Site icon Vistara News

New Year 2023 | ಹೊಸ ವರ್ಷದಲ್ಲಿ ಯಾವ ರಾಜ್ಯಗಳಲ್ಲಿ ಚುನಾವಣೆ? ಹೇಗಿದೆ ಪಕ್ಷಗಳ ರಣತಂತ್ರ?

Elections In India In 2023

ದೇಶದ ಪಾಲಿಗೆ 2023 (New Year 2023) ಚುನಾವಣೆಯ ವರ್ಷವಾಗಿದೆ. ದೇಶದ 9 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಈಗಿನಿಂದಲೇ ಸಜ್ಜಾಗುತ್ತಿವೆ. ಅದರಲ್ಲೂ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇಷ್ಟೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಪಕ್ಷಗಳಿಗೆ ಸೆಮಿಫೈನಲ್‌ ಆಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗಾದರೆ, 2023ರಲ್ಲಿ ಯಾವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ? ಚುನಾವಣೆ ನಡೆಯುವ ರಾಜ್ಯಗಳ ರಾಜಕೀಯ ಸ್ಥಿತಿಗತಿ ಹೇಗಿದೆ? ಯಾವ ಪಕ್ಷ ಆಡಳಿತದಲ್ಲಿದೆ ಎಂಬುದರ ಚುನಾವಣೆ ಮುನ್ನೋಟ ಇಲ್ಲಿದೆ.

ತ್ರಿಪುರ ವಿಧಾನಸಭೆ ಚುನಾವಣೆ ಚುನಾವಣೆ
ಪ್ರಮುಖ ಈಶಾನ್ಯ ರಾಜ್ಯವಾಗಿರುವ ತ್ರಿಪುರದಲ್ಲಿ ೨೦೨೩ರ ಮಾರ್ಚ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಸದ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಮಾಣಿಕ್‌ ಸಾಹಾ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟು ೬೦ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇಲ್ಲಿ ಆಡಳಿತಾರೂಢ ಬಿಜೆಪಿಗೆ ಸಿಪಿಎಂ ಒಳಗೊಂಡ ಎರಡರಂಗವು ಪ್ರಬಲ ಸ್ಪರ್ಧಿಯಾಗಿದೆ. ತ್ರಿಪುರದಲ್ಲಿ ಕಾಂಗ್ರೆಸ್‌ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ.

ಮೇಘಾಲಯ
ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಬಿಜೆಪಿಯು ಆಡಳಿತಾರೂಢ ಮೈತ್ರಿ (ಮೇಘಾಲಯ ಡೆಮಾಕ್ರಟಿಕ್‌ ಅಲಯನ್ಸ್)‌ ಪಕ್ಷದ ಸದಸ್ಯವಾದರೂ ಇಲ್ಲಿ ಪ್ರಾಬಲ್ಯವಿಲ್ಲ. ನ್ಯಾಷನಲ್‌ ಪೀಪಲ್ಸ್‌ ಪಕ್ಷದ ಕಾನ್ರಾಡ್‌ ಸಂಗ್ಮಾ ಅವರು ಮುಖ್ಯಮಂತ್ರಿಯಾಗಿದ್ದು, ೨೦೨೩ರಲ್ಲೂ ಗೆಲುವು ಸಾಧಿಸುವ ವಿಶ್ವಾಸವಿದೆ. ಮುಂದಿನ ವರ್ಷದ ಮಾರ್ಚ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ.

ನಾಗಾಲ್ಯಾಂಡ್‌
ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ ಇದೆ. ಅದರಂತೆ, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್‌ ಪಕ್ಷ (NDPP)ದ ನೆಫಿಯು ರಿಯೋ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಡಿಪಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ವೈ. ಪ್ಯಾಟ್ಟೊನ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ೨೦೨೩ರ ಮಾರ್ಚ್‌ನಲ್ಲಿ ನಡೆಯುವ ಚುನಾವಣೆಯಲ್ಲೂ ಎನ್‌ಡಿಪಿ ಹಾಗೂ ಬಿಜೆಪಿ ಜತೆಗೂಡಿ ಸ್ಪರ್ಧಿಸಲು ತೀರ್ಮಾನಿಸಿವೆ.

ಕರ್ನಾಟಕ
ಮುಂಬರುವ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಈಗಾಗಲೇ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸಿವೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತದ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅತ್ತ, ಕಾಂಗ್ರೆಸ್‌ ಹಲವಾರು ರಣತಂತ್ರ ರೂಪಿಸುತ್ತಿದ್ದರೂ, ಆಂತರಿಕ ನಾಯಕತ್ವ ಬಿಕ್ಕಟ್ಟು ಮುಳುವಾಗುವ ಸಾಧ್ಯತೆ ಇದೆ. ಎಂದಿನಂತೆ, ಜೆಡಿಎಸ್‌ ಕಿಂಗ್‌ ಮೇಕರ್ ಆಗಲು ಹವಣಿಸುತ್ತಿದೆ.

ಬಸವರಾಜ ಬೊಮ್ಮಾಯಿ.

ಛತ್ತೀಸ್‌ಗಢ
ರಾಜಸ್ಥಾನ, ಹಿಮಾಚಲ ಪ್ರದೇಶದ ನಂತರ ಕಾಂಗ್ರೆಸ್‌ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ ಮಾತ್ರ. ವಿಧಾನಸಭೆಯ ೯೦ ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಭೂಪೇಶ್‌ ಬಘೇಲ್‌ ಮುಖ್ಯಮಂತ್ರಿಯಾಗಿದ್ದಾರೆ. ೨೦೨೩ರ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಬಿಜೆಪಿಗೆ ಪುಟಿದೇಳುವ ಉತ್ಸಾಹ ಇದೆ. ಆದರೂ, ಇಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿದೆ.

ಮಧ್ಯಪ್ರದೇಶ
ಮುಂದಿನ ವರ್ಷದ ನವೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿದ್ದಾರೆ. ೨೦೧೮ರ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕವಿದೆ. ವಿಧಾನಸಭೆಯ ಒಟ್ಟು ೧೩೦ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌.

ಮಿಜೋರಾಂ
ಮುಖ್ಯಮಂತ್ರಿ ಜೊರಾಮ್‌ಥಂಗ ನೇತೃತ್ವದ ಮಿಜೋ ನ್ಯಾಷನಲ್‌ ಫ್ರಂಟ್‌ (MNF) ಪಕ್ಷವು ಮಿಜೋರಾಂನಲ್ಲಿ ಬಲಿಷ್ಠವಾಗಿದೆ. ಕೇಂದ್ರದಲ್ಲಿ ಮಿಜೋ ನ್ಯಾಷನಲ್‌ ಫ್ರಂಟ್‌, ಎನ್‌ಡಿಎ ಜತೆ ಕೈಜೋಡಿಸಿದರೂ ಇಲ್ಲಿ ಬಿಜೆಪಿಯ ಒಬ್ಬರೇ ಶಾಸಕರಿದ್ದಾರೆ. ಕಾಂಗ್ರೆಸ್‌ ಕೂಡ ಮೂರನೇ ಸ್ಥಾನದಲ್ಲಿದೆ. ಕ್ರಿಶ್ಚಿಯನ್ನರೇ ಜಾಸ್ತಿ ಇರುವ ಮಿಜೋರಾಂನಲ್ಲಿ ಬಿಜೆಪಿ ಪರ ಒಲವಿಲ್ಲ. ಹಾಗಾಗಿ, ಜೊರಾಮ್‌ಥಂಗ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ. ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.

ರಾಜಸ್ಥಾನ
ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಡಳಿತವಿದ್ದು, ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅಶೋಕ್‌ ಗೆಹ್ಲೋಟ್‌ ಹಾಗೂ ಅವರದ್ದೇ ಪಕ್ಷದ ಸಚಿನ್‌ ಪೈಲಟ್‌ ಮಧ್ಯೆ ಆಗಾಗ ಭಿನ್ನಮತ ಸ್ಫೋಟವಾಗುತ್ತದೆ. ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದು, ಈಗಾಗಲೇ ಹಲವು ಬಾರಿ ಬಂಡಾಯವೆಬ್ಬಿಸಿ, ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸಿ ವಿಫಲವಾಗಿದೆ. ೨೦೨೩ರ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್.

ತೆಲಂಗಾಣ
ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಭಾರತ್‌ ರಾಷ್ಟ್ರ ಸಮಿತಿ (ಮೊದಲಿನ ಟಿಆರ್‌ಎಸ್‌)ಯ ಕೆ.ಚಂದ್ರಶೇಖರ್‌ ರಾವ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಹೆಸರು ಸಂಪಾದಿಸಿರುವ ಇವರನ್ನು ಮಣಿಸಲು ಬಿಜೆಪಿ ಇನ್ನಿಲ್ಲದ ತಂತ್ರ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನೂ ಮೀರಿ ಬಿಜೆಪಿಗೆ ಬೆಂಬಲ ಸಿಗುವುದು ಕಷ್ಟಸಾಧ್ಯ.

ಜಮ್ಮು-ಕಾಶ್ಮೀರ
ಜಮ್ಮು-ಕಾಶ್ಮೀರದಲ್ಲಿ ಸದ್ಯ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರೇ ಆಡಳಿತ ನಡೆಸುತ್ತಿದ್ದಾರೆ. 2019ರಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕ್ಷೇತ್ರಗಳ ಮರುವಿಂಗಡಣೆಯೂ ಆಗಿದೆ. ಹಾಗಾಗಿ, ಕಾಶ್ಮೀರದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಕ್ಷೇತ್ರದಿಂದ ದೂರ ಇದ್ದರೂ ಮತದಾನ ಸಾಧ್ಯ! ಚುನಾವಣೆ ಆಯೋಗದ ಕ್ರಾಂತಿಕಾರಕ ಪ್ರಯೋಗ

Exit mobile version