Site icon Vistara News

ರಾಜ ಮಾರ್ಗ ಅಂಕಣ : ಗುರು ಅಂದರೆ ನಮ್ಮ Identity, ಯಾರ ಶಿಷ್ಯ ಅನ್ನೋದೇ ಒಂದು ಹೆಮ್ಮೆ

gurukula education11

ಶಿಕ್ಷಣ ಕ್ಷೇತ್ರಕ್ಕೆ ಭಾರತದ ಮಹೋನ್ನತ ಕೊಡುಗೆ ಗುರುಕುಲ ಪದ್ಧತಿ (ಭಾಗ-2)

ಗುರುವಿನ ಜತೆಗೆ ಗುರುತು (ಐಡೆಂಟಿಟಿ)

ಯಾವುದೇ ವ್ಯಕ್ತಿಯ ಪರಿಚಯ ನಾವು ಈಗ ಮಾಡಿಕೊಡುವಾಗ ಇಂತಹವರ ಮಗ, ಇಂತಹವರ ಮಗಳು ಎಂದೆಲ್ಲ ಹೇಳುತ್ತೇವೆ. ಆದರೆ ಗುರುಕುಲ ಪದ್ಧತಿಯಲ್ಲಿ ಕಲಿತು ಹೊರಬಂದ ನಂತರ ಇಂತಹವರ ಮಗ, ಇಂತಹವರ ಮಗಳು ಎಂದು ಹೇಳುವುದರ ಜೊತೆಗೆ ಇಂಥವರ ಶಿಷ್ಯ/ ಶಿಷ್ಯೆ ಎಂದು (Identity with guru) ಅಭಿಮಾನದಿಂದ ಹೇಳುತ್ತಿದ್ದರು. ಉದಾಹರಣೆಗೆ ಶ್ರೀ ರಾಮನನ್ನು ಪರಿಚಯ ಮಾಡುವಾಗ ದಶರಥನ ಪುತ್ರ, ವಿಶ್ವಾಮಿತ್ರರ ಶಿಷ್ಯ (Rama is the disciple of Vishwmitra) ಎಂದೇ ಹೇಳುತ್ತಿದ್ದರು. ಶ್ರೀ ಕೃಷ್ಣನ ಬಗ್ಗೆ ಹೇಳುವಾಗ ವಸುದೇವ ಪುತ್ರ ಮತ್ತು ಸಾಂದೀಪನಿ ಶಿಷ್ಯ (Krishna is disciple of Sandeepani maharshi) ಎಂದು ಹೇಳಿದರೆ ಪರಿಚಯವು ಪೂರ್ತಿ ಆಗುತ್ತಿತ್ತು. ಈಗ ಶಾಸ್ತ್ರೀಯ ನೃತ್ಯ ಮತ್ತು ಸಂಗೀತಗಳ ಪರಂಪರೆಯಲ್ಲಿ ಇಂತವರ ಶಿಷ್ಯ/ ಶಿಷ್ಯೆ ಎಂದು ಪರಿಚಯ ಮಾಡುವ ವಾಡಿಕೆ ಉಳಿದುಕೊಂಡು (ರಾಜ ಮಾರ್ಗ ಅಂಕಣ) ಬಂದಿದೆ.

ಅನುಭವ ಜನ್ಯ ಶಿಕ್ಷಣ

ಎಲ್ಲ ಗುರುಕುಲಗಳಲ್ಲಿ ಅನುಭವದ ಮೂಲಕ ಪಾಠಗಳು ನಡೆಯುತ್ತಿದ್ದವು. ಗುರುಗಳು ತನ್ನ ಶಿಷ್ಯರನ್ನು ಪರಿಸರದ ನಡುವೆ ಕೂರಿಸಿ ಜೀವಂತ ಅನುಭವಗಳ ಮೂಲಕ ಪಾಠ ಮಾಡುತ್ತಿದ್ದರು. ಅಲ್ಲಿ ಗುರು ಶಿಷ್ಯರ ನಡುವಿನ ಸಂವಾದಗಳು ಅತ್ಯುತ್ತಮ ಸಂವಹನ ಮಾಧ್ಯಮಗಳು ಆಗಿರುತ್ತಿದ್ದವು. ಇಲ್ಲಿ ಶಿಕ್ಷಣವು ಏಕ ಮುಖ ಆಗದೆ ಉಭಯ ಮುಖ (ದ್ವಿಮುಖ) ಆಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವರಿಗೆ ಸಾಧ್ಯ ಆಗುತ್ತಿತ್ತು. ಪ್ರಶ್ನೆಗಳನ್ನು ಕೇಳಲು ಶಿಷ್ಯರಿಗೆ ಭಯ ಇರಲಿಲ್ಲ. ಉತ್ತರ ಕೊಡಲು ಗುರುಗಳಿಗೆ ಕಷ್ಟ ಆಗುತ್ತಿರಲಿಲ್ಲ.

ಎಷ್ಟೋ ಬಾರಿ ಗುರುಗಳು ಸುಂದರವಾದ ಕಾಲ್ಪನಿಕ ಕಥೆಯನ್ನು ಹೇಳುತ್ತ ವಿದ್ಯಾರ್ಥಿಗಳಿಂದ ಆ ಕಥೆಯ ಸಂದೇಶವನ್ನು ಪಡೆಯುತ್ತಿದ್ದರು. ಹಾಗೆ ಹುಟಿದ್ದೇ ವಿಷ್ಣು ಶರ್ಮ ಬರೆದ ಪಂಚತಂತ್ರದ ಸಾವಿರಾರು ಕಥೆಗಳು. ಆ ನವಿರು ಅನುಭವವು ಈಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದೊರೆಯಲು ಸಾಧ್ಯ ಇದೆಯಾ?

ಪ್ರಾಚೀನ ಋಷಿ ಪರಂಪರೆಯ ಗುರುಗಳು

ಪ್ರಾಚೀನ ಋಷಿಗಳಾದ ವಾಲ್ಮೀಕಿ, ವಿಶ್ವಾಮಿತ್ರ, ಕಣ್ವ, ವಸಿಷ್ಠ, ಕಪಿಲ, ಸಾಂದೀಪನಿ, ದಧೀಚಿ, ದೂರ್ವಾಸ ಮೊದಲಾದವರು ತಮ್ಮದೇ ಗುರುಕುಲ ನಡೆಸಿಕೊಂಡು ಪ್ರಸಿದ್ಧಿ ಪಡೆದವರು. ಅವರಲ್ಲಿ ಹೆಚ್ಚಿನವರು ಕವಿಗಳಾಗಿ ಪ್ರಸಿದ್ಧಿ ಪಡೆದರು. ತಾನೇ ಬರೆದ ರಾಮಾಯಣ ಮಹಾ ಕಾವ್ಯದಲ್ಲಿ ತಾನೇ ಪಾತ್ರವಾಗಿ ಮೂಡಿ ಬಂದಿರುವ ವಾಲ್ಮೀಕಿ ಒಬ್ಬ ಮಹಾ ಗುರುವಾಗಿ ಜಗತ್ತನ್ನು ಸುಂದರವಾಗಿ ಬೆಳಗಿದವರು.

ಆಶ್ಚರ್ಯ ಎಂದರೆ ಅವರಲ್ಲಿ ಹೆಚ್ಚಿನವರ ಮೂಲಗಳನ್ನು ಹುಡುಕಿದಾಗ ಅವರು ಋಷಿಯಾಗಿ ಹುಟ್ಟಿಲ್ಲ ಎಂದು ನಮಗೆ ಗೊತ್ತಾಗುತ್ತದೆ. ವಾಲ್ಮೀಕಿ ಒಬ್ಬ ಬೇಡ ಆಗಿದ್ದವನು. ವಿಶ್ವಾಮಿತ್ರ ಒಬ್ಬ ಕ್ಷತ್ರಿಯ ಮೂಲದಿಂದ ಬಂದವನು. ಅವರೆಲ್ಲರೂ ತಮ್ಮ ತಮ್ಮ ಸಾಧನೆ, ತಪಶ್ಯಕ್ತಿ ಮತ್ತು ಕಠಿಣವಾದ ಅನುಷ್ಠಾನಗಳಿಂದ ಅಪಾರ ಬ್ರಹ್ಮಜ್ಞಾನವನ್ನು ಪಡೆದು ಅವರು ಬ್ರಹ್ಮರ್ಷಿ ಆದವರು. ಆಗ ಒಬ್ಬನ ಸ್ಥಾನವನ್ನು ನಿರ್ಧಾರ ಮಾಡುವಾಗ ಆತನ ಸಾಧನೆಗಳನ್ನು ಪರಿಗಣನೆ ಮಾಡುತ್ತಿದ್ದರೇ ಹೊರತು ಮೂಲವನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ.

ಗುರುಕುಲದಲ್ಲಿ ಸೆಟ್ ಸಿಲೆಬಸ್ ಇರಲಿಲ್ಲ

ಈಗಿನ ಶಾಲೆಗಳಲ್ಲಿ ಇರುವ ಹಾಗೆ ಗುರುಕುಲದಲ್ಲಿ ನಿಗದಿ ಮಾಡಿದ ಪಠ್ಯವಸ್ತು (ಸಿಲೆಬಸ್) ಅಥವಾ ಪಠ್ಯ ಪುಸ್ತಕ ಇರಲಿಲ್ಲ. ಪರೀಕ್ಷೆಗಳ ಗೊಡವೆ ಇಲ್ಲದ ಮೇಲೆ ಸಿಲೆಬಸ್ ಯಾಕೆ ಬೇಕು? ಗುರುಕುಲ ಶಿಕ್ಷಣ ಪದ್ಧತಿಯ ಉದ್ದೇಶ ಎಂದರೆ ಎಲ್ಲರಿಗೂ ಉತ್ತಮ ಮೌಲ್ಯಗಳ ಬೆಳಕಿನಲ್ಲಿ ಉತ್ತಮ ನಾಗರಿಕ ಪ್ರಜ್ಞೆ ಮೂಡಿಸುವುದು. ಅವರನ್ನು ಶ್ರೇಷ್ಠ ಮಾನವರಾಗಿ ಬೆಳೆಸುವುದು. ಒಬ್ಬ ಅರಸ ಉತ್ತಮ ಅರಸನಾಗಬೇಕು, ಒಬ್ಬ ಮಂತ್ರಿ ಉತ್ತಮ ಮಂತ್ರಿ ಆಗಬೇಕು…. ಇದು ಉದ್ದೇಶ. ಅವರನ್ನು ಬದುಕಿಗೆ ಸಿದ್ಧ ಮಾಡುವುದು ಮುಖ್ಯವೇ ಹೊರತು ನೌಕರಿಗೆ ಸಿದ್ದ ಮಾಡುವುದು ಮುಖ್ಯ ಆಗಿರಲಿಲ್ಲ. ಆದ್ದರಿಂದ ಪಾಸ್, ಫೇಲ್, ಡಿಸ್ಟಿಂಕ್ಷನ್ ಇತ್ಯಾದಿ ಅಗತ್ಯವೇ ಇರಲಿಲ್ಲ. ನಿರಂತರ ಕಲಿಕೆ ಮತ್ತು ಅಧ್ಯಯನಗಳು ಗುರುಕುಲಗಳಲ್ಲಿ ನಡೆಯುತ್ತಿದ್ದವು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉಪಾಧ್ಯಾಯ, ಶರ್ಮ, ದ್ವಿವೇದಿ, ತ್ರಿವೇದಿ, ಚತುರ್ವೇದಿ….ಮೊದಲಾದ ಬಿರುದುಗಳು ಪ್ರಶಸ್ತಿಯ ರೂಪದಲ್ಲಿ ಒದಗುತ್ತಿದ್ದವು.

ಗುರುಕುಲಗಳು ಯಾರ ಹಂಗಿನಲ್ಲಿಯೂ ಇರಲಿಲ್ಲ!

ಗುರುಕುಲಗಳಿಗೆ ರಾಜ ಮಹಾರಾಜರು, ಜಮೀನ್ದಾರರು, ವ್ಯಾಪಾರಿಗಳು ದಾನ ಮಾಡುತ್ತಿದ್ದರು. ಆಸ್ತಿ ಉಂಬಳಿ ಕೊಡುತ್ತಿದ್ದರು. ಆದರೆ ಗುರುಕುಲಗಳು ಯಾರ ಹಂಗಿಗೂ ಒಳಗಾದ ಉದಾಹರಣೆ ಸಿಗುವುದಿಲ್ಲ. ಅರಸನು ಕೂಡ ಆಶ್ರಮಗಳ ಆಡಳಿತದಲ್ಲಿ ಅಥವಾ ಗುರುಗಳ ಪಾಠಕ್ರಮದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಗುರುಕುಲದಲ್ಲಿ ಕಲಿಯುತ್ತಿರುವ ಅರಸನ ಮಕ್ಕಳಿಗೂ ಯಾವ ವಿಶೇಷ ಸೌಲಭ್ಯಗಳು ದೊರೆಯುತ್ತಿರಲಿಲ್ಲ.

ವೈವಿಧ್ಯಮಯ ವಿಷಯಗಳು

ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲಿ ಎದ್ದುಕಾಣುವ ಅಂಶ ಅಂದರೆ ವಿಷಯ ವೈವಿಧ್ಯತೆ, ವಿಷಯಗಳ ವಿಸ್ತಾರ ಮತ್ತು ಆಳ. ಸಂಸ್ಕೃತವು ಹೆಚ್ಚಿನ ಗುರುಕುಲಗಳಲ್ಲಿ ಸಂವಹನ ಭಾಷೆ ಆಗಿದ್ದರೂ ಇತರ ಭಾಷೆಗಳಿಗೂ ಅವಕಾಶಗಳು ಇದ್ದವು. ವ್ಯಾಕರಣ, ಛಂದಸ್ಸುಗಳ ರಸಪಾಕ ಅಲ್ಲಿ ದೊರೆಯುತ್ತಿತ್ತು. ಖಗೋಳ ಶಾಸ್ತ್ರವು ಭಾರೀ ಮುಂದುವರೆದಿತ್ತು. ಭಾರತದ ಶ್ರೇಷ್ಠ ಗಣಿತಜ್ಞರಾದ ಆರ್ಯಭಟ ಬರೆದ ‘ಆರ್ಯಭಟೀಯಂ’ ಈಗಲೂ ವಿಶ್ವಮಟ್ಟದಲ್ಲಿ ಕೀರ್ತಿ ಪಡೆದ ಗ್ರಂಥ ಆಗಿದೆ. ಗಣಿತದಲ್ಲಿ ಭಾರತದ ಕೊಡುಗೆ ಭಾರೀ ದೊಡ್ಡದು. ಭಾಸ್ಕರಾಚಾರ್ಯ, ಮಹಾವೀರ, ವರಾಹ ಮಿಹಿರ ಮೊದಲಾದ ಗಣಿತ ವಿದ್ವಾಂಸರು ಭಾರತದ ಗಣಿತವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು.

ತತ್ವಜ್ಞಾನ, ರಾಜನೀತಿ ಶಾಸ್ತ್ರ, ಅರ್ಥ ಶಾಸ್ತ್ರ, ಯೋಗ ವಿಜ್ಞಾನ, ನಮ್ಮ ಆಯುರ್ವೇದ, ಯುದ್ಧ ಕಲೆ, ದೈಹಿಕ ಶಿಕ್ಷಣ, ಆಡಳಿತ ನಿರ್ವಹಣೆ ಇವುಗಳು ಎಲ್ಲ ಗುರುಕುಲಗಳಲ್ಲಿ ಸಾಮಾನ್ಯ ವಿಷಯಗಳು ಆಗಿದ್ದವು. ಅದರ ಜೊತೆಗೆ ಅಲಂಕಾರ ಶಾಸ್ತ್ರ, ವಾಸ್ತು ವಿಜ್ಞಾನ, ಪಾಕಶಾಸ್ತ್ರ, ಜ್ಯೋತಿಷ್ಯ ವಿಜ್ಞಾನ, ಭಾಷಾ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಮನಶ್ಶಾಸ್ತ್ರ, ಅಂಗರಚನಾ ಶಾಸ್ತ್ರ, ಪುರಾಣ ಕಾವ್ಯಗಳು…. ಈ ಎಲ್ಲ ವಿಷಯಗಳನ್ನೂ ಆಳವಾಗಿ ಕಲಿಯುವ ಅವಕಾಶವು ವಿದ್ಯಾರ್ಥಿಗಳಿಗೆ ಇತ್ತು. ಜಗತ್ತಿನ ಅತ್ಯಂತ ಪುರಾತನ ಶಸ್ತ್ರಚಿಕಿತ್ಸಾ ತಜ್ಞರಾದ ಶುಶ್ರುತ ಮತ್ತು ಚರಕರು ಬರೆದ ಅನನ್ಯ ಗ್ರಂಥಗಳು ಈಗಲೂ ಆಧುನಿಕ ವೈದ್ಯಕೀಯ ವಿಜ್ಞಾನದ ಮಾರ್ಗದರ್ಶಕ ಗ್ರಂಥಗಳು ಆಗಿವೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನೀವು ನಂಬಲೇಬೇಕು! 7 ಸಾವಿರ ವರ್ಷದ ಹಿಂದೆಯೇ ಭಾರತದಲ್ಲಿ 7,32,000 ಗುರುಕುಲಗಳಿದ್ದವು!

ಹಾಗಿರುವಾಗ ಭಾರತೀಯ ಪ್ರಾಚೀನ ಜ್ಞಾನವನ್ನು ಗೊಡ್ಡು ಸಂಪ್ರದಾಯಗಳು, ಔಟ್ ಡೇಟೆಡ್, ಅವೈಜ್ಞಾನಿಕ ಎಂದು ಯಾರಾದರೂ ಕರೆಯಲು ಸಾಧ್ಯ ಇದೆಯೇ?

(ಮುಂದುವರಿಯುತ್ತದೆ)

Exit mobile version