ಪಟನಾ: ದೇಶದಲ್ಲಿ ಯಾವುದೇ ಕಾಮಗಾರಿ ನಡೆಯಲಿ, ಅಲ್ಲೆಲ್ಲ ಭ್ರಷ್ಟಾಚಾರದ (Corruption) ದುರ್ವಾಸನೆ ಮೂಗಿಗೆ ಬಡಿಯುತ್ತಲೇ ಇರುತ್ತದೆ. ಇದೇ ಕಾರಣಕ್ಕಾಗಿ ನಿರ್ಮಾಣ ಹಂತದಲ್ಲಿಯೇ ಕಟ್ಟಡಗಳು, ಸೇತುವೆಗಳು ಕುಸಿಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದಲ್ಲಿ (Bihar) ನಿರ್ಮಾಣ ಹಂತದ ಸೇತುವೆಯೊಂದು ಕುಸಿದು (Bridge Collapse) ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 30 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ರಕ್ಷಣೆಗೆ ಹರಸಾಹಸ ನಡೆಯುತ್ತಿದೆ. ಇದುವರೆಗೆ 9 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಸುಪೌಲ್ ಜಿಲ್ಲೆಯ, ಮಾರೀಚ ಬಳಿಯ ಭೇಜಾ-ಬಕೌರ್‌ಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದ್ದು, ಏಕಾಏಕಿ ಕುಸಿದೆ. ಶುಕ್ರವಾರ ಬೆಳಗ್ಗೆ (ಮಾರ್ಚ್ 22) ಸೇತುವೆ ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ 30 ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ಸಿಬ್ಬಂದಿಯು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದಾರೆ. ಕಾರ್ಮಿಕರು ಗಾಯಗೊಂಡಿರುವ ಸಾಧ್ಯತೆ ಇರುವುದರಿಂದ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಸುಪೌಲ್ ಜಿಲ್ಲಾಧಿಕಾರಿ ಕೌಶಲ್ ಕುಮಾರ್ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. “ಶುಕ್ರವಾರ ಬೆಳಗ್ಗೆ ಸೇತುವೆ ಕುಸಿದಿದೆ. ಒಬ್ಬರು ಮೃತಪಟ್ಟರೆ, 9 ಜನ ಗಾಯಗೊಂಡಿದ್ದಾರೆ. ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ. ನಿರ್ಮಾಣ ಹಂತದ ಕಾಮಗಾರಿ ಕುಸಿದ ಕಾರಣ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಭ್ರಷ್ಟಾಚಾರದ ಆರೋಪ ಕೂಡ ಮಾಡಿದ್ದಾರೆ.
🚨 A part of an under-construction bridge collapsed near Maricha between Bheja-Bakaur in Bihar. pic.twitter.com/tpibw47nv9
— Indian Tech & Infra (@IndianTechGuide) March 22, 2024
ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆಗಳು ಕುಸಿಯುವುದು ಸಾಮಾನ್ಯ ಎಂಬಂತಾಗಿದೆ. ಕಳೆದ ವರ್ಷದ ಜೂನ್‌ನಲ್ಲೂ ಭಾಗಲ್ಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಭಾಗಲ್ಪುರ ಜಿಲ್ಲೆಯ ಮೂಲಕ ಹಾದುಹೋಗುವ ಗಂಗಾ ನದಿಗೆ ಅಡ್ಡಲಾಗಿ, ಖಗಾರಿಯಾ, ಅಗುವಾನಿ ಮತ್ತು ಸುಲ್ತಾನ್‌ಗಂಜ್ ಮಧ್ಯೆ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ಅಗುವಾನಿ ಸುಲ್ತಾನ್‌ಗಂಜ್ ಗಂಗಾ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಇದು ಏಕಾಏಕಿ ಕುಸಿದಿತ್ತು. ಕಳಪೆ ಕಾಮಗಾರಿ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: Accident Case : ಹಾಸನದಲ್ಲಿ ಕರೆಂಟ್ ಶಾಕ್‌ಗೆ ಎಲೆಕ್ಟ್ರಿಷಿಯನ್ ಬಲಿ; ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವು
ಗುಜರಾತ್‌ನ ಮೊರ್ಬಿಯಲ್ಲಿ 2022ರ ಅಕ್ಟೋಬರ್‌ನಲ್ಲಿ ಉದ್ಘಾಟನೆಗೆ ಮೊದಲೇ ಸೇತುವೆ ಕುಸಿದು 135 ಜನ ಮೃತಪಟ್ಟಿದ್ದರು. ನೂರಾರು ಜನ ಗಾಯಗೊಂಡಿದ್ದರು. ಕಳಪೆ ಕಾಮಗಾರಿ ಕುರಿತು ಈಗಲೂ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ