ನವದೆಹಲಿ: ಇಂಧನ ಬೆಲೆ ಏರಿಕೆಯ ತಾಪಕ್ಕೆ ವಿಶ್ವವೇ ಸುಡುವಂತ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಭಾರತದಲ್ಲಿ ಇಂಧನ ಬೆಲೆ ತಾರಕಕ್ಕೇರಿದೆ. ಭಾರತದ LPG ದರ ಈಗ ವಿಶ್ವದಲ್ಲೇ ಅತಿ ಹೆಚ್ಚು ಎಂದು ದಾಖಲಾಗಿದೆ. ಹಾಗೆಯೇ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೂಡ ಗಗನ ಮುಟ್ಟಿದೆ. ಭಾರತದ ಪೆಟ್ರೋಲ್ ದರ ವಿಶ್ವದ ದುಬಾರಿ ಇಂಧನಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ ಹಾಗೂ ಡೀಸೆಲ್ ಬೆಲೆ ಎಂಟನೇ ಸ್ಥಾನದಲ್ಲಿದೆ.
ಯಾಕೆ ಭಾರತದಲ್ಲಿ ಇಂಧನ ದುಬಾರಿ?
ವಿಶ್ವದ ಎಲ್ಲ ದೇಶಗಳಲ್ಲೂ ಇಂಧನ ಬೆಲೆ ದುಬಾರಿಗೊಳ್ಳುತ್ತಿದ್ದರೆ, ಭಾರತದ ಮೇಲೆ ಮಾತ್ರ ಯಾಕೆ ಈ ಪ್ರಮಾಣದ ಪೆಟ್ಟು ಬೀಳುತ್ತಿದೆ? ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕು ಖರೀದಿಸಲು ಎಲ್ಲಾ ದೇಶಗಳಿಗೂ ಸಮಾನ ಶಕ್ತಿ ಇರುವುದಿಲ್ಲ. ಪ್ರತಿಯೊಂದು ದೇಶದ ಕರೆನ್ಸಿಯ ವ್ಯವಹಾರದ ಬಳಕೆಯ ಆಧಾರದ ಮೇಲೆ ಸರಕು ಖರೀದಿಸುವ ಶಕ್ತಿ ಹೊಂದಿರುತ್ತದೆ. ಇದಕ್ಕೆ ಪರಿಹಾರವಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF), ಸಾಮಾನ್ಯ ವಿನಿಮಯ ದರ (nominal exchange rate) ವನ್ನು ಪರಿಚಯಿಸಿದೆ.
ಹಾಗೆಯೇ, ಪ್ರತಿಯೊಂದು ದೇಶದ ಆದಾಯ ಕೂಡ ಬೇರೆ ಬೇರೆ ಆಗಿರುತ್ತದೆ. ಉದಾಹರಣೆಗೆ, ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯ ನಾಗರಿಕನ ಆದಾಯದ ಒಂದು ಸಣ್ಣ ಭಾಗವನ್ನು ಮಾತ್ರ ಇಂಧನ ಖರೀದಿಗೆ ವೆಚ್ಚ ಆಗುತ್ತದೆ. ಅದೇ ಭಾರತದಲ್ಲಿ ಸಾಮಾನ್ಯ ನಾಗರಿಕನ ಆದಾಯದ 25% ವೆಚ್ಚವನ್ನು ಇಂಧನ ಖರೀದಿಗೆ ಮೀಸಲಿಡಬೇಕಾಗುತ್ತದೆ. ಹೀಗೆ ಪ್ರತಿ ದೇಶದ ಆದಾಯ ಹಾಗೂ ವೆಚ್ಚ ವಿಭಿನ್ನವಾಗಿರುತ್ತದೆ. ಇದೂ ಇಂಧನ ದರದ ಬಿಸಿ ನಾಗರಿಕರಿಗೆ ತಟ್ಟಲು ಕಾರಣವಾಗಿರುತ್ತದೆ.
ಅಂಕಿ ಅಂಶಗಳು ಹೇಳುವುದೇನು?
ಭಾರತಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹120 ತಲುಪಿದೆ, ಅಂದರೆ ಸಾಮಾನ್ಯ ವಿನಿಮಯ ದರದಲ್ಲಿ ಪರಿಗಣಿಸಿದಾಗ $1.58 ಆಗುತ್ತದೆ. ಆದರೆ, ಅಮೆರಿಕದಲ್ಲಿ $1ಕ್ಕೆ ಹಲವಾರು ವಸ್ತುಗಳನ್ನು ಖರೀದಿಸಬಹುದು. ಅದೇ ರೀತಿ ಭಾರತದಲ್ಲಿ ಕೂಡ ₹75.84 ಕ್ಕೆ ಹಲವು ವಸ್ತುಗಳನ್ನು ಖರೀದಿಸಬಹುದು. ಕಳೆದ ಮಾರ್ಚ್‌ನಲ್ಲಿ ಒಂದು ಕೆಜಿ ಆಲೂಗಡ್ಡೆಯ ಬೆಲೆ ಅಮೆರಿಕದಲ್ಲಿ $1.94 ಇತ್ತು. ಅದನ್ನು ಭಾರತದಲ್ಲಿ ಸಾಮಾನ್ಯ ವಿನಿಮಯ ದರದಲ್ಲಿ ಪರಿಗಣಿಸಿದಾಗ ₹147 ಆಗುತ್ತದೆ. ಅಂದರೆ, ಮಾರ್ಚ್‌ನಲ್ಲಿ ಸುಮಾರು 7 ಕೆಜಿಯಷ್ಟು ಆಲೂಗಡ್ಡೆಯನ್ನು ಭಾರತದಲ್ಲಿ ಖರೀದಿಸಬಹುದಿತ್ತು.
ಅದೇ ರೀತಿ, ಭಾರತದ ಪೆಟ್ರೋಲ್ ದರವನ್ನು ಅಂತರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಹೋಲಿಸಿದಾಗ ಪೆಟ್ರೋಲ್ ದರ ಲೀಟರ್‌ಗೆ $5.2 ಎಂದು ತಿಳಿಯುತ್ತದೆ. ಇದು ವಿಶ್ವದಲ್ಲಿ ದುಬಾರಿ ದರದ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಸುಡಾನ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ $8 ತಲುಪಿದ್ದು, ಮೊದಲನೇ ಸ್ಥಾನದಲ್ಲಿದೆ ಹಾಗೂ ಲಾವೋಸ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ $5.6 ಇರುವುದರಿಂದ ಎರಡನೇ ಸ್ಥಾನದಲ್ಲಿದೆ
ಇನ್ನು, ಭಾರತದ LPG ದರ ಲೀಟರ್‌ಗೆ $3.5 ತಲುಪಿದ್ದು, ವಿಶ್ವದಲ್ಲೇ ಅತಿ ಹೆಚ್ಚು ದರ ಎಂದು ದಾಖಲಾಗಿದೆ. ಹಾಗೆಯೆ, ಡೀಸೆಲ್ ದರ ಲೀಟರ್‌ಗೆ $4.6 ಮುಟ್ಟಿದ್ದು ವಿಶ್ವದಲ್ಲಿ ಎಂಟನೇ ಸ್ಥಾನದಲ್ಲಿದೆ
ಹೆಚ್ಚಿನ ಓದಿಗಾಗಿ: ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ & ಅಡುಗೆ ಅನಿಲ ದರ ಹೆಚ್ಚಳ