Site icon Vistara News

Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ

Sachin tendulkar first timer to 200 ODI

ಜಗತ್ತಿನಲ್ಲಿ ಯಾವುದೇ ಸಾಧನೆಯನ್ನು ಮೊದಲು ಮಾಡಿದವರನ್ನು (First time Achievers) ಪಯೋನೀರ್ (pioneer achievers) ಎಂದು ಕರೆಯುತ್ತಾರೆ. ಜಗತ್ತು ಅವರನ್ನು ಮಾತ್ರ ನೆನಪಿಟ್ಟು ಕೊಳ್ಳುತ್ತದೆ (Raja Marga Column).

1. ಭಾರತದ ಮೊಟ್ಟಮೊದಲ ಮಹಿಳಾ ವೈದ್ಯೆ ಡಾಕ್ಟರ್ ಆನಂದಿ ಬಾಯಿ ಜೋಶಿ. ಮುಂದೆ ಸಾವಿರಾರು ಮಹಿಳೆಯರು ವೈದ್ಯರಾದರು. ಜಗತ್ತು ಅವರನ್ನೆಲ್ಲ ನೆನಪಿಟ್ಟುಕೊಂಡದ್ದು ಕಡಿಮೆ.

2. ಜುಲೈ 20, 1969ರಂದು ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಬೇಕಾದದ್ದು ಎಡ್ವಿನ್ ಆಲ್ಡ್ರಿನ್. ಆದರೆ ಆತ ಸ್ವಲ್ಪ ಅಳುಕಿದ ಕಾರಣ ನೀಲ್ ಆರ್ಮ್ ಸ್ಟ್ರಾಂಗ್ ಮೊದಲು ಇಳಿದ. ಅರ್ಧ ಕ್ಷಣ ನಂತರ ಆಲ್ಡ್ರಿನ್ ಕೂಡ ಇಳಿದನು. ಆದರೆ ಜಗತ್ತು ಇಂದು ನೀಲ್ ಆರ್ಮ್ ಸ್ಟ್ರಾಂಗ್‌ನನ್ನು ನೆನಪಿಟ್ಟುಕೊಂಡುಕೊಂಡಿದೆ! ಆಲ್ಡ್ರಿನ್ ಜಗತ್ತಿಗೆ ಮರೆತೇ ಹೋಗಿದ್ದಾನೆ.

ಚಂದ್ರನ ಮೇಲೆ ಮೊದಲು ಕಾಲಿಟ್ಟ ನೀಲ್‌ ಆರ್ಮ್‌ ಸ್ಟ್ರಾಂಗ್

3. ಮೌಂಟ್ ಎವರೆಸ್ಟ್ ಮೇಲೆ ಮೊದಲ ಹೆಜ್ಜೆ ಜೊತೆಯಾಗಿ ಇಟ್ಟವರು ಇಬ್ಬರು. ತೆನ್ಸಿಂಗ್ ನೋರ್ಕೆ ಮತ್ತು ಎಡ್ಮಂಡ್ ಹಿಲರಿ (ಅಥವಾ ಅವರು ಹಾಗೆ ಹೇಳುತ್ತಾರೆ. ನೋಡಿದವರು ಅಲ್ಲಿ ಯಾರೂ ಇರಲಿಲ್ಲ). ಅವರು ಜೊತೆಯಾಗಿ ಆ ಸಾಧನೆ ಮಾಡಿದ ಕಾರಣ ಇಬ್ಬರೂ ನೆನಪಲ್ಲಿ ಇದ್ದಾರೆ.

4. ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಹತ್ತಕ್ಕೆ ಹತ್ತು ಅಂಕ ಮೊದಲು ಪಡೆದವರು ನಾಡಿಯಾ ಕೊಮೇನೆಸಿ(1976). ಆಗ ಆಕೆಗೆ 14 ವರ್ಷ ಪ್ರಾಯ! ನಂತರ ತುಂಬಾ ಜನ ಈ ಸಾಧನೆಯನ್ನು ರಿಪೀಟ್ ಮಾಡಿದರು. ಅವರ್ಯಾರನ್ನೂ ಇತಿಹಾಸ ನೆನಪಿಟ್ಟುಕೊಂಡಿಲ್ಲ.

Charles Babbage

5. ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಬಾರಿ 625/625 ಅಂಕಗಳನ್ನು ಪಡೆದವನು ಭದ್ರಾವತಿಯ ಹುಡುಗ ರಂಜನ್. ಮುಂದಿನ ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳು ಆ ಸಾಧನೆ ಮಾಡಿದರು. ಆದರೆ ರಂಜನ್ ಹೆಸರು ಎಸೆಸೆಲ್ಸಿ ಪರೀಕ್ಷೆ ಇರುವತನಕ ಶಾಶ್ವತ!

Charles Babbage

6. ಮಹಿಳಾ ಕಬಡ್ಡಿ ವಿಶ್ವಕಪ್ ಆರಂಭವಾದಾಗ ಮೊದಲ ಟ್ರೋಫಿ ಗೆದ್ದದ್ದು ಭಾರತ (2004). T20 ವಿಶ್ವಕಪ್ ಆರಂಭ ಆದಾಗಲೂ ಮೊದಲು ಟ್ರೋಫಿ ಎತ್ತಿದ್ದು ಭಾರತ! ಅಷ್ಟರಮಟ್ಟಿಗೆ ಅದು ಇತಿಹಾಸ. ನಂತರ ಗೆದ್ದವರು ಕೂಡ ಸಾಧಕರು ಹೌದು. ಆದರೆ ಮೊದಲು ಗೆದ್ದವರು ಮಾತ್ರ ಇತಿಹಾಸದಲ್ಲಿ ನೆನಪಲ್ಲಿ ಉಳಿಯುತ್ತಾರೆ.

7. ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಖ್ಯಾತ ವಸ್ತ್ರ ವಿನ್ಯಾಸಕಿ ಭಾನೂ ಅಥೈಯ್ಯ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ ಕುವೆಂಪು. ಮೊದಲ ಭಾರತರತ್ನ ಕರ್ನಾಟಕವು ಪಡೆದದ್ದು ವಿಶ್ವೇಶ್ವರಯ್ಯನವರ ಮೂಲಕ. ಅದರಿಂದಾಗಿ ಅವರೆಲ್ಲರೂ ಪಯೋನೀರ್ ಆದರು. ಲೆಜೆಂಡ್ ಆದರು.

Charles Babbage

8. ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಮೊದಲು ಪಡೆದವನು ಇಂಗ್ಲೆಂಡ್ ಬೌಲರ್ ಜಿಮ್ ಲೇಕರ್ (1956). ಮುಂದೆ ಅನಿಲ್ ಕುಂಬ್ಳೆ (1999) ಮತ್ತು ಎಜಾಜ್ ಪಟೇಲ್ ( 2021) ಈ ಸಾಧನೆಯನ್ನು ಲೆವೆಲ್ ಮಾಡಿದರು (ಮುರಿಯುವುದು ಸಾಧ್ಯ ಇಲ್ಲ ಅಲ್ವಾ?). ಕುಂಬ್ಳೆ ಭಾರತೀಯ ಅನ್ನುವ ಕಾರಣಕ್ಕೆ ನಮಗೆ ಅದು ಸ್ಪೆಷಲ್ ಅನ್ನಿಸಬಹುದು. ಆದರೆ ಜಿಮ್ ಲೇಕರ್ ಸಾಧನೆಯೇ ಎಲ್ಲರಿಗಿಂತ ಪ್ರಖರ ಎಂದು ನನ್ನ ಭಾವನೆ.

Charles Babbage

9. ಏಕದಿನದ ಪಂದ್ಯಗಳಲ್ಲಿ ಮೊದಲ ದ್ವಿಶತಕ ಹೊಡೆದ ಕೀರ್ತಿ ದೊರೆತದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ. ಮುಂದೆ ಹತ್ತಾರು ಜನರು ಈ ಸಾಧನೆಯನ್ನು ರಿಪೀಟ್ ಮಾಡಿದರು. ರೋಹಿತ್ ಶರ್ಮ ಮೂರು ಬಾರಿ ಈ ಸಾಧನೆ ಮಾಡಿದರು. ಆದರೆ ಸಚಿನ್ ದ್ವಿಶತಕ ಅದು ಜಗತ್ತಿಗೇ ಸ್ಪೆಷಲ್. ಏಕೆಂದರೆ ಅದು ಜಗತ್ತಿಗೇ ಮೊದಲ ಸಾಧನೆ. ಏಕದಿನದ ಒಂದು ಪಂದ್ಯದಲ್ಲಿ ದ್ವಿಶತಕ ಹೊಡೆಯಲು ಸಾಧ್ಯ ಎಂದು ಮೊದಲು ತೋರಿಸಿಕೊಟ್ಟದ್ದು ಸಚಿನ್ ಅಲ್ವಾ?

10. ಜಗತ್ತಿನ ಮೊದಲ ಬಲ್ಬ್ ಸಂಶೋಧನೆ ಮಾಡಿದ್ದು ಎಡಿಸನ್. ನಂತರ ನೂರಾರು ವಿಜ್ಞಾನಿಗಳು ಆ ಬಲ್ಬನ್ನು ಇಂಪ್ರೂವ್ ಮಾಡಿದರು. ಹೊಸ ಫಿಲಮೆಂಟ್, ಹೊಸ ವಿನ್ಯಾಸ ಪರಿಚಯ ಮಾಡಿದರು. ಆದರೆ ಎಲೆಕ್ಟ್ರಿಕ್ ಬಲ್ಬ್ ಸಂಶೋಧನೆಯ ಶ್ರೇಯಸ್ಸು ಎಡಿಸನ್ ಮತ್ತು ಎಡಿಸನ್ ಅವರಿಗೆ ಮಾತ್ರ ಸಲ್ಲುತ್ತದೆ.

Charles Babbage

11. ಹಾಗೆಯೇ ಜಗತ್ತಿನ ಮೊದಲ ಎಣಿಕೆ ಯಂತ್ರ ಸಂಶೋಧನೆ ಮಾಡಿದ್ದು ಚಾರ್ಲ್ಸ್ ಬ್ಯಾಬೇಜ್. ಮುಂದೆ ಹಲವಾರು ವಿಜ್ಞಾನಿಗಳು ಸೂಪರ್ ಸಾನಿಕ್ ಕಂಪ್ಯೂಟರ್ ಕಂಡುಹಿಡಿದರು. ಆದರೆ ಚಾರ್ಲ್ಸ್ ಬ್ಯಾಬೇಜ್ ಆ ಕ್ಷೇತ್ರದ ಪಯೊನೀರ್ ಎಂದು ಖಚಿತವಾಗಿ ಹೇಳಬಹುದು.

Charles Babbage

ಇದನ್ನೂ ಓದಿ : Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

ಭರತವಾಕ್ಯ

ಹೀಗೆ ಜಗತ್ತಿನ ಸಾವಿರಾರು ಮೊದಲಿಗರ ಪಟ್ಟಿ ಮಾಡಬಹುದು. ಹಾಗೆಯೇ ಅವರ ಸಾಧನಾ ಕ್ಷೇತ್ರಗಳು ವಿಸ್ತಾರ ಆಗಿರುವುದನ್ನು ಕೂಡ ಗಮನಿಸಿ. ಯಾವುದೇ ಕ್ಷೇತ್ರದಲ್ಲಿ ಅದೇ ಸಾಧನೆ ರಿಪೀಟ್ ಮಾಡಿದವರನ್ನು ಜಗತ್ತು ಬೇಗ ಮರೆಯುತ್ತದೆ. ಆದ್ದರಿಂದ ಮಾನವನ ಕ್ರಿಯಾಶಾಲಿ ಮೆದುಳು ಹೊಸ ಹೊಸ ಸಾಧನಾ ಕ್ಷೇತ್ರಗಳನ್ನು ಹುಡುಕಿಕೊಂಡು ಮುಂದೆ ಹೋಗುತ್ತಿದೆ ಅನ್ನಬಹುದು. ಹಾಗೆಯೇ ಮೊದಲಿಗರನ್ನು ಕೂಡ ಸೃಷ್ಟಿ ಮಾಡುತ್ತ ಜಗತ್ತು ಮುಂದೆ ಹೋಗುತ್ತದೆ. ಇದುವರೆಗೂ ಪಯೋನೀರ್ ಇಲ್ಲದ ಸಾವಿರಾರು ಕ್ಷೇತ್ರಗಳು ಇನ್ನೂ ಬಾಕಿ ಇವೆ. ಅಂತಹ ಕ್ಷೇತ್ರ ಆರಿಸಿ ಅದರಲ್ಲಿ ಸಾಧನೆ ಮಾಡಿದರೆ ನಾವು ನಮ್ಮ ಬದುಕಿನ ನಂತರವೂ ನೆನಪಲ್ಲಿ ಉಳಿಯುತ್ತೇವೆ. ಏನಂತೀರಿ?

Exit mobile version