Site icon Vistara News

Raja Marga Column: ಯುವರಾಜ್ ಜೈನ್ ದುಡಿಮೆಗೆ ಕಲ್ಲಬೆಟ್ಟವೇ ಕರಗಿತು!; This is Excellent!

Yuvaraj Jain Excellent College

ನಾನು ತುಂಬಾ ಪ್ರೀತಿಸಿದ ಮತ್ತು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಒಬ್ಬ ಶಿಕ್ಷಕರು ಇಂದು ಮೂಡಬಿದ್ರೆಯ ಕಲ್ಲಬೆಟ್ಟು ಎಂಬಲ್ಲಿ ಬಹು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿದ್ದು (Excellent PU College), ಅಂದಾಜು 45 ಎಕರೆಯ ಹಸಿರು ಕ್ಯಾಂಪಸ್ ಕಟ್ಟಿ ನಿಲ್ಲಿಸಿದ್ದು ಸಣ್ಣ ಸಾಧನೆ ಅಲ್ಲ!‌ ಅದರ ಹಿಂದೆ ಭಾರೀ ದೊಡ್ಡದಾದ ಪರಿಶ್ರಮ, ಸಂಕಷ್ಟ, ಸವಾಲು, ದುಡಿಮೆ ಎಲ್ಲವೂ ಇದ್ದವು! ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು, ಅಪಮಾನ ಎಲ್ಲವನ್ನೂ ಆವಾಹನೆ ಮಾಡಿದ ಹಾಗೆ ಬೆಳೆದ ಯುವರಾಜ್ ಜೈನ್ (Yuvaraj Jain) ಅವರ ಬದುಕೇ ಒಂದು ಯಶೋಗಾಥೆ (Raja Marga Column).

ಓರ್ವ ಯಶಸ್ವೀ ಶಿಕ್ಷಕ ಅವರು

ನಾರಾವಿ ಎಂಬ ಪುಟ್ಟ ಗ್ರಾಮದ ಒಂದು ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದ ಯುವರಾಜ್ ಜೈನ್ ಅವರು ಉಜಿರೆ ಎಸ್‌ಡಿಎಂ ಕಾಲೇಜಿಗೆ ಹೋಗುವಾಗ ಸಿದ್ಧವನ ಗುರುಕುಲದ ವಿದ್ಯಾರ್ಥಿಯಾಗಿ ದುಡಿಮೆಯ ಮೌಲ್ಯವನ್ನು ಕಲಿತವರು. ಮನೆಯಲ್ಲಿ ಬೇಸಾಯದ ಕೆಲಸ ತಪ್ಪಿಸುವ ಹಾಗೆ ಇರಲಿಲ್ಲ. ಆ ಕಷ್ಟಗಳ ನಡುವೆ ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿ ಆರಂಭದಲ್ಲಿ ತಾನು ಕಲಿತ ಉಜಿರೆಯ ಕಾಲೇಜಿನಲ್ಲಿ ಉಪನ್ಯಾಸಕರಾದರು.

ಕಲಿತದ್ದು ಭೌತಶಾಸ್ತ್ರ ಆದರೂ ಆಸಕ್ತಿಯಿಂದ ಪಾಠ ಮಾಡಿದ್ದು ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನವನ್ನು. ಯುವರಾಜ್ ಜೈನ್ ಅವರು ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರು. ಪಾಠ ಮಾಡುವುದರಲ್ಲಿ ಅವರಿಗೆ ದಣಿವೇ ಇಲ್ಲ. ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಿದಾಗ ಉಜಿರೆಯಲ್ಲಿ ಅವರು ಕೋಚಿಂಗ್ ಸೆಂಟರ್ ಆರಂಭ ಮಾಡಿದರು. ಆರಂಭದಲ್ಲಿ ಐದು ಮಕ್ಕಳಿಂದ ಆರಂಭ ಆದ ಕೋಚಿಂಗ್ ಮುಂದೆ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿ ಕೊಟ್ಟಿತು. ಇದ್ಯಾವುದೂ ಯುವರಾಜ್ ಸರ್ ಅವರಿಗೆ ಬಿಸಿನೆಸ್ ಆಗಿರಲಿಲ್ಲ. ಮಕ್ಕಳು ಫೀಸ್ ಕೊಡದಿದ್ದರೂ ಅವರೆಂದಿಗೂ ಗದರಿದವರು ಅಲ್ಲ.

ದುಡಿಮೆ ಒಂದೇ ಬೀಜಮಂತ್ರ

ಮುಂದೆ ಮೂಡಬಿದ್ರೆಯ ಜೈನ್ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಬಂದ ಯುವರಾಜ್ ಸರ್ ಅವರು ಇನ್ನೂ ಹೆಚ್ಚು ಬೆವರು ಬಸಿದರು. ಮೂಡಬಿದ್ರೆಯಲ್ಲಿ ಕೂಡ ಒಂದು ಕೋಚಿಂಗ್ ಸೆಂಟರ್ ಆರಂಭ ಮಾಡಿದರು.

ಆಗ ಅವರ ದಿನಚರಿಯು ಹೇಗಿತ್ತು ಎಂದರೆ ನೀವು ಖಂಡಿತವಾಗಿಯೂ ಬೆರಗಾಗುತ್ತೀರಿ. ಬೆಳಗ್ಗೆ 7ರಿಂದ 8-45ರವರೆಗೆ ಮೂಡಬಿದ್ರೆಯಲ್ಲಿ ಕೋಚಿಂಗ್ ಕ್ಲಾಸ್. ನಂತರ 9ರಿಂದ ಸಂಜೆ 3-45ವರೆಗೆ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ಪಾಠ. ಅಲ್ಲಿಂದ ಹೀರೋ ಹೊಂಡಾ ಬೈಕ್ ಏರಿ 45 ಮಿನಿಟ್ ಒಳಗೆ ಉಜಿರೆಗೆ ದೌಡು. ಮಳೆ, ಗಾಳಿ, ಸಿಡಿಲು ಏನೇ ಬಂದರೂ ಒಂದು ದಿನವೂ ಉಜಿರೆಯ ಅವರ ಕ್ಲಾಸ್ ಮಿಸ್ ಆಗುತ್ತಿರಲಿಲ್ಲ. ಅಲ್ಲಿ ಎರಡು ಘಂಟೆ ಕ್ಲಾಸ್ ಮಾಡಿ ಮತ್ತೆ ಮೂಡಬಿದ್ರೆಗೆ ಬೈಕಲ್ಲಿ ಬಂದು ಉಪಾಹಾರ ಮಾಡಿ ಮಲಗುವಾಗ ಮಧ್ಯರಾತ್ರಿ ದಾಟುತ್ತಿತ್ತು. ಇದು ಒಂದೆರಡು ದಿನಗಳ ಪಾಡಾಗಿರಲಿಲ್ಲ. ಹತ್ತಾರು ವರ್ಷ ಅವರು ಹೀಗೇ ದುಡಿದರು.

ಪಾಠ ಮಾಡುವುದೇ ಅವರಿಗೆ ಪೂಜೆ ಮತ್ತು ಆರಾಧನೆ

ಯುವರಾಜ್ ಸರ್ ಅವರಿಗೆ ಊಟ, ತಿಂಡಿ, ರಜೆ, ಭಾನುವಾರ, ಹಬ್ಬಗಳು ಎಲ್ಲವೂ ಮರೆತೇ ಹೋಗಿದ್ದವು. ನಾನು ಎಷ್ಟೋ ದಿನ ಅವರ ಬೈಕಿನ ಹಿಂದೆ ಕುಳಿತು ಮೈಲುಗಟ್ಟಲೆ ಹೋದದ್ದು ನನಗೆ ನೆನಪಿದೆ. ಅವರಿಗೆ ಆಯಾಸ ಆದದ್ದು, ಗೊಣಗಿದ್ದು, ಸಿಟ್ಟು ಮಾಡಿಕೊಂಡದ್ದು, ಯಾರನ್ನಾದರೂ ಬೈದದ್ದು ಯಾರೂ ಈವರೆಗೆ ನೋಡಿದ್ದೆ ಇಲ್ಲ ಅನ್ನುವುದು ಅವರ ಶ್ರೇಷ್ಠತೆ. ಒಬ್ಬ ಶಿಕ್ಷಕ ದಿನಕ್ಕೆ 8-10 ಘಂಟೆ ಪಾಠ ಮಾಡಲು ಸಾಧ್ಯವಾದದ್ದು ಕೇವಲ ಮಕ್ಕಳ ಮೇಲಿನ ಪ್ರೀತಿಯಿಂದ. ಅದು ಅವರಿಗೆ ಪೂಜೆ ಮತ್ತು ಆರಾಧನೆ. ಸಂಪಾದನೆಯ ಬಗ್ಗೆ ಅವರು ಎಂದಿಗೂ ಯೋಚನೆ ಮಾಡಿದವರಲ್ಲ. ಮೂಡಬಿದ್ರೆ ಮತ್ತು ಬೆಳ್ತಂಗಡಿ ಎರಡು ಕೋಚಿಂಗ್ ಸೆಂಟರ್ ಮೂಲಕ ಅವರು ತರಬೇತು ಮಾಡಿದ್ದು ಅಂದಾಜು 15,000 ವಿದ್ಯಾರ್ಥಿಗಳನ್ನು ಅಂದರೆ ಅವರ ಅಗಾಧ ಪರಿಶ್ರಮ ಕಣ್ಣ ಮುಂದೆ ಬರುತ್ತದೆ.

ಕಲ್ಲಬೆಟ್ಟು ಕಾಡಿನ ನಡುವೆ ಸುಂದರವಾದ ಕಾಲೇಜು ಅರಳಿತು

ಸ್ವಂತದ್ದು ಯಾವುದಾದರೂ ಶಿಕ್ಷಣ ಸಂಸ್ಥೆ ಕಟ್ಟಬೇಕು ಎನ್ನುವ ಹಂಬಲ ಹೆಚ್ಚಾದಂತೆ ಮೂಡಬಿದ್ರೆಯ ಮಗ್ಗುಲಲ್ಲಿ ಇರುವ ಕಲ್ಲಬೆಟ್ಟು ಎಂಬಲ್ಲಿ ಕಲ್ಲು ಬಂಡೆಗಳ ನಡುವೆ 15 ಎಕರೆ ಜಾಗ ಅವರು ಸಾಲ ಮಾಡಿ ತೆಗೆದುಕೊಂಡರು. ದುಡ್ಡು ಹೊಂದಿಸಲು ತುಂಬಾ ಕಷ್ಟ ಪಟ್ಟರು. ಬ್ಯಾಂಕುಗಳು ಸಾಲ ಕೊಡಲು ಕುಣಿಸಿದಾಗ ಬೇಜಾರು ಮಾಡದೆ ಪ್ರಯತ್ನ ಪಟ್ಟರು. ಅವರ ಕನಸಿನ ‘ಎಕ್ಸಲೆಂಟ್ ಪದವಿಪೂರ್ವ ಕಾಲೇಜು’ 2012ರಲ್ಲಿ ಕಲ್ಲಬೆಟ್ಟು ಎಂಬಲ್ಲಿ ಉದ್ಘಾಟನೆ ಆಯಿತು. ಮೊದಲ ಬ್ಯಾಚಿನಲ್ಲಿ ಇದ್ದವರು ಕೇವಲ 182 ವಿದ್ಯಾರ್ಥಿಗಳು. ಆಗ ಯುವರಾಜ್ ಸರ್ ಮತ್ತು ಅವರ ಧರ್ಮಪತ್ನಿ ರಶ್ಮಿತಾ ಜೈನ್ ಅವರು ಪಟ್ಟ ಕಷ್ಟಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸಾಕಷ್ಟು ಬಾರಿ ನೋವು, ಸೋಲು, ಸವಾಲು, ಕಣ್ಣೀರು ಎದುರಾದರೂ ಸ್ಪಷ್ಟವಾದ ಗುರಿ ಮತ್ತು ತನ್ನ ಮೇಲಿನ ನಂಬಿಕೆ ಇವುಗಳಿಂದ ಶಿಕ್ಷಣ ಸಂಸ್ಥೆಯು ಬೆಳೆಯುತ್ತಾ ಹೋಯಿತು. ಪ್ರತೀ ವರ್ಷವೂ ರ‍್ಯಾಂಕ್, ಮೆಡಿಕಲ್ ಸೀಟು, ಇಂಜಿನಿಯರಿಂಗ್ ಸೀಟುಗಳ ಸಂಖ್ಯೆಯು ಹೆಚ್ಚಾಗುತ್ತ ಹೋಯಿತು.

ಶ್ರೇಷ್ಠತೆಯ ಮುಕುಟಮಣಿ – ಎಕ್ಸಲೆಂಟ್ ಕಾಲೇಜು

ಇಂದು ಎಕ್ಸಲೆಂಟ್ ಕಾಲೇಜು ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂದು ಕೀರ್ತಿಯನ್ನು ಪಡೆದಿದೆ. ಅದೀಗ 2250 ಪಿಯುಸಿ ವಿದ್ಯಾರ್ಥಿಗಳನ್ನು ಹೊಂದಿದೆ. 2014ರಲ್ಲಿ ಅದೇ ಕ್ಯಾಂಪಸಿನಲ್ಲಿ ಆರಂಭವಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತ್ಯೇಕವಾದ 715 ಮಕ್ಕಳು ಇದ್ದಾರೆ. ಇಡೀ ಭಾರತದ, ಭಾರತದ ಹೊರಗಿನ ಮಕ್ಕಳೂ ಇದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮೈಸೂರಿನ ಮಹಾರಾಜರು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮೊದಲಾದವರು ಈ ಕಾಲೇಜಿಗೆ ಭೇಟಿ ನೀಡಿ ಕಾಲೇಜನ್ನು ಅಭಿನಂದನೆ ಮಾಡಿದ್ದಾರೆ. 45-50 ಎಕರೆ ಪ್ರದೇಶದ ವಿಸ್ತಾರವಾದ ಕ್ಯಾಂಪಸ್, ವಿದ್ಯಾರ್ಥಿಗಳಿಗೆ ಧ್ಯಾನಮಂದಿರ, ವಿಶೇಷವಾದ ಭೋಜನ ಗೃಹ, ಸುಸಜ್ಜಿತ ತರಗತಿ ಕೋಣೆಗಳು, ಎತ್ತ ಕಣ್ಣು ಹಾಯಿಸಿದರೂ ಎದ್ದು ಕಾಣುವ ಹಸಿರು ಈ ಕಾಲೇಜಿನ ವೈಶಿಷ್ಟ್ಯಗಳು.

ಯುವರಾಜ್‌ ಜೈನ್‌ ಮತ್ತು ರಷ್ಮಿತಾ ಜೈನ್

ಯುವರಾಜ್ ಸರ್ ಇಂದಿಗೂ ಹಾಗೇ ಇದ್ದಾರೆ

ಅವರಿಗೆ ಹಲವು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅದರಲ್ಲಿ ಜೇಸಿಐ ಸಂಸ್ಥೆ ನೀಡಿದ ರಾಷ್ಟ್ರ ಮಟ್ಟದ ‘ ಕಮಲ ಪತ್ರ ಪ್ರಶಸ್ತಿ ‘ ಪ್ರಮುಖವಾದದ್ದು. ಅದೇ ರೀತಿ ಶಿಕ್ಷಣ ರತ್ನ ಪ್ರಶಸ್ತಿ, ಮಿಲನ ಶ್ರೀ ಪ್ರಶಸ್ತಿ, ಗ್ಲೋಬಲ್ ಅಂಬಾಸೆಡರ್ ಪ್ರಶಸ್ತಿಗಳು ಕೂಡ ಅವರಿಗೆ ದೊರೆತಿವೆ.

ನನಗೆ ಆಶ್ಚರ್ಯ ಏನೆಂದರೆ ಯುವರಾಜ್ ಸರ್ ಆರಂಭದಲ್ಲಿ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಹೀರೋ ಹೋಂಡಾ ಬೈಕಿನಿಂದ BMW ಕಾರಿಗೆ ಅವರು ಶಿಫ್ಟ್ ಆಗಿದ್ದಾರೆ. ಆದರೂ ಇಂದಿಗೂ ಅವರ ಜೀವನ ಶೈಲಿ ಬದಲಾಗಿಲ್ಲ. ಸರಳತೆ, ದುಡಿಮೆ, ಸಕಾರಾತ್ಮಕ ಧೋರಣೆ, ಸೋಲುಗಳನ್ನು ಸವಾಲಾಗಿ ಸ್ವೀಕಾರ ಮಾಡುವ ಮನೋಧರ್ಮ, ಸಂಪಾದನೆಯ ಬಹುದೊಡ್ಡ ಭಾಗವನ್ನು ಸಮಾಜಕ್ಕೆ ಹಿಂದೆ ಕೊಡುವ ಬದ್ಧತೆ…….. ಎಲ್ಲವನ್ನೂ ಅವರು ಆದ್ಯತೆಯಾಗಿ ಇಂದಿಗೂ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ : Raja Marga Column : ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಇಂದು ಅವರಿಗೆ ಅವರದೇ ಸಂಸ್ಥೆಯ ಸಭಾಂಗಣದಲ್ಲಿ ಸಂಜೆ ಆರರಿಂದ ಸಾರ್ವಜನಿಕ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಇದೆ. ಗಣ್ಯಾತಿಗಣ್ಯರು ವೇದಿಕೆಯಲ್ಲಿ ಇರುತ್ತಾರೆ. ಯುವರಾಜ್ ಜೈನ್ ಅವರು ಅತ್ಯಂತ ಕಠಿಣ ದುಡಿಮೆಯ ಮೂಲಕ ಇಷ್ಟೊಂದು ಎತ್ತರವನ್ನು ಪಡೆದವರು ಎಂದು ನಾನು ಖಚಿತವಾಗಿ ಹೇಳಬಹುದು. ‘ಜೀವನದಲ್ಲಿ ಆಗೋದೆಲ್ಲವೂ ಒಳ್ಳೆದಕ್ಕೆ ‘ ಎಂಬ ನಂಬಿಕೆಯು ಅವರನ್ನು ಇಂದಿಗೂ ಕೈಹಿಡಿದು ಮುನ್ನಡೆಸುತ್ತಿದೆ.

Exit mobile version