Site icon Vistara News

ಒಂದೇ ಪಕ್ಷ 30 ವರ್ಷದಿಂದ ಗೆಲ್ತಿದೆ ಅಂದ್ರೆ….‌ ಬಿಜೆಪಿ ಪರ ಹಾರ್ದಿಕ್ ಪಟೇಲ್‌ ಬ್ಯಾಟಿಂಗ್

ಹಾರ್ದಿಕ್‌ ಪಟೇಲ್‌

ಗಾಂಧಿನಗರ: ಭಾರತೀಯ ಜನತಾ ಪಕ್ಷಕ್ಕೆ ಸೇರಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ಮನಸ್ಸು ಮಾಡಿಲ್ಲ ಎಂದು ಹೇಳಿರುವ ಗುಜರಾತ್ ನಾಯಕ ಹಾರ್ದಿಕ್ ಪಟೇಲ್, ಕಳೆದ 30 ವರ್ಷಗಳಿಂದ ರಾಜ್ಯದ ಜನರು “ನಿರ್ದಿಷ್ಟ ಪಕ್ಷ” ವನ್ನು ಆರಿಸುತ್ತಿದ್ದರೆ, ಅವರು ಅದರಲ್ಲಿ ಏನಾದರೂ ಒಳ್ಳೆಯದನ್ನು ಕಂಡಿರಲೇಬೇಕು ಎಂದು ಹೇಳಿದ್ದಾರೆ. ಮಾಧ್ಯಮದ ಜತೆ ಮಾತನಾಡುತ್ತ, ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಬಿಜೆಪಿ ಸತತವಾಗಿ ಚುನಾವಣೆಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ‘ನಾವು ವಾಸ್ತವವನ್ನು ಒಪ್ಪಿಕೊಳ್ಳಬೇಕು. ಪಕ್ಷವು ಏನನ್ನಾದರೂ ಸರಿಯಾಗಿ ಮಾಡಿರಬೇಕು, ಹಾಗಾಗಿಯೇ ಜನರು ಅದನ್ನು ಪದೇಪದೆ ಆಯ್ಕೆ ಮಾಡುತ್ತಿದ್ದಾರೆ” ಎಂದು ಹೇಳಿದರು.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಕಾಲೂರಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ, ಪ್ರತಿ ಪಕ್ಷಕ್ಕೂ ತಾನು ಆಯ್ಕೆ ಮಾಡಿದ ಸ್ಥಳದಿಂದ ಸ್ಪರ್ಧಿಸಲು ಪ್ರಜಾಸತ್ತಾತ್ಮಕ ಹಕ್ಕು ಇದೆ; ಆದರೆ ಅಂತಿಮವಾಗಿ ತಮಗೆ ಯಾವುದು ಒಳ್ಳೆಯದು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ನುಡಿದರು. ”ಪ್ರತಿಯೊಂದು ಪಕ್ಷಕ್ಕೂ ಒಂದು ಯೋಜನೆ, ದೂರದೃಷ್ಟಿ ಇರುತ್ತದೆ. ಆದರೆ, ಅಂತಿಮವಾಗಿ ಅದನ್ನು ನಿರ್ಧರಿಸುವವರು ಜನರೇ” ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಪಟೇಲ್ ಹೇಳಿದರು.

ಈಗಿನ ರಾಜಕೀಯ ಸನ್ನಿವೇಶದಲ್ಲಿ ಪ್ರಸ್ತುತವಾಗಿ ಉಳಿಯುತ್ತೇನೆ ಎಂಬ ಇಂಗಿತ ವ್ಯಕ್ತಪಡಿಸಿದ ಯುವ ನಾಯಕ, ಜನರನ್ನು ತಲುಪಲು ರಾಜ್ಯಾದ್ಯಂತ ಹುರುಪಿನಿಂದ ಯಾತ್ರೆ ಕೈಗೊಳ್ಳುವುದಾಗಿ ಹೇಳಿದರು. “ಇತ್ತೀಚಿನ ದಿನಗಳಲ್ಲಿ ನಾನು 4,000 ಹಳ್ಳಿಗಳಲ್ಲಿ ಸುತ್ತಾಡಿದ್ದೇನೆ. ಜನಸಂಪರ್ಕದ ಈ ಯಾತ್ರೆಯನ್ನು ಮುಂದುವರಿಸುತ್ತೇನೆ. ಮೀಸಲಾತಿ ಆಂದೋಲನದ ಬಳಿಕ ನಾವು ನಮಗೆ ಸಲ್ಲಬೇಕಾದ ಅರ್ಹತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ರಾಜ್ಯದ ಯುವಕರಿಗಾಗಿ ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ” ಎಂದು ಹಾರ್ದಿಕ್‌ ತಿಳಿಸಿದರು.

ಅಯೋಧ್ಯೆ ರಾಮ ಮಂದಿರದ ಕುರಿತ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯತ್ತ ಒಲವು ತೋರುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಪಟೇಲ್, ”ನಾನು ಕಾಂಗ್ರೆಸ್‌ನಲ್ಲಿದ್ದಾಗಲೂ ರಾಮಮಂದಿರದ ಪರವಾಗಿಯೇ ಮಾತನಾಡಿದ್ದೆ. ನಾನು ಕಾಂಗ್ರೆಸ್‌ನಲ್ಲಿದ್ದಾಗಲೂ 370ನೇ ವಿಧಿ ರದ್ದತಿಯನ್ನು ಬೆಂಬಲಿಸಿದ್ದೆ. ನಾಳೆ ನಾನು ಬೇರೆ ಯಾವುದೇ ಪಕ್ಷಕ್ಕೆ ಸೇರಿದರೆ, ನಾನು ಇನ್ನೂ ಇಂದಿರಾ ಗಾಂಧಿಯನ್ನು ಪ್ರಬಲ ನಾಯಕಿ ಎಂದು ಹೊಗಳುತ್ತೇನೆ. ನಾನು ನನ್ನ ಅಭಿಪ್ರಾಯವನ್ನು ಮರೆಮಾಚುವುದಿಲ್ಲ’ ಎಂದು ಉತ್ತರಿಸಿದರು.

ಇದನ್ನೂ ಓದಿ| ಕಾಂಗ್ರೆಸ್‌ ಕೈ ಬಿಟ್ಟ ಹಾರ್ದಿಕ್ ಪಟೇಲ್‌ ಗೆ ಬಿಜೆಪಿ, ಆಪ್‌ ಗಾಳ

ಸೌರಾಷ್ಟ್ರದ ಪ್ರಮುಖ ಪಾಟಿದಾರ್ ಪ್ರತಿನಿಧಿ ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್‌ ಮುನ್ನೆಲೆಗೆ ತರಲು ಯತ್ನಿಸಿದ್ದಕ್ಕಾಗಿ ಅಸಮಾಧಾನಗೊಂಡು ತಾವು ಕಾಂಗ್ರೆಸ್ ತೊರೆದಿದ್ದಾಗಿ ಪ್ರಕಟವಾದ ವರದಿಗಳನ್ನು ಹಾರ್ದಿಕ್ ಪಟೇಲ್ ತಳ್ಳಿಹಾಕಿದರು. ಕೇವಲ ದುರ್ಬಲ ನಾಯಕರು ಮಾತ್ರ ತಮಗೆ ಬೆದರಿಕೆ ಇದೆ ಎಂದು ಭಾವಿಸುತ್ತಾರೆ’ ಎಂದು ಹೇಳಿದರು. ”ಜಿಗ್ನೇಶ್ ಮೇವಾನಿ ಮತ್ತು ಕನ್ಹಯ್ಯಾ ಕುಮಾರ್ ಅವರಂತಹ ಯುವ ನಾಯಕರನ್ನು ಕರೆತರಲು ನಾನು ಪಕ್ಷವನ್ನು ಮನವೊಲಿಸಲು ಸಾಧ್ಯವಾದರೆ, 55 ವರ್ಷದ ಒಬ್ಬ ವ್ಯಕ್ತಿಯಿಂದ ನನಗೆ ಬೆದರಿಕೆ ಇದೆ ಎಂದು ಭಾವಿಸಬೇಕೇ? ದುರ್ಬಲರಿಗೆ ಮಾತ್ರ ಸ್ಪರ್ಧೆಯ ಭಯವಿರುತ್ತದೆ. ಪಕ್ಷಕ್ಕೆ ಯಾರು ಸೇರುತ್ತಾರೆ ಎಂಬುದು ಮುಖ್ಯವಲ್ಲ; ಆದರೆ ನೀವು 28 ವರ್ಷದ ಯುವಕನಿಗೆ ಕೆಲಸ ಮಾಡಲು ಅನುಮತಿಸದಿದ್ದರೆ, 55 ವರ್ಷದ ವ್ಯಕ್ತಿಯನ್ನು ಹೇಗೆ ಕಾರ್ಯ ನಿರ್ವಹಿಸಲು ನೀವು ಅನುಮತಿಸುತ್ತೀರಿ?” ಎಂದು ಮರುಪ್ರಶ್ನೆ ಹಾಕಿದರು.

ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಹಾರ್ದಿಕ್ ಪಟೇಲ್, ಆ ಪಕ್ಷವು ವಾಸ್ತವಿಕವಾಗಿ ನಿಷ್ಪ್ರಯೋಜಕವಾಗಿದೆ ಎಂದು ಪ್ರತಿಪಾದಿಸಿದರು. ”ನಾನು ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಬಯಸಿರಲಿಲ್ಲ. ನಾನು ಹುಡುಕಿದ್ದು ಕೆಲಸ. ನೀವು ಕೆಲಸ ಕೊಡಿ ಎಂದು ಕೇಳಬೇಕಾದ ಮತ್ತು ನಾಯಕರು ನಿಮಗೆ ಕೆಲಸ ಮಾಡಲು ಬಿಡದೆ ಇರುವ ದೇಶದ ಏಕೈಕ ಪಕ್ಷ ಎಂದರೆ ಕಾಂಗ್ರೆಸ್ ಮಾತ್ರ. ಅದಕ್ಕೆ ಯಾವುದೇ ಕಲ್ಪನೆಗಳಿಲ್ಲ. ಸಂಪೂರ್ಣವಾಗಿ ಬೌದ್ಧಿಕ ದಿವಾಳಿತನ ಮತ್ತು ಅಸಮರ್ಥತೆ ಮಾತ್ರ ಇದೆ” ಎಂದು ಪಟೇಲ್ ಬಣ್ಣಿಸಿದರು.

ಇದನ್ನೂ ಓದಿ| ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಒಂದೇ ವಾರದಲ್ಲಿ ಕಮಲ ಹಿಡಿದ ಸುನಿಲ್‌ ಜಾಖರ್‌

Exit mobile version