ಪಟನಾ: ಬಿಹಾರದಲ್ಲಿ ಅಧಿಕಾರಕ್ಕೆ ಬಂದ ನೂತನ ಮಹಾ ಘಟ್ ಬಂಧನ್ ಸರ್ಕಾರ ಭರ್ಜರಿ ಆಡಳಿತ ಕೊಡುವ ಭರವಸೆಯನ್ನು ನೀಡಿದೆ. ಸ್ವಾತಂತ್ರ್ಯೋತ್ಸವ ನಿಮಿತ್ತ ಪಟನಾದ ಗಾಂಧಿ ಮೈದಾನದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ‘ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸುವುದಾಗಿ’ ತಿಳಿಸಿದ್ದಾರೆ. ಈ ಹಿಂದೆ 2020ರ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ‘ಆರ್ಜೆಡಿ ಪಕ್ಷ ಅಧಿಕಾರಕ್ಕೆ ಬಂದರೆ, ಬಿಹಾರದಲ್ಲಿ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವುದಾಗಿ’ ಭರವಸೆ ನೀಡಿದ್ದರು. ಹಾಗೇ, ಈಗ ನಿತೀಶ್ ಕುಮಾರ್ ಜತೆಗೆ ಸರ್ಕಾರ ರಚನೆ ಮಾಡಿದ ಬಳಿಕವೂ ಇದೇ ಮಾತನ್ನು ಉಚ್ಚರಿಸಿದ್ದರು. ಇದೀಗ ನಿತೀಶ್ ಕುಮಾರ್ ಅವರು, ತೇಜಸ್ವಿ ಯಾದವ್ ಕೊಟ್ಟಿದ್ದ ಆ 10 ಲಕ್ಷ ಉದ್ಯೋಗ ಭರವಸೆಗೆ ಇನ್ನೂ 10 ಲಕ್ಷ ಸೇರಿಸಿದ್ದಾರೆ.
ಇಂದು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ನಿತೀಶ್ ಕುಮಾರ್, ‘10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುತ್ತೇವೆ ಮತ್ತು ಇನ್ನಿತರ ವಲಯಗಳೆಲ್ಲ ಸೇರಿ ಮತ್ತೂ 10 ಲಕ್ಷ ಉದ್ಯೋಗ ಸೃಷ್ಟಿಸಿಕೊಡುತ್ತೇವೆ. ನಿರುದ್ಯೋಗ ಸಮಸ್ಯೆ ನೀಗಿಸಲು ಏನೆಲ್ಲ ಮಾಡಬೇಕೋ, ಅದನ್ನು ಮಾಡುತ್ತೇವೆ’ ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಅವರು ಉದ್ಯೋಗ ಭರವಸೆ ನೀಡಿದ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗೇ, ತೇಜಸ್ವಿ ಯಾದವ್ ಕೂಡ ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.
ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ವಿಚಾರಕ್ಕೆ ತೇಜಸ್ವಿ ಯಾದವ್ ಈ ಹಿಂದೆ ಬಿಜೆಪಿಯನ್ನು ಟೀಕಿಸಿದ್ದರು. ಬಿಜೆಪಿ ಯಾವತ್ತೂ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಆದರೆ ನಾವು ಹಾಗಲ್ಲ. ನಾವೇನು ನುಡಿಯುತ್ತೇವೆಯೋ, ಅದನ್ನೇ ಮಾಡುತ್ತೇವೆ ಎಂದಿದ್ದರು. ದೇಶದಲ್ಲಿ ಉಪರಾಷ್ಟ್ರಪತಿ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ, ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಯನ್ನು ಕಳಚಿಕೊಂಡು, ತನ್ನ ಹಳೇ ಮೈತ್ರಿ ಪಕ್ಷ ಆರ್ಜೆಡಿಯೊಂದಿಗೇ ಸೇರಿಕೊಂಡಿದೆ. ಆಗಸ್ಟ್ 16ರಂದು ಬಿಹಾರ ನೂತನ ಸರ್ಕಾರ ಸಂಪುಟ ವಿಸ್ತರಣೆ ನಡೆಯಲಿದ್ದು, ಆಗಸ್ಟ್ 24ರಂದು ನಿತೀಶ್ ಕುಮಾರ್ ಬಹುಮತ ಸಾಬೀತು ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ನಿತೀಶ್ ಪ್ರಧಾನಿ ಅಭ್ಯರ್ಥಿಯಾ?; ಕೈಮುಗಿಯುತ್ತ ನಿಂತ ಬಿಹಾರ ಮುಖ್ಯಮಂತ್ರಿ ಕೊಟ್ಟ ಉತ್ತರ ಹೀಗಿದೆ !