ತಿವೆ.

ಸಾಂಸ್ಕೃತಿಕ ಭಾರತ – ನಮ್ಮ ಹೆಮ್ಮೆ

yuva Bharat

ಇತ್ತೀಚೆಗೆ ಸ್ವಲ್ಪ ಕಣ್ಣು ತೆರೆದು ನಾವು ಯೋಚನೆ ಮಾಡಿದಾಗ ನಮ್ಮ ಗಮನಕ್ಕೆ ಬರುವುದು ಏನೆಂದರೆ ನಮ್ಮ ಯುವಜನತೆಯು ಇಂದು ನಿಧಾನವಾಗಿ ಭಾರತೀಯ ಸಂಸ್ಕೃತಿ, ಕಲೆ, ಸಂಗೀತ, ನೃತ್ಯ ಮತ್ತು ಸಂಪ್ರದಾಯಗಳ ಕಡೆಗೆ ಹೊರಳುತ್ತಿದೆ ಅನ್ನುವುದು. ಎಷ್ಟೋ ಜನ ಯುವಕ, ಯುವತಿಯರು ಐಟಿ ಕ್ಷೇತ್ರದ ಉದ್ಯೋಗವನ್ನು ತೊರೆದು ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ನೃತ್ಯ, ಸಂಗೀತ ವಿಭಾಗಗಳಲ್ಲಿ ಮೊದಲಿಗಿಂತ ಈಗ ಹೆಚ್ಚು ಯುವಕ, ಯುವತಿಯರು ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶಾಸ್ತ್ರೀಯ ವಿಭಾಗದ ವೇದಿಕೆಯ ಪ್ರದರ್ಶನಗಳಿಗೆ ಇಂದು ಯುವ ಪ್ರೇಕ್ಷಕರೂ ಹೆಚ್ಚುತ್ತಿದ್ದಾರೆ. ಎಲ್ಲ ಸಾಧನಾ ಕ್ಷೇತ್ರಗಳಲ್ಲಿ ಇಂದು ಯುವ ಸಾಧಕರ ಸಂಖ್ಯೆಯು ಹೆಚ್ಚುತ್ತಿದೆ. ಭಾರತೀಯ ಸೇನೆಗೆ ಹೆಚ್ಚು ಯುವ ಜನತೆ ಸ್ವಂತ ಇಚ್ಛೆಯಿಂದ ನೇಮಕ ಆಗುತ್ತಿದ್ದಾರೆ.

ನನ್ನ ಭಾರತ – ಯುವ ಸಾಧಕರ ಭಾರತ

yuva Bharat

ಎಲ್ಲ ಸಾಧನಾ ಕ್ಷೇತ್ರಗಳಲ್ಲೂ ಇಂದು ಭಾರತದಲ್ಲಿ ಯುವ ಸಾಧಕರ ಸಂಖ್ಯೆಯು ಹೆಚ್ಚುತ್ತಿದೆ. ಯುವ ಬರಹಗಾರರು, ಕಥೆಗಾರರು, ಸಾಹಿತಿಗಳು, ಸಂಗೀತ ಕಲಾವಿದರು, ಕ್ರೀಡಾಪಟುಗಳು, ಬ್ಲಾಗರ್ ಗಳು, ಸಾಹಸಿಗರು, ನೃತ್ಯ ಪಟುಗಳು, ವಿಜ್ಞಾನಿಗಳು, ಯುವ ತಂತ್ರಜ್ಞರು, ಯುವ ಪತ್ರಕರ್ತರು…..ಇಂದು ಹೆಚ್ಚುತ್ತಿದ್ದಾರೆ. ನಮ್ಮ ಯುವಕರು ಇಂದು ಅವಕಾಶಗಳಿಗೆ ಕಾಯುವುದನ್ನು ಬಿಟ್ಟಿದ್ದಾರೆ ಮತ್ತು ಅವಕಾಶಗಳನ್ನು ಸೃಷ್ಟಿಸಲು ಕಲಿತಿದ್ದಾರೆ. ಮಂಗಳ ಯಾನ ಮತ್ತು ಚಂದ್ರಯಾನ ಟೀಂಗಳಲ್ಲಿ 75% ವಿಜ್ಞಾನಿಗಳು ಯುವಕ, ಯುವತಿಯರೇ ಇದ್ದರು ಎನ್ನುವಲ್ಲಿಗೆ ನನ್ನ ಯುವ ಭಾರತವು ‘ಸಾಧಕ ಭಾರತ’ ಆಗುತ್ತಿದೆ.

ಯುವ ಜನತೆಗೆ ಒಂದಿಷ್ಟು ಕಿವಿ ಮಾತುಗಳು

yuva Bharat

1. ವಿಭಿನ್ನವಾಗಿ ಯೋಚಿಸಿ.
2. ಧೈರ್ಯ ಮಾಡಿ ಮುನ್ನುಗ್ಗಿ.
3. ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಡಿ.
4. ಆವಿಷ್ಕಾರಗಳನ್ನು ಮಾಡಿ.
5. ಹೊಸ ಐಡಿಯಾಗಳು ಕೋಟಿ ಕೋಟಿ ಬೆಲೆ ಬಾಳುತ್ತವೆ. ಅವುಗಳನ್ನು ಬರೆದಿಡಿ ಮತ್ತು ಅನುಷ್ಠಾನಕ್ಕೆ ತನ್ನಿ.
6. ನಿಮ್ಮ ಹಿಂದಿನ ಸಾಧನೆಗಳ ಜೊತೆ ಕಾಂಪೀಟ್ ಮಾಡಿ. ಬೇರೆ ಯಾರ ಜೊತೆಗೂ ನೀವು ಸ್ಪರ್ಧೆ ಮಾಡುವ ಅಗತ್ಯ ಇಲ್ಲ.
7. ಹೊಸ ಹಾದಿಯಲ್ಲಿ ಮುನ್ನಡೆಯಿರಿ.
8. ಅಸಾಧ್ಯವಾದ ಸಂಗತಿಗಳನ್ನು ಹುಡುಕಿ.
9. ಸಮಸ್ಯೆಗಳನ್ನು ಪರಿಹಾರ ಮಾಡಿ. ಸಮಸ್ಯೆಗಳನ್ನು ದೊಡ್ಡದು ಮಾಡಬೇಡಿ.
10. ನೀವು ಪಡೆದ ಯಶಸ್ಸನ್ನು ಸಂಭ್ರಮಿಸಿ ಮತ್ತು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ.

ನಿಮಗೆ ಶುಭವಾಗಲಿ.

ಇದನ್ನೂ ಓದಿ: Raja Marga Column : ಗಾಂಧಿ ಕ್ಲಾಸ್‌ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು

Exit mobile version