ನವ ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ (ಸೇನಾ ನೇಮಕಾತಿ)ಯಲ್ಲಿ ಉದ್ಯೋಗ ಭದ್ರತೆಯಿಲ್ಲ ಎಂದು ಆರೋಪಿಸಿ ರಾಜಸ್ಥಾನ, ಬಿಹಾರ ಸೇರಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ (Agnipath Scheme Protests) ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಹೆಚ್ಚುತ್ತಿದ್ದಂತೆ ಕೇಂದ್ರಸರ್ಕಾರ ವಯೋಮಿತಿಯನ್ನು 23ಕ್ಕೆ ಏರಿಸಿದೆ. ಹೀಗಿದ್ದಾಗ್ಯೂ ಆಕ್ರೋಶಿತರು ಇಂದು ಮುಂಜಾನೆಯೇ ಪ್ರತಿಭಟನೆ ಶುರು ಮಾಡಿದ್ದಾರೆ. ಬಿಹಾರದಲ್ಲಿ ಈಗಾಗಲೇ ಎರಡು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಲಕ್ಷ್ಮೀನಿಯಾ ರೈಲ್ವೆ ಸ್ಟೇಶನ್‌ನಲ್ಲಿ ಹಳಿಯ ಮೇಲೆ ಕೂಡ ಬೆಂಕಿ ಹಾಕಿ, ರೈಲು ತಡೆ ನಡೆಸಲಾಗಿದೆ. ಬೋಗಿಗಳು, ಹಳಿಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಫೋಟೋ, ವಿಡಿಯೋಗಳು ಭಯಾನಕವಾಗಿವೆ.
ಇನ್ನೊಂದೆಡೆ ಉತ್ತರ ಪ್ರದೇಶದ ಅನೇಕ ಕಡೆ ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ಹಾಳುಗೆಡವಲಾಗುತ್ತಿದೆ. ಬಲ್ಲಿಯಾ ರೈಲ್ವೆ ಸ್ಟೇಶನ್‌ನಲ್ಲಿ ಪ್ರತಿಭಟನಾಕಾರರ ಗುಂಪು ರೈಲಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಲು ಯತ್ನಿಸಿದೆ. ಇಂದು ಮುಂಜಾನೆಯಿಂದಲೇ ಪ್ರಾರಂಭವಾದ ಪ್ರತಿಭಟನೆ ಒಮ್ಮೆಲೇ ಹಿಂಸಾಚಾರ ಸ್ವರೂಪವನ್ನೇ ಪಡೆದುಕೊಂಡಿದ್ದು, ಬಲ್ಲಿಯಾ ರೈಲ್ವೆ ಸ್ಟೇಶನ್‌ನಲ್ಲೂ ಕೂಡ ಒಂದಷ್ಟು ಜನ ಗಲಾಟೆ ಸೃಷ್ಟಿಸಿದರು. ಕಲ್ಲು ತೂರಾಟ ನಡೆಸಿದರು. ರೈಲಿಗೆ ಬೆಂಕಿ ಹಚ್ಚಿ ಹಾನಿ ಮಾಡತೊಡಗಿದರು. ಅವರನ್ನು ತಡೆಯಲಾಗಿದೆ. ಬೆಂಕಿಯನ್ನು ನಂದಿಸಲಾಗಿದ್ದು ದೊಡ್ಡಮಟ್ಟದ ಅಪಾಯವನ್ನು ತಡೆಯಲಾಗಿದೆ ಎಂದು ಬಲ್ಲಿಯಾ ಜಿಲ್ಲಾಧಿಕಾರಿ ಸೌಮ್ಯಾ ಅಗರ್‌ವಾಲ್ ತಿಳಿಸಿದ್ದಾರೆ. ಹರ್ಯಾಣದಲ್ಲೂ ಬೆಳಗ್ಗೆಯಿಂದ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ: Agnipath | ಅಗ್ನಿಪಥ್ ಯೋಜನೆಯಲ್ಲಿ ಉದ್ಯೋಗ ಭದ್ರತೆಯಿಲ್ಲವೆಂದು ಹಲವೆಡೆ ಪ್ರತಿಭಟನೆ, ರೈಲಿಗೆ ಬೆಂಕಿ