ನವ ದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಸರ್ವಸಮ್ಮತ ಅಭ್ಯರ್ಥಿಗಳಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಬುಧವಾರ ದಿಲ್ಲಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಬ್ಯಾನರ್ಜಿ ಅವರೇ ಈ ಇಬ್ಬರು ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಬುಧವಾರದ ಈ ಮಹತ್ವದ ಸಭೆಗೆ ಮಮತಾ ಬ್ಯಾನರ್ಜಿ ಅವರು 22 ಪಕ್ಷಗಳಿಗೆ ಆಹ್ವಾನ ನೀಡಿದ್ದರು. ಆದರೆ, ಟಿಆರ್ ಎಸ್, ಆಮ್ ಆದ್ಮಿ ಪಾರ್ಟಿ, ಬಿಜೆಡಿಗಳು ಭಾಗವಹಿಸಿರಲಿಲ್ಲ. ತೆಲಂಗಾಣ ರಾಷ್ಟ್ರೀಯ ಸಮಿತಿಯ ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ಪಕ್ಷವನ್ನೂ ಈ ಒಕ್ಕೂಟಕ್ಕೆ ಆಹ್ವಾನಿಸಿರುವುದರಿಂದ ದೂರ ಉಳಿದಿದ್ದಾರೆ. ಆಮ್ ಆದ್ಮಿ ಪಾರ್ಟಿಯು ಎನ್‌ಡಿಎ ಅಭ್ಯರ್ಥಿಯನ್ನು ಕಾದು ನೋಡಿ ತೀರ್ಮಾನಿಸುವುದಾಗಿ ಹೇಳಿದೆ. ನವೀನ್ ಪಟ್ನಾಯಕ್ ಅವರ ಬಿಜೆಡಿ ಈಗಾಗಲೇ ಈ ರಾಜಕಾರಣಕ್ಕೆ ಪ್ರವೇಶ ಮಾಡಲು ನಿರಾಕರಿಸಿದೆ. ಇದರ ನಡುವೆ ಒಟ್ಟು 17 ಪಕ್ಷಗಳಷ್ಟೇ ಸಭೆಯಲ್ಲಿ ಭಾಗವಹಿಸಿದ್ದವು.
ರಾಷ್ಟ್ರಪತಿ ಹುದ್ದೆ ಬೇಡ ಎಂದ ಪವಾರ್
ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾದರೆ ಎಲ್ಲ ಪ್ರತಿಪಕ್ಷಗಳ ಮನವೊಲಿಕೆ ಸುಲಭ ಎಂಬ ನಿರೀಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಇತ್ತು. ಆದರೆ, ಶರದ್ ಪವಾರ್ ತಾನು ಸ್ಪರ್ಧಿಸುವುದಿಲ್ಲ ಎಂದು ಆಗಲೇ ಸ್ಪಷ್ಟಪಡಿಸಿದ್ದರು. ಬುಧವಾರದ ಸಭೆಯಲ್ಲಿ ಎಲ್ಲರೂ ಶರದ್ ಪವಾರ್ ಅವರೇ ಅಭ್ಯರ್ಥಿಯಾಗಲಿ ಎಂಬ ಅಭಿಪ್ರಾಯಪಟ್ಟರು. ಆದರೆ, ತನ್ನ ರಾಜಕಾರಣ ಇನ್ನೂ ಮುಗಿದಿಲ್ಲ. ಹಾಗಾಗಿ ರಾಜಕೀಯ ಮುಕ್ತವಾದ ಹುದ್ದೆಗೆ ಏರುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಶರದ್ ಪವಾರ್ ಅವರು ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿದ ಬಳಿಕ ಮಮತಾ ಬ್ಯಾನರ್ಜಿ ಅವರು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ಮತ್ತು ಗೋಪಾಲಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಹಿಂದೊಮ್ಮೆ ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಎಡಪಕ್ಷಗಳು ಬೆಳಗ್ಗೆಯೇ ಪ್ರಸ್ತಾಪಿಸಿದ್ದವು. ಇದನ್ನು ಮಮತಾ ಬ್ಯಾನರ್ಜಿ ಒಪ್ಪಿದ್ದಾರೆ. ಆದರೆ, ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಗೋಪಾಲಕೃಷ್ಣ ಗಾಂಧಿ ಅವರು ʻಪ್ರತಿಕ್ರಿಯೆ ನೀಡಲು ಕಾಲ ಪಕ್ವವಾಗಿಲ್ಲʼ ಎಂದು ಹೇಳಿದರು.
ಗೌಡರಿಗೆ ಸಿಗದ ಅವಕಾಶ
ಮಮತಾ ಬ್ಯಾನರ್ಜಿ ಅವರು ಆಯೋಜಿಸಿದ ಸಭೆಯಲ್ಲಿ ಟಿಎಂಸಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಸಿಎಂಐಎಂಎಲ್, ಆರ್‌ಎಸ್‌ಪಿ, ಶಿವಸೇನೆ, ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿಎಸ್, ಡಿಎಂಕೆ, ಆರ್‌ಎಲ್‌ಡಿ, ಮುಸ್ಲಿಂ ಲೀಗ್ ನ ನಾಯಕರು ಭಾಗವಹಿಸಿದ್ದರು.
ಜೆಡಿಎಸ್ ಪರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರು ಭಾಗವಹಿಸಿದ್ದರು. ಬೆಂಗಳೂರಿನಿಂದ ಹೊರಡುವ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು ರಾಷ್ಟ್ರಪತಿ ಹುದ್ದೆಗೆ ದೇವೇಗೌಡರ ಹೆಸರು ಪ್ರಸ್ತಾಪಿಸುವುದಾಗಿ ಹೇಳಿದ್ದರು. ಆದರೆ, ಅಲ್ಲಿ ಚರ್ಚೆಗೆ ಬಂತೇ ಎನ್ನುವುದು ಸ್ಪಷ್ಟವಾಗಿಲ್ಲ.
ಪ್ರತಿಪಕ್ಷ ಗೆಲ್ಲುವ ಅವಕಾಶ ಎಷ್ಟು?
ಮಮತಾ ಬ್ಯಾನರ್ಜಿ ಅವರು ಭಾರಿ ಮುತುವರ್ಜಿಯಿಂದ ಈ ಸಭೆ ನಡೆಸಿದರೂ ಪ್ರತಿಪಕ್ಷಗಳು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆಯೇ ಇದೆ. ಒಟ್ಟಾರೆ ಎಲೆಕ್ಟೋರಲ್ ಕೊಲಾಜ್‌ನಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮತಗಳನ್ನು ಎನ್‌ಡಿಎ ಕೂಟ ಈಗಾಗಲೇ ಪಡೆದಿದೆ. ಜತೆಗೆ ಎರಡೂ ಗುಂಪಿನಲ್ಲಿ ಸೇರದ ಬಿಜೆಪಿ, ಎಐಎಡಿಎಂಕೆ, ವೈಎಸ್ಸಾರ್ ಕಾಂಗ್ರೆಸ್ ಪಾರ್ಟಿಗಳು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಹೀಗಾಗಿ ಮಮತಾ ಬ್ಯಾನರ್ಜಿ ಸಭೆ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶಕ್ಕಷ್ಟೇ ಸೀಮಿತವಾಗಿದೆ. ಆದರೆ, ಇದು 2024ರ ಲೋಕಸಭಾ ಚುನಾವಣೆಯಲ್ಲಿ ವರ್ಕೌಟ್ ಮಾಡಬಹುದು ಎಂಬುದು ಮಮತಾ ಬ್ಯಾನರ್ಜಿ ಮತ್ತಿತರರ ನಿರೀಕ್ಷೆ.
ಇದನ್ನೂ ಓದಿ| ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ವಿಪಕ್ಷಗಳ ಅಭಿಪ್ರಾಯ ತಿಳಿಯಲು ಇಚ್ಛಿಸಿದ ಪ್ರಧಾನಿ ಮೋದಿ ಇದನ್ನೂ ಓದಿ| ರಾಷ್ಟ್ರಪತಿ ಚುನಾವಣೆ: ʻಮಮತಾʼ ಸಭೆಗೆ ಸರ್ವ ಸಜ್ಜು; ಬರಲ್ಲ ಎಂದ ಟಿಆರ್‌ಎಸ್, ಆಪ್, ಬಿಜೆಡಿ