Site icon Vistara News

ವಿರೋಧದ ನಡುವೆಯೇ ಲೋಕಸಭೆ ಒಪ್ಪಿಗೆ ಪಡೆದ ಅಪರಾಧ ದತ್ತಾಂಶ ಮಸೂದೆ

ಬೆಂಗಳೂರು: ಅಪರಾಧಿಗಳ ದತ್ತಾಂಶ, ಗೌಪ್ಯತೆಗೆ ಧಕ್ಕೆ ತರುತ್ತದೆ ಅಷ್ಟೇ ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ, ಮೂಲಭೂತ ಹಕ್ಕಿನ ವಿರೋಧಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಮಾನವತಾ ವಿರೋಧಿ, ಇತ್ಯಾದಿ ವಿಶೇಷಣಗಳಿಂದ ಪ್ರತಿಪಕ್ಷಗಳು ಟೀಕಿಸಿದ ನಡುವೆಯೂ ಲೋಕಸಭೆಯಲ್ಲಿ ಅಪರಾಧ ಪ್ರಕ್ರಿಯಾ (ಗುರುತು ಪತ್ತೆ) ಕಾಯ್ದೆಗೆ ಲೋಕಸಭೆಯಲ್ಲಿ ಸೋಮವಾರ ಸಂಜೆ ಒಪ್ಪಿಗೆ ಸಿಕ್ಕಿದೆ.

ಆರೋಪಿಗಳ ಅನೇಕ ಗೌಪ್ಯ ಮಾಹಿತಿಗಳನ್ನು ತನಿಖಾ ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಂಸತ್ತಿಗೆ ಭರವಸೇ ನೀಡುತ್ತಲೇ, ಆರೋಪಿಗಳಿಗಿಂತಲೂ ಹೆಚ್ಚಾಗಿ, ಅನ್ಯಾಯಕ್ಕೊಳಗಾದವರ ಕುರಿತು ಆಲೋಚಿಸಿ ಎಂದು ಕೇಂದ್ರ ಗೃಹಸಚಿವ ಅಮಿತ್‌ ಷಾ ಅವರು ಪ್ರತಿಪಕ್ಷಗಳನ್ನು ಕುಟುಕಿದರು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ. ಎಸ್‌. ಜಗನ್ಮೋಹನ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಹೊರತುಪಡಿಸಿ ಎಲ್ಲ ಪ್ರತಿಪಕ್ಷಗಳು ಮಸೂದೆಯನ್ನು ವಿರಧಿಸಿದವಾದರೂ ಧ್ವನಿಮತದ ಅಂಗೀಕಾರ ಪಡೆಯಲು ಅಮಿತ್‌ ಷಾ ಯಶಸ್ವಿಯಾದರು.

ದೇಶದಲ್ಲಿನ್ನೂ ದತ್ತಾಂಶ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿಲ್ಲ. ಇಂತನ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು ಆರೋಪಿಗಳ “ಅಳತೆ” ತೆಗೆದುಕೊಳ್ಳಲು ಅವಕಾಶ ನೀಡಿರುವುದು ಕಾಯ್ದೆಯ ದುರ್ಬಳಕೆ ಆಗುವ ಸಾಧ್ಯತೆಗಳ ಬಗ್ಗೆ ಪ್ರತಿಪಕ್ಷಗಳು ಗಮನ ಸೆಳೆದವು. ಪೊಲೀಸ್‌ ಠಾಣೆ ಮಖ್ಯಸ್ಥರು ಅಥವಾ ಜೈಲಿನ ಮುಖ್ಯ ವಾರ್ಡರ್‌, ಅಪರಾಧಿಗಳಷ್ಟೆ ಅಲ್ಲದೆ ವಶದಲ್ಲಿರುವ ಆರೋಪಿಗಳ ಅಳತೆಗಳನ್ನೂ ದಾಖಲಿಸಿಕೊಳ್ಳುವುದು ಕ್ರೂರ ಹಾಗೂ ನಾಗರಿಕ ಸ್ವಾತಂತ್ರ್ಯದ ಹರಣ ಎಂದು ಕಾಂಗ್ರೆಸ್‌ನ ಮನೀಶ್‌ ತಿವಾರಿ ಆರೋಪಿಸಿದರು.

ಈ ಮಸೂದೆಯು ತಾರ್ಕಿಕ ತಳಹದಿ ಹೊಂದದೆಯೇ ಮನಬಂದಂತೆ ವರ್ತಿಸುವ ಮೂಲಕ ನಾಗರಿಕರ ಮೇಲೆ ನಿಗಾ ಇಡುವ ವ್ಯವಸ್ಥೆ ರೂಪಿಸುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು ಎಂದು ಡಿಎಂಕೆ ಪಕ್ಷದ ದಯಾನಿಧಿ ಮಾರನ್‌ ತಿಳಿಸಿದರು.

ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಮಾತನಾಡಿ, ಬ್ರಿಟಿಷರು ರೂಪಿಸಿದ್ದ ಕಾಯ್ದೆಯಲ್ಲಿಯೇ ಈಗಿನ ಹೊಸ ಕಾಯ್ದೆಗಿಂತ ಹೆಚ್ಚಿನ ರಕ್ಷಣೆಗಳನ್ನು ನಾಗರಿಕರಿಗೆ ನೀಡಲಾಗಿತ್ತು ಎಂದು ಅಪಹಾಸ್ಯ ಮಾಡಿದರು. ಮಸೂದೆಗೆ ಬೆಂಬಲ ನೀಡಿದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಕೂಡ, ರಾಜಕೀಯ ವಿರೋಧಿಗಳ ವಿರುದ್ಧ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುವುದಿಲ್ಲ ಎಂಬ ಗ್ಯಾರಂಟಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಇಷ್ಟೆಲ್ಲ ಚರ್ಚೆಯ ನಂತರ ಮಾತನಾಡಿದ ಅಮಿತ್‌ ಷಾ, ಈ ಕಾಯ್ದೆಯಿಂದಾಗಿ ತನಿಖಾಧಿಕಾರಿಗಳು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಆರೋಪಿಗಳು ಹಾಗೂ ಅಪರಾಧಿಕಗಳ ಹಕ್ಕುಗಳ ಬಗ್ಗೆ ಆಲೋಚನೆ ಮಾಡುವವರು, ಅನ್ಯಾಯಕ್ಕೊಳಗಾದವರ ಹಕ್ಕುಗಳ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಪ್ರತಿಪಕ್ಷಗಳನ್ನು ಕುಟುಕಿದರು. ಕಾಯ್ದೆಯ ದುರ್ಬಳಕೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ನಂತರದಲ್ಲಿ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ನೀಡಲಾಯಿತು.

Exit mobile version