ನವ ದೆಹಲಿ: ಕಾಶಿ, ಮಥುರಾ ವಿವಾದಕ್ಕೆ ಸಂಬಂಧಿಸಿ ಭಾರತೀಯ ಜನತಾ ಪಕ್ಷ ಇದೇ ಮೊದಲ ಬಾರಿಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. ಈ ವಿವಾದಗಳಿಗೆ ಸಂಬಂಧಿಸಿ ಪಕ್ಷ ಯಾವುದೇ ನಿಲುವನ್ನು ಹೊಂದಿಲ್ಲ, ಕೋರ್ಟ್ ಮತ್ತು ಸಂವಿಧಾನ ಹೇಳುವುದನ್ನು ಕಾಯಾ, ವಾಚಾ ಪಾಲಿಸುವುದಾಗಿ ಸ್ಪಷ್ಟಪಡಿಸಿದೆ.
ನರೇಂದ್ರ ಮೋದಿ ನೇತೃತ್ವದ ಸರಕಾರದ ಎಂಟನೇ ವರ್ಷಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ʻʻನಾವು ಯಾವಾಗಲೂ ಸಾಂಸ್ಕೃತಿಕ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಈ ಕಾಶಿ- ಮಥುರಾ ಮೊದಲಾದ ವಿಚಾರಗಳ ಬಗ್ಗೆ ಸಂವಿಧಾನ ಮತ್ತು ಕೋರ್ಟ್‌ಗಳು ನೀಡುವ ತೀರ್ಪಿನಂತೆಯೇ ನಡೆದುಕೊಳ್ಳ್ಳುತ್ತೇವೆ ಎಂದರು.
ಕಾಶಿ ಮತ್ತು ಮಥುರಾದ ದೇವಾಲಯಗಳ ಪುನರುತ್ಥಾನ ಬಿಜೆಪಿ ಅಜೆಂಡಾದಲ್ಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ, ಅದಾದ ಬಳಿಕ ಇಂಥ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದರು. 1989ರ ಜೂನ್‌ನಲ್ಲಿ ಪಾಲಂಪುರ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅದುವರೆಗೆ ವಿಶ್ವ ಹಿಂದೂ ಪರಿಷತ್ ಮುನ್ನಡೆಸುತ್ತಿದ್ದ ರಾಮ ಜನ್ಮಭೂಮಿ ಹೋರಾಟವನ್ನು ಭಾರತೀಯ ಜನತಾ ಪಕ್ಷವು ತನ್ನ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಎತ್ತಿಕೊಳ್ಳಬೇಕು ಎನ್ನುವ ನಿರ್ಣಯ ಮಾಡಲಾಗಿತ್ತು. ಅದರ ಬೆನ್ನಿಗೇ ʻಮಂದಿರವಲ್ಲೇ ಕಟ್ಟುವೆವುʼ ಎನ್ನುವ ಘೋಷ ವಾಕ್ಯದೊಂದಿಗೆ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ರಥಯಾತ್ರೆ ಆರಂಭಿಸಿದ್ದರು.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?
ಕಾಶಿ ಮತ್ತು ಮಥುರಾಗೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆ ಮತ್ತು ಕಾನೂನು ಹೋರಾಟಕ್ಕೆ ಸಂಬಂಧಿಸಿ ಬಿಜೆಪಿ ಏನೂ ಹೇಳುವುದಿಲ್ಲ. ಜನರು, ನಾಯಕರು ವಿಭಿನ್ನವಾದ ಅಭಿಪ್ರಾಯಗಳನ್ನು ಆಗಲೇ ಹೇಳಿದ್ದಾರೆ. ಆದರೆ, ಪಕ್ಷವಾಗಿ ಬಿಜೆಪಿ ಏನನ್ನೂ ಹೇಳುವುದಿಲ್ಲ ಎಂದರು. ʻಕಾನೂನನ್ನು ಜನರು ತಮಗೆ ಬೇಕಾದ ಹಾಗೆ ವ್ಯಾಖ್ಯಾನಿಸುತ್ತಾರೆ, ಇದನ್ನು ನಾವು ತಡೆಯಲಾಗದು. ಆದರೆ, ಕೋರ್ಟ್ ನೀಡುವ ತೀರ್ಪನ್ನು ನಾವು ಪಾಲಿಸುತ್ತೇವೆ ಎಂದಷ್ಟೇ ಸ್ಪಷ್ಟಪಡಿಸುತ್ತೇನೆ ಎಂದು ಜೆ.ಪಿ. ನಡ್ಡಾ ಸ್ಪಷ್ಟಪಡಿಸಿದರು.
ಈ ನಡುವೆ ಬಿಜೆಪಿಯು ʻಮೋದಿ ಸರಕಾರ ನವಭಾರತದ ನಿರ್ಮಾತೃʼ ಎಂಬ ಶೀರ್ಷಿಕೆಯ ಧ್ಯೇಯ ಗೀತೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಮ ಜನ್ಮಭೂಮಿಯಲ್ಲಿ ದೇಗುಲ ನಿರ್ಮಾಣ, ಕಾಶಿಯಲ್ಲಿ ಕಾರಿಡಾರ್ ವೈಭವ ಮತ್ತು ಮಥುರೆಯ ಶ್ರೀ ಕೃಷ್ಣ ಜನ್ಮಸ್ಥಾನದ ಚಿತ್ರಣಗಳನ್ನು ತೋರಿಸಲಾಗಿದೆ.
ಇದನ್ನೂ ಓದಿ | Explainer: ಕಾಶಿ ಮಾದರಿ ಸಮೀಕ್ಷೆಯತ್ತ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ?