ವಾಷಿಂಗ್ಟನ್: ಜೇಮ್ಸ್ ವೆಬ್ (James Webb) ಟೆಲೆಸ್ಕೋಪ್ ನಮ್ಮ ಸೌರಮಂಡಲದ ಕೊನೆಯ ಗ್ರಹ ನೆಪ್ಚೂನ್‌ನ ಶುಭ್ರವಾದ ಚಿತ್ರವನ್ನು ಸೆರೆ ಹಿಡಿದಿದೆ. ಅತಿ ದೂರದ ಈ ಗ್ರಹವನ್ನು ಹೊಸ ಬೆಳಕಿನಲ್ಲಿ ಟೆಲಿಸ್ಕೋಪ್ ಅದ್ಭುತವಾಗಿ ಪ್ರತಿಫಲಿಸಿದೆ. ನೆಪ್ಚೂನ್ ಭೂಮಿಯಿಂದ ಸುಮಾರು 4.3 ಶತಕೋಟಿ ಕಿಲೋಮೀಟರ್ ದೂರದಲ್ಲಿದೆ ಮತ್ತು ಇದು ನಮ್ಮ ಸೌರಮಂಡಲದ ಅಂಚಿನಲ್ಲಿದೆ!
ನೆಪ್ಚೂನ್ ಸುತ್ತ ಇರುವ ಗುಂಗುರಾದ ಉಂಗುರ(ರಿಂಗ್) ದೃಶ್ಯವನ್ನು ಪ್ರತಿಫಲಿಸಿದೆ. 1989ರಲ್ಲಿ ವಾಯೇಜರ್ 2 ಸ್ಪೇಸ್ ಕ್ರಾಫ್ಟ್ ತನ್ನ ಕೊನೆಯ ಹಾರಾಟದ ಸಂದರ್ಭದಲ್ಲಿ ನೆಪ್ಚೂನ್‌ನ ಈ ರಿಂಗ್ ಫೋಟೋವನ್ನು ಸೆರೆ ಹಿಡಿದಿತ್ತು. ಬಳಿಕ ವಾಯೇಜರ್ ಇಂಟರ್‌ಸ್ಟೆಲ್ಲಾರ್ ಸ್ಪೇಸ್(ಅಂತರ್ ತಾರಾ ಬಾಹ್ಯಾಕಾಶ)ನಲ್ಲಿ ಪಯಣಿಸುತ್ತಿದೆ. ಅಂದರೆ, ಈ ಸ್ಪೇಸ್ ಕ್ರಾಫ್ಟ್ ನೆಪ್ಚೂನ್‌ನಿಂದ ಕೋಟ್ಯಂತರ ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿ ಸೂರ್ಯನ ಪರಿಣಾಮ ಕೂಡ ಇರುವುದಿಲ್ಲ.
ನೆಪ್ಚೂನ್‌ನ ಈ ಅದ್ಭುತ ಡಸ್ಟೀ ರಿಂಗ್ ನೋಡಿ ಸುಮಾರು 30 ವರ್ಷಗಳೇ ಕಳೆದು ಹೋಗಿವೆ. ನಾವೀಗ ಇದೇ ಮೊದಲ ಬಾರಿಗೆ ಅದನ್ನು ಇನ್ಫ್ರಾರೆಡ್‌ನಲ್ಲಿ ನೋಡುತ್ತಿದ್ದೇವೆ. ವೆಬ್‌ನ ಅತ್ಯಂತ ಸ್ಥಿರ ಮತ್ತು ನಿಖರವಾದ ಚಿತ್ರದ ಗುಣಮಟ್ಟವು ಈ ಡಸ್ಟೀ ರಿಂಗ್‌ಗಳನ್ನು ನೆಪ್ಚೂನ್‌ಗೆ ತುಂಬಾ ಹತ್ತಿರದಲ್ಲಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಎಂದು ನೆಪ್ಚೂನ್ ಸಿಸ್ಟಮ್ ಪರಿಣಿತರಾದ ಹೈಡಿ ಹ್ಯಾಮೆಲ್ ತಿಳಿಸಿದ್ದಾರೆ.
ಈ ನೆಪ್ಚೂನ್ ಸೂರ್ಯನಿಂದ ಎಷ್ಟು ದೂರವಿದೆ ಎಂದರೆ, ನೆಪ್ಚೂನ್‌ನ ಗ್ರಹದಲ್ಲಿನ ಮಧ್ಯಾಹ್ನವು ಭೂಮಿಯ ಮೇಲಿನ ಮಬ್ಬು ಬೆಳಕಿಗೆ ಹೋಲುತ್ತದೆ ಎಂಬುದು ನಾಸಾ ಅಭಿಪ್ರಾಯವಾಗಿದೆ. ನೆಪ್ಚೂನ್ ಹೈಡ್ರೋಜನ್ ಮತ್ತು ಹೀಲಿಯಂಗಿಂತ ಭಾರವಾದ ಖನಿಜಗಳಿಂದ ತುಂಬಿದೆ. ಆಂತರಿಕ ರಾಸಾಯನಿಕ ಸಂಯೋಜನೆಯಿಂದಾಗಿ ಅದು ಐಸೀ ಗ್ರಹ ಎಂದು ಕರೆಯಿಸಿಕೊಳ್ಳುತ್ತದೆ. ಈ ಮೊದಲು ನೆಪ್ಚೂನ್ ಮಸುಕಾದ ನೀಲಿ ಹೊಳಪಿನಿಂದ ಕೂಡಿತ್ತು ಎಂದ ನಂಬಲಾಗಿತ್ತು. ಆದರೆ, ಜೇಮ್ಸ್ ವೆಬ್‌ನಲ್ಲಿರುವ ಎನ್ಐಆರ್‌ಕ್ಯಾಮ್ ಸೆರೆ ಹಿಡಿದಿರುವ ಚಿತ್ರದಲ್ಲಿ ನೆಪ್ಚೂನ್ ನೇರಳೆ ಬಣ್ಣದಲ್ಲಿ ಕಂಡಿದೆ.
ಇದನ್ನೂ ಓದಿ | Gaganyaan | 2022ರಲ್ಲಿ ತಪ್ಪಿದ ಗುರಿ, 2024ಕ್ಕೆ ಗಗನಯಾನ ಮಿಷನ್ ಪಕ್ಕಾ!