ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೊರೋನಾ ಮಹಾಮಾರಿಯ ಭೀತಿ ಕಾಣಿಸಿಕೊಂಡಿದೆ. ಒಂದೇ ದಿನಕ್ಕೆ 1,109 ಕೊರೋನಾ ಹೊಸ ಪ್ರಕರಣಗಳು ದಾಖಲಾಗಿದ್ದು ರಾಷ್ಟ್ರದ ಜನತೆಗೆ ಇನ್ನಷ್ಟು ಎಚ್ಚರವಹಿಸುವಂತೆ ಮಾಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿನಿಂದ 43 ಮಂದಿ ಮೃತಪಟ್ಟಿದ್ದಾರೆ.
ಭಾರತದಲ್ಲಿ ಈವರೆಗೆ ಸಕ್ರಿಯ ಕೊರೋನಾ ಪ್ರಕರಣಗಳು 11,492ಕ್ಕೆ ಇಳಿದಿದೆ ಹಾಗು ಒಟ್ಟು ಪ್ರಕರಣಗಳ ಸಂಖ್ಯೆ 4,30,33,067 ದಾಖಲಾಗಿದೆ. ಆದರೆ, ಸದ್ಯದ ವರದಿಯ ಪ್ರಕಾರ ಕೊರೋನಾ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ 5,21,573ಕ್ಕೆ ಏರಿದೆ. ಈಗಾಗಲೇ ದೇಶದಲ್ಲಿ ಹಲವೆಡೆ ಮಾಸ್ಕ್ ಧರಿಸುವುದು ಕಡ್ಡಾಯವಿಲ್ಲ ಎಂದು ಘೋಷಿಸಲಾಗಿದೆ. ಈಗ ಹೆಚ್ಚುತ್ತಿರುವ ಕೊರೋನಾ ಹೊಸ ಪ್ರಕರಣಗಳನ್ನು ಗಮನಿಸಿದಾಗ ದೇಶದ ಜನತೆಯ ಸುರಕ್ಷತೆ ಬಗ್ಗೆ ಯೋಚಿಸುವಂತೆ ಮಾಡಿದೆ.
ಇತ್ತೀಚೆಗೆ ಮುಂಬೈನಲ್ಲಿ ಕೂಡ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕೂಡ ರಾಷ್ಟ್ರದ ಜನತೆ ಎಚ್ಚರವಹಿಸಿ ಸುರಕ್ಷಿತರಾಗಬೇಕಿದೆ ಎಂದು ತಜ್ಞರು ಸೂಚಿಸಿದ್ದಾರೆ.
ಒಟ್ಟು ಕೊರೋನಾ ಪ್ರಕರಣಗಳಲ್ಲಿ ಕೇವಲ 0.03% ರಷ್ಟು ಸಕ್ರಿಯ ಪ್ರಕರಣಗಳಿವೆ ಹಾಗೂ 98.76%ರಷ್ಟು ಮಂದಿ ಗುಣಮುಖರಾಗಿರುವುದು ಸಂತಸದ ವಿಷಯವಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 147 ಸಕ್ರಿಯ ಪ್ರಕರಣಗಳು ಕಡಿಮೆಯಾಗಿರುವುದು ಕಂಡುಬಂದಿದೆ.