ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ತಾವು ಸ್ಪರ್ಧಿಯಲ್ಲ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಘೋಷಿಸಿದ್ದಾರೆ . ಈ ಮೂಲಕ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿಗೆ ಸಡ್ಡು ಹೊಡೆಯುವ ಪ್ರತಿಪಕ್ಷಗಳ ಪ್ರಯತ್ನಕ್ಕೆ ಎನ್‌ಸಿಪಿ ವರಿಷ್ಠರು ತಣ್ಣೀರು ಎರಚಿದ್ದಾರೆ.
“ನಾನು ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ” ಎಂದು 81 ವರ್ಷದ ಮಾಜಿ ರಕ್ಷಣಾ ಸಚಿವ ಮತ್ತು ಸಿಎಂ ಸೋಮವಾರ ಎನ್‌ಸಿಪಿ ಕ್ಯಾಬಿನೆಟ್ ಸದಸ್ಯರ ಸಭೆಯಲ್ಲಿ ಸ್ಪಷ್ಟವಾಗಿಯೇ ಹೇಳಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅವರ ಉಮೇದುವಾರಿಕೆಗೆ ಬೆಂಬಲ ವ್ಯಕ್ತಪಡಿಸಿದ ಮರುದಿನವೇ ಪವಾರ್ ಅವರ ಹೇಳಿಕೆ ಬಂದಿದೆ. ಎಎಪಿಯ ಸಂಜಯ್ ಸಿಂಗ್ ಕೂಡ ಭಾನುವಾರ ಪವಾರ್ ಅವರನ್ನು ಭೇಟಿ ಮಾಡಿದ್ದರು. ಈ ವಿಷಯದ ಬಗ್ಗೆ ಒಗ್ಗಟ್ಟನ್ನು ಖಚಿತಪಡಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳ ನಡುವೆ ಸಂವಾದವನ್ನು ಏರ್ಪಡಿಸಲು ಪವಾರ್ ಪ್ರಯತ್ನಿಸುತ್ತಾರೆ ಎಂದು ಮತ್ತೊಬ್ಬ ಎನ್‌ಸಿಪಿ ನಾಯಕ ಸುಳಿವು ನೀಡಿದ್ದಾರೆ.
“ಸಾಕಷ್ಟು ಸಂಖ್ಯಾ ಬಲ ಇಲ್ಲದಿದ್ದರೂ ಪ್ರತಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಹಾಕುತ್ತವೆ ಎಂಬ ಭಾವನೆ ಸಾಮಾನ್ಯವಾಗಿದೆ. ಲೋಕಸಭೆಯಲ್ಲಿ ಬಿಜೆಪಿಯೊಂದೇ 300 ಸದಸ್ಯರನ್ನು ಹೊಂದಿದೆ, ಅದು ಬಹಳ ದೊಡ್ಡ ಸಂಖ್ಯೆ” ಅವರು ಪವಾರ್ ಹೇಳಿದರು. ರಾಜ್ಯ ಶಾಸಕಾಂಗಗಳಲ್ಲಿ ಬಿಜೆಪಿಯ ಬಲವು ಅದರ ಪ್ರಭಾವವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಎನ್‌ಡಿಎ ಒಟ್ಟು ಸಂಖ್ಯಾಬಲದಲ್ಲಿ ಅರ್ಧದಷ್ಟು ಮಾತ್ರ ಹೊಂದಿದೆ. ಹೀಗಾಗಿ ಜಗನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಬೆಂಬಲವನ್ನು ನಿರೀಕ್ಷಿಸುತ್ತಿದೆ. ವೈಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಡಿ ಒಟ್ಟಾರೆ 7-8% ಮತಗಳನ್ನು ಹೊಂದಿವೆ. ಆದರೆ ಅವರು ತಟಸ್ಥರಾಗುತ್ತಾರೆ ಅಥವಾ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದು ಎನ್‌ಸಿಪಿ ನಾಯಕರೊಬ್ಬರು ಹೇಳಿದರು.
ರಾಮ್ ನಾಥ್ ಕೋವಿಂದ್ ಅವರನ್ನೇ ಎನ್‌ಡಿಎ ಮತ್ತೊಮ್ಮೆ ಆಯ್ಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ವೆಂಕಯ್ಯ ನಾಯ್ಡು ಅವರನ್ನು ಕಣಕ್ಕಿಳಿಸಲು ಅಥವಾ ಬೇರೆ ಯಾವುದಾದರೂ ಅಚ್ಚರಿಯ ಆಯ್ಕೆಯನ್ನು ಆರಿಸಿಕೊಳ್ಳಲೂಬಹುದು.
ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಲು ಜೂನ್ 15 ರಂದು ದೆಹಲಿಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕರೆದಿರುವ ಸಭೆಯಲ್ಲಿ ಪವಾರ್ ಮತ್ತು ಪ್ರಫುಲ್ ಪಟೇಲ್ ಭಾಗವಹಿಸಲಿದ್ದಾರೆ. “ಅಗತ್ಯವಿದ್ದರೆ, ಬಿಜೆಪಿ ಅಭ್ಯರ್ಥಿಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಹಾಕುವಲ್ಲಿ ಬ್ಯಾನರ್ಜಿಯ ಪ್ರಯತ್ನಗಳನ್ನು ಪವಾರ್ ಬಲಪಡಿಸುತ್ತಾರೆ. ಬಿಜೆಪಿಗೆ ಸುಲಭದ ಗೆಲುವು ದಕ್ಕದಂತೆ ನೋಡಿಕೊಳ್ಳಲು ಪ್ರಮುಖ ವಿರೋಧ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಲು ಅವರು ಬಯಸುತ್ತಾರೆ” ಎಂದು ಅವರು ಹೇಳಿದರು.
ಎನ್‌ಸಿಪಿ ಮೂಲಗಳ ಪ್ರಕಾರ, ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸಮರ್ಥ ಆಯ್ಕೆ ಎನಿಸುತ್ತಾರೆ. “ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಆದರೆ ಅವರು ಸ್ಪರ್ಧಿಯಾಗಿ ಹೊರಹೊಮ್ಮಿದರೆ ನಾವು ಆಶ್ಚರ್ಯಪಡುವುದಿಲ್ಲ,” ಎಂದು ಎನ್‌ಸಿಪಿ ಮುಖಂಡ ಹೇಳಿದರು.
ಮುಂಬೈನಲ್ಲಿರುವ ಪವಾರ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಚುನಾಯಿತ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್, ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಸಂಸದ ಸುನೀಲ್ ತಾಟ್ಕರೆ ಭಾಗವಹಿಸಿದ್ದರು. ಸಂಕ್ಷಿಪ್ತ ಸಭೆಯಲ್ಲಿ, ಸಂಜಯ್ ಪವಾರ್ ಸೋಲಿನ ನಂತರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಜೂನ್ 20 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಸಿದ್ಧತೆಗಳನ್ನು ಪವಾರ್ ಪರಿಶೀಲಿಸಿದರು.
ಶರದ್ ಪವಾರ್ ಅವರ ಉಮೇದುವಾರಿಕೆಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಭಾನುವಾರ ಹೇಳಿದ್ದರು. ಶರದ್ ಪವಾರ್ ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರ ಉಮೇದುವಾರಿಕೆಯನ್ನು ಬೆಂಬಲಿಸಲು ನಾವು ಸಂತೋಷಪಡುತ್ತೇವೆ ಎಂದು ಪಟೋಲೆ ಹೇಳಿದರು.
ಖರ್ಗೆ-ಪವಾರ್ ಭೇಟಿ:
ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಸಂದೇಶದೊಂದಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಗುರುವಾರ ಶರದ್ ಪವಾರ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದರು. ಎಎಪಿ ನಾಯಕ ಸಂಜಯ್ ಸಿಂಗ್ ಕೂಡ ಭಾನುವಾರ ಎನ್‌ಸಿಪಿ ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಪವಾರ್ ಈಗಾಗಲೇ ದಿಲ್ಲಿಯಲ್ಲಿ ಬಿಡಾರ ಹೂಡಿದ್ದಾರೆ.
“ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶರದ್ ಪವಾರ್, ಮಮತಾ ಬ್ಯಾನರ್ಜಿ ಮತ್ತು ಇತರ ಕೆಲವು ವಿರೋಧ ಪಕ್ಷದ ನಾಯಕರೊಂದಿಗೆ ಮುಂಬರುವ ರಾಷ್ಟ್ರಪತಿ ಚುನಾವಣೆಯ ವಿಷಯವನ್ನು ಚರ್ಚಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ.