ನವ ದೆಹಲಿ: ಕರ್ನಾಟಕವೂ ಸೇರಿದಂತೆ ಭತ್ತ ಬೆಳೆಯುವ ರಾಜ್ಯಗಳ ರೈತರಿಗೆ ಖುಷಿ ನೀಡುವ ಕೊಡುಗೆಯೊಂದನ್ನು ಕೇಂದ್ರ ಸರಕಾರ ಪ್ರಕಟಿಸಿದೆ. 2022-23ನೇ ಸಾಲಿಗೆ ಅನ್ವಯವಾಗುವಂತೆ ಭತ್ತದ ಬೆಂಬಲ ಬೆಲೆ 100 ರೂ. ಹೆಚ್ಚಿಸಲಾಗಿದೆ. ಇದುವರೆಗೆ ಒಂದು ಕ್ವಿಂಟಲ್‌ಗೆ 1940 ರೂ. ಸಿಗುತ್ತಿದ್ದರೆ ಈ ವರ್ಷ 2040 ರೂ. ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಇದೇ ಬೇಸಿಗೆ (ಖಾರಿಫ್) ಬೆಳೆಗೆ ಅನ್ವಯವಾಗುವಂತೆ ಭತ್ತದ ಬೆಂಬಲ ಬೆಲೆಯನ್ನು ಏರಿಸಲಾಗಿದೆ ಎಂದು ಸಭೆಯ ಬಳಿಕ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದರು. ಒಟ್ಟು 14 ಬೇಸಿಗೆ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಭತ್ತದ ಗುಣಮಟ್ಟಕ್ಕೆ ಅನುಗುಣವಾಗಿ ಬೆಂಬಲ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದು, ಸಾಮಾನ್ಯ ವರ್ಗದ ಭತ್ತಕ್ಕೆ ಕ್ವಿಂಟಲ್‌ಗೆ 2040 ರೂ. ದೊರೆಯಲಿದ್ದರೆ, ಎ ಗ್ರೇಡ್ ಭತ್ತದ ಬೆಂಬಲ ಬೆಲೆ 1960ರಿಂದ 2060ಕ್ಕೇರಲಿದೆ.
ಇದನ್ನೂ ಓದಿ| Wheat export ban: ಭಾರತದಿಂದ ಗೋಧಿ ರಫ್ತಿಗೆ ನಿಷೇಧ